ಸರಿ ಸುಮಾರು ಕಳೆದೊಂದು ದಶಕದಿಂದ ನಡೆಯುತ್ತಿರುವ ಓಕಳಿಪುರ ಜಂಕ್ಷನ್‌ನ ಅಷ್ಟಪಥ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿ ಮುಕ್ತಾಯಗೊಳ್ಳುವುದಕ್ಕೆ ಇನ್ನೂ ಒಂದೂವರೆ ವರ್ಷ ಸಮಯಬೇಕಾಗಿದೆ.
ಕನ್ನಡಪ್ರಭ ವಾರ್ತೆ
ಬೆಂಗಳೂರು: ಸರಿ ಸುಮಾರು ಕಳೆದೊಂದು ದಶಕದಿಂದ ನಡೆಯುತ್ತಿರುವ ಓಕಳಿಪುರ ಜಂಕ್ಷನ್‌ನ ಅಷ್ಟಪಥ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿ ಮುಕ್ತಾಯಗೊಳ್ಳುವುದಕ್ಕೆ ಇನ್ನೂ ಒಂದೂವರೆ ವರ್ಷ ಸಮಯಬೇಕಾಗಿದೆ. ಮಜೆಸ್ಟಿಕ್ ಸಮೀಪದ ಓಕಳಿಪುರ ಜಂಕ್ಷನ್‌ನಲ್ಲಿ ಕಳೆದ 2013-14ರಲ್ಲಿ 103 ಕೋಟಿ ರು. ವೆಚ್ಚದಲ್ಲಿ ಎಂಟು ಲೈನ್‌ನ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ಬಿಬಿಎಂಪಿ ಆರಂಭಿಸಿತ್ತು. ಸುಮಾರು 10 ವರ್ಷ ಕಳೆದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.
ಚೆನ್ನೈ ರೈಲ್ವೆ ಮಾರ್ಗದಲ್ಲಿ (Chennai railway line) ಎರಡು ಕೆಳ ಸೇತುವೆ (lower bridge) ನಿರ್ಮಾಣ ಇನ್ನೂ ಬಾಕಿ ಇದೆ. ಈ ಕೆಳ ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಉಳಿದ ಪರಿಣಾಮ ಮಲ್ಲೇಶ್ವರ (Malleswara) ಮತ್ತು ರಾಜಾಜಿನಗರ (Rajajinagar) ಕಡೆಯಿಂದ ರೈಲ್ವೆ ನಿಲ್ದಾಣಕ್ಕೆ ಹಾಗೂ ಮೆಜೆಸ್ಟಿಕ್‌ನಿಂದ ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ 6,7 ಹಾಗೂ 8ಕ್ಕೆ ನೇರವಾಗಿ ಪ್ರವೇಶ ಪಡೆಯುವ ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತಿದೆ.
Bengaluru Y Junction: ಓಕಲಿಪುರಂ ಮೇಲ್ಸೇತುವೆ 2 ತಿಂಗಳಲ್ಲಿ ಸಿದ್ದ: 30 ಕೋಟಿ ವೆಚ್ಚದಲ್ಲಿ ಕಾಮಗಾರಿ!
ತಡ ರಾತ್ರಿ ಮಾತ್ರ ಕಾಮಗಾರಿ: ಚನ್ನೈ ರೈಲ್ವೆ ಮಾರ್ಗದಲ್ಲಿ ಹೆಚ್ಚಿನ ರೈಲುಗಳ ಸಂಚಾರ ಇರುವುದರಿಂದ ಹಗಲು ವೇಳೆಯಲ್ಲಿ ಕಾಮಗಾರಿ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಪ್ರೀ ಕಾಸ್ಟ್ ಬಾಕ್ಸ್ ಅನ್ನು ರೈಲ್ವೆ ಹಳಿಯ ಕೆಳ ಭಾಗದಲ್ಲಿ ಅಳವಡಿಕೆ ಮಾಡಬೇಕಿದೆ. ರಾತ್ರಿ 12.30ರಿಂದ ಬೆಳಗಿನ ಜಾವ 4.30ರ ಸಮಯದಲ್ಲಿ ಮಾತ್ರ ಕೆಲಸ ಮಾಡಬೇಕಿದೆ. ದಿನಕ್ಕೆ 2 ರಿಂದ 3 ಅಡಿ ಮಾತ್ರ ಬಾಕ್ಸ್ ಅನ್ನು ಹಳಿಯ ಕೆಳಭಾಗಕ್ಕೆ ತಳ್ಳುವುದಕ್ಕೆ ಮಾತ್ರ ಸಾಧ್ಯ. ಹಾಗಾಗಿ, ಕಾಮಗಾರಿ ವಿಳಂಬವಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶೀಘ್ರ ಕಾಮಗಾರಿ ಆರಂಭ : ಎರಡು ಬಾಕ್ಸ್ ಅಳವಡಿಕೆಗೆ ಇನ್ನೂ ರೈಲ್ವೆ ಇಲಾಖೆಯಿಂದ (Railway Department) ಅನುಮೋದನೆ ದೊರೆತಿಲ್ಲ. ತಿಂಗಳಾಂತ್ಯ ಅಥವಾ ಮಾಚ್‌ರ್ 15ರ ವೇಳೆಗೆ ಅನುಮತಿ ದೊರೆಯಲಿದೆ. ನಂತರ ಕಾಮಗಾರಿ ಆರಂಭಿಸಲಾಗುವುದು. ಒಟ್ಟಾರೆ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಒಂದು ವರ್ಷ ಬೇಕಾಗಲಿದೆ. ತದ ನಂತರ ಬಿಬಿಎಂಪಿ ರಸ್ತೆ ನಿರ್ಮಾಣ, ತಡೆ ಗೋಡೆ ನಿರ್ಮಾಣ ಹಾಗೂ ಸ್ಕೈವಾಕ್ ನಿರ್ಮಾಣ ಕಾಮಗಾರಿ ಮಾಡಬೇಕಿದೆ. ಅದಕ್ಕೆ 4 ರಿಂದ 6 ತಿಂಗಳು ಸಮಯ ಬೇಕಾಗಲಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಯೋಜನೆ ವಿವರ:
*ಕಾಮಗಾರಿ ಆರಂಭ-2013-14ರಲ್ಲಿ
* ಅವಧಿ: 18 ತಿಂಗಳು
*ಯೋಜನಾ ವೆಚ್ಚ-103 ಕೋಟಿ ರು.
* ಅನುಕೂಲ: ಗುಬ್ಬಿತೋಡದಪ್ಪ ರಸ್ತೆ, ಶೇಷಾದ್ರಿ ರಸ್ತೆ, ಓಕಳಿಪುರ ರಸ್ತೆ ಹಾಗೂ ಕೃಷ್ಣಮಿಲ್ ರಸ್ತೆಗಳು ಸಿಗ್ನಲ್ ಮುಕ್ತವಾಗಲಿವೆ. ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ಟರ್ಮಿನಲ್-2ಗೆ ನೇರವಾಗಿ ಸಂಪರ್ಕ ನೀಡುವ ಮಾರ್ಗವಾಗಿದೆ.
Chitradurga: ಕಳಪೆ ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ, ಗುತ್ತಿಗೆದಾರನ ವಿರುದ್ಧ ಗ್ರಾಮಸ್ಥರ ಆಕ್ರೋಶ
ಓಕಳಿಪುರ ಎಂಟು ಪಥದ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವುದಕ್ಕೆ ರೈಲ್ವೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಸಾರ್ವಜನಿಕರ ಬಳಕೆಗೆ ನೀಡಲಾಗುವುದು - ರವೀಂದ್ರ, ವಿಶೇಷ ಆಯುಕ್ತರು, ಬಿಬಿಎಂಪಿ ಯೋಜನಾ ವಿಭಾಗ
'ವೈ' ಜಂಕ್ಷನ್ ಫೆ.28ಕ್ಕೆ ಉದ್ಘಾಟನೆ
ಓಕಳಿಪುರದ ಸುಜಾತ ಚಿತ್ರಮಂದಿರ ಬಳಿ ಬಿಬಿಎಂಪಿಯಿಂದ 33 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ವೈ ಆಕಾರದ ಫ್ಲೈಓವರ್ ಕಾಮಗಾರಿ ಪೂರ್ಣಗೊಂಡಿದ್ದು, ಫೆ.28ಕ್ಕೆ ಉದ್ಘಾಟನೆ ಆಗಲಿದೆ. ಈ ಫ್ಲೈಓವರ್ ನಿರ್ಮಾಣದಿಂದ ಮಾಗಡಿ ರಸ್ತೆಯಿಂದ ಮೆಜೆಸ್ಟಿಕ್, ಓಕಳಿಪುರ, ಮಲ್ಲೇಶ್ವರ ಹಾಗೂ ರಾಜಾಜಿನಗರ ಕಡೆ ಸಾಗುವವರಿಗೆ ಸಿಗ್ನಲ್ ಮುಕ್ತವಾಗಲಿದೆ. ಜತೆಗೆ, ರಾಜಾಜಿನಗರದಿಂದ ಮಾಗಡಿ ರಸ್ತೆ ಕಡೆ ಹೋಗುವವರಿಗೂ ಅನುಕೂಲವಾಗಲಿದೆ.
