ಇನ್ಸ್ಟಾಗ್ರಾಂ ಪ್ರೀತಿಗೆ ಮನನೊಂದು, ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲ್ಲಲು ಬಿಹಾರ ಮೂಲದ ಯುವಕ ಗನ್‍ನೊಂದಿಗೆ ನೆಲಮಂಗಲಕ್ಕೆ ಬಂದಿದ್ದ. ಯುವತಿಯ ಸಮಯಪ್ರಜ್ಞೆಯಿಂದ ಪೊಲೀಸರಿಗೆ ಮಾಹಿತಿ ತಲುಪಿ, ಆರೋಪಿಯನ್ನು ಬಂಧಿಸುವ ಮೂಲಕ ದೊಡ್ಡ ಅನಾಹುತ ತಪ್ಪಿದೆ.

ಬೆಂಗಳೂರು: ಪ್ರೀತಿ ನಿರಾಕರಿಸಿದ ಯುವತಿಯನ್ನು ಕೊಲ್ಲಲು ಬಿಹಾರ ಮೂಲದ ಯುವಕನೊಬ್ಬ ಗನ್‍ನೊಂದಿಗೆ ಬಂದಿದ್ದು, ಯುವತಿ ಸಮಯಪ್ರಜ್ಞೆಯಿಂದ ಪೊಲೀಸರಿಗೆ ಮಾಹಿತಿ ನೀಡಿದ ಪರಿಣಾಮ, ಆರೋಪಿಯನ್ನು ಬಂಧಿಸಲಾಗಿದ್ದು, ಅನಾಹುತವೊಂದು ತಪ್ಪಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.ಬಿಹಾರ ಮೂಲದ ಶುಭಂ ಕುಮಾರ್ (25) ಆರೋಪಿಯಾಗಿದ್ದು, ಯುವತಿಯನ್ನು ಕೊಲ್ಲಲು ಪೂರ್ವಯೋಜನೆಯೊಂದಿಗೆ ನೆಲಮಂಗಲಕ್ಕೆ ಆಗಮಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗನ್ ಹಿಡಿದು ಸಾರ್ವಜನಿಕವಾಗಿ ಓಡಾಡುತ್ತಿದ್ದ ದೃಶ್ಯಗಳು ಸ್ಥಳೀಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

ಆರೋಪಿ ಎರಡು ಬಾರಿ ಗುಂಡು ಹಾರಿಸಲು ಯತ್ನಿಸಿ ಫೈರಿಂಗ್ ವಿಫಲವಾಗಿದೆ, ಈತನು ಬೈಕ್ ಟ್ಯಾಕ್ಸಿ ಓಡಿಸಿಕೊಂಡು ನೆಲಮಂಗಲದಲ್ಲಿ ವಾಸವಿದ್ದ. ಸಿಕ್ಕಿಂ ರಾಜ್ಯದ ನರ್ಸಿಂಗ್ ವಿದ್ಯಾರ್ಥಿನಿ ಅಪರ್ಣಾ ಎಂಬಾಕೆ ಬೆಂಗಳೂರಿನ ಈಜಿಪುರದಲ್ಲಿ ವಾಸವಾಗಿದ್ದಳು, ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಅಪರ್ಣಾ ಮತ್ತು ಶುಭಂಕುಮಾರ್ ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಅಪರ್ಣಾ ಜೊತೆ ಮತ್ತೊಬ್ಬ ಯುವಕನೊಂದಿಗೆ ಚಾಟಿಂಗ್ ಹಾಗೂ ಪ್ರೇಮ ಸಂಬಂಧ ಹೊಂದಿದ್ದಾಳೆಂಬ ಅನುಮಾನದಿಂದ ಶುಭಂ ಕುಮಾರ್ ತೀವ್ರವಾಗಿ ನೊಂದಿದ್ದ. ಇದರಿಂದಾಗಿ ಯುವತಿಯನ್ನು ಕೊಲ್ಲಲು ನಿರ್ಧರಿಸಿ ಅಕ್ರಮವಾಗಿ ಪಿಸ್ತೂಲ್ ಖರೀದಿಸಿದ್ದ ಎನ್ನಲಾಗಿದೆ.

ಶನಿವಾರ ಬೆಳಗ್ಗೆ ಸುಮಾರು 9 ಗಂಟೆಗೆ ಮಾತನಾಡುವ ನೆಪದಲ್ಲಿ ಶುಭಂ ಕುಮಾರ್ ಅಪರ್ಣಾಳನ್ನು ನೆಲಮಂಗಲಕ್ಕೆ ಕರೆಸಿಕೊಂಡಿದ್ದಾನೆ. ಟ್ಯಾಕ್ಸಿಯಲ್ಲಿ ಅಪರ್ಣಾ ಬಂದ ತಕ್ಷಣವೇ ಕೋಪಗೊಂಡ ಶುಭಂಕುಮಾರ್ ಪಿಸ್ತೂಲ್ ಬಳಸಿ ಯುವತಿಯನ್ನು ಕೊಲ್ಲಲು ಯತ್ನಿಸಿದ್ದಾನೆ.

112ಗೆ ಕರೆಮಾಡಿದ ಯುವತಿ:

ಆರೋಪಿ ಸಂಶಯಾಸ್ಪದವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಯುವತಿ ತಕ್ಷಣವೇ 112 ತುರ್ತು ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿದ್ದಾಳೆ. ಮಾಹಿತಿ ಪಡೆದ ನೆಲಮಂಗಲ ಗ್ರಾಮಾಂತರ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಗನ್ ಸಮೇತ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆನ್‍ಲೈನ್ ಮೂಲಕ ಅಕ್ರಮವಾಗಿ ಗನ್ ಖರೀದಿ:

ಆರೋಪಿ ಆನ್‍ಲೈನ್ ಮೂಲಕ ಅಕ್ರಮವಾಗಿ ಗನ್ ಖರೀದಿ ಮಾಡಿದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.