ಕಾರವಾರದಲ್ಲಿ 21 ವರ್ಷದ ಯುವತಿ ರಿಶೆಲ್ ಡಿಸೋಜಾ, ಸಹಪಾಠಿ ಚಿರಾಗ್ ಕೊಠಾರಕರ್‌ನ ಪ್ರೀತಿಯ ಕಿರುಕುಳಕ್ಕೆ ಬೇಸತ್ತು ಆತ್ಮ೧ಹತ್ಯೆ  'ನನ್ನನ್ನು ಪ್ರೀತಿಸದಿದ್ದರೆ ಸತ್ತು ಹೋಗು' ಎಂದು ಆರೋಪಿ ಪ್ರಚೋದನೆ ನೀಡಿದ್ದರಿಂದ ಮನನೊಂದು ಆಕೆ ಈ ಕೃತ್ಯ ಎಸಗಿದ್ದು, ಯುವತಿಯ ತಂದೆ ಪೊಲೀಸ್ ಠಾಣೆಗೆ ದೂರು.

ಕಾರವಾರ (ಜ.10): ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ಯುವಕನೊಬ್ಬನ ಪ್ರೀತಿಯ ಕಿರುಕುಳಕ್ಕೆ ಬೇಸತ್ತು 21 ವರ್ಷದ ಯುವತಿ ಆತ್ಮ೧ಹತ್ಯೆಗೆ ಶರಣಾಗಿದ್ದಾಳೆ. ಕಾರವಾರದ ಕದ್ರಾ ಕೆಪಿಸಿ ಕಾಲೋನಿಯಲ್ಲಿ ಈ ದುರಂತ ಸಂಭವಿಸಿದೆ.

ಕ್ಲಾಸ್‌ಮೇಟ್ ಕಾಟಕ್ಕೆ ಬೇಸತ್ತ ರಿಶೆಲ್ ಡಿಸೋಜಾ

ಕಾರವಾರದ ಕದ್ರಾ ಕೆಪಿಸಿ ಕಾಲೋನಿಯ ನಿವಾಸಿಯಾಗಿರುವ ರಿಶೆಲ್ ಫ್ರಾನ್ಸಿಸ್ ಡಿಸೋಜಾ (21) ಆತ್ಮ೧ಹತ್ಯೆ ಮಾಡಿಕೊಂಡ ದುರ್ದೈವಿ. ಇದೇ ಪ್ರಕರಣದಲ್ಲಿ ನಂದನಗದ್ದಾ ನಿವಾಸಿಯಾದ ಚಿರಾಗ್ ಚಂದ್ರಾಹಾಸ ಕೊಠಾರಕರ್ (21) ಎಂಬಾತನನ್ನು ಆರೋಪಿ ಎಂದು ಗುರುತಿಸಲಾಗಿದೆ. ರಿಶೆಲ್ ಹಾಗೂ ಚಿರಾಗ್ ಇಬ್ಬರೂ ಸಹಪಾಠಿಗಳಾಗಿದ್ದು, ಕಳೆದ ಹಲವು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ..

'ಬದುಕಿದ್ದು ಪ್ರಯೋಜನವಿಲ್ಲ, ಸತ್ತು ಹೋಗು' ಎಂದಿದ್ದ ಆರೋಪಿ!

ಆರೋಪಿ ಚಿರಾಗ್ ಕಳೆದ ಕೆಲವು ಸಮಯದಿಂದ ರಿಶೆಲ್ ಮನೆಗೆ ಪದೇ ಪದೇ ಭೇಟಿ ನೀಡುತ್ತಿದ್ದನೆಂದು ಆರೋಪಿಸಲಾಗಿದೆ. ಅಲ್ಲದೆ 'ನಾನು ನಿನ್ನನ್ನು ಪ್ರೀತಿಸುತ್ತಿದ್ದೇನೆ, ನೀನು ನನ್ನನ್ನು ಒಪ್ಪಿಕೊಳ್ಳಲೇಬೇಕು' ಎಂದು ಯುವತಿಗೆ ಬಲವಂತ ಮಾಡಿದ್ದಾನೆ. ಆದರೆ ರಿಶೆಲ್ ಆತನ ಪ್ರೀತಿಯನ್ನು ನಿರಾಕರಿಸುತ್ತಾ ಬಂದಿದ್ದಳು. ಇದರಿಂದ ಕೆರಳಿದ ಚಿರಾಗ್, 'ನೀನು ನನ್ನ ಪ್ರೀತಿಯನ್ನು ಒಪ್ಪದಿದ್ದರೆ ಬದುಕಿದ್ದು ಪ್ರಯೋಜನವಿಲ್ಲ, ಹೇಗಾದರೂ ಸತ್ತು ಹೋಗು. ನೀನು ಬದುಕಿರುವುದಕ್ಕಿಂತ ಸತ್ತರೆ ಒಳ್ಳೆಯದು' ಎಂದು ಕ್ರೂರವಾಗಿ ನಿಂದಿಸಿ, ಆತ್ಮ೧ಹತ್ಯೆಗೆ ಪ್ರಚೋದನೆ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.

ಮನೆಯಲ್ಲೇ ನೇಣಿಗೆ ಶರಣಾದ ಯುವತಿ!

ಆರೋಪಿ ಚಿರಾಗ್ ನಿರಂತರವಾಗಿ ನೀಡುತ್ತಿದ್ದ ಮಾನಸಿಕ ಕಿರುಕುಳ ಹಾಗೂ ಆತ ಆಡಿದ 'ಬದುಕಿದ್ದೂ ಪ್ರಯೋಜನವಿಲ್ಲ, ಸತ್ತು ಹೋಗು' ಎನ್ನುವ ಮಾತುಗಳಿಂದ ನೊಂದ ರಿಶೆಲ್, ಜೀವನದಲ್ಲಿ ಜಿಗುಪ್ಸೆಗೊಂಡಿದ್ದಾಳೆ. ಯಾರೂ ಇಲ್ಲದ ಸಮಯದಲ್ಲಿ ತನ್ನ ಮನೆಯ ಬೆಡ್‌ರೂಮ್‌ನ ಫ್ಯಾನಿಗೆ ಸೀರೆಯಿಂದ ನೇಣು ಬಿಗಿದುಕೊಂಡು ಆಕೆ ಆತ್ಮ೧ಹತ್ಯೆ ಮಾಡಿಕೊಂಡಿದ್ದಾಳೆ. ಮನೆಯವರು ಬಂದು ನೋಡುವಷ್ಟರಲ್ಲಿ ಯುವತಿ ಪ್ರಾಣಪಕ್ಷಿ ಹಾರಿಹೋಗಿದೆ.

ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಮಗಳ ಸಾವಿನಿಂದ ತೀವ್ರ ಆಘಾತಕ್ಕೊಳಗಾದ ತಂದೆ ಕ್ರಿಸ್ತೋದ್ ಪ್ರಾನ್ಸಿಸ್ ಡಿಸೋಜಾ ಅವರು ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಚಿರಾಗ್ ನೀಡಿದ ಮಾನಸಿಕ ಕಿರುಕುಳ ಮಗಳ ಸಾವಿಗೆ ಕಾರಣ ಎಂದು ಅವರು ದೂರಿದ್ದಾರೆ. ದೂರಿನ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಚಿರಾಗ್‌ನ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.