ಹೊಸೂರು ಸಮೀಪದ ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ತ್ಯಾಜ್ಯ ನೀರು ಸಂಸ್ಕರಣಾ ಟ್ಯಾಂಕ್ ನಿರ್ವಹಣೆ ವೇಳೆ ವಿಷಕಾರಿ ಅನಿಲ ಸೋರಿಕೆಯಾಗಿ ಮೂವರು ಗುತ್ತಿಗೆ ಕಾರ್ಮಿಕರು ಮೃತಪಟ್ಟಿದ್ದಾರೆ. ಸುರಕ್ಷತಾ ಉಪಕರಣಗಳ ಕೊರತೆಯೇ ದುರಂತಕ್ಕೆ ಕಾರಣವೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಹೊಸೂರು: ತಮಿಳುನಾಡು ಮತ್ತು ಕರ್ನಾಟಕದ ಗಡಿಭಾಗ ಹೊಸೂರು ಸಮೀಪದ ವನ್ನಿಯಪುರಂನಲ್ಲಿರುವ ಪ್ರತಿಷ್ಠಿತ ಟಾಟಾ ಎಲೆಕ್ಟ್ರಾನಿಕ್ಸ್ ಕಾರ್ಖಾನೆಯಲ್ಲಿ ಸೋಮವಾರ ಸಂಜೆ ತ್ಯಾಜ್ಯ ನೀರು ಸಂಸ್ಕರಣಾ ಟ್ಯಾಂಕ್‌ ನಿರ್ವಹಣೆ ಮತ್ತು ಸೇವಾ ಕಾಮಗಾರಿ ನಡೆಸುತ್ತಿದ್ದ ವೇಳೆ, ವಿಷಕಾರಿ ಅನಿಲವನ್ನು ಸೋರಿಕೆಯಾದ ಪರಿಣಾಮ ಮೂವರು ಗುತ್ತಿಗೆ ಕಾರ್ಮಿಕರು ದುರಂತವಾಗಿ ಕೊನೆಯುಸಿರೆಳೆದಿದ್ದಾರೆ.

ಈ ಉತ್ಪಾದನಾ ಘಟಕವು ಜಾಗತಿಕ ತಂತ್ರಜ್ಞಾನ ದೈತ್ಯ 'ಆಪಲ್' ಸಂಸ್ಥೆಯ ಐಫೋನ್‌ಗಳಿಗೆ ಅಗತ್ಯವಿರುವ ಲೋಹದ ಕವಚ ಹಾಗೂ ಬ್ಯಾಕ್ ಪ್ಯಾನಲ್‌ಗಳು ಮತ್ತು ಇತರೆ ಬಿಡಿಭಾಗಗಳನ್ನು ತಯಾರಿಸುವ ಪ್ರಮುಖ ಆಪಲ್ ಪೂರೈಕೆ ಫ್ಯಾಕ್ಟರಿಯಾಗಿದೆ .

ದುರಂತ ಸಂಭವಿಸಿದ್ದು ಹೇಗೆ?

ಕೃಷ್ಣಗಿರಿ ಜಿಲ್ಲಾಡಳಿತ ಹಾಗೂ ಸ್ಥಳೀಯ ಪೊಲೀಸರ ಪ್ರಕಾರ, ಘಟನೆಯ ಸಮಯದಲ್ಲಿ ಒಟ್ಟು ನಾಲ್ವರು ಕಾರ್ಮಿಕರನ್ನೊಳಗೊಂಡ ನಿರ್ವಹಣಾ ತಂಡವು ತ್ಯಾಜ್ಯ ನೀರು ಶುದ್ಧೀಕರಣ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿತ್ತು.

ಮೊದಲು ಕಾರ್ಮಿಕ ಬಿ. ಅಕ್ಮಲ್ ಎಂಬುವವರು ಫಿಲ್ಟರ್ ಟ್ಯಾಂಕ್‌ನ ಒಳಗಡೆ ಪರೀಕ್ಷಿಸಲು ಪರಿಶೀಲನೆ ನಡೆಸುತ್ತಿದ್ದಾಗ ತೀವ್ರವಾದ ವಿಷಕಾರಿ ಅನಿಲದ ಪ್ರಭಾವದಿಂದ ಸ್ಥಳದಲ್ಲೇ ಕುಸಿದು ಬಿದ್ದರು. ಅವರನ್ನು ರಕ್ಷಿಸಲು ಹಾಗೂ ಸ್ಥಿತಿಯನ್ನು ಪರೀಕ್ಷಿಸಲು ತೆರಳಿದ ಮತ್ತೊಬ್ಬ ಸಹದ್ಯೋಗಿ ಎಂ. ಸಾರಥಿಕುಮಾರ್ ಕೂಡ ಅನಿಲದ ತೀವ್ರತೆಗೆ ಪ್ರಜ್ಞೆ ತಪ್ಪಿ ಬಿದ್ದರು. ಇಬ್ಬರೂ ಹೊರಬಾರದಿದ್ದಾಗ, ಪರಿಸ್ಥಿತಿ ಅರಿಯದೆ ಸಹಾಯಕ್ಕೆ ತೆರಳಿದ ಪಿ. ಕಾವೇರಿ ಎಂಬ ಮೂರನೇ ಕಾರ್ಮಿಕ ಕೂಡ ಅದೇ ಟ್ಯಾಂಕ್ ಒಳಗೆ ಕುಸಿದುಬಿದ್ದರು.

ಈ ಆಘಾತಕಾರಿ ಸನ್ನಿವೇಶವನ್ನು ಗಮನಿಸಿದ ನಾಲ್ಕನೇ ಕಾರ್ಮಿಕ ತಕ್ಷಣವೇ ಕಿರುಚಾಡಿ ಇತರೆ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯ ಸಹಾಯ ಕೋರಿದರು. ಕೂಡಲೇ ಮೂವರನ್ನೂ ಟ್ಯಾಂಕ್‌ನಿಂದ ಹೊರತೆಗೆದು ಹೊಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮೂವರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದರು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೃಷ್ಣಗಿರಿಯ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯ್ತು.

ಸುರಕ್ಷತಾ ಲೋಪದ ಬಗ್ಗೆ ತನಿಖೆ:

ಕೈಗಾರಿಕಾ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯದ ಉನ್ನತ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಅಪಾಯಕಾರಿ ಸಂಸ್ಕರಣಾ ಟ್ಯಾಂಕ್ ಒಳಗೆ ಇಳಿಯುವಾಗ ಕಾರ್ಮಿಕರಿಗೆ ಅಗತ್ಯವಿದ್ದ ಸೂಕ್ತ ರಕ್ಷಣಾತ್ಮಕ ಸುರಕ್ಷತಾ ಉಪಕರಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕೊರತೆಯಿರುವುದು ಕಂಡುಬಂದಿದೆ.

ಅಮೆರಿಕ ಮೂಲದ ಪ್ರಸಿದ್ಧ 'ಇಕೋಲ್ಯಾಬ್' ಕಂಪನಿಯ ಅಂಗಸಂಸ್ಥೆಯಾದ 'ನಾಲ್ಕೊ ವಾಟರ್' ಈ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ನಿರ್ವಹಣೆಯ ಉಸ್ತುವಾರಿ ವಹಿಸಿಕೊಂಡಿತ್ತು. ಈ ಸಂಸ್ಥೆಯು ಮತ್ತೊಂದು ಉಪ-ಗುತ್ತಿಗೆ ಸಂಸ್ಥೆಯ ಮೂಲಕ ಈ ಕಾರ್ಮಿಕರನ್ನು ಕೆಲಸಕ್ಕೆ ನೇಮಿಸಿಕೊಂಡಿತ್ತು. ಈ ಕುರಿತು ಅಧಿಕಾರಿಗಳು ಸಮಗ್ರ ತನಿಖೆ ಆರಂಭಿಸಿದ್ದು, ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

ಜಾಗತಿಕ ಮಟ್ಟದಲ್ಲಿ ಗಮನಸೆಳೆದಿದ್ದ ಉತ್ಪಾದನಾ ಘಟಕ:

ಉದ್ದನಪಳ್ಳಿ ವ್ಯಾಪ್ತಿಯ ಈ ಟಾಟಾ ಸ್ಥಾವರವು ಚೀನಾದಿಂದ ಹೊರಗೆ ತನ್ನ ಉತ್ಪಾದನಾ ನೆಲೆಯನ್ನು ವಿಸ್ತರಿಸಲು ಆಪಲ್ ಕಂಪನಿ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಯ ಅತ್ಯಂತ ಪ್ರಮುಖ ಕೇಂದ್ರವಾಗಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳ ಚಾಸಿಸ್ ಮತ್ತು ನಿಖರ-ಯಂತ್ರದ ಅತ್ಯಾಧುನಿಕ ಲೋಹದ ಚೌಕಟ್ಟುಗಳನ್ನು ಈ ಘಟಕದಲ್ಲಿ ತಯಾರಿಸಲಾಗುತ್ತದೆ. ರಾಯಿಟರ್ಸ್ ವರದಿಯ ಪ್ರಕಾರ, ಪ್ರಸ್ತುತ ಜಾಗತಿಕವಾಗಿ ಮಾರಾಟವಾಗುವ ಒಟ್ಟು ಐಫೋನ್‌ಗಳಲ್ಲಿ ಶೇ. 25 ರಷ್ಟು ಭಾರತದಲ್ಲೇ ಉತ್ಪಾದನೆಯಾಗುತ್ತಿರುವುದು ವಿಶೇಷ.

ಹಿಂದಿನ ಘಟನೆಗಳು ಮತ್ತು ಸವಾಲುಗಳು:

ಹೊಸೂರು ಘಟಕವು ಈ ಹಿಂದೆಯೂ ಕೆಲವು ತಾಂತ್ರಿಕ ಹಾಗೂ ಪರಿಸರ ಸಂಬಂಧಿ ಸವಾಲುಗಳನ್ನು ಎದುರಿಸಿತ್ತು. ರಾಸಾಯನಿಕ ಶೇಖರಣಾ ಪ್ರದೇಶದಲ್ಲಿ ಸೆಪ್ಟೆಂಬರ್ 2024ರ ಅಗ್ನಿ ಅವಘಡದಿಂದಾಗಿ ಈ ಘಟಕದಲ್ಲಿ ಕೆಲ ದಿನಗಳ ಕಾಲ ಉತ್ಪಾದನೆ ಸಂಪೂರ್ಣ ಸ್ಥಗಿತಗೊಂಡಿತ್ತು.

ಈ ವರ್ಷದ ಆರಂಭದಲ್ಲಿ ತ್ಯಾಜ್ಯ ನೀರು ಹತ್ತಿರದ ಕೃಷಿ ಬಾವಿಗಳಿಗೆ ಸೇರುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (TNPCB) ಪರಿಶೀಲನೆ ನಡೆಸಿತ್ತು. ಆದರೆ ನಿಯಂತ್ರಕರ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಲಾಗಿದ್ದು, ಮಂಡಳಿಯು ಮುಂದಿನ ಕ್ರಮಗಳನ್ನು ಕೈಬಿಟ್ಟಿದೆ ಎಂದು ಟಾಟಾ ಸಂಸ್ಥೆ ಈ ಹಿಂದೆ ಸ್ಪಷ್ಟಪಡಿಸಿತ್ತು.

ಪ್ರಸ್ತುತ ಸಂಭವಿಸಿರುವ ಮೂವರ ಸಾವಿನ ದುರಂತದ ಹಿನ್ನೆಲೆಯಲ್ಲಿ, ಕೈಗಾರಿಕಾ ವಲಯದಲ್ಲಿ ಕಾರ್ಮಿಕರ ಭದ್ರತೆ ಹಾಗೂ ಸುರಕ್ಷತಾ ಮಾನದಂಡಗಳ ಕುರಿತು ಮತ್ತೆ ತೀವ್ರ ಚರ್ಚೆಗಳು ಆರಂಭವಾಗಿವೆ.