ಗ್ರಾಮ ಲೆಕ್ಕಾಧಿಕಾರಿ (VAO) ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಅಭ್ಯರ್ಥಿ ಶಂಕರ್ ಬನ್ನೂರು ಮೊಬೈಲ್ ಬಳಸಿ ಪರೀಕ್ಷೆ ಬರೆದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಕುರಿತು ಹಾವೇರಿ ಡಿಸಿ ಮತ್ತು ಎಸ್ಪಿ ಸ್ಪಷ್ಟನೆ ನೀಡಿದ್ದು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ವಿಎಒ ಪರೀಕ್ಷೆಯಲ್ಲಿ ಈಗಾಗಲೇ ಪೋನ್ ಇಟ್ಟು ಪರೀಕ್ಷೆ ಬರೆದಿದ್ದಾನೆ ಎಂದು ಹೇಳಲಾಗಿತ್ತು. ಆ ಆರೋಪದ ಮೇಲೆ ಅವನ ಬಂಧನವೂ ಆಯಿತು. ಆ ನಿಟ್ಟಿನಲ್ಲಿ ಅವನ ಬಂಧನವೂ ಆಯಿತು. ಅಲ್ಲಿಂದ ಇಲ್ಲಿಯವರೆಗೆ ಕೆಇಎ ಮೇಲೆ ಹಲವು ಆರೋಪಗಳು ಕೇಳಿ ಬಂದವೂ, ಈಗ ಮತ್ತೊಂದು ಆರೋಪ ದಿಗ್ಬರಮೆಗೊಳಿಸುವಂತೆ ಮಾಡಿದೆ. ಆ ಆರೋಪ ಏನೆಂದರೆ, ಆರೋಪಿ ಶಂಕರ್ ಬನ್ನೂರು ಆ ಪರೀಕ್ಷೆ ಬರೆದೆ ಇಲ್ಲ ಎಂದು ಸೋಶಿಯಲ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಅದಕ್ಕೆ ಆ ಆರೋಪಗಳ ಕುರಿತು ಅಲ್ಲಿನ ಡಿಸಿ ಹಾಗೂ ಎಸ್ಪಿ ಏನು ಹೇಳಿದ್ದಾರೆ. ಎನ್ನುವುದನ್ನು ನೋಡೋಣ ಬನ್ನಿ.

ಚಾಲ್ತಿಯಲ್ಲಿದೆ ತನಿಖೆ!

ಕರ್ನಾಟಕ ಲೋಕಸೇವಾ ಆಯೋಗದ ಪರೀಕ್ಷಾ ಅಕ್ರಮಗಳ ಜಗಜ್ಜಾಹೇರು ಪ್ರಸಂಗಗಳ ಬಿಸಿ ಆರುವ ಮುನ್ನವೇ, ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮದ ಗಂಭೀರ ವಾಸನೆ ಬಡಿದಿದೆ. ಕಳೆದ ಅಕ್ಟೋಬರ್ ೪ ರಂದು ರಾಜ್ಯಾದ್ಯಂತ ಒಟ್ಟು 500 ಗ್ರಾಮ ಲೆಕ್ಕಾಧಿಕಾರಿ ಹುದ್ದೆಗಳ ಭರ್ತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಆದರೆ, ಹಾವೇರಿ ಜಿಲ್ಲೆಯ ಪರೀಕ್ಷಾ ಕೇಂದ್ರವೊಂದರಲ್ಲಿ ಮೊಬೈಲ್ ಫೋನ್ ಬಳಸಿ ಬೃಹತ್ ಅಕ್ರಮ ಎಸಗಲಾಗಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದು, ಪ್ರಕರಣ ಸಂಬಂಧ ಹಾವೇರಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ತೀವ್ರ ತನಿಖೆ ಕೈಗೊಂಡು ಕಟ್ಟುನಿಟ್ಟಿನ ಕ್ರಮಗಳಿಗೆ ಮುಂದಾಗಿವೆ.

ಶಿಗ್ಗಾಂವಿ ಕೇಂದ್ರದಲ್ಲಿ ಅಕ್ರಮ; ಪ್ರಥಮ ರ್ಯಾಂಕ್ ಪಡೆದ ಅಭ್ಯರ್ಥಿಯ ಬಂಧನ!

ಹಾವೇರಿ ಜಿಲ್ಲೆಯ ಶಿಗ್ಗಾಂವಿಯಲ್ಲಿರುವ ಎಸ್‌ಎಸ್‌ಎಂ ಬಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರ ಸಂಖ್ಯೆ ೧೨ ರಲ್ಲಿ ಪರೀಕ್ಷೆ ಬರೆದಿದ್ದ ಶಂಕರ್ ಬನ್ನೂರು ಎಂಬ ಅಭ್ಯರ್ಥಿ ಬೊಂಬಾಟ್ ೧೫೧ ಅಂಕಗಳನ್ನು ಪಡೆಯುವ ಮೂಲಕ ಇಡೀ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದನು. ಆದರೆ, ಈತ ಪರೀಕ್ಷಾ ಕೊಠಡಿಯಲ್ಲಿ ಸದ್ದಿಲ್ಲದೆ ಮೊಬೈಲ್ ಫೋನ್ ಬಳಸಿ ಅಕ್ರಮ ಎಸಗಿದ್ದಾನೆ ಎಂಬ ಬಲವಾದ ಶಂಕೆ ವ್ಯಕ್ತವಾದ ಬೆನ್ನಲ್ಲೇ, ಹಾವೇರಿ ಪೊಲೀಸರು ಶಂಕರ್ ಬನ್ನೂರನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಪರೀಕ್ಷಾರ್ಥಿ ಹೇಳೋದೇನು?

ಈ ನಡುವೆ, ಅದೇ ಶಿಗ್ಗಾಂವಿಯ ಎಸ್‌ಎಸ್‌ಎಂ ಬಿ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಮತ್ತೊಬ್ಬ ಪರೀಕ್ಷಾರ್ಥಿ ಸತೀಶ್ ಲಮಾಣಿ ಹಾಗೂ ಸಾಮಾಜಿಕ ಹೋರಾಟಗಾರ ಅನಿಲ್ ಕಾಂಬ್ಳೆ ಅವರು ಗಂಭೀರ ಆಪಾದನೆಗಳನ್ನು ಮಾಡಿದ್ದಾರೆ. ಸತೀಶ್ ಲಮಾಣಿ ಮಾತನಾಡಿ, "ಶಂಕರ್ ಬನ್ನೂರು ನೂರಕ್ಕೆ ನೂರರಷ್ಟು ಪರೀಕ್ಷಾ ಕೇಂದ್ರಕ್ಕೆ ಬಂದೇ ಇಲ್ಲ. ಆತ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆಯುವ ಬದಲು ಬೇರೆ ಎಲ್ಲೋ ಕುಳಿತುಕೊಂಡು ಅಕ್ರಮ ಎಸಗಿದ್ದಾನೆ" ಎಂದು ನೇರ ಸವಾಲು ಹಾಕಿದ್ದಾರೆ. ಅಲ್ಲದೆ, "ಶಂಕರ್ ಬನ್ನೂರು ಪರೀಕ್ಷಾ ಕೊಠಡಿಯಲ್ಲಿ ಎಲ್ಲಿ ಕೂತು ಪರೀಕ್ಷೆ ಬರೆದಿದ್ದಾನೆ? ಮೊಬೈಲ್ ಬಳಸಿ ಹೇಗೆ ಅಕ್ರಮ ಎಸಗಿದ್ದಾನೆ? ಎಂಬುದನ್ನು ಸ್ಪಷ್ಟಪಡಿಸಲು ಹಾವೇರಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಸಿಟಿವಿ (CCTV) ಫೂಟೇಜ್ ಅನ್ನು ತಕ್ಷಣವೇ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು" ಎಂದು ಅವರು ಆಗ್ರಹಿಸಿದ್ದಾರೆ.

ಹಾವೇರಿ ಡಿಸಿ ಹಾಗೂ ಎಸ್ಪಿ ಜಂಟಿ ಸುದ್ದಿಗೋಷ್ಠಿ; ಕಟ್ಟುನಿಟ್ಟಿನ ಸ್ಪಷ್ಟನೆ!

ಈ ಎಲ್ಲಾ ಗಂಭೀರ ಆರೋಪ-ಪ್ರತ್ಯಾರೋಪಗಳು ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ, ಹಾವೇರಿ ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ್ ಹಾಗೂ ಹಾವೇರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಯಶೋಧಾ ವಂಟಗೋಡಿ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಅಧಿಕೃತ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲಾಧಿಕಾರಿ ವಿಜಯ್ ಮಹಾಂತೇಶ್ ದಾನಮ್ಮನವರ್ ಮಾತನಾಡಿ, "ಪರೀಕ್ಷಾ ಕೇಂದ್ರದ ಸಿಸಿಟಿವಿ ಫೂಟೇಜ್‌ಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಈಗಾಗಲೇ ಶಂಕರ್ ಬನ್ನೂರು ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಫೇಸಿಯಲ್ ರೆಕಗ್ನಿಷನ್ (Facial Recognition) ತಂತ್ರಜ್ಞಾನದ ಮೂಲಕ ಅಭ್ಯರ್ಥಿಯ ಮುಖ ಪರಿಶೀಲನೆ ನಡೆಸಿಯೇ ಒಳಗಡೆ ಬಿಡಲಾಗಿತ್ತು. ಆತನ ಸಹಿ (Signature) ಕೂಡ ಸಂಪೂರ್ಣವಾಗಿ ತಾಳೆಯಾಗಿದೆ. ಆತ ಪರೀಕ್ಷಾ ಕೊಠಡಿಯಲ್ಲಿ ಕುಳಿತು ಪರೀಕ್ಷೆ ಬರೆದಿರುವುದು ಸಿಸಿಟಿವಿ ದಾಖಲೆಯಲ್ಲಿದೆ ಮತ್ತು ತಾನು ಪರೀಕ್ಷೆ ಬರೆದಿರುವುದಾಗಿ ಆತನೂ ಮಾಧ್ಯಮಗಳ ಎದುರು ಒಪ್ಪಿಕೊಂಡಿದ್ದಾನೆ" ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ತವ್ಯ ಲೋಪ ಎಸಗಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲೆ ಶಿಸ್ತುಕ್ರಮ!

ಪರೀಕ್ಷಾ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಚಾಟ ಬೀಸಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮಾಕಾಂತ್ ಭಟ್ ಅವರು ಅನುದಾನಿತ ಸಂಸ್ಥೆಯ ಸಿಬ್ಬಂದಿಯಾಗಿದ್ದು, ಅವರ ವಿರುದ್ಧ ಶಿಸ್ತುಕ್ರಮ ಜರುಗಿಸುವಂತೆ ಸಂಬಂಧಪಟ್ಟ ಆಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ. ಇದರೊಂದಿಗೆ ಪರೀಕ್ಷಾ ಕೊಠಡಿ ಮೇಲ್ವಿಚಾರಕರಾದ ಬಸವರಾಜ ಸವದಿ, ಡ್ರೆಸ್ ಕೋಡ್ ಅಧಿಕಾರಿ ರಾಜು ದುಂಡಪ್ಪನವರ್ ಹಾಗೂ ಪರೀಕ್ಷಾ ವೀಕ್ಷಕರಾಗಿದ್ದ ಶಿವಣ್ಣ ಅವರ ಮೇಲೆಯೂ ಶಿಸ್ತುಕ್ರಮ ಕೈಗೊಳ್ಳಲು ಆಯಾ ಇಲಾಖೆಗೆ ಪತ್ರ ಬರೆಯಲಾಗಿದೆ.

ನಾಲ್ವರು ಪೊಲೀಸ್ ಸಿಬ್ಬಂದಿ ಅಮಾನತು ಮತ್ತು ಸುಳ್ಳು ವದಂತಿಗೆ ಎಚ್ಚರಿಕೆ!

ಪರೀಕ್ಷಾ ಕೇಂದ್ರದಲ್ಲಿ ಭದ್ರತಾ ಲೋಪ ಎಸಗಿದ ಆಧಾರದ ಮೇಲೆ ಹಾವೇರಿ ಎಸ್ಪಿ ಯಶೋಧಾ ವಂಟಗೋಡಿ ಅವರು ನಾಲ್ವರು ಹೆಡ್ ಕಾನ್ಸ್‌ಟೇಬಲ್‌ಗಳಾದ ಹೆಚ್.ಸಿ. ಮರೆಣ್ಣನವರ್, ಹೊನ್ನಾಳಿ, ಮಣಕವಾಡ ಹಾಗೂ ನಾಗನೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಜೊತೆಗೆ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಒಬ್ಬ ಸಿಪಿಐ ಹಾಗೂ ಇಬ್ಬರು ಪಿಎಸ್‌ಐ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಹಿರಿಯ ಅಧಿಕಾರಿಗಳಿಗೆ ಶಿಫಾರಸು ಕಳುಹಿಸಿದ್ದಾರೆ.ಇದೇ ವೇಳೆ, ಶಂಕರ್ ಬನ್ನೂರು ಪರೀಕ್ಷೆಗೆ ಬಂದಿರಲಿಲ್ಲ ಎಂದು ಆರೋಪಿಸಿರುವ ಅಭ್ಯರ್ಥಿ ಸತೀಶ್ ಲಮಾಣಿ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. "ಜಿಲ್ಲಾಡಳಿತ ಸ್ಪಷ್ಟನೆ ನೀಡಿದ ಮೇಲೆಯೂ ಈ ರೀತಿ ಹೇಳಿಕೆ ನೀಡಲಾಗಿದೆ. ಅವರ ಬಳಿ ಶಂಕರ್ ಬನ್ನೂರು ಎಲ್ಲಿಯೂ ಪರೀಕ್ಷೆಗೆ ಬಂದಿರಲಿಲ್ಲ ಎನ್ನಲು ಸೂಕ್ತ ದಾಖಲೆಗಳಿದ್ದರೆ ಇಲಾಖೆಗೆ ನೀಡಲಿ. ಮಾಧ್ಯಮಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಆಧಾರರಹಿತ ಸುಳ್ಳು ಮಾಹಿತಿ ಹಾಗೂ ವದಂತಿಗಳನ್ನು ಹರಡುವಂತಿಲ್ಲ. ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಎಸ್ಪಿ ಯಶೋಧಾ ವಂಟಗೋಡಿ ಎಚ್ಚರಿಕೆ ನೀಡಿದ್ದಾರೆ.