ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾರ್ಯಾಚರಣೆ ನಡೆಸಿ ಸುಮಾರು ₹50 ಕೋಟಿ ಮೌಲ್ಯದ ಸಿಎ ನಿವೇಶನಗಳನ್ನು ವಶಪಡಿಸಿಕೊಂಡಿದೆ. ಮತ್ತೊಂದೆಡೆ ಗ್ರೇಟರ್‌ ಬೆಂಗಳೂರು ಪ್ರದೇಶಕ್ಕಾಗಿ ₹16.60 ಕೋಟಿ ವೆಚ್ಚದಲ್ಲಿ ಜಿಐಎಸ್‌ ಆಧಾರಿತ ಹೊಸ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

₹50 ಕೋಟಿ ಮೌಲ್ಯದ ಸಿಎ ನಿವೇಶನ ವಶ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸುವ ಕಾರ್ಯಾಚರಣೆಯನ್ನು ಮುಂದುವರಿಸಿದ್ದು, ಗುರುವಾರ ಕಾರ್ಯಾಚರಣೆ ನಡೆಸಿ ಅರಕೆರೆ ಗ್ರಾಮದಲ್ಲಿ ಸುಮಾರು ₹50 ಕೋಟಿ ಮೌಲ್ಯದ ನಾಗರಿಕ ಸೌಲಭ್ಯ ನಿವೇಶನಗಳನ್ನು ವಶಪಡಿಸಿಕೊಂಡಿದೆ.

1 ಎಕರೆ 10 ಗುಂಟೆ ವಿಸ್ತೀರ್ಣದ ಸಿ.ಎ.ನಿವೇಶನ

ಬೆಂಗಳೂರು ದಕ್ಷಿಣ ತಾಲೂಕು, ಬೇಗೂರು ಹೋಬಳಿ, ಅರಕೆರೆ ಗ್ರಾಮದಲ್ಲಿನ ಶಾಂತಿನಿಕೇತನ ಖಾಸಗಿ ಬಡಾವಣೆಯಲ್ಲಿನ ಒಟ್ಟು 1 ಎಕರೆ 10 ಗುಂಟೆ ವಿಸ್ತೀರ್ಣದ ಸಿ.ಎ.ನಿವೇಶನಗಳಲ್ಲಿ (2 ನಿವೇಶನಗಳು) ಇದ್ದ ಅನಧಿಕೃತ ನಿರ್ಮಾಣಗಳನ್ನು ತೆರವುಗೊಳಿಸಿ ವಶಕ್ಕೆ ಪಡೆದಿದೆ. ಕಾರ್ಯಾಚರಣೆಯಲ್ಲಿ ಬಿಡಿಎ ಕಾರ್ಯನಿರತ ಪಡೆಯ ಆರಕ್ಷಕ ಅಧೀಕ್ಷಕರು, ವಲಯ ಆಯುಕ್ತರು (ದಕ್ಷಿಣ ವಲಯ), ಅಭಿಯಂತರ ಅಧಿಕಾರಿ-3, ದಕ್ಷಿಣ ವಿಭಾಗದ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

₹16 ಕೋಟಿ ವೆಚ್ಚದಲ್ಲಿ ಜಿಐಎಸ್‌ ಆಧಾರಿತ ಮಾಸ್ಟರ್‌ ಪ್ಲಾನ್‌ ಸಿದ್ಧ

ಬೆಂಗಳೂರು: ಗ್ರೇಟರ್‌ ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕೆ 16.60 ಕೋಟಿ ರು. ವೆಚ್ಚದಲ್ಲಿ ಜಿಐಎಸ್‌ ಆಧಾರಿತ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ನಗರ ಪ್ರದೇಶದ ವ್ಯಾಪ್ತಿಗೆ ಸೀಮಿತವಾದಂತೆ ಹಳೆ ನಗರ ಪ್ರದೇಶಗಳ ಪುನರ್‌ ಅಭಿವೃದ್ಧಿ, ನಗರದ ಬೆಳವಣಿಗೆ, ರಸ್ತೆ, ಸಮೂಹ ಸಾರಿಗೆ ಉತ್ತಮಪಡಿಸುವ ಕುರಿತು ವಿಶ್ವಮಟ್ಟದ ಯೋಜನಾ ಸಂಸ್ಥೆಗಳ ಮೂಲಕ ಮಾಸ್ಟರ್‌ ಪ್ಲಾನ್‌ ಸಿದ್ಧಪಡಿಸಲು ತೀರ್ಮಾನಿಸಲಾಗಿದೆ.

ನಗರ ಮೂಲಸೌಕರ್ಯ ನಿರ್ಮಾಣ, ರಸ್ತೆಗಳ ಅಗಲೀಕರಣ, ಸಾರ್ವಜನಿಕ ಸಂಪರ್ಕ ಸುಧಾರಣೆಗೆ ಯೋಜನೆ ರೂಪಿಸಲಾಗಿದೆ. ಡಿಜಿಟಲ್ ನಕ್ಷೆಗಳು ಮತ್ತು ಉಪಗ್ರಹ ಚಿತ್ರಗಳನ್ನು ಬಳಸಿ ಸಿದ್ಧಪಡಿಸುವ ಸಮಗ್ರ ಮಾಸ್ಟರ್ ಪ್ಲಾನ್ ಇದಾಗಿದ್ದು, ಸಾಂಪ್ರದಾಯಿಕ ಮಾಸ್ಟರ್ ಪ್ಲಾನ್‌ಗಳನ್ನು ಕೇವಲ ಕಾಗದದ ನಕ್ಷೆಗಳು ಅಥವಾ ರೇಖಾಚಿತ್ರಗಳ ಮೂಲಕ ತಯಾರಿಸಲಾಗುತ್ತಿತ್ತು.

ನಿಖರವಾದ ಡಿಜಿಟಲ್ ಡೇಟಾ ಸಂಗ್ರಹ

ಜಿಐಎಸ್ ಆಧಾರಿತ ಯೋಜನೆಯಲ್ಲಿ, ಭೂಮಿಯ ಪ್ರತಿ ಇಂಚು ಜಾಗದ ನಿಖರವಾದ ಡಿಜಿಟಲ್ ಡೇಟಾವನ್ನು ಸಂಗ್ರಹಿಸಿ, ಕಂಪ್ಯೂಟರ್ ಸಾಫ್ಟ್‌ವೇರ್ ಮೂಲಕ ವಿಶ್ಲೇಷಿಸಿ ಯೋಜನೆಯನ್ನು ಸಿದ್ಧಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Mumbai: ರಸ್ತೆಯಲ್ಲಿ ಕಸ ಬಿಸಾಕಿದ್ರೆ ಕ್ಯಾಮೆರಾನೇ ಕೂಗಿ ಹೇಳುತ್ತೆ! ಮುಂಬೈನಲ್ಲಿ ಶುರುವಾದ ಈ ಹೈಟೆಕ್ ಟ್ರಿಕ್ ಬೆಂಗಳೂರಿಗೆ ಬರೋದು ಯಾವಾಗ?