ನೆಲಮಂಗಲದಲ್ಲಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಸಿಎ ಜಾಗವನ್ನು ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ಕಬಳಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. 10 ಲಕ್ಷ ರೂ. ಚಾಲೆಂಜ್ ಡಿಪಾಸಿಟ್ನೊಂದಿಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ.
ನೆಲಮಂಗಲ/ದಾಬಸ್ಪೇಟೆ : ನೆಲಮಂಗಲ ನಗರದ ಪ್ರಮುಖ ಪಾರ್ಕ್ ಹಾಗೂ ಸಿಎ (ನಿವೇಶನ) ಜಾಗಗಳನ್ನು ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಕಬಳಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಧಿಕಾರಿಗಳ ಶಾಮೀಲಾತಿಯೊಂದಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಂದಾಜು 40 ಕೋಟಿ ರೂಪಾಯಿಗೂ ಹೆಚ್ಚು ಬೆಲೆಬಾಳುವ ಸರ್ಕಾರಿ ಭೂಮಿಯನ್ನು ಗುಳುಂ ಮಾಡಲಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಈ ಹಗರಣದ ಕುರಿತು ವೆಂಕಟೇಶ್ ಎಂಬುವವರು ಬರೋಬ್ಬರಿ 10 ಲಕ್ಷ ರೂಪಾಯಿ ಹಣವನ್ನು ಚಾಲೆಂಜ್ ಡಿಪಾಸಿಟ್ ಮಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ, ನೆಲಮಂಗಲದ ಬಿನ್ನಮಂಗಲ ನರ್ಸರಿ ಮುಂಭಾಗದಲ್ಲಿರುವ ಸುಮಾರು 60 ಸಾವಿರ ಚದರ ಅಡಿಯಷ್ಟು ವಿಸ್ತೀರ್ಣದ ಸಿಎ ಜಾಗವನ್ನು ಅಕ್ರಮವಾಗಿ ಮಾರಾಟ ಮಾಡಲಾಗಿದ್ದು, ಅಲ್ಲಿ ನಿಯಮಬಾಹಿರವಾಗಿ ಮಾಲ್, ಶೋರೂಂ ಹಾಗೂ ಕಮರ್ಷಿಯಲ್ ಕಟ್ಟಡಗಳನ್ನು ನಿರ್ಮಿಸಲಾಗಿದೆ. ನಕಲಿ ದಾಖಲೆಗಳನ್ನು ಇಟ್ಟುಕೊಂಡು ಸರ್ಕಾರಿ ಜಾಗವನ್ನು ವಾಣಿಜ್ಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ಉಲ್ಲೇಖಿಸಿ ಅಧಿಕೃತವಾಗಿ ದೂರು ನೀಡಿದ್ದರು.
ಸರ್ಕಾರದ ಆದೇಶ, ತನಿಖಾ ಸಮಿತಿ ರಚನೆ
ದೂರಿನ ಗಾಂಭೀರ್ಯತೆಯನ್ನು ಪರಿಗಣಿಸಿದ ರಾಜ್ಯ ಸರ್ಕಾರವು ತಕ್ಷಣವೇ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಸರ್ಕಾರದ ಸೂಚನೆಯ ಮೇರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಪರ ಜಿಲ್ಲಾಧಿಕಾರಿ (ಎಡಿಸಿ) ಸೈಯಿದಾ ಆಯಿಷಾ ಅವರ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗಿದ್ದು. ಈಗಾಗಲೇ ಅಪರ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳ ತಂಡವು ಬಿನ್ನಮಂಗಲದ ವಿವಾದಿತ ಸ್ಥಳಕ್ಕೆ ಭೇಟಿ ನೀಡಿ, ಭೂಮಿಯ ನಕ್ಷೆ ಹಾಗೂ ಸಂಬಂಧಪಟ್ಟ ದಾಖಲೆಗಳ ಪರಿಶೀಲನೆ ನಡೆಸಿದೆ. ಮೇಲ್ನೋಟಕ್ಕೆ ಸರ್ಕಾರಿ ಜಾಗ ಕಬಳಿಕೆಯಾಗಿರುವುದು ಕಂಡುಬಂದಿದ್ದು, ಇದರ ಪೂರ್ಣ ವರದಿಯನ್ನು ಸದ್ಯದಲ್ಲೇ ಸರ್ಕಾರಕ್ಕೆ ರವಾನಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ
ಈ ಕುರಿತು ಪ್ರತಿಕ್ರಿಯಿಸಿರುವ ಎಡಿಸಿ ಸೈಯಿದಾ ಆಯಿಷಾ ಅವರು, ಸರ್ಕಾರದ ಆಸ್ತಿಗೆ ಧಕ್ಕೆ ಬರಲು ಮತ್ತು ನಷ್ಟವಾಗಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸ್ಥಳದ ನಕ್ಷೆ ಹಾಗೂ ಎಲ್ಲಾ ದಾಖಲೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ತನಿಖೆಯಿಂದ ಹೊರಬರುವ ಸತ್ಯಾಸತ್ಯತೆಯ ಆಧಾರದ ಮೇಲೆ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.






