ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ರಸ್ತೆಯಲ್ಲಿ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿದ್ದ ಶಿಕ್ಷಕಿ ನಾಗರತ್ನ ಮೃತಪಟ್ಟಿದ್ದಾರೆ. ಅಪಘಾತದ ತೀವ್ರತೆಗೆ ಅವರ ಹೃದಯ ದೇಹದಿಂದ ಬೇರ್ಪಟ್ಟು ರಸ್ತೆಯಲ್ಲಿ ಬಡಿದುಕೊಳ್ಳುತ್ತಿದ್ದ ಭೀಕರ ದೃಶ್ಯ ಕಂಡುಬಂದಿದೆ. ಪೊಲೀಸರು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಅಪಘಾತದಲ್ಲಿ ಬೈಕ್‌ನಿಂದ ಕೆಳಗೆ ಬಿದ್ದಾಗ ಟಿಪ್ಪರ್‌ ಹರಿದು ಮಹಿಳೆಯ ಹೃದಯವು ದೇಹದಿಂದ ಬೇರ್ಪಟ್ಟು ರಸ್ತೆಯ ಮೇಲೆ ಬಿದ್ದು ಕೆಲಕಾಲ ಬಡಿದುಕೊಳ್ಳುತ್ತಿದ್ದ ಘಟನೆ ನಡೆದಿದೆ. ಈ ದೃಶ್ಯವು ಸ್ಥಳದಲ್ಲಿ ಇದ್ದ ಜನರನ್ನು ವಿಚಲಿತರನ್ನಾಗಿ ಮಾಡಿದೆ. ಈ ಘಟನೆಯು ಬೆಂಗಳೂರು ದಕ್ಷಿಣ ಜಿಲ್ಲೆಯ ಕಗ್ಗಲೀಪುರದ ಪಟ್ಟರೇದಪಾಳ್ಯ ಸಮೀಪದ ಕನಕಪುರ ರಸ್ತೆ ಮುಖ್ಯರಸ್ತೆಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಟಿಪ್ಪರ್ ಲಾರಿಯು ಡಿಕ್ಕಿ ಹೊಡೆದು ಸ್ಕೂಟರ್‌ನಲ್ಲಿ ಪತಿ ಜೊತೆ ಹೋಗುತ್ತಿದ್ದ ಕಗ್ಗಲೀಪುರ ನಿವಾಸಿ ನಾಗರತ್ನ (57) ಮೃತ ಪಟ್ಟಿದ್ದಾರೆ. ಇವರು ಶಾಲಾ ಶಿಕ್ಷಕಿ ಆಗಿದ್ದರು ಎಂದು ತಿಳಿದುಬಂದಿದೆ. ಜತೆಗಿದ್ದ ಅವರ ಪತಿ ಪ್ರಾಣಾಪಾಯದಿಂದ ಪಾರಾಗಿದ್ದು, ಅಲ್ಪಸ್ವಲ್ಪ ಗಾಯಗಳೊಂದಿಗೆ ಬದುಕುಳಿದಿದ್ದಾರೆ.

ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ

ನಾಗರತ್ನ ಅವರು ಪತಿಯೊಂದಿಗೆ ಸ್ಕೂಟರ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಕನಕಪುರ ರಸ್ತೆಯಲ್ಲಿ ವೇಗವಾಗಿ ಬಂದ ಟಿಪ್ಪರ್ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಸ್ಕೂಟರ್‌ನಿಂದ ಕೆಳಗೆ ನಾಗರತ್ನ ಅವರ ಮೇಲೆ ಲಾರಿ ಚಕ್ರ ಹರಿದಿದೆ. ಇದರಿಂದ ಅವರ ದೇಹ ನಜ್ಜುಗುಜ್ಜಾಗಿತ್ತು. ದೇಹದ ಅಂಗಾಂಗಗಳು ಛಿದ್ರಗೊಂಡವು. ಅಲ್ಲದೆ ಅವರ ಹೃದಯವು ದೇಹದಿಂದ ಬೇರ್ಪಟ್ಟು ರಸ್ತೆಯಲ್ಲಿ ಕೆಲವು ಕಾಲ ಬಡಿದುಕೊಳ್ಳುತ್ತಿತ್ತು. ಈ ದೃಶ್ಯವು ಸ್ಥಳದಲ್ಲಿದ್ದ ಇತರ ವಾಹನ ಸವಾರರು, ಜನರನ್ನು ವಿಚಲಿತರನ್ನಾಗಿಸಿತು.

ಇನ್ನು ಪೊಲೀಸರು ಟಿಪ್ಪರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದು, ನಿರ್ಲಕ್ಷ್ಯದ ಚಾಲನೆಯಿಂದ ಸಾವು ಸಂಭವಿಸಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Ramanagara: 'ಬೇಕೋ, ಬೇಡವೋ ಗ್ಯಾರಂಟಿ ಕೊಟ್ಟಿದ್ದೇವೆ', ಸಿಎಂ ಆಪ್ತ ಸಚಿವ ಹೆಚ್.ಸಿ. ಬಾಲಕೃಷ್ಣ ಗ್ಯಾರಂಟಿ ಯೋಜನೆ ಬಗ್ಗೆ ಅಸಮಾಧಾನ!