ರಾಮನಗರದಲ್ಲಿ ವಿಶೇಷ ಚೇತನರ ಅಹವಾಲು ಸ್ವೀಕರಿಸುವಾಗ ಸಚಿವ ಹೆಚ್.ಸಿ. ಬಾಲಕೃಷ್ಣ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದಾಗಿ ಆರ್ಥಿಕ ಸಮಸ್ಯೆ ಎದುರಾಗಿದ್ದು, ನಿಲ್ಲಿಸಿದರೆ ಜನ ಗಲಾಟೆ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.

ರಾಮನಗರ: ಗ್ಯಾರಂಟಿ ಯೋಜನೆಗಳ ಘೋಷಣೆ ಮೂಲಕ ಕರ್ನಾಟಕದಲ್ಲಿ ಭಾರೀ ಬಹುಮತ ಪಡೆದುಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್ ಸರ್ಕಾರಕ್ಕೆ ಈ ಗ್ಯಾರಂಟಿ ಯೋಜನೆಗಳೇ ನುಂಗಲಾರದ ತುತ್ತಾಗಿದೆ. ಕೆಲವು ದಿನಗಳ ಹಿಂದಷ್ಟೇ ಸದನದಲ್ಲಿ ಗ್ಯಾರಂಟಿ ಯೋಜನೆಗಳ ವಿರುದ್ಧ ಅಸಮಾಧಾನ ಹೊರ ಹಾಕಿ ಯೋಜನೆಗಳನ್ನು ನಿಲ್ಲಿಸಲು ಕಾಂಗ್ರೆಸ್ ಎಂಎಲ್ಸಿ ಕಮಕನೂರು ಮನವಿ ಮಾಡಿದ್ದರು. ಆದರೆ ಮರುದಿನವೇ ತಮ್ಮ ಹೇಳಿಕೆಗೆ ಉಲ್ಟಾ ಹೊಡೆದಿದ್ದರು. ಆದರೆ ಈಗ ಸಿಎಂ ಡಿಕೆ ಶಿವಕುಮಾರ್ ಅವರ ಅಪ್ತ ಶಾಸಕರಾಗಿರುವ, ಸಚಿವ ಹೆಚ್.ಸಿ ಬಾಲಕೃಷ್ಣ ಅವರೇ ಗ್ಯಾರಂಟಿ ಯೋಜನೆಗಳ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ಗ್ಯಾರಂಟಿ ಯೋಜನೆಗಳ ಬಗ್ಗೆ ಸಚಿವ ಬಾಲಕೃಷ್ಣ ಅಚ್ಚರಿಯ ಹೇಳಿಕೆ!

ಹೌದು, ವಿಶೇಷ ಚೇತನರ ಅಹವಾಲು ಸ್ವೀಕರಿಸುವ ವೇಳೆ ಸಚಿವ ಹೆಚ್.ಸಿ.ಬಾಲಕೃಷ್ಣ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಗ್ಯಾರಂಟಿ ಯೋಜನೆ ಬಗ್ಗೆ ಸಚಿವ ಹೆಚ್.ಸಿ.ಬಾಲಕೃಷ್ಣ ಅಪಸ್ವರ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ನಿಲ್ಲಿಸಿದರೆ ಗಲಾಟೆ ಮಾಡ್ತಾರೆ

ರಾತ್ರಿ ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ವಿಶೇಷ ಚೇತನರು ಹಲವು ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಿ ಮಾತನಾಡಿದ ಸಚಿವ ಬಾಲಕೃಷ್ಣ, ಬೇಕೋ, ಬೇಡವೋ ರಾಜ್ಯದಲ್ಲಿ ನಾವು ಗ್ಯಾರಂಟಿ ಕೊಟ್ಟಿದ್ದೇವೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದೆ, ರೈತರಿಗೂ ಪರಿಹಾರ ಕೊಡಬೇಕು, ಅವರೂ ಗಲಾಟೆ ಮಾಡ್ತಿದ್ದಾರೆ. ಗ್ಯಾರಂಟಿ ನಿಲ್ಲಿಸಿದರೆ ಅವರೂ ಗಲಾಟೆ ಮಾಡ್ತಾರೆ. ಈ ಸಮಸ್ಯೆಯಲ್ಲಿ ಸಿಲುಕಿ ನಾವೆಲ್ಲ ಒದ್ದಾಡ್ತಿದ್ದೇವೆ. ಗ್ಯಾರಂಟಿ ಇಲ್ಲದಿದ್ದರೆ ಇದೆಲ್ಲ ಅಷ್ಟು ಸಮಸ್ಯೆ ಆಗ್ತಿರಲಿಲ್ಲ. ನಾವೂ ಸರ್ಕಾರ ನಡೆಸಬೇಕಲ್ಲ, ವ್ಯವಸ್ಥೆಯಲ್ಲಿ ಹಣಕಾಸು ಸರಿದೂಗಿಸಬೇಕಲ್ಲ. ವಿಶೇಷ ಚೇತನರ ಬೇಡಿಕೆಗಳನ್ನ ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡುತ್ತೇವೆ ಎಂದು ಹೇಳುವ ಮೂಲಕ ವಿಶೇಷ ಚೇತನರ ಬೇಡಿಕೆ ಆಲಿಸುವ ವೇಳೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ನಕಲಿ ದಾಖಲೆ ಸೃಷ್ಟಿ ಪ್ರಕರಣ

ಬಿಡದಿ ರೈತರ ಉಪವಾಸ ಸತ್ಯಾಗ್ರಹ ವಿಚಾರವಾಗಿ ಮಾತನಾಡಿದ್ದ ಸಚಿವ ಬಾಲಕೃಷ್ಣ, ರೈತರನ್ನ ಕರೆದು ಮಾತನಾಡುತ್ತೇನೆ. ಅದಕ್ಕೆ ಏನು ಪರಿಹಾರ ಹುಡುಕಬೇಕೋ ಅದನ್ನ ಹುಡುಕ್ತೀನಿ. ಸರ್ಕಾರ ಮಾಡಿರುವ ಸಮಿತಿ ಕೆಲಸ ಮಾಡ್ತಿದೆ. ಸಮಿತಿ ಮೇಲೆ ಯಾರೂ ಒತ್ತಡ ಹಾಕಲಿಕ್ಕೆ ಸಾಧ್ಯವಿಲ್ಲ. ನಾವು ಕೂಡ ಒತ್ತಡ ಹೇರಲು ಸಾಧ್ಯವಿಲ್ಲ. ಸರ್ಕಾರದ ಆದೇಶದನ್ವಯ ಸಮಿತಿ ಕೆಲಸ ಮಾಡುತ್ತೆ ಎಂದು ಹೇಳಿದರು. ಅಲ್ಲದೇ, ನಕಲಿ ದಾಖಲೆ ಸೃಷ್ಟಿ ಪ್ರಕರಣವನ್ನ ಸಿಐಡಿ ವಹಿಸಬೇಕು ಎಂಬ ವಿಚಾರವಾಗಿ ಸ್ಪಷ್ಟನೆ ನೀಡಿ, ಖಂಡಿತಾ ವಹಿಸೋಣ, ಬೇಕಿದ್ದರೆ ಸಿಬಿಐಗೆ ಕೊಡೋಣಾ.. ಜೆಡಿಎಸ್ ಪಕ್ಷದವರೇ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡಿರೋದು. ಅದರಲ್ಲಿ ನಮ್ಮ ಪಕ್ಷದವರು ಯಾರೂ ಇಲ್ಲ ಎಂದಿದ್ದಾರೆ.

YouTube video player