ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಜೀಡರಹಳ್ಳಿಯಲ್ಲಿ 42.8 ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ ಡ್ರೋನ್ ಪರೀಕ್ಷಾ ಕೇಂದ್ರ ನಿರ್ಮಾಣವಾಗಲಿದೆ. 19.3 ಎಕರೆ ಜಮೀನಿನಲ್ಲಿ ತಲೆ ಎತ್ತಲಿರುವ ಈ ಕೇಂದ್ರವು ರನ್‌ವೇ, ಲ್ಯಾಬ್ ಸೇರಿದಂತೆ ಸುಸಜ್ಜಿತ ಮೂಲಸೌಕರ್ಯಗಳನ್ನು ಹೊಂದಿರಲಿದೆ.

ಚಿಂತಾಮಣಿ / ಚಿಕ್ಕಬಳ್ಳಾಪುರ (ಸೆ.28): ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಮುಖ ತಾಲೂಕಾದ ಚಿಂತಾಮಣಿಯು ಶೀಘ್ರದಲ್ಲೇ ಅತ್ಯಾಧುನಿಕ 'ಡ್ರೋನ್ ಪರೀಕ್ಷಾ ಕೇಂದ್ರ'ವನ್ನು (Dedicated Drone-Testing Centre) ಹೊಂದಲು ಸಜ್ಜಾಗಿದೆ. ಮಾನವರಹಿತ ವಿಮಾನ ವ್ಯವಸ್ಥೆಗಳ (Unmanned Aerial Systems - UAS) ಅಭಿವೃದ್ಧಿ ಹಾಗೂ ಪರೀಕ್ಷೆಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸುವ ಉದ್ದೇಶದಿಂದ ಚಿಂತಾಮಣಿ ತಾಲೂಕಿನ 'ಜೀಡರಹಳ್ಳಿ'ಯಲ್ಲಿ 42.8 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ.

ಈ ಬೃಹತ್ ಕೇಂದ್ರವು ಸರ್ಕಾರಕ್ಕೆ ಸೇರಿದ 19.3 ಎಕರೆ ಜಮೀನಿನಲ್ಲಿ ನಿರ್ಮಾಣವಾಗಲಿದ್ದು, ಡ್ರೋನ್ ತಯಾರಕರು, ನವೋದ್ಯಮಗಳು (Startups), ಸಂಶೋಧನಾ ಸಂಸ್ಥೆಗಳು ಹಾಗೂ ಉದ್ಯಮ ಕ್ಷೇತ್ರದ ಪ್ರಮುಖರಿಗೆ ಡ್ರೋನ್ ತಂತ್ರಜ್ಞಾನದ ಪರೀಕ್ಷೆ ಮತ್ತು ಮೌಲ್ಯಮಾಪನ ಸೌಲಭ್ಯಗಳನ್ನು ಒದಗಿಸಲಿದೆ. ಈ ಯೋಜನೆಯ ಅನುಷ್ಠಾನದ ಸಹಭಾಗಿಯಾಗಿ 'ಡ್ರೋನ್ ಫೆಡರೇಶನ್ ಆಫ್ ಇಂಡಿಯಾ' (Drone Federation India) ಸಂಸ್ಥೆಯನ್ನು ಗುರುತಿಸಲಾಗಿದೆ.

ರನ್‌ವೇ, ಲ್ಯಾಬ್ ಹಾಗೂ ಅತ್ಯಾಧುನಿಕ ಮೂಲಸೌಕರ್ಯ

ಚಿಂತಾಮಣಿಯಲ್ಲಿ ನಿರ್ಮಾಣವಾಗಲಿರುವ ಈ ಕೇಂದ್ರವು ಅತ್ಯುನ್ನತ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರಲಿದೆ. ಯೋಜನೆಗೆ ಸಂಬಂಧಿಸಿದ ಪ್ರಮುಖ ವಿಚಾರವೆಂದರೆ, ಡ್ರೋನ್‌ಗಳ ಉಡಾವಣೆ ಮತ್ತು ಲ್ಯಾಂಡಿಂಗ್‌ಗಾಗಿ ಸುಮಾರು 1,000 ಮೀಟರ್ ಉದ್ದ ಹಾಗೂ 23 ಮೀಟರ್ ಅಗಲದ ಸುಸಜ್ಜಿತ ರನ್‌ವೇ ನಿರ್ಮಿಸಲಾಗುತ್ತದೆ. ಸುರಕ್ಷಿತ ಪರೀಕ್ಷೆಗಾಗಿ ಪ್ರತ್ಯೇಕ ವಾಯುಪ್ರದೇಶ (Segregated Airspace) ಮತ್ತು ನಿಯಂತ್ರಣ ಕೇಂದ್ರ (Control Centre) ಇರಲಿದೆ. ಅತ್ಯಾಧುನಿಕ ಪ್ರಯೋಗಾಲಯಗಳು, ರಿಪೇರಿ ಮತ್ತು ಪರೀಕ್ಷಾ ಘಟಕಗಳು, ಗೋದಾಮುಗಳು (Warehousing) ಹಾಗೂ ತರಬೇತಿ ಮೂಲಸೌಕರ್ಯಗಳು ಒಂದೇ ಸೂರಿನಡಿ ಲಭ್ಯವಾಗಲಿವೆ.

ನಿಯಂತ್ರಕ ಪ್ರಾಧಿಕಾರಗಳ ಸಮ್ಮತಿಯ ಮೇರೆಗೆ, ಡ್ರೋನ್‌ಗಳ ಹಾರಾಟದ ಸಾಮರ್ಥ್ಯ (Flight Performance), ಬಾಳಿಕೆ (Endurance), ಸುರಕ್ಷತೆ ಹಾಗೂ ಕಣ್ಣಳತೆಗೆ ಸಿಗದಷ್ಟು ದೂರದ ಹಾರಾಟ ಪರೀಕ್ಷೆಯಂತಹ (BVLOS - Beyond-Visual-Line-Of-Sight) ಸುಧಾರಿತ ತಂತ್ರಜ್ಞಾನಗಳ ಪರೀಕ್ಷೆಗೂ ಈ ಕೇಂದ್ರ ಆಸ್ಪದ ಮಾಡಿಕೊಡಲಿದೆ.

ಬೆಂಗಳೂರಿನಿಂದ ಹೊರಗೆ ಡ್ರೋನ್ ತಂತ್ರಜ್ಞಾನದ ಹೊಸ ಹಬ್

ಪ್ರಸ್ತುತ ಕೃಷಿ, ಭೂಮಾಪನ (Surveying), ನಕ್ಷೆ ತಯಾರಿ, ಮೂಲಸೌಕರ್ಯ ತಪಾಸಣೆ, ಲಾಜಿಸ್ಟಿಕ್ಸ್ ಮತ್ತು ತುರ್ತು ಪ್ರತಿಕ್ರಿಯೆ ವ್ಯವಸ್ಥೆಗಳಲ್ಲಿ ಡ್ರೋನ್‌ಗಳ ಬಳಕೆ ವ್ಯಾಪಕವಾಗಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಹೊರಗೆ ಇಂತಹದ್ದೊಂದು ಸುಸಜ್ಜಿತ ಮತ್ತು ಪ್ರತ್ಯೇಕ ಪರೀಕ್ಷಾ ವಾತಾವರಣ ಸಿಗುತ್ತಿರುವುದು ಡ್ರೋನ್ ತಯಾರಿಕಾ ಕಂಪನಿಗಳು ಮತ್ತು ಸಂಶೋಧನಾ ಸಂಸ್ಥೆಗಳಿಗೆ ಭಾರಿ ಅನುಕೂಲವಾಗಲಿದೆ.

ಈ ಯೋಜನೆಯು ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ (R&D) ಹಾಗೂ ಡ್ರೋನ್ ತಂತ್ರಜ್ಞಾನದ ವಾಣಿಜ್ಯೀಕರಣಕ್ಕೆ ಭದ್ರ ಬಡಿಪಾಯ ಹಾಕಲಿದೆ. ಚಿಂತಾಮಣಿ ಹಾಗೂ ಸುತ್ತಮುತ್ತಲ ಚಿಕ್ಕಬಳ್ಳಾಪುರ ಪ್ರದೇಶಕ್ಕೆ ಮಾನವರಹಿತ ವಿಮಾನ ವ್ಯವಸ್ಥೆಯಲ್ಲಿ ತೊಡಗಿರುವ ನವೋದ್ಯಮಗಳು ಮತ್ತು ಸಂಶೋಧನಾ ಸಂಸ್ಥೆಗಳನ್ನು ಆಕರ್ಷಿಸುವ ಮೂಲಕ ಸ್ಥಳೀಯ ಯುವಕರು ಮತ್ತು ತಂತ್ರಜ್ಞಾನ ಉದ್ಯಮಿಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಬಜೆಟ್ ಘೋಷಣೆಯಾದ 6 ತಿಂಗಳಲ್ಲೇ ಜಾರಿ!

ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ 2026ರ ಆಯವ್ಯಯ (Budget Speech) ಭಾಷಣದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಡ್ರೋನ್ ಪರೀಕ್ಷಾ ಕೇಂದ್ರದ ಯೋಜನೆಯನ್ನು ಘೋಷಿಸಿದ್ದರು. ಘೋಷಣೆಯಾದ ಕೇವಲ ಆರು ತಿಂಗಳ ಅವಧಿಯಲ್ಲೇ ಸರ್ಕಾರ ಯೋಜನೆಗೆ ಅನುಮೋದನೆ ನೀಡುವ ಮೂಲಕ ಪ್ರಸ್ತಾವನೆಯನ್ನು ಅನುಷ್ಠಾನದ ಹಂತಕ್ಕೆ ತಂದಿದೆ.

ಯೋಜನೆಗೆ ಅನುಮೋದನೆ ಸಿಕ್ಕ ಬೆನ್ನಲ್ಲೇ ಶಾಸಕ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಗೃಹ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕಳೆದ ವರ್ಷವೇ ಸಚಿವ ಖರ್ಗೆ ಅವರೊಂದಿಗೆ ಈ ಕುರಿತು ಚರ್ಚಿಸಿ, ಚಿಂತಾಮಣಿಯಲ್ಲಿ ಲಭ್ಯವಿರುವ ಸರ್ಕಾರಿ ಜಮೀನಿನ ಮಾಹಿತಿಯನ್ನು ನೀಡಲಾಗಿತ್ತು ಎಂದು ಸುಧಾಕರ್ ಸ್ಮರಿಸಿದ್ದಾರೆ.

"ಜಿಲ್ಲಾಡಳಿತವೂ ಅತ್ಯಂತ ವೇಗವಾಗಿ ಸ್ಪಂದಿಸಿ ಜಮೀನನ್ನು ಗುರುತಿಸಿ ಹಸ್ತಾಂತರಿಸಿದೆ. ಅಧಿಕಾರಿಗಳ ಶ್ರಮ ಶ್ಲಾಘನೀಯ. ಈ ಯೋಜನೆಯು ಚಿಂತಾಮಣಿಗೆ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಹೊಸ ಗುರುತನ್ನು ತರಲಿದೆ," ಎಂದು ಸುಧಾಕರ್ ಹರ್ಷ ವ್ಯಕ್ತಪಡಿಸಿದ್ದಾರೆ.