ಬೆಳಗಾವಿ[ನ.10]: ಜಮ್ಮು-ಕಾಶ್ಮೀರದ ಪೂಂಛ್‌ ಬಳಿ ಪಾಕಿಸ್ತಾನ ಯೋಧರು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ವೀರಮರಣ ಹೊಂದಿದ ವೀರಯೋಧ ರಾಹುಲ್ ಸುಳಗೇಕರ(21) ಅವರ ಅಂತ್ಯಕ್ರಿಯೆ ಅವರ ಹುಟ್ಟೂರಾದ ಬೆಳಗಾವಿ ತಾಲೂಕಿನ ಉಚಗಾಂವದ ರುದ್ರಭೂಮಿಯಲ್ಲಿ ಶನಿವಾರ ಸರ್ಕಾರಿ ಗೌರವದೊಂದಿಗೆ ನಡೆಯಿತು.

ವಿಶೇಷ ವಿಮಾನದ ಮೂಲಕ ಶನಿವಾರ ಮಧ್ಯಾಹ್ನ 1 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಯೋಧನ ಪಾರ್ಥಿವ ಶರೀರಕ್ಕೆ ಗಣ್ಯಾತಿ ಗಣ್ಯರು ಪುಷ್ಪಗುಚ್ಛ ವಿರಿಸಿ ಅಂತಿಮ ನಮನ ಸಲ್ಲಿಸಿದರು. ಬಳಿಕ ಎಂಎಲ್‌ಐಆರ್‌ಸಿಯ ವಾಹನದಲ್ಲಿ ಹುತಾತ್ಮ ಯೋಧನ ಪಾರ್ಥಿವ ಶರೀರವನ್ನು ಮರಾಠ ಲಘು ಪದಾತಿದಳ ಕೇಂದ್ರಕ್ಕೆ ತೆಗೆದುಕೊಂಡು ಹೋಗಲಾಯಿತು.

ಉಗ್ರರೊಂದಿಗೆ ಹೋರಾಡಿ 24 ವರ್ಷದ ಬೆಳಗಾವಿಯ ಯೋಧ ಹುತಾತ್ಮ

ಅಲ್ಲಿ ಎಂಎಲ್‌ಐಆರ್‌ಸಿ ವತಿಯಿಂದ ಹುತಾತ್ಮ ಯೋಧನಿಗೆ ಗೌರವ ಸಲ್ಲಿಸಿ, ಸ್ವಗ್ರಾಮ ಉಚಗಾಂವಗೆ ಪಾರ್ಥಿವ ಶರೀರ ತೆಗೆದುಕೊಂಡು ಬರಲಾಯಿತು. ಹುತಾತ್ಮ ಯೋಧನ ಪಾರ್ಥಿವ ಶರೀರ ಹೊತ್ತೊಯುತ್ತಿದ್ದ ವಾಹನದ ಮಾರ್ಗದಲ್ಲಿ ಗ್ರಾಮದ ಮಹಿಳೆಯರು ರಂಗೋಲಿ ಹಾಕಿ ಸ್ವಾಗತಿಸುವ ಮೂಲಕ ಗೌರವ ಸಲ್ಲಿಸಿದ್ದಾರೆ.