ಬೆಳಗಾವಿ[ನ.8]: ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ಮೂಲದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ತಿಳಿದು ಬಂದಿದೆ. ಹುತಾತ್ಮ ಯೋಧನನ್ನು ಬೆಳಗಾವಿ ತಾಲೂಕಿನ ಉಚಗಾಂವ ಗ್ರಾಮದ ಯೋಧ ರಾಹುಲ್ ಸುಳಗೇಕರ (24) ಎಂದು ಗುರುತಿಸಲಾಗಿದೆ.

ರಾತ್ರಿ 2.30 ರ ಸುಮಾರಿಗೆ ಜಮ್ಮು- ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸಿತು. ಇದಕ್ಕೆ ಭಾರತೀಯ ಯೋಧರು ಪ್ರತಿಯಾಗಿ ಪ್ರತ್ಯುತ್ತರ ನೀಡಿದ್ದಾರೆ. ಈ ವೇಳೆ ಗುಂಡು ತಗುಲಿ ರಾಹುಲ್ ವೀರಮರಣವನ್ನಪ್ಪಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ನಾಲ್ಕು ವರ್ಷಗಳ ಹಿಂದೆಯಷ್ಟೇ ಸೇನೆ ಸೇರಿದ್ದ ರಾಹುಲ್ ದೇಶ ಸೇವೆಯ ಕನಸು ಕಂಡಿದ್ದರು. ಇತ್ತೀಚೆಗಷ್ಟೇ ಗಣೇಶ ಹಬ್ಬದ ವೇಳೆ ರಜೆ ಮೇಲೆ ಬಂದಿದ್ದ ರಾಹುಲ್ ಮರಳಿ ಕರ್ತವ್ಯಕ್ಕೆ ಹಾಜರಾಗಿದ್ದರು. ರಾಹುಲ್ ಅವರ ತಂದೆ ಕೂಡ ನಿವೃತ್ತ ಯೋಧರಾಗಿದ್ದಾರೆ. ಅವರ ಸಹೋದರ ಮಯೂರ್ ಅವರು ಕೂಡ ಸೇನೆಯಲ್ಲಿದ್ದಾರೆ. ಯೋಧ ರಾಹುಲ್ ಸುಳಗೇಕರ ಅವರ ಪಾರ್ಥೀವ ಶರೀರ ಶುಕ್ರವಾರ ಸಂಜೆ ಗ್ರಾಮಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.