ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್‌ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಅಷ್ಟಕ್ಕೂ ಆಗಿದ್ದೇನು?

ಬೆಳಗಾವಿ: ಅದು ಮಾಮೂಲಿ ಸಾರಿಗೆ ಬಸ್.. ಕಾಲೇಜು ಮುಗಿಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಿಗೆ ಮರಳುತ್ತಿದ್ದರು. ಆದರೆ, ಆ ಬಸ್‌ನಲ್ಲಿ ನಡೆದ ಒಂದು ಸಣ್ಣ ಕಿಡಿಗೇಡಿತನ, ನಡುರಸ್ತೆಯನ್ನೇ ಯುದ್ಧಭೂಮಿಯನ್ನಾಗಿ ಬದಲಿಸಿತು! ಬಸ್‌ನಲ್ಲಿ ವಿದ್ಯಾರ್ಥಿನಿಯರಿಗೆ ಕಿರುಕುಳ ನೀಡಿದ ವಿಚಾರಕ್ಕೆ ಎರಡು ಗ್ರಾಮಗಳ ವಿದ್ಯಾರ್ಥಿಗಳ ನಡುವೆ ನಡೆದ 'ಬೆಲ್ಟ್ ಸಮರ' ಈಗ ಇಡೀ ಬೆಳಗಾವಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.

ಬಸ್ಸನಲ್ಲೇ ಡಿಶುಂ ಡಿಶುಂ

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಜಕ್ಕಬಾಳ ಗ್ರಾಮದ ಬಳಿ ಈ ಹೈಡ್ರಾಮಾ ನಡೆದಿದೆ. ಜಕ್ಕಬಾಳ ಮತ್ತು ಬಸರಗಿ ಗ್ರಾಮದ ವಿದ್ಯಾರ್ಥಿಗಳು ಅದೇ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಜಕ್ಕಬಾಳ ಗ್ರಾಮದ ಕೆಲವು ಯುವಕರು, ಬಸರಗಿ ಗ್ರಾಮದ ವಿದ್ಯಾರ್ಥಿನಿಯರನ್ನು ಚುಡಾಯಿಸಿದ್ದಾರೆ ಎನ್ನಲಾಗಿದೆ. ಬಸ್ ಚಲಿಸುತ್ತಿದ್ದಂತೆಯೇ ಆರಂಭವಾದ ಈ ಮಾತುಕತೆ, ಅತಿ ಶೀಘ್ರದಲ್ಲೇ ವಾಗ್ವಾದಕ್ಕೆ ತಿರುಗಿದೆ.

ನಡುರಸ್ತೆಯಲ್ಲಿ 'ಬೆಲ್ಟ್-ಬಡಿಗೆ' ಸಮರ!

ತಮ್ಮ ಗ್ರಾಮದ ಹುಡುಗಿಯರಿಗೆ ಕಿರುಕುಳ ನೀಡಿದ್ದನ್ನು ಕಂಡು ರೊಚ್ಚಿಗೆದ್ದ ಬಸರಗಿ ಗ್ರಾಮದ ಯುವಕರು ಮತ್ತು ಜಕ್ಕಬಾಳದ ಯುವಕರ ನಡುವೆ ನಡುರಸ್ತೆಯಲ್ಲೇ ಮಾರಾಮಾರಿ ಆರಂಭವಾಗಿದೆ. ಒಬ್ಬರಿಗೊಬ್ಬರು ಬಡಿಗೆ ಮತ್ತು ಕೈಯಲ್ಲಿದ್ದ ಬೆಲ್ಟ್‌ಗಳನ್ನು ಬಿಚ್ಚಿ ಹಿಗ್ಗಾಮುಗ್ಗಾ ಬಾರಿಸಿಕೊಂಡಿದ್ದಾರೆ. ನಡುರಸ್ತೆಯಲ್ಲಿ ವಿದ್ಯಾರ್ಥಿಗಳು ರಣಕಾಳಿಗಳಂತೆ ಬಡಿದಾಡಿಕೊಳ್ಳುವುದನ್ನು ಕಂಡು ದಾರಿಹೋಕರು ಬೆಚ್ಚಿಬಿದ್ದಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ವಾಯುವ್ಯ ಸಾರಿಗೆ ಇಲಾಖೆಯ (NWKRTC) ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಕಿತ್ತಾಡುತ್ತಿದ್ದ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ. ಬಸ್ಸುಗಳಲ್ಲಿ ವಿದ್ಯಾರ್ಥಿನಿಯರಿಗೆ ಸುರಕ್ಷತೆ ಇಲ್ಲದಂತಾಗಿದೆ, ಇಂತಹ ಕಿಡಿಗೇಡಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ.

ಸದ್ಯ ಈ ಘಟನೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಒಂದು ಸಣ್ಣ ಚುಡಾಯಿಸುವಿಕೆ ಹೇಗೆ ಎರಡು ಹಳ್ಳಿಗಳ ನಡುವಿನ ಜಗಳಕ್ಕೆ ನಾಂದಿ ಹಾಡಿತು ಎಂಬುದು ಈಗ ಎಲ್ಲರ ಚರ್ಚೆಯ ವಿಷಯವಾಗಿದೆ. ಬಸ್‌ಗಳಲ್ಲಿ ವಿದ್ಯಾರ್ಥಿನಿಯರ ರಕ್ಷಣೆಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.