ಬೆಳಗಾವಿ ಜಿಲ್ಲೆ ಮತ್ತು ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಇದರಿಂದ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕಿನ ಐದು ಕೆಳಹಂತದ ಸೇತುವೆಗಳು ಜಲಾವೃತಗೊಂಡು ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ, ಆದರೆ ಖಾನಾಪುರದಲ್ಲಿನ ಮಳೆ ಕೃಷಿ ಚಟುವಟಿಕೆಗಳಿಗೆ ಚುರುಕು ನೀಡಿದೆ.
ಬೆಳಗಾವಿ: ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರವೂ ಮಳೆಯಾರ್ಭಟ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ನೆರೆ ರಾಜ್ಯ ಮಹಾರಾಷ್ಟ್ರದ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಸುರಿಯುತ್ತಿರುವುದರಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲೂಕು ವ್ಯಾಪ್ತಿಯ ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ನೀರಿನ ಮಟ್ಟದಲ್ಲಿ ದಿಢೀರ್ ಏರಿಕೆಯಾಗಿದೆ. ಅದರಂತೆ ಬೆಳಗಾವಿ ನಗರದಲ್ಲಿಯೂ ಸಂಜೆ ನಂತರ ಉತ್ತಮ ಮಳೆಯಾಗಿದೆ. ಕೆಲವೆಡೆ ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.
ಕೃಷ್ಣಾ ನದಿಗೆ ಪ್ರಸ್ತುತ ಸುಮಾರು 65 ಸಾವಿರ ಕ್ಯೂಸೆಕ್ ನೀರು
ಕಳೆದ ಕೆಲವು ಗಂಟೆಗಳಲ್ಲಿ ನದಿಗಳ ನೀರಿನ ಮಟ್ಟ ಸುಮಾರು ಎರಡು ಅಡಿಗಳಷ್ಟು ಹೆಚ್ಚಳವಾಗಿದೆ. ನದಿ ತೀರದ ಗ್ರಾಮಗಳ ಜನರಲ್ಲಿ ಮತ್ತೆ ಪ್ರವಾಹದ ಆತಂಕ ಶುರುವಾಗಿದೆ. ನದಿಗಳ ಒಳಹರಿವು ನಿರಂತರವಾಗಿ ಹೆಚ್ಚುತ್ತಿರುವುದರಿಂದ ತಗ್ಗು ಪ್ರದೇಶಗಳ ನಿವಾಸಿಗಳು ಆತಂಕದಲ್ಲಿದ್ದಾರೆ. ಮಹಾರಾಷ್ಟ್ರದ ವಿವಿಧ ಜಲಾಶಯಗಳು ಹಾಗೂ ನದಿಗಳಿಂದ ಕಲ್ಲೋಳ ಬಳಿಯ ಕೃಷ್ಣಾ ನದಿಗೆ ಪ್ರಸ್ತುತ ಸುಮಾರು 65 ಸಾವಿರ ಕ್ಯೂಸೆಕ್ ನೀರು ಹರಿದುಬರುತ್ತಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶ ಮತ್ತು ಜಲಾನಯನ ಭಾಗದಲ್ಲಿ ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಕೃಷ್ಣಾ ನದಿಗೆ ಹರಿದುಬರುವ ನೀರಿನ ಪ್ರಮಾಣ ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದೆ.
ಇದರಿಂದ ಸಹಜವಾಗಿ ಚಿಕ್ಕೋಡಿ ಮತ್ತು ನಿಪ್ಪಾಣಿ ತಾಲೂಕು ವ್ಯಾಪ್ತಿಯ ಐದು ಕೆಳಹಂತದ ಸೇತುವೆಗಳು ಸಂಪೂರ್ಣ ಜಲಾವೃತಗೊಂಡಿವೆ. ಇದರಿಂದಾಗಿ ಹಲವು ಗ್ರಾಮಗಳ ನಡುವಿನ ನೇರ ರಸ್ತೆ ಸಂಪರ್ಕ ಕಡಿತಗೊಂಡಿದ್ದು, ಸಾರ್ವಜನಿಕರು ಹಾಗೂ ವಾಹನ ಸವಾರರು ಪರ್ಯಾಯ ಮಾರ್ಗಗಳನ್ನು ಬಳಸಬೇಕಾಗಿದೆ.
ಯಡೂರ-ಕಲ್ಲೋಳ, ಬಾವನಸೌಂದತ್ತಿ-ಮಾಂಜರಿ, ಬಾರವಾಡ-ಕುನ್ನೂರ, ಕಾರದಗಾ-ಭೋಜ ಹಾಗೂ ಭೋಜ-ಶಿವಾಪೂರವಾಡಿ ನಡುವಿನ ಕೆಳಹಂತದ ಸೇತುವೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಈ ಮಾರ್ಗಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸೇತುವೆಗಳ ಎರಡೂ ಬದಿಯಲ್ಲಿ ಮುನ್ನೆಚ್ಚರಿಕೆಯಾಗಿ ಸಂಚಾರ ನಿರ್ಬಂಧಿಸುವ ಅಗತ್ಯ ಎದುರಾಗಿದೆ.
ಕೆಳಹಂತದ ಸೇತುವೆಗಳು ಮುಳುಗಡೆಯಾಗಿರುವುದರಿಂದ ಗ್ರಾಮಸ್ಥರು ದಿನನಿತ್ಯದ ಕೆಲಸ, ಕೃಷಿ ಚಟುವಟಿಕೆ, ಶಾಲಾ-ಕಾಲೇಜು ಹಾಗೂ ಮಾರುಕಟ್ಟೆಗಳಿಗೆ ತೆರಳಲು ಪರದಾಡುವಂತಾಗಿದೆ. ಕೆಲವು ಗ್ರಾಮಗಳ ಜನರು ಹಲವು ಕಿಲೋಮೀಟರ್ ಸುತ್ತುವರಿದು ಪರ್ಯಾಯ ಮಾರ್ಗಗಳಲ್ಲಿ ಸಂಚರಿಸುವ ಪರಿಸ್ಥಿತಿ ಎದುರಾಗಿದೆ.
ನದಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿರುವುದರಿಂದ ನದಿ ಪಾತ್ರದ ಹೊಲಗಳಿಗೆ ನೀರು ನುಗ್ಗುವ ಆತಂಕವೂ ರೈತರನ್ನು ಕಾಡುತ್ತಿದೆ. ಈಗಾಗಲೇ ಬಿತ್ತನೆ ಮಾಡಿರುವ ಬೆಳೆಗಳು ಮುಳುಗಡೆಯಾಗುವ ಸಾಧ್ಯತೆ ಇರುವುದರಿಂದ ಕೃಷಿಕರು ನದಿಯ ಹರಿವಿನ ಮೇಲೆ ನಿಗಾ ಇಟ್ಟಿದ್ದಾರೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಸಂಬಂಧಿತ ತಾಲೂಕು ಆಡಳಿತಗಳು ನದಿ ತೀರದ ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸಬೇಕು. ಜಲಾವೃತ ಸೇತುವೆಗಳ ಮೇಲೆ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮಹಾರಾಷ್ಟ್ರದ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರಿದರೆ ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಗ್ರಾಮಗಳ ನಿವಾಸಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾಡಳಿತ ಮನವಿ ಮಾಡಿದೆ.
ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮತ್ತೆ ಮುಂಗಾರು ಚುರುಕು
ಖಾನಾಪುರ: ಕಳೆದ ಹಲವು ದಿನಗಳಿಂದ ಮಾಯವಾಗಿದ್ದ ಮಳೆ ಮಂಗಳವಾರದಿಂದ ಇತ್ತೀಚೆಗೆ ಕಾಣಿಸಿಕೊಳ್ಳುವ ಮೂಲಕ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮತ್ತೆ ಮುಂಗಾರು ಚುರುಕುಗೊಂಡಿದೆ. ತಾಲೂಕಿನ ಭೀಮಗಡ ವನ್ಯಧಾಮ ಸೇರಿದಂತೆ ಕಣಕುಂಬಿ, ಜಾಂಬೋಟಿ, ಅಮಗಾಂವ, ಗವ್ವಾಳಿ, ಕೃಷ್ಣಾಪುರ, ಜಾಮಗಾಂವ, ಹೆಮ್ಮಡಗಾ, ಗುಂಜಿ, ಲೋಂಡಾ, ನಾಗರಗಾಳಿ, ಹಲಸಿ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಬುಧವಾರ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ.

ಕೃಷಿ ಜಮೀನುಗಳಲ್ಲಿ ಭತ್ತದ ಗದ್ದೆಗಳಲ್ಲಿ ನೀರು ಶೇಖರಣೆಯಾಗಿದ್ದರಿಂದ ಭತ್ತದ ಪೈರುಗಳ ನಾಟಿ ಕಾರ್ಯ ಚುರುಕುಗೊಂಡಿದೆ. ಮಳೆ ಮಾಯವಾಗಿದ್ದರಿಂದ ರೈತರಲ್ಲಿ ಮನೆಮಾಡಿದ್ದ ಆತಂಕವನ್ನು ಕಳೆದ ಎರಡು ದಿನಗಳಲ್ಲಿ ಸುರಿದ ಮಳೆ ಕಡಿಮೆಗೊಳಿಸಿದೆ. ಮಲಪ್ರಭಾ ನದಿಪಾತ್ರದ ಅರಣ್ಯ ಪ್ರದೇಶದಲ್ಲಿ ಸುರಿಯುತ್ತಿರುವ ಸತತಧಾರೆಯಿಂದ ಮಲಪ್ರಭಾ ನದಿಯಲ್ಲಿ ನೀರಿನ ಹರಿವು ವೃದ್ಧಿಸಿದೆ.
ಪಟ್ಟಣ ಸೇರಿದಂತೆ ಪಾರಿಶ್ವಾಡ, ಇಟಗಿ, ಗಂದಿಗವಾಡ, ಬೀಡಿ ಭಾಗದಲ್ಲಿ ಬುಧವಾರ ಉತ್ತಮ ಪ್ರಮಾಣದಲ್ಲಿ ಮಳೆಯಾಗಿದೆ. ತಾಲೂಕಿನ ಅರಣ್ಯ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಆರಂಭಗೊಂಡಿದ್ದ ಮಳೆ ಬುಧವಾರ ಇಡೀ ದಿನವೂ ಸುರಿದಿದ್ದು, ಬುಧವಾರ ಸಂಜೆಯ ನಂತರವೂ ಸತತವಾಗಿ ಸುರಿಯುತ್ತಿದೆ


