Asianet Suvarna News Asianet Suvarna News

Shivaji statue vandalism ಕುಡಿದ ಅಮಲಿನಲ್ಲಿ ಉಕ್ಕಿಬಂತು ರೋಷ, ಮತ್ತೊಂದು ಶಿವಾಜಿ ಪ್ರತಿಮೆ ಧ್ವಂಸ!

  • ಕುಡಿದ ಮತ್ತಲ್ಲಿ ಶಿವಾಜಿ ಪ್ರತಿಮೆ ಧ್ವಂಸ ಯತ್ನ: ಮೂವರು ವಶ​ಕ್ಕೆ
  • ಹೊನಗಾ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿ ಧ್ವಂಸಕ್ಕೆ ಯತ್ನ
  • ಪರಿಸ್ಥಿತಿ ಉದ್ವಿಗ್ನ, ಬೆಳಗಾವಿ ಬೆಂಕಿ ಬೆನ್ನಲ್ಲೇ ಮತ್ತೊಂದು ಘಟನೆ
Drinkers try to vandalism shivaji maharaj statue in Belagavi 3 arrested Ckm
Author
Bengaluru, First Published Dec 21, 2021, 2:42 AM IST

ಬೆಳಗಾವಿ(ಡಿ.21) : ಶಿವಾಜಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಗಳಿಗೆ ಅಪಮಾನ ಬೆನ್ನಲ್ಲೇ ಕುಡಿದ ಅಮಲಿನಲ್ಲಿದ್ದ ಮೂವರು ಯುವಕರು ಹೊನಗಾ ಗ್ರಾಮದಲ್ಲಿ ಶಿವಾಜಿ ಮಹಾರಾಜರ(Shivaji Maharaj Statue) ಮೂರ್ತಿ ಧ್ವಂಸಕ್ಕೆ ಯತ್ನಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ. ಮೂವರೂ ಗ್ರಾಮದ ಶಿವಾಜಿ ಪುತ್ಥಳಿಯ ಕಟ್ಟೆಯ ಮೇಲೆ ಏರಿ, ಗಲಾಟೆ ಮಾಡುತ್ತಿದ್ದ ಸಮಯದಲ್ಲಿ ಗ್ರಾಮಸ್ಥರು ಜಮಾಯಿಸಿ ಪೊಲೀಸರಿಗೆ(Police) ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಕಾಕತಿ ಠಾಣೆಯ ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸುದ್ದಿ ಸುತ್ತಮುತ್ತಲ ಗ್ರಾಮಗಳಿಗೆ ಹರಡುತ್ತಿದ್ದಂತೆಯೇ ಜನ ಜಮಾಯಿಸಿದ್ದು, ಕಾಕತಿ ಪೋಲೀಸ್‌ ಠಾಣೆ ಬಳಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ.

ಇತ್ತ ಬೆಳಗಾವಿಯಲ್ಲಿ ಕಿಚ್ಚು ಹೆಚ್ಚಾಗಿದೆ. ರಾಯಣ್ಣ ಪ್ರತಿಮೆ ಧ್ವಂಸ(Sangaolli Rayanna Statue) ಪ್ರಕರಣ ಇದೀಗ ತೀವ್ರ ಸ್ವರೂಪದ ಪ್ರತಿಭಟನೆಗೆ ನಾಂದಿ ಹಾಡಿದೆ. ಇದರ ಬೆನ್ನಲ್ಲೇ ಸಿಎಂ ಬೊಮ್ಮಾಯಿ(CM Basavaraj Bommai) ಸಂಗೊಳ್ಳಿ ರಾಯಣ್ಣ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಮೆ ಸ್ಥಾಪನೆಗೆ ನಿರ್ಧರಿಸಿದ್ದಾರೆ.  ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಪುಂಡಾಟಿಕೆಗೆ ತಿರುಗೇಟು ನೀಡಲು ಗಡಿ ಜಿಲ್ಲೆ ಬೆಳಗಾವಿಯಲ್ಲಿನ ಸುವರ್ಣ ವಿಧಾನಸೌಧ ಆವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ರಾಣಿ ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸ್ಥಾಪನೆ ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ಕೈಗೊಂಡಿದೆ.

Lyricist Kaviraj: ಎಂಇಎಸ್ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ

ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿರುವ ಪ್ರಕರಣ ಸಂಬಂಧ ಸೋಮವಾರ ಸದನದಲ್ಲಿ ಚರ್ಚೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗಡಿಭಾಗದ ಒಂದಿಂಚೂ ಭೂಮಿಯನ್ನು ಯಾರೂ ಕಸಿದು ಕೊಳ್ಳಲು ಬಿಡುವುದಿಲ್ಲ. ಎಂಇಎಸ್‌ ಪುಂಡಾಟಿಕೆಗೆ ಬಗ್ಗುವುದಿಲ್ಲ. ಬೆಳಗಾವಿಯು ರಾಜ್ಯದ ಮತ್ತೊಂದು ಶಕ್ತಿ ಕೇಂದ್ರ. ಸುವರ್ಣಸೌಧವು ಸಹ ಆಡಳಿತದ ಕೇಂದ್ರ ಬಿಂದು. ಈ ಹಿನ್ನೆಲೆಯಲ್ಲಿ ಸುವರ್ಣಸೌಧದ ಅವರಣದಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಕಿತ್ತೂರು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.

ಎಂಇಎಸ್‌ನೊಂದಿಗೆ ಯಾವುದೇ ರೀತಿಯ ಮಾತುಕತೆ ಮಾಡುವ, ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಪ್ರತಿಮೆ ಸ್ಥಾಪನೆ ಸರ್ಕಾರದ ನಿರ್ಧಾರ. ಎಂಇಎಸ್‌ ಕೃತ್ಯಗಳನ್ನು ಯಾವುದೇ ಕಾರಣಕ್ಕೂ ಹಗುರವಾಗಿ ಪರಿಗಣಿಸುವುದಿಲ್ಲ. ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ. ಆರ್ಥಿಕವಾಗಿ ಜಿಲ್ಲೆ ಬೆಳೆಯುತ್ತಿರುವುದನ್ನು ಸಹಿಸದೆ ಅಶಾಂತಿ ಮೂಡಿಸುವ ಕೆಲಸ ಮಾಡುತ್ತಿದೆ. ಇಂತಹದ್ದಕ್ಕೆಲ್ಲಾ ಅವಕಾಶ ನೀಡುವುದಿಲ್ಲ ಎಂದರು.

Karnataka Politics ತಾಕತ್ ಇದ್ರೆ ನನ್ನನ್ನ ಅರೆಸ್ಟ್ ಮಾಡಲಿ ಅವನು? ಸಿಟಿ ರವಿಗೆ ಸವಾಲು

ರಾಯಣ್ಣ ಪ್ರತಿಮೆ ವಿರೂಪ: ಡಾ ಸೋಮಶೇಖರ್‌ ಖಂಡನೆ
ಮಹಾನ್‌ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಅವರ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ತೀವ್ರವಾಗಿ ಖಂಡಿಸಿದ್ದಾರೆ.

ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಗೆ ಅಪಮಾನ ಮಾಡಿ ಪ್ರತಿಮೆಯನ್ನು ವಿಕೃತಗೊಳಿಸಿದ ಕಿಡಿಗೇಡಿಗಳು ರಾಷ್ಟ್ರ ದ್ರೋಹಿಗಳು. ಅವರ ಕೃತ್ಯವನ್ನು ಕೇವಲ ಕನ್ನಡಿಗರಲ್ಲದೆ ಸಂವಿಧಾನದಲ್ಲಿ ಶ್ರದ್ಧೆ ಹಾಗೂ ರಾಷ್ಟ್ರ ಭಕ್ತಿಯುಳ್ಳ ಪ್ರತಿಯೊಬ್ಬರೂ ವಿರೋಧಿಸಬೇಕು. ನಾಡಧ್ವಜ ಹಾಗೂ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಗೆ ಅಪಮಾನ ಮಾಡಿರುವುದು ತುಂಬಾ ವಿಷಾದನೀಯ ಎಂದಿದ್ದಾರೆ.

ಅಂತೆಯೇ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಸಿ ಬಳಿದು ಮಾಡಿರುವ ಅಪಮಾನವೂ ಖಂಡನಾರ್ಹ. ಮಹಾನ್‌ ಸಾಧಕರ ಪ್ರತಿಮೆಗಳು ಯುವ ಸಮುದಾಯಕ್ಕೆ ಸ್ಫೂರ್ತಿ ನೀಡುವ ಸಂಕೇತಗಳು. ಅವುಗಳಿಗೆ ಪ್ರತಿಯೊಬ್ಬರೂ ಗೌರವ ನೀಡುವ ಮೂಲಕ ಅವರ ಸಾಧನೆ, ಆದರ್ಶಗಳನ್ನು ಸ್ಮರಿಸಬೇಕು. ಇಂತಹ ಘಟನೆಗಳು ಕನ್ನಡ ನಾಡಿನಲ್ಲಿ ಮತ್ತೆಂದೂ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.

ಪದೇ ಪದೇ ಕನ್ನಡಿಗರ ಹಾಗೂ ಮರಾಠಿ ಬಾಂಧವರ ನಡುವೆ ಇರುವ ಭಾಷಾ ಸಾಮರಸ್ಯಕ್ಕೆ ಹಾಗೂ ಸಹಬಾಳ್ವೆಗೆ ಧಕ್ಕೆಯಾಗುತ್ತಿದೆ. ಈ ಶಾಂತಿಯುತ ಮತ್ತು ಮಧುರ ಸಂಬಂಧ ಹಾನಿ ಮಾಡುತ್ತಿರುವಂತಹ ದೇಶ ದ್ರೋಹಿಗಳಿಗೆ ಮತ್ತು ನಾಡ ದ್ರೋಹಿಗಳಿಗೆ ಕಠಿಣ ಶಿಕ್ಷೆಯನ್ನು ಸರ್ಕಾರ ನೀಡಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

Follow Us:
Download App:
  • android
  • ios