ಮುಧೋಳ ರೈತರ ಜೊತೆಗಿನ ಸಚಿವರ ಸಂಧಾನ ಸಭೆ ವಿಫಲ, ಆಕ್ರೋಶಕ್ಕೆ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿದೆ. ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆಗೆ ಸಚಿವ ತಿಮ್ಮಾಪುರ ನಡೆಸಿದ ಸಭೆ ವಿಫಲಗೊಂಡಿದೆ.

ಬಾಗಲಕೋಟೆ (ನ.09) ಕರ್ನಾಟಕದಲ್ಲಿ ರೈತ ಪ್ರತಿಭಟನೆ ಸಿದ್ದರಾಮಯ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಿಮಿಸುತ್ತಿದೆ. ರೈತರ ಬೇಡಿಕೆಯಂತೆ ಕಬ್ಬು ಬೆಲೆ ನಿಗದಿ ಮಾಡುವ ಮೂಲಕ ಬೆಳಗಾವಿಯಲ್ಲಿನ ರೈತ ಪ್ರತಿಭಟನೆ ಅಂತ್ಯಗೊಂಡಿತ್ತು. ಆದರೆ ಮುಧೋಳದಲ್ಲಿನ ರೈತರು ತಮ್ಮ ಪಟ್ಟು ಸಡಿಸಿಲಿಲ್ಲ. 3,500 ರೂಪಾಯಿ ನೀಡುವಂತೆ ಪಟ್ಟು ಹಿಡಿದು ರೈತರು ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಸಚಿವ ಆರ್‌ಬಿ ತಿಮ್ಮಪೂರ ರೈತರು ಹಾಗೂ ಕಾರ್ಖಾನೆ ಮಾಲೀಕರ ಜೊತೆ ಸಂಧಾನ ಸಭೆ ನಡೆಸಿದ್ದಾರೆ.ಆದರೆ ಸಭೆಯಲ್ಲಿ ಒಮ್ಮದ ತೀರ್ಮಾನ ಆಗಿಲ್ಲ. ಪರಿಣಾಮ ಸಂಧಾನ ಸಭೆ ವಿಫಲಗೊಂಡಿದೆ.

ಸಭೆ ವಿಫಲವಾದ ಹಿನ್ನೆಲೆ ಹೊರ ನಡೆದ ರೈತರು

ಕಬ್ಬು ದರ ನಿಗದಿ ವಿಚಾರ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ಜಿಲ್ಲಾ ಉಸ್ತುವಾರಿ ಸಚಿವ ತಿಮ್ಮಾಪುರ ನೇತೃತ್ವದಲ್ಲಿ ನಡೆದ ಸಭೆ ವಿಫಲಗೊಂಡ ಬೆನ್ನಲ್ಲೇ ಸರ್ಕಾರದ ತಲೆನೋವು ಹೆಚ್ಚಾಗಿದೆ. ಸರ್ಕಾರ ಘೋಷಣೆ ಮಾಡಿರುವ ದರಕ್ಕೆ ಮಾತ್ರ ನಾವು ಬದ್ಧ ಎಂದು ಮಾಲೀಕರು ಸ್ಪಷ್ಟವಾಗಿ ಹೇಳಿದ್ದಾರೆ. ಇತ್ತ ರೈತರು ತಮಗೆ 3500 ರೂಪಾಯಿ ನೀಡಬೇಕು ಎಂದು ಬಿಗಿ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಧಾನ ಸಭೆ ವಿಫಲಗೊಂಡಿದೆ. ಇದರಿಂದ ರೈತರು ಸಭೆಯಿಂದ ಹೊರನಡೆದಿದ್ದಾರೆ.

ಮುಧೋಳ ನಗರದ ಪ್ರವಾಸಿ ಮಂದಿರದಲ್ಲಿ ಈ ಸಭೆ ನಡೆದಿತ್ತು. ಸಭೆ ಬಳಿಕ ಮಾಧ್ಯಮಗಳಿಗೆ ಸಚಿವ ಆರ್‌ಬಿ ತಿಮ್ಮಾಪುರ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿ ಘೋಷಣೆ ಮಾಡಿದ ದರಕ್ಕೆ ಒಪ್ಪಿಕೊಂಡು ಸಹಕಾರ ನೀಡಬೇಕು ಎಂದು ರೈತ ಹೋರಾಟಗಾರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ. ರೈತರು 3500 ರೂಪಾಯಿ ಕೊಡಬೇಕು ಅಂತ ಬೇಡಿಕೆ ಇಟ್ಟಿದ್ದಾರೆ. ಎರಡನೇ ಕಂತು 500 ಕೊಡಬೇಕು ಅಂತ ಬೇಡಿಕೆ ಇದೆ. ಮೂರು ವರ್ಷಗಳಿಂದ ಎರಡನೇ ಕಂತು ಯಾವ ಕಾರ್ಖಾನೆಯೂ ನೀಡಿಲ್ಲ. ಕಾರ್ಖಾನೆಯವರು ಸರ್ಕಾರದ ಆದೇಶದಂತೆ ದರ ನೀಡುತ್ತೇವೆ ಎಂದಿದ್ದಾರೆ. ಆದ್ರೂ ಕೂಡ ಇನ್ನೂ ಒಮ್ಮೆ ಕಾರ್ಖಾನೆ ಮಾಲೀಕರ ಜೊತೆ ಮಾತನಾಡುತ್ತೇನೆ. ಆದಷ್ಟು ರೈತರು, ಕಾರ್ಖಾನೆ ಮಾಲೀಕರ ನಡುವೆ ಸಂಧಾನಕ್ಕೆ ಪ್ರಯತ್ನ ಮುಂದುವರೆಯುತ್ತದೆ ಎಂದಿದ್ದಾರೆ.

ದಾರವಾಡ-ವಿಜಯಪುರ,ಮುಧೋಳ -ರಾಜ್ಯ ಹೆದ್ದಾರಿ ಬಂದ್

ಒಂದೆಡೆ ಬೇಡಿಕೆ ಆಗ್ರಹಿಸಿ ಕಬ್ಬು ಬೆಳೆಗಾರರ ಪ್ರತಿಭಟನೆ, ಮತ್ತೊಂದೆಡೆ ಸಂಧಾನ ಸಭೆ ವಿಫಲಗೊಂಡ ಕಾರಣ ರೈತರು ಆಕ್ರೋಶಗೊಂಡಿದ್ದಾರೆ. ರೈತರು ದಾರವಾಡ-ವಿಜಯಪುರ,ಮುಧೋಳ -ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಮುಧೋಳ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಜ್ಯ ಹೆದ್ದಾರಿ ಬಂದ್ ಮಾಡಿದ್ದಾರೆ. ಬಸ್ ತಡೆದು ರೈತರು ಆಕ್ರೋಶ ಹೊರಹಾಕಿದ್ದಾರೆ. ರೈತ ಹೋರಾಟ ತೀವ್ರಗೊಳ್ಳುತ್ತಿದ್ದಂತೆ ಸ್ಥಳಕ್ಕೆ ಹೆಚ್ಚುವರಿ ಪೊಲೀಸರು ದೌಡಾಯಿಸಿದ್ದಾರೆ.