ಚಿಪ್ಪಳಿ ಗ್ರಾಮದ ಯುವ ರೈತ ಎಚ್.ಆರ್.ಗುರುನಾಥ್ ಅವರು ಸ್ವಂತ ಖರ್ಚಿನಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿ ಗ್ರಾಮಸ್ಥರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಶಿಥಿಲಗೊಂಡಿದ್ದ ಹಳೆಯ ಸೇತುವೆಯಿಂದಾಗಿ 7-8 ಕಿ.ಮೀ. ಸುತ್ತು ಬಳಸಬೇಕಿದ್ದ ಗ್ರಾಮಸ್ಥರಿಗೆ ಈಗ ಅನುಕೂಲವಾಗಿದೆ.

ತ್ಯಾಗರ್ತಿ (ಜುಲೈ 8): ಸರ್ಕಾರದ ಸೌಲಭ್ಯ ಹಾಗೂ ಸಾರ್ವಜನಿಕರ ಸ್ವತ್ತುಗಳು ನಮೆಗೆಲ್ಲಿ ಸಿಗುತ್ತದೆ ಎನ್ನುವ ಈ ಕಾಲದಲ್ಲಿ ಸ್ವಂತ ಖರ್ಚಿನಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಕಬ್ಬಿಣದ ಸೇತುವೆ ನಿರ್ಮಿಸಿದ ಅಪರೂಪದ ವ್ಯಕ್ತಿತ್ವ ಹೊಂದಿದ ಯುವ ರೈತ ಎಚ್.ಆರ್.ಗುರುನಾಥ್ ಅವರ ಸಾಧನೆ ಪ್ರಶಂಸನೀಯ.

ಸಾಗರ ತಾಲೂಕಿನ ಹೊಸೂರು ಗ್ರಾಪಂ ವ್ಯಾಪ್ತಿಯ ಚಿಪ್ಪಳಿ ಗ್ರಾಮದ ಎಚ್.ಆರ್.ಗುರುನಾಥ ಎಂಬವರು ತಮ್ಮ ಊರಿನಲ್ಲಿರುವ ನಂದಿಹೊಳೆಗೆ ಸ್ವಂತ ಖರ್ಚಿನಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಿ ಚಿಪ್ಪಳಿ, ಬ್ಯಾಡರಕೊಪ್ಪ, ಜಂಬೂರಮನೆ, ಅಡ್ಡೇರಿ ಗ್ರಾಮದ ಜನರ ಓಡಾಟಕ್ಕೆ ಸಹಕಾರಿಯಾಗಿದ್ದಾರೆ. 60 ಅಡಿ ಉದ್ದ 3 ಅಡಿ ಅಗಲದ ಸೇತುವೆ ಇದಾಗಿದ್ದು, ಸುಮಾರು 50 ಸಾವಿರ ರು.ವೆಚ್ಚದಲ್ಲಿ ನಿರ್ಮಿಸಿದ್ದಾರೆ.

ಚಿಪ್ಪಳಿ ಗ್ರಾಮದಿಂದ ಬ್ಯಾಡರಕೊಪ್ಪ ಸಂಪರ್ಕಿಸುವ ಮಾರ್ಗದಲ್ಲಿ ಹೊಳೆಯ ಎರಡೂ ದಡಕ್ಕೆ ಸೇರಿಸಿ ಈ ಸೇತುವೆ ನಿರ್ಮಿಸಲಾಗಿದೆ. ಗ್ರಾಮಸ್ಥರೆಲ್ಲ ಸೇರಿ ಹೊಳೆಯ ಎರಡೂ ದಡಕ್ಕೆ ತಾಗುವಂತೆ ಈ ಸೇತುವೆ ಇರಿಸುವ ಕಾರ್ಯದಲ್ಲಿ ಪಾಲ್ಗೊಂಡಿದ್ದರು.ಬ್ಯಾಡರಕೊಪ್ಪ ಗ್ರಾಮದ ರೈಲ್ವೆ ಅಂಡರ್ ಪಾಸ್ ಬಳಿ ಈ ರಸ್ತೆಯು ಸಂಪರ್ಕಿಸುತ್ತಿದ್ದು ಇದರಿಂದ ಬ್ಯಾಡರಕೊಪ್ಪ, ಜಂಬೂರಮನೆ, ಅಡ್ಡೇರಿ ಗ್ರಾಮ ಸೇರಿ ಸುಮಾರು 150ಕ್ಕೂ ಅಧಿಕ ಕುಟುಂಬಕ್ಕೆ ಈ ಸೇತುವೆಯಿಂದ ಅನುಕೂಲವಾಗಿದೆ.

ಈ ಹಿಂದೆ ಈ ಸೇತುವೆ ಇಲ್ಲದೇ ಚೆನ್ನಶೆಟ್ಟಿಕೊಪ್ಪ, ಹೊಸೂರು, ಐಗಿನಬೈಲು ಗ್ರಾಮಗಳ ಮೂಲಕ ಸುಮಾರು 7 ಕಿ.ಮೀ.ಸುತ್ತು ಬಳಸಿ ಚಿಪ್ಪಳಿ ಗ್ರಾಮ ಸಂಪರ್ಕಿಸಬೇಕಾಗಿತ್ತು. 2010ರಲ್ಲಿ ಸಾಗರದ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ಅವರು ಕ್ಷೇತ್ರಾಭಿವೃದ್ಧಿ ಅನುದಾನದಡಿಯಲ್ಲಿ ಈ ಹೊಳೆಗೆ ಕಿರು ಸೇತುವೆ ಕಾಮಗಾರಿ ನಿರ್ಮಿಸಿಕೊಟ್ಟಿದ್ದರು. ಸೇತುವೆಯ ಎರಡೂ ಕಡೆ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡದ ಕಾರಣ ಹೊಳೆ ತುಂಬಿ ನೀರಿನ ರಭಸದ ಹರಿವಿಗೆ ಮಣ್ಣು ಕೊರಕಲಾಗಿ ಸೇತುವೆ ಬಳಸದಂತಾಗಿತ್ತು.

ಸೇತುವೆ ಕಾಮಗಾರಿಯು ಕಳಪೆ ಕಾಮಗಾರಿಯಾಗಿದ್ದ ಕಾರಣ ಮಧ್ಯದ ಕಂಬ ಶಿಥಿಲಗೊಂಡು 7-8 ವರ್ಷಗಳಿಂದ ಸೇತುವೆ ಬಳಸದಂತಾಗಿತ್ತು. ನಂತದ ವರ್ಷಗಳಲ್ಲಿ ತಮ್ಮ ಊರಿನ ಹೊಳೆಗೆ ಶಾಶ್ವತವಾದ ಸೇತುವೆ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಜನ ಪ್ರತಿನಿಧಿಗಳಿಗೆ ಮತ್ತು ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಶಾಶ್ವತ ಪರಿಹಾರ ದೊರಕದೆ ಜನರು ಸಂಕಷ್ಟಕ್ಕೀಡಾಗಿದ್ದರು. ಜನರ ಸಮಸ್ಯೆ ಅರಿತು ಸ್ಥಳೀಯರಾದ ಗುರುನಾಥ ಸರ್ಕಾರದ ಯಾವುದೇ ಅನುದಾನ ನಿರೀಕ್ಷಿಸದೇ ಸ್ವಂತ ಹಣದಿಂದ ಸಾರ್ವಜನಿಕ ಸೇವೆಗೆ ಸೇತುವೆ ನಿರ್ಮಿಸಿರುವುದಕ್ಕೆ ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ.

ನಮ್ಮೂರಿನ ರೈತಾಪಿ ಜನರು ನಂದಿಹೊಳೆಯ ಆಚೆಗಿನ ಜಮೀನು ಮತ್ತು ಸಂಬಂಧಿಕರನ್ನು ಸಂಪರ್ಕಿಸಲು 7-8 ಕಿಮೀ ಸುತ್ತು ಬಳಸಿ ಓಡಾಡುವುದು ಗಮನಿಸಿದ್ದೆ. ಈ ಬಗ್ಗೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎಂಬ ದೃಷ್ಟಿಯಿಂದ ಈ ಸೇತುವೆ ನಿರ್ಮಿಸಿದ್ದೇನೆ. - ಎಚ್.ಆರ್.ಗುರುನಾಥ ಚಿಪ್ಪಳಿ, ಯುವ ರೈತ

2010ರಲ್ಲಿ ಶಾಸಕರಾಗಿದ್ದ ಗೋಪಾಲಕೃಷ್ಣ ಬೇಳೂರು ನಮ್ಮ ಊರಿಗೆ ಕಿರು ಸೇತುವೆ ನಿರ್ಮಿಸಿಕೊಟ್ಟಿದ್ದರು. ಅದು ಶಿಥಿಲಗೊಂಡಿದ್ದು ಪ್ರತಿ ವರ್ಷ ಮಳೆಗಾಲದಲ್ಲಿ ನಾವು ಹೊಳೆ ದಾಟಲು ಸಾಧ್ಯವಾಗದೆ ಸುತ್ತು ಬಳಸಿ ಓಡಾಡುತ್ತಿದ್ದೆವು. ಈಗ ನಮ್ಮೂರಿನವರು ಕಬ್ಬಿಣದ ಸೇತುವೆ ಮಾಡಿರುವುದು ಸಂತೋಷ ನೀಡಿದೆ. ಇದೇ ಸ್ಥಳದಲ್ಲಿ ಸರ್ಕಾರ ಶಾಶ್ವತ ಸೇತುವೆ ನಿರ್ಮಿಸಿಕೊಡಬೇಕು.

- ವಿರೇಂದ್ರ ಚಿಪ್ಪಳಿ, ಗ್ರಾಮಸ್ಥರು