ಭಾರತದ ಪ್ರಮುಖ ಇವಿ ತಯಾರಕರಾದ ಟಾಟಾ, ಮಹೀಂದ್ರ ಸೇರಿದಂತೆ ಹಲವು ಕಂಪನಿಗಳಿಗೆ ಇದೀಗ ತಲೆನೋವು ಹೆಚ್ಚಾಗಿದೆ. ಕಾರಣ ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಕಾಲಿಟ್ಟಿದೆ. ಇದೀಗ ಬೆಂಗಳೂರಿನಲ್ಲಿ ವಿನ್‌ಫಾಸ್ಟ್ ಕಾರಿನ ಪ್ರದರ್ಶನ ನಡೆಯುತ್ತಿದೆ.
ಬೆಂಗಳೂರು (ಜೂ. 29) ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತ ಟಾಟಾ ಮೋಟಾರ್ಸ್, ಮಹೀಂದ್ರ ಸೇರಿದಂತೆ ಹಲವು ಕಂಪನಿಗಳು ಹೊಸ ಹೊಸ ಇವಿ ಕಾರುಗಳನ್ನು ಬಿಡುಗಡೆ ಮಾಡುತ್ತಿದೆ. ಈ ಮೂಲಕ ಭಾರತದ ಇವಿ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. ಎಂಜಿ ಮೋಟಾರ್ಸ್, ಹ್ಯುಂಡೈ ಸೇರಿದಂತೆ ಇತರ ಕಂಪನಿಗಳು ಎಲೆಕ್ಟ್ರಿಕ್ ಕಾರುಗಳ ಮೂಲಕ ಪೈಪೋಟಿ ನೀಡುತ್ತಿದೆ. ಇದರ ನಡುವೆ ವಿಯೆಟ್ನಾಂ ಮೂಲದ ವಿನ್‌ಫಾಸ್ಟ್ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಕಾಲಿಟ್ಟಿದೆ. ವಿಯೆಟ್ನಾಂನ ಅತಿದೊಡ್ಡ ಕೈಗಾರಿಕಾ ಸಮೂಹವಾಗಿರುವ ವಿನ್‌ಗ್ರೂಪ್ ಜೆಎಸ್‌ಸಿಯ ಅಂಗಸಂಸ್ಥೆಯಾಗಿರುವ ವಿನ್‌ಫಾಸ್ಟ್ (VinFast), ತನ್ನ ಪ್ರೀಮಿಯಂ ಎಲೆಕ್ಟ್ರಿಕ್ ಎಸ್‌ಯುವಿ ಕಾರುಗಳಾದ ವಿಎಫ್ 7 ಹಾಗೂ ವಿಎಫ್ 6 ಭಾರತದಲ್ಲಿ ಪದ್ರರ್ಶನಕ್ಕಿಟ್ಟಿದೆ. ಇದೇ ಮೊದಲ ಬಾರಿಗೆ ವಿನ್‌ಫಾಸ್ಟ್ ಕಾರು ಬೆಂಗಳೂರಿನಲ್ಲಿ ಪ್ರದರ್ಶನಕ್ಕಿಡಲಾಗಿದೆ.
ಬೆಂಗಳೂರಿನ ಲುಲು ಮಾಲ್‌ನಲ್ಲಿ ವಿನ್‌ಫಾಸ್ಟ್ ಕಾರು ಪ್ರದರ್ಶನ
ಬೆಂಗಳೂರು ಸೇರಿದಂತೆ ಭಾರತದ 11 ನಗರಗಳ ಪ್ರಮುಖ ಶಾಪಿಂಗ್ ಮಾಲ್‌ಗಳಲ್ಲಿ ವಿನ್‌ಪಾಸ್ಟ್ ಕಾರು ಪ್ರದರ್ಶನ ನಡೆಯುತ್ತಿದೆ. ಬೆಂಗಳೂರಿನ ಲುಲು ಮಾಲ್‌ನಲ್ಲಿ ಈ ವಿನ್‌ಫಾಸ್ಟ್ ಕಾರು ಪ್ರದರ್ಶನ ನಡೆಯುತ್ತಿದೆ. ದೆಹಲಿ, ಹೈದರಾಬಾದ್, ಪುಣೆ, ತಿರುವನಂತಪುರಂ ಸೇರಿದಂತೆ 11 ನಗರಗಳ ಮಾಲ್‌ಗಳಲ್ಲಿ ಕಾರು ಪ್ರದರ್ಶನ ನಡೆಯುತ್ತಿದೆ.
ಈ ವರ್ಷದ ಆರಂಭದಲ್ಲಿಯೇ ಆಸಕ್ತ ಗ್ರಾಹಕರ ಗಮನ ಸೆಳೆದಿರುವ ವಿಎಫ್ 7 ಮತ್ತು ವಿಎಫ್ 6 ʼಎಸ್‌ಯುವಿ ಗಳನ್ನು ಗ್ರಾಹಕರು ಪರೀಕ್ಷಿಸಬಹುದು. ಸುಧಾರಿತ ತಂತ್ರಜ್ಞಾನಗಳು ಮತ್ತು ಪ್ರೀಮಿಯಂ ವೈಶಿಷ್ಟ್ಯಗಳ ಅನುಭವವನ್ನು ನೇರವಾಗಿ ಪಡೆಯಬಹುದು. ಕಳೆದ ವಾರಾಂತ್ಯದಲ್ಲಿ ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ಯಶಸ್ವಿ ಪ್ರದರ್ಶನಗಳೊಂದಿಗೆ ಈ ಪ್ರದರ್ಶನ ಉಪಕ್ರಮಕ್ಕೆ ಚಾಲನೆ ದೊರೆತಿದೆ.
ಬೆಂಗಳೂರಿನ ತಂತ್ರಜ್ಞಾನ- ಪ್ರೇಮಿ ಮತ್ತು ಸುಸ್ಥಿರತೆ-ಪ್ರಜ್ಞೆಯುಳ್ಳ ಪ್ರೇಕ್ಷಕರ ಜೊತೆ ನೇರ ಸಂಪರ್ಕ ಸಾಧಿಸುವುದು ಈ ಪ್ರದರ್ಶನದ ಗುರಿಯಾಗಿದೆ. ವಿನ್‌ಫಾಸ್ಟ್‌ನ ಅತ್ಯಾಧುನಿಕ ಎಲೆಕ್ಟ್ರಿಕ್ ವಾಹನಗಳ ಪ್ರತ್ಯಕ್ಷ ಅನುಭವ ಒದಗಿಸಲು ಇದು ನೆರವಾಗಲಿದೆ. ಶುದ್ಧ ಇಂಧನ ಮತ್ತು ಭವಿಷ್ಯಕ್ಕೆ ಸಿದ್ಧವಾಗಿರುವ ನಗರದ ಸಂಚಾರ ವ್ಯವಸ್ಥೆಗೆ ಮುನ್ನೋಟದ ವಿಧಾನ ಬೆಂಬಲಿಸುವ ಬ್ರ್ಯಾಂಡ್‌ನ ಬದ್ಧತೆಯನ್ನು ಇದು ಸೂಚಿಸುತ್ತದೆ.
ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದಾಗಿನಿಂದ, ವಿನ್‌ಫಾಸ್ಟ್, ತನ್ನ ಸಮಗ್ರ ವಿದ್ಯುತ್‌ಚಾಲಿತ ವಾಹನಗಳನ್ನು ಪರಿಚಯಿಸುತ್ತಿದೆ. ಈ ʼಎಸ್‌ಯುವಿʼಗಳು ಈಗಾಗಲೇ ವಿಯೆಟ್ನಾಂನಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸಿರುವ ಮಾದರಿಗಳಾಗಿವೆ. ಭಾರತದಲ್ಲಿ ಕಂಪನಿಯ ವಹಿವಾಟು ವಿಸ್ತರಣೆಯ ಅಂಗವಾಗಿ ತಮಿಳುನಾಡಿನಲ್ಲಿ ವಿದ್ಯುತ್‌ಚಾಲಿತ ವಾಹನಗಳ ತಯಾರಿಕಾ ಘಟಕ ನಿರ್ಮಾಣ, ವ್ಯಾಪಕ ಡೀಲರ್‌ಶಿಪ್ ಜಾಲದ ಅಭಿವೃದ್ಧಿ ಮತ್ತು ಗ್ರಾಹಕ ಸೇವಾ ಸಂಪರ್ಕ ಜಾಲ ಸಾಮರ್ಥ್ಯಗಳನ್ನು ಹೆಚ್ಚಿಸಲು ಗ್ಲೋಬಲ್ ಅಶ್ಯೂರ್‌ನಂತಹ ಸ್ಥಳೀಯ ಪ್ರತಿಷ್ಠಿತ ಕಂಪನಿಗಳ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲಾಗುತ್ತಿದೆ.
ಉತ್ಪನ್ನ ಶ್ರೇಣಿಯು ಈ ವಿಶಾಲ ಕಾರ್ಯತಂತ್ರದ ಭಾಗವಾಗಿ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಹೊಸ ಇವಿ ಎಸ್‌ಯುವಿ-ಗಳ ಪ್ರದರ್ಶನ ಕಾರ್ಯಕ್ರಮಗಳು ಹೊಸ ಮಾದರಿಗಳನ್ನು ಪ್ರಸ್ತುತಪಡಿಸುವುದಷ್ಟೇ ಅಲ್ಲದೆ, ವಿನ್‌ಫಾಸ್ಟ್‌ನ ಭವಿಷ್ಯದ ಸಂಚಾರದ ಮುನ್ನೋಟದ ಜೊತೆ ಸಮನ್ವಯ ಸಾಧಿಸಲು ಸಾರ್ವಜನಿಕರಿಗೆ ಆಹ್ವಾನ ನೀಡುವ ರೀತಿಯಲ್ಲಿಯೂ ಕಾರ್ಯನಿರ್ವಹಿಸಲಿವೆ.
