5G Technology: ದೆಹಲಿಯಲ್ಲಿದ್ದುಕೊಂಡು ಸ್ವೀಡನ್‌ನಲ್ಲಿ ಕಾರು ಓಡಿಸಿದ ಪ್ರಧಾನಿ ಮೋದಿ
ಪ್ರಧಾನಿ ಮೋದಿ ದೆಹಲಿಯಲ್ಲಿ ಕುಳಿತುಕೊಂಡು ಯೂರೋಪ್‌ನ ಸ್ವೀಡನ್‌ನಲ್ಲಿ ಕಾರು ಓಡಿಸಿದ್ದಾರೆ. 5G ತಂತ್ರಜ್ಞಾನ ಬಳಸಿಕೊಂಡು ರಿಮೋಟ್ ನೆರವಿನಿಂದ ಪ್ರಧಾನಿ ಮೋದಿ ಕಾರು ಓಡಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ.
ಪ್ರಧಾನಿ ನರೇಂದ್ರ ಮೋದಿ ಅಕ್ಟೋಬರ್ 1, 2022 ರಂದು ಭಾರತದಲ್ಲಿ 5G ಮೊಬೈಲ್ ಸೇವೆಗಳನ್ನು ಪ್ರಾರಂಭಿಸಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಶನಿವಾರ ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ (India Mobile Congress) (ಐಎಂಸಿ) ನಲ್ಲಿ ಹೊಸದಾಗಿ ಹೊರತಂದ 5G ತಂತ್ರಜ್ಞಾನ (Technology) ಬಳಸಿಕೊಂಡು ರಾಷ್ಟ್ರ ರಾಜಧಾನಿಯ ಎರಿಕ್ಸನ್ ಸ್ಟಾಲ್‌ನಲ್ಲಿ ಕುಳಿತುಕೊಂಡು ಪ್ರಧಾನಿ ನರೇಂದ್ರ ಮೋದಿ ಯೂರೋಪ್‌ನ ಸ್ವೀಡನ್‌ನಲ್ಲಿ ರಿಮೋಟ್‌ನಿಂದ (Remote) ಕಾರನ್ನು ಓಡಿಸಿದರು. ಇಂಡಿಯನ್ ಮೊಬೈಲ್ ಕಾಂಗ್ರೆಸ್ 2022 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ದೇಶದಲ್ಲಿ 5ಜಿ ಸೇವೆಯನ್ನು ಪ್ರಾರಂಭಿಸಿದ್ದಾರೆ. ಈ ಸೇವೆಯ ಬಳಕೆ ಹೇಗಿದೆ ಎಂಬುದನ್ನು ಪ್ರದರ್ಶಿಸಲು , ಈ ಸಮಾರಂಭದ ಎರಿಕ್ಸನ್ ಬೂತ್‌ನಲ್ಲಿ ಕುಳಿತುಕೊಂಡು ಪ್ರಧಾನಿ ಮೋದಿ ಭೌತಿಕವಾಗಿ ಯೂರೋಪ್‌ನಲ್ಲಿ ಕಾರನ್ನು ಓಡಿಸಿದರು. ಹೊಸ ಮೊಬೈಲ್ ಸೇವೆಗಳ ಕಾರಣದಿಂದಾಗಿ, ಭಾರತದಲ್ಲಿ ಇರುವ ಸಾಧನಗಳೊಂದಿಗೆ ಕಾರಿನ ನಿಯಂತ್ರಣಗಳನ್ನು (Control) ಕನೆಕ್ಟ್ ಮಾಡಿಕೊಂಡು ಹೈ-ಸ್ಪೀಡ್ ನೆಟ್‌ವರ್ಕ್ ಅನ್ನು ಬಳಸಲಾಗಿದೆ. ಈ ಮೂಲಕ ಕಾರಿನ ರಿಮೋಟ್ ಕಂಟ್ರೋಲ್ ಪಡೆದುಕೊಂಡು ಕಾರು ಓಡಿಸಿದ್ದಾರೆ ಎಂದು ತಿಳಿದುಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಕಾರು ಚಾಲನೆ ಮಾಡುತ್ತಿರುವ ಚಿತ್ರವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್ ಗೋಯಲ್ ಅವರು ಟ್ವಿಟ್ಟರ್‌ನಲ್ಲಿ (Twitter) ಶೇರ್ ಮಾಡಿಕೊಂಡಿದ್ದಾರೆ. "@NarendraModi ji ಅವರು ಭಾರತದ 5G ತಂತ್ರಜ್ಞಾನ ಬಳಸಿಕೊಂಡು ದೆಹಲಿಯಿಂದ ದೂರದಿಂದಲೇ ಯೂರೋಪ್‌ನಲ್ಲಿ ಕಾರು ಚಲಾಯಿಸುವುದನ್ನು ಪರೀಕ್ಷಿಸುತ್ತಾರೆ." ಎಂಬ ಕ್ಯಾಪ್ಷನ್ ಹಾಕಿಕೊಂಡು ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ. ಇನ್ನು, ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ಯೂಟ್ಯೂಬ್ ಅಕೌಂಟ್‌ನಲ್ಲಿ ಇದರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.
ಇದನ್ನು ಓದಿ: 5G Launch In India: ಮೊದಲ ಹಂತದಲ್ಲಿ 13 ನಗರಗಳಲ್ಲಿ 5ಜಿ ಸೇವೆ, ಲಿಸ್ಟ್‌ನಲ್ಲಿದ್ಯಾ ಬೆಂಗಳೂರು?
ಐಎಂಸಿ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 1, 2022 ರಂದು 5ಜಿ ಸೇವೆಗೆ ಚಾಲನೆ ನೀಡಿದರು. ಈ ಮೂಲಕ ಭಾರತದಲ್ಲಿ 5G ಗಾಗಿ ಕಾಯುವಿಕೆ ಅಂತಿಮವಾಗಿ ಕೊನೆಗೊಂಡಿದ್ದು, ದೀಪಾವಳಿಯ ವೇಳೆಗೆ ಬಳಕೆದಾರರು 5G ಸೇವೆಗಳನ್ನು ಆನಂದಿಸಲು ಸಾಧ್ಯವಾಗುತ್ತದೆ. ಇನ್ನು, 5G ಬಿಡುಗಡೆಯಾದ ಬಳಿಕ ಏರ್‌ಟೆಲ್, ರಿಲಯನ್ಸ್ ಜಿಯೋ ಮತ್ತು ಕ್ವಾಲ್‌ಕಾಮ್‌ನಂತಹ ಹಲವಾರು ಉನ್ನತ ಕಂಪನಿಗಳು ತಮ್ಮ 5G ಸೇವೆಗಳು ಹಾಗೂ ಅವುಗಳ ಪ್ರಯೋಜನಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರದರ್ಶಿಸಿದವು.
ಸ್ವಯಂಚಾಲಿತ ಮಾರ್ಗದರ್ಶಿ ವಾಹನ (Automated Guided Vehicle) (AGV) ಸ್ವಾಯತ್ತ ಮೊಬೈಲ್ ರೋಬೋಟ್ (AMR) ಗಿಂತ ಭಿನ್ನವಾಗಿದೆ. ಇದು ಪೋರ್ಟಬಲ್ ರೋಬೋಟ್ ,ಅದು ಉದ್ದವಾದ ಗುರುತಿಸಲಾದ ರೇಖೆಗಳು ಅಥವಾ ತಂತಿಗಳನ್ನು ಅನುಸರಿಸುತ್ತದೆ ಹಾಗೂ ರೇಡಿಯೋ ತರಂಗಗಳು, ವಿಷನ್ ಕ್ಯಾಮೆರಾಗಳು, ಆಯಸ್ಕಾಂತಗಳು ಅಥವಾ ನ್ಯಾವಿಗೇಷನ್‌ಗಾಗಿ ಲೇಸರ್‌ಗಳನ್ನು ಬಳಸುತ್ತದೆ. ಕಾರ್ಖಾನೆ ಅಥವಾ ಗೋದಾಮಿನಂತಹ ದೊಡ್ಡ ಕೈಗಾರಿಕಾ ಕಟ್ಟಡದ ಸುತ್ತಲೂ ಭಾರವಾದ ವಸ್ತುಗಳನ್ನು ಸಾಗಿಸಲು ಕೈಗಾರಿಕಾ ಅನ್ವಯಿಕೆಗಳಲ್ಲಿ ಅವುಗಳನ್ನು ಹೆಚ್ಚಾಗಿ ಬಳಸಲಾಗುತ್ತದೆ.
ಇನ್ನು, 5ಜಿ ಮೊಬೈಲ್ ಸೇವೆಗಳು ಸದ್ಯ ದೇಶದ 13 ನಗರಗಳಲ್ಲಿ ಲಭ್ಯವಾಗಲಿವೆ ಎಂಬುದು ಗಮನಿಸಬೇಕಾದ ಸಂಗತಿ. ಇದಲ್ಲದೆ, 2024 ರ ವೇಳೆಗೆ ಇಡೀ ದೇಶವು 5G ನೆಟ್‌ವರ್ಕ್‌ನೊಂದಿಗೆ ಆವರಿಸಲ್ಪಡುತ್ತದೆ ಎಂಬ ನಿರೀಕ್ಷೆಗಳಿವೆ.
ಇದನ್ನೂ ಓದಿ: ಇಂದಿನಿಂದ ದೇಶದಲ್ಲಿ 5ಜಿ ಕ್ರಾಂತಿ: ಏನಿದರ ವಿಶೇಷತೆ?
ಇನ್ನೊಂದೆಡೆ, 5ಜಿ ಸೇವೆಗೆ ಚಾಲನೆ ನೀಡಿದ ಬಳಿಕ, ಎಂಜಿನಿಯರಿಂಗ್‌ಗಳ ತಂಡವು ಸ್ಥಳೀಯವಾಗಿ ಎಂಡ್-ಟು-ಎಂಡ್ 5G ತಂತ್ರಜ್ಞಾನವನ್ನು ಹೇಗೆ ಅಭಿವೃದ್ಧಿಪಡಿಸುತ್ತಿದೆ ಮತ್ತು ನಗರ ಹಾಗೂ ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡಲು 5G ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಧಾನಿ ಮೋದಿ ಸಮಯ ತೆಗೆದುಕೊಂಡರು. ರಾಷ್ಟ್ರದಲ್ಲಿ 5G ತಂತ್ರಜ್ಞಾನಕ್ಕಾಗಿ ಕಾಯುವಿಕೆ ಕೊನೆಗೊಂಡಿದ್ದು, ಶೀಘ್ರದಲ್ಲೇ ಪ್ರತಿ ಪಟ್ಟಣವು "ಡಿಜಿಟಲ್ ಇಂಡಿಯಾ" ದ ಅನುಕೂಲಗಳನ್ನು ಅನುಭವಿಸುತ್ತದೆ ಎಮದೂ ಈ ವೇಳೆ ಪ್ರಧಾನಿ ಮೋದಿ ಹೇಳಿದ್ದಾರೆ.