ಬೆಂಗಳೂರು(ಮಾ.12):  ಪೆಟ್ರೋಲ್‌, ಡೀಸೆಲ್‌ ಕಾರುಗಳನ್ನು ಚಾಲನೆ ಮಾಡುವವರಿಗೆ ಈಗ ಒಂದು ಕುತೂಹಲ ಇದೆ. ಈ ಎಲೆಕ್ಟ್ರಿಕ್‌ ಕಾರುಗಳು ಹೇಗೆ ಓಡುತ್ತವೆ ಅನ್ನುವುದು. ಪಿಕಪ್‌, ಬ್ರೇಕಿಂಗ್‌ ಸಿಸ್ಟಮ್‌, ಆ್ಯಕ್ಸಿಲರೇಷನ್‌ ಸಾಮರ್ಥ್ಯಗಳು ಪೆಟ್ರೋಲ್‌, ಡೀಸೆಲ್‌ ಕಾರಿನಲ್ಲಿ ಇದ್ದಂತೆಯೇ ಇವೆಯೇ ಎಂಬುದು. ಹಾಗಾಗಿಯೇ ಟಾಟಾ ಕಂಪನಿ ದಿ ಗ್ರ್ಯಾಂಡ್‌ ಎಲೆಕ್ಟ್ರಿಕ್‌ ಟೂರ್‌ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಿದೆ. ಅದಕ್ಕೆ ಕಾರಣವಾಗಿರುವುದು ಟಾಟಾ ಹೊಸತಾಗಿ ಬಿಡುಗಡೆ ಮಾಡಿರುವ ಕಾರು ಟಾಟಾ ನೆಕ್ಸಾನ್‌ ಇವಿ.

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಲಾಂಚ್, ಹ್ಯುಂಡೈ MGಗೆ ನಡುಕ!

ಗಾತ್ರದಲ್ಲಿ ದೊಡ್ಡದಾಗಿರುವ, ನೋಡಲು ಸ್ಟೈಲಿಷ್‌ ಲುಕ್‌ ಹೊಂದಿರುವ ಟಾಟಾದ ಸದ್ಯದ ಆಕರ್ಷಕ ಕಾರು ಇದು. ಆರಂಭಿಕ ಬೆಲೆ ರು. 14 ಲಕ್ಷ. ಮನೆಯಲ್ಲೇ ಚಾರ್ಜ್ ಮಾಡುವುದರೆ ಫುಲ್‌ ಚಾರ್ಜ್ ಆಗಲು 8 ಗಂಟೆ ಬೇಕು. ಅದೇ ಫಾಸ್ಟ್‌ ಚಾರ್ಜರ್‌ನಲ್ಲಿ ಚಾರ್ಜ್ ಮಾಡಿದರೆ ಒಂದು ಗಂಟೆಯಲ್ಲಿ ಸುಮಾರು ಶೇ.80 ಚಾಜ್‌ರ್‍ ಆಗುತ್ತದೆ. ಈಗ ಮನೆಯಲ್ಲೇ ಫಾಸ್ಟ್‌ ಚಾರ್ಜರ್‌ ಬಳಸಲು ಸಾಧ್ಯವಿಲ್ಲವೇ ಎಂದು ಕೇಳಿದರೆ ಅದಕ್ಕೆ ಹೆಚ್ಚು ಸಾಮರ್ಥ್ಯದ ವಿದ್ಯುತ್‌ ವ್ಯವಸ್ಥೆ ಬೇಕು ಎಂಬುದೇ ಉತ್ತರ.

ಒಮ್ಮೆ ಪೂರ್ತಿ ಚಾರ್ಜ್ ಮಾಡಿದರೆ 312 ಕಿಮೀ ದೂರ ಸಾಗಬಹುದು ಎಂದು ಕಂಪನಿ ಹೇಳಿದೆ. ಕನಿಷ್ಠ ಪಕ್ಷ 250 ಕಿಮೀ ದೂರಗಳವರೆಗೆ ಯಾವುದೇ ಆತಂಕವಿಲ್ಲದೆ ಓಡಿಸಬಹುದೇನೋ. ನಂತರ ಚಾರ್ಜ್ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ಟೆನ್ಷನ್‌ ಹೆಚ್ಚಾಗುವು ಸಾಧ್ಯತೆ ಹೆಚ್ಚು. ಒಟ್ಟಾರೆ ನೋಡಿದರೆ ನಾಲ್ಕು ಮಂದಿ ಆರಾಮಾಗಿ ಪಯಣಿಸಬಹುದಾದ ಕಾರು ಇದು ಅನ್ನುವುದೇ ಇದರ ಹೆಚ್ಚುಗಾರಿಕೆ.

ಈ ಕಾರು ಹೇಗಿದೆ ಎಂದು ಗ್ರಾಹಕರಿಗೆ ತೋರಿಸಲು ದಿ ಗ್ರ್ಯಾಂಡ್‌ ಎಲೆಕ್ಟ್ರಿಕ್‌ ಟೂರ್‌ ಎಂಬ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದ ಉದ್ದೇಶ ಒಂದೆರಡು ರೌಂಡು ಕಾರು ಓಡಿಸಲು ಅವಕಾಶ ಕೊಟ್ಟು ಕಾರು ಹೇಗಿದೆ ಎಂಬುದರ ಮಾಹಿತಿ ಕೊಡುವುದು. ಈ ಕಾರ್ಯಕ್ರಮಕ್ಕೆ ನಮಗೂ ಆಹ್ವಾನ ಇತ್ತು.

ಬಗೆ ಬಗೆ ಟೆಸ್ಟುಗಳು
ಮೊದಲು ಆ್ಯಕ್ಸಿಲರೇಷನ್‌ ಸಾಮರ್ಥ್ಯ ಹೇಗಿದೆ ಎಂದು ನೋಡಲಾಯಿತು. ಕಂಪನಿ ಹೇಳುವ ಪ್ರಕಾರ ಈ ಕಾರು ಸುಮಾರು ಒಂಭತ್ತೂವರೆ ಸೆಕೆಂಡಿಗೆ 100 ಕಿಮೀ ವೇಗ ಪಡೆಯುವ ಸಾಮರ್ಥ್ಯ ಹೊಂದಿದೆ. ಕೆಲವು ಸೆಕೆಂಡುಗಳು ಆಚೀಚೆಯಾದರೂ ಈ ಅಂಕಿಸಂಖ್ಯೆಯನ್ನು ಒಪ್ಪಿಕೊಳ್ಳಬಹುದು. ಇದರಲ್ಲಿ ಗೇರ್‌ ಇಲ್ಲ. ನಾಲ್ಕು ಮೋಡ್‌ಗಳಿವೆ. ಡ್ರೈವ್‌ ಮೋಡ್‌, ನ್ಯೂಟ್ರಲ್‌, ಸ್ಪೋರ್ಟ್ಸ್ ಮತ್ತು ರಿವರ್ಸ್‌. ಡ್ರೈವ್‌ ಮೋಡ್‌ಗೆ ಹಾಕಿ ಆ್ಯಕ್ಸಿಲರೇಟರ್‌ ಸ್ಪರ್ಶಿಸಿದರೆ ಕಾರು ಮುಂದೆ ಓಡುತ್ತದೆ. ನಿಧಾನಕ್ಕೆ ವೇಗ ಹೆಚ್ಚಿಸಿಕೊಂಡು ಸಾಗುತ್ತದೆ.

ನಂತರ ತಿರುವು ಮುರುವು ರಸ್ತೆಯಲ್ಲಿ ಸಾಗುವ ಪರೀಕ್ಷೆಗೆ ಕಾರನ್ನು ಒಡ್ಡಲಾಯಿತು. ಅದನ್ನೂ ಈ ಕಾರು ಆರಾಮಾಗಿ ಜಯಿಸಿತು. ಕಡೆಗೆ ಇದ್ದಿದ್ದು ಲೇನ್‌ ಚೇಂಜ್‌ ಪರೀಕ್ಷೆ. ಒಂದು ಲೇನ್‌ನಲ್ಲಿ ವೇಗವಾಗಿ ಸಾಗುತ್ತಿರುವಾಗ ಯಾರಾದರೂ ಅಡ್ಡ ಬಂದರೆ ತಕ್ಷಣ ಬ್ರೇಕ್‌ ಹಾಕಿ ಮತ್ತೊಂದು ಲೇನ್‌ಗೆ ಹೋಗಿ ಬ್ರೇಕ್‌ ಹಾಕಿ ಕಾರು ನಿಲ್ಲಿಸುವ ಟೆಸ್ಟ್‌. ಈ ಟೆಸ್ಟ್‌ ಸ್ವಲ್ಪ ಆತಂಕಕಾರಿ. ಸರಿಯಾಗಿ ಕೆಲಸ ಮಾಡದಿದ್ದರೆ ಕಷ್ಟ. ಆದರೆ ನೆಕ್ಸಾನ್‌ ಸಾಮರ್ಥ್ಯ ಇಲ್ಲೂ ಸಮಾಧಾನಕಾರ.

ಎರಡು ರೌಂಡು ಓಡಿಸಿದ ಅನುಭವದಿಂದ ಹೇಳುವುದಾದರೆ ಈ ಕಾರಿನ ಮೇಲೆ ಒಳ್ಳೆಯ ಅಭಿಪ್ರಾಯ ಹೊಂದಬಹುದು. ಆದರೆ ಒಂದು ಸಾವಿರ ಕಿಮೀ ಓಡಿಸದೆ ಪೂರ್ತಿ ಸರಿಯಾದ ಹೇಳುವುದು ಸಮಂಜಸವಾದ ವಿಷಯ ಅಲ್ಲ.