ನವದೆಹಲಿ(ಮಾ.14); ಜಗತ್ತಿನ ಅತ್ಯಂತ ದೊಡ್ಡ ಟೈರು ತಯಾರಿಕಾ ಕಂಪನಿಗಳಲ್ಲಿ ಒಂದಾದ ಮ್ಯಾಕ್ಸಿಸ್‌ ಟೈರು ಕಂಪನಿ ಕೆಲವು ವರ್ಷಗಳಿಂದ ಭಾರತದಲ್ಲೂ ಕಾರ್ಯ ನಿರ್ವಹಿಸುತ್ತಿದೆ. ಅಹಮದಾಬಾದ್‌ನಲ್ಲಿ ಟೈರು ತಯಾರಿಕಾ ಘಟಕ ಸ್ಥಾಪಿಸಿರುವ ಕಂಪನಿ ಈಗಾಗಲೇ ಹೋಂಡಾ, ಹೀರೋ ಮೋಟೋಕಾರ್ಪ್, ಯಮಹಾ ಸ್ಕೂಟರ್‌, ಬೈಕುಗಳಿಗೆ ಟೈರು ತಯಾರಿಸಿ ನೀಡುತ್ತಿದೆ. ಇದೀಗ ಸುಜುಕಿ ಸಂಸ್ಥೆ ತನ್ನ ಮಹತ್ವದ ಆ್ಯಕ್ಸೆಸ್‌ 125 ಸ್ಕೂಟರ್‌ನಲ್ಲಿ ಮ್ಯಾಕ್ಸಿಸ್‌ ಟೈರುಗಳನ್ನೇ ಬಳಸಿಕೊಳ್ಳುವ ನಿರ್ಧಾರ ಮಾಡಿದೆ. ಹೊಸ ಆ್ಯಕ್ಸೆಸ್‌ 125 ಬಿಎಸ್‌6 ಸ್ಕೂಟರ್‌ನ ಎರಡೂ ಟೈರುಗಳು ಮ್ಯಾಕ್ಸಿಸ್‌ ಟೈರುಗಳೇ ಆಗಿರಲಿವೆ.

ಇದನ್ನೂ ಓದಿ: ಸುಜುಕಿ ಕಟಾನಾಗೆ ಬೆಸ್ಟ್ ಬೈಕ್ ಪ್ರಶಸ್ತಿ!

ಈ ವಿಚಾರ ತಿಳಿಸಲು ಇತ್ತೀಚೆಗೆ ಮ್ಯಾಕ್ಸಿಸ್‌ ಟೈರ್‌ ಕಂಪನಿಯ ಮಾರ್ಕೆಟಿಂಗ್‌ ಹೆಡ್‌ ಬಿಂಗ್‌ ಲಿನ್‌ ವು ಬಂದಿದ್ದರು. ‘180 ದೇಶಗಳಲ್ಲಿ ಮ್ಯಾಕ್ಸಿಸ್‌ ಟೈರುಗಳು ಮಾರಾಟವಾಗುತ್ತಿದೆ. ಭಾರತದ ರಸ್ತೆಗಳನ್ನು ನೋಡಿಯೇ ವಿಶೇಷವಾಗಿ ಸಂಶೋಧನೆ ಮಾಡಿದ ಅತ್ಯುತ್ತಮ ಟೈರುಗಳನ್ನೇ ತಯಾರಿಸುತ್ತಿದ್ದೇವೆ’ ಎಂದರು.

ಇದನ್ನೂ ಓದಿ: ವೆಸ್ಪಾ ಪ್ರತಿಸ್ಪರ್ಧಿ ಸುಜುಕಿ ಸಲ್ಯೂಟೋ ಸ್ಕೂಟರ್ ಅನಾವರಣ!

ಮ್ಯಾಕ್ಸಿಸ್‌ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸಿ ತುಂಬಾ ವರ್ಷಗಳೇನೂ ಆಗಿಲ್ಲ. ಎರಡು ಮೂರು ವರ್ಷ ಆಗಿದೆಯಷ್ಟೇ. ಮ್ಯಾಕ್ಸಿಸ್‌ ಟೈರುಗಳಿಗೆ ಬೇಡಿಕೆ ಜಾಸ್ತಿಯಾದ್ದರಿಂದ ಇನ್ನೊಂದು ಘಟಕ ತೆರೆಯುವ ಆಲೋಚನೆಯಲ್ಲಿದೆ ಕಂಪನಿ. ‘ಮ್ಯಾಕ್ಸಿಸ್‌ ಸಂಸ್ಥೆ ಸ್ಕೂಟರ್‌ಗಳಷ್ಟೇ ಅಲ್ಲದೆ, ರಾಯಲ್‌ ಎನ್‌ಫೀಲ್ಡ್‌, ಜಾವಾ, ಬೆನೆಲ್ಲಿ ಥರದ ಹೆವೀ ಬೈಕುಗಳಿಗೂ ಟೈರುಗಳನ್ನು ತಯಾರಿಸುತ್ತಿದೆ. ಹೆಚ್ಚು ಬಾಳಿಕೆ ಬರುವ, ಮೈಲೇಜು ಜಾಸ್ತಿ ನೀಡುವ, ಒಳ್ಳೆಯ ರೋಡ್‌ ಗ್ರಿಪ್‌ ಹೊಂದಿರುವ ಟೈರುಗಳನ್ನೇ ತಯಾರಿಸಲು ಮ್ಯಾಕ್ಸಿಸ್‌ ಸಂಸ್ಥೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ’ ಎಂದರು.