Asianet Suvarna News Asianet Suvarna News

ಸಮೀಪ ಸಂಚಾರಕ್ಕೆ ಸುಗಮ ಸಂಗಾತಿ; ಓಡಿಸ್ಸಿ ಹಾಕ್ ಸ್ಕೂಟರ್

ಒಡಿಸ್ಸಿ ಹಾಕ್‌ ಕೇವಲ 1.17 ಲಕ್ಷ. 170 ಕಿಲೋಮೀಟರ್‌ ಓಡುತ್ತದೆ, ಬ್ಯಾಟರಿ ಚಾರ್ಜಿಂಗ್‌ ಟೈಮ್‌ 4 ಗಂಟೆ ಎಂದು ಕಂಪೆನಿ ಹೇಳುತ್ತದೆ.

Odysse Electric Hawk scooters price range battery charging time vcs
Author
First Published May 30, 2023, 1:32 PM IST | Last Updated May 30, 2023, 1:32 PM IST

ಇಲೆಕ್ಟ್ರಿಕ್ ಸ್ಕೂಟರ್‌ಗಳ ಕಾಲ ಇದು. ನಗರಗಳಿಗಂತೂ ಅದು ಹೇಳಿ ಮಾಡಿಸಿದ ವಾಹನ. ಆದರೆ ಇಲೆಕ್ಟ್ರಿಕ್ ಸ್ಕೂಟರ್‌ಗಳ ಬೆಲೆ ದುಬಾರಿ ಅನ್ನುವವರೀಗ ಒಡಿಸ್ಸಿ ಹಾಕ್ ಸ್ಕೂಟರ್‌ನತ್ತ ನೋಡಬಹುದು.ಒಡಿಸ್ಸಿ ಹಾಕ್‌ ನೋಡಲು ಮಿಕ್ಕ ಇಲೆಕ್ಟ್ರಿಕ್ ಸ್ಕೂಟರ್‌ಗಳಿಗಿಂತ ಬಿರುಸಾಗಿದೆ. ಭಾರವೂ ಹೆಚ್ಚು. ಹೀಗಾಗಿ ಒಳ್ಳೆಯ ರೋಡ್‌ಗ್ರಿಪ್‌ ಇದೆ. ಸೆಕ್ಯುರಿಟಿ ಫೀಚರ್‌ಗಳೂ ಸೊಗಸಾಗಿವೆ. ನೀವು ಲಾಕ್‌ ಸ್ವಿಚ್ ಆನ್‌ ಮಾಡಿದರೆ ಸ್ಟಾರ್ಟ್‌ ಮಾಡಿದರೂ ಸ್ಕೂಟರ್ ಚಲಿಸುವುದಿಲ್ಲ. ಸೀಟಿನ ಅಡಿಯಲ್ಲಿರುವ ಸ್ವಿಚ್‌ ಆಫ್ ಮಾಡಿಟ್ಟರೆ ಸ್ಕೂಟರ್‌ ಆನ್ ಆಗುವುದಿಲ್ಲ. ರಿಮೋಟಿನಿಂದಲೇ ಸ್ಕೂಟರ್ ಪಾರ್ಕ್ ಮಾಡಿದ್ದೆಲ್ಲಿ ಎಂದು ಹುಡುಕಬಹುದು. ರಸ್ತೆ ಬೆಳಗುವಷ್ಟು ಪ್ರಖರವಾದ ಹೆಡ್‌ಲೈಟ್‌ಗಳಿವೆ. ಬ್ಯಾಟರಿಯನ್ನು ಡಿಸ್‌ಕನೆಕ್ಟ್‌ ಮಾಡಿ ಮನೆಯೊಳಗೆ ಒಯ್ದು ಚಾರ್ಜ್‌ ಮಾಡಬಹುದು. ಮ್ಯೂಸಿಕ್‌ ಕೇಳುವುದಕ್ಕೆ ಬ್ಲೂಟೂತ್‌ ಕನೆಕ್ಷನ್‌ ಇದೆ. ಡಿಸ್ಕ್‌ ಬ್ರೇಕ್‌, ಬ್ರೇಕ್ ಲಿವರ್ ಅಡ್ಜಸ್ಟ್‌ಮೆಂಟ್‌ ಎಲ್ಲವೂ ಸಾಧ್ಯ. ಟ್ರಿಪ್‌ಮೀಟರ್‌ ಸಂಚರಿಸಿದ ದೂರ ಮತ್ತು ಸಮಯವನ್ನೂ ತೋರಿಸುತ್ತದೆ. ಡಿಜಿಟಲ್‌ ಸ್ಪೀಡೋ ಮೀಟರ್‌ ಇದೆ. ಕ್ರೂಸ್‌ ಕಂಟ್ರೋಲ್‌ ಕೂಡ ಇದರಲ್ಲಿದೆ. ಮೇಲ್ನೋಟಕ್ಕೆ ಎಲ್ಲವೂ ಚೆನ್ನಾಗಿದೆ.

ಬರೋಬ್ಬರಿ 525 ಕಿ.ಮೀ ಮೈಲೇಜ್, 65 ಸಾವಿರ ರೂಪಾಯಿ; ಹೊಸ ಭೀಮ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಆದರೆ ಸ್ಕೂಟರ್‌ ಓಡಿಸುವಾಗ ಅನೇಕ ಓರೆಕೋರೆಗಳು ಒಂದೊಂದಾಗಿ ಗಮನಕ್ಕೆ ಬರುತ್ತವೆ. ಬೆಂಗಳೂರಿನ ಮೊದಲ ಮಳೆಗೇ ಬ್ಲೂಟೂಥ್‌ ಕೆಲಸ ಮಾಡುವುದನ್ನು ನಿಲ್ಲಿಸಿತು. ಮತ್ತೊಂದು ಮಳೆಗೆ ಹಾರ್ನ್‌ ಮೌನವಾಯಿತು. ಇಂಡಿಕೇಟರ್‌ ಮತ್ತು ಹಾರ್ನ್‌ ಸ್ವಿಚ್‌ಗಳನ್ನು ಎಷ್ಟು ದೂರದಲ್ಲಿ ಇಟ್ಟಿದ್ದಾರೆಂದರೆ ಅವು ಹೆಬ್ಬೆರಳಿಗೆ ನಿಲುಕುವುದಿಲ್ಲ. ಪ್ರತಿಸಲವೂ ಅದಕ್ಕಾಗಿ ಪರದಾಡಬೇಕಾಗುತ್ತದೆ.

ಹಾಕ್‌ ಪೂರ್ತಿ ಚಾರ್ಜ್‌ ಮಾಡಿದರೆ 170 ಕಿಲೋಮೀಟರ್‌ ಓಡುತ್ತದೆ ಎಂದು ಕಂಪೆನಿ ಹೇಳುತ್ತದೆ. ಆದರೆ ಅದು ನೂರು ಕಿಲೋಮೀಟರ್ ದಾಟಿದರೆ ಪುಣ್ಯ. ಅದರಲ್ಲೂ ಬ್ಯಾಟರಿ ಕ್ಷೀಣಿಸುತ್ತಾ ಬಂದ ಹಾಗೇ, ವೇಗ ಕಡಿಮೆಯಾಗುತ್ತಾ ಹೋಗುತ್ತದೆ. ರಿಸರ್ವ್‌ ಅಥವಾ ಕೆಂಪು ಪಟ್ಟಿ ತಲುಪಿದರಂತೂ ಸ್ಕೂಟರ್ ಓಡಿಸುವುದೇ ಒಂದು ಸಾಹಸ. ಅಂದಹಾಗೆ ಬ್ಯಾಟರಿ ಚಾರ್ಜಿಂಗ್‌ ಟೈಮ್‌ 4 ಗಂಟೆ ಎಂದು ಕಂಪೆನಿ ಹೇಳುತ್ತದೆ. ಅದು ನಿಜಕ್ಕೂ 8 ಗಂಟೆ.

ಇದರಲ್ಲಿ ಎರಡು ರೈಡಿಂಗ್ ಮೋಡ್‌ಗಳಿವೆ. ಮೊದಲನೆಯದು ನಿಧಾನಕ್ಕೆ, ಎರಡನೆಯದು ವೇಗಕ್ಕೆ. ನಿಧಾನವಾಗಿ ಹೋಗುವುದು ಕೊಂಚ ಕಷ್ಟದ ಕೆಲಸ. ಒಮ್ಮೆ ಹೈವೇ ತಲುಪಿದರೆ ನಂತರ ಪ್ರಯಾಣ ನಿರಾಯಾಸ.

212 ಕಿ.ಮೀ ಮೈಲೇಜ್, ಕೈಗೆಟುಕವ ದರ; ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಇದರ ಬೆಲೆ 1.17 ಲಕ್ಷ. ಮಿಕ್ಕ ಸ್ಕೂಟರುಗಳಿಗೆ ಹೋಲಿಸಿದರೆ ದುಬಾರಿ ಅಲ್ಲ. ಅಂದಚೆಂದಕ್ಕೂ ಮೋಸವಿಲ್ಲ. ಆದರೆ ಮುಖ್ಯವಾಗಿ ಕ್ಷಮತೆ, ದಕ್ಷತೆ ಮತ್ತು ಬಾಳಿಕೆಯ ಕುರಿತು ಇರುವ ಸಮಸ್ಯೆಗಳನ್ನು ನಿವಾರಿಸಿಕೊಂಡರೆ ನಗರ ಸವಾರಿಗೆ ಸುಗಮ ದಾರಿ ಆಗಬಹುದು. ಮ್ಯಾಕ್ಸಿಮಮ್‌ ಸ್ಪೀಡ್‌ 50.

ಅಂದಹಾಗೆ, ಇದರಲ್ಲಿ ಬೂಟ್‌ಸ್ಪೇಸ್‌ ಝೀರೋ. ಸೀಟಿನ ಅಡಿಯ ಪೆಟ್ಟಿಗೆಯ ತುಂಬ ಬ್ಯಾಟರಿ ತುಂಬಿಕೊಂಡು, ಅಲ್ಲಿ ಬೇರೇನು ಇಡುವುದಕ್ಕೂ ಜಾಗವಿಲ್ಲ. ಬ್ರೇಕ್‌ ಚೆನ್ನಾಗಿದೆ. ಡಿಸ್ಕ್‌ ಬ್ರೇಕ್‌ ಮತ್ತು ಡ್ರಮ್ ಬ್ರೇಕ್‌ಗಳಿವೆ. ಆದರೆ ಸಸ್ಪೆನ್ಶನ್‌ ಮಾತ್ರ ಕುದುರೆ ಸವಾರಿಯ ಅನುಭವ ಕೊಡುತ್ತದೆ.

Latest Videos
Follow Us:
Download App:
  • android
  • ios