ರಸ್ತೆ ರಿಪೇರಿ ಬಳಿಕ ಹೊಸ ರೂಲ್ಸ್ ಜಾರಿ; ನಿಟ್ಟುಸಿರು ಬಿಟ್ಟ ಸವಾರರು!
ಹೊಸ ಟ್ರಾಫಿಕ್ ನಿಯಮ ಜಾರಿಯಾಗುತ್ತಿದ್ದಂತೆ ಪರ ವಿರೋಧ ಕೇಳಿ ಬಂದಿದೆ. ಇದರಲ್ಲಿ ರಸ್ತೆ ರಿಪೇರಿ ಮಾಡಿ ಹೊಸ ನಿಯಮ ಜಾರಿ ಮಾಡಿ ಅನ್ನೋ ಒತ್ತಾಯ ಕೇಳಿ ಬಂದಿತ್ತು. ಇದೀಗ ಈ ಮಾತನ್ನು ಗಂಭೀರವಾಗಿ ಪರಿಗಣಿಸಿರುವ ನೆರೆ ರಾಜ್ಯ ರಸ್ತೆ ರಿಪೇರಿ ಬಳಿಕ ಹೊಸ ನಿಯಮ ಜಾರಿ ಮಾಡಲು ಮುಂದಾಗಿದೆ.
ಗೋವಾ(ಸೆ.10): ಹೊಸ ಟ್ರಾಫಿಕ್ ರೂಲ್ಸ್ ಜಾರಿಯಾಗಿ 10 ದಿನಗಳಾಗಿವೆ. ಆಗಲೇ ಕೋಟಿ ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ನಿಯಮ ಉಲ್ಲಂಘಿಸಿದವರು ದುಬಾರಿ ದಂಡ ಕಟ್ಟಿ ಸುಸ್ತಾಗಿದ್ದಾರೆ. ದುಬಾರಿ ಮೊತ್ತದ ದಂಡ ಜಾರಿಯಾಗುತ್ತಿದ್ದಂತೆ ವಿರೋಧಗಳು ಕೇಳಿ ಬಂದಿತ್ತು. ಇದರಲ್ಲಿ ಪ್ರಮುಖವಾಗಿ ಹಾಳಾದ, ಗುಂಡಿ ಬಿದ್ದ ರಸ್ತೆ ಸರಿಮಾಡಿ ನಿಯಮ ಜಾರಿ ಮಾಡಿ ಅನ್ನೋ ಕೂಗು ಕೂಡ ಕೇಳಿ ಬಂದಿತ್ತು. ಇದೀಗ ಗೋವಾದಲ್ಲಿ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: ಹೊಸ ಟ್ರಾಫಿಕ್ ರೂಲ್ಸ್: ವಾಹನ ಸವಾರರ ಐಡಿಯಾಗೆ ಪೊಲೀಸರೇ ದಂಗು!
ಹೊಸ ಟ್ರಾಫಿಕ್ ನಿಯಮ ಜಾರಿ ಬೆನ್ನಲ್ಲೇ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆದೇಶ ನೀಡಿದ್ದಾರೆ. ಗೋವಾದಲ್ಲಿ ರಸ್ತೆಗಳು ಸಂಪೂರ್ಣ ರಿಪೇರಿ ಮಾಡಿದ ಬಳಿಕಷ್ಟೇ ನೂತನ ಟ್ರಾಫಿಕ್ ನಿಯಮ ಜಾರಿಯಾಗಲಿದೆ ಎಂದಿದ್ದಾರೆ. ಹಾಳಾದ, ಗುಂಡಿ ಬಿದ್ದ ರಸ್ತೆಗಳಿಂದ ವಾಹನ ಸವಾರರು ಪರದಾಡುತ್ತಿದ್ದಾರೆ. ರಸ್ತೆ ಸರಿಯಿಲ್ಲದಿದ್ದರೆ, ಸವಾರರಿಂದ ದುಬಾರಿ ಮೊತ್ತ ಪಡೆಯುವುದು ಸಮಂಜಸವಲ್ಲ. ಹೀಗಾಗಿ ರಸ್ತೆ ರಿಪೇರಿ ಬಳಿಕ ಹೊಸ ನಿಯಮ ಜಾರಿಯಾಗಲಿದೆ ಎಂದು ಗೋವಾ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಜಾರಿಯಾಯ್ತು ಹೊಸ ರೂಲ್ಸ್; ಮನೆ ಮುಂದೆ ಕಾರು, ಶಾಲಾ ಹೊರಗಡೆ ಬಸ್ಸು ನಿಲ್ಸಿದ್ರೆ ದಂಡ!
ಪ್ರತಿಪಕ್ಷಗಳು ನೂತನ ಟ್ರಾಫಿಕ್ ನಿಯಮ ಜಾರಿಗೆ ವಿರೋಧ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲ ರಸ್ತೆ ರಿಪೇರಿಗೆ ಆಗ್ರಹಿಸಿತ್ತು. ಇದೀಗ ಪ್ರತಿಪಕ್ಷಗಳ ಸಲಹೆ ಪಡೆದಿರುವ ಗೋವಾ ಸಿಎಂ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
15 ರಿಂದ 20 ದಿನಗಳ ಒಳಗೆ ರಸ್ತೆ ರಿಪೇರಿ ಮಾಡುವಂತೆ PWD ಎಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಎಂಜೀನಿಯರ್‌ಗಳು ಖುದ್ದು ನಿಂತು ರಿಪೇರಿ ಮಾಡಿಸಲು ಸೂಚಿಸಿದ್ದಾರೆ. ಇನ್ನು ಡಿಸೆಂಬರ್‌ನಲ್ಲಿ ರಸ್ತೆ ರಿಪೇರಿ ಪರಾಮರ್ಶಿಸಿ ಹೊಸ ನಿಯಮ ಜಾರಿಗೊಳಿಸಲಾಗುವುದು ಎಂದು ಪ್ರಮೋದ್ ಸಾವಂತ್ ಹೇಳಿದ್ದಾರೆ. ಗೋವಾ ಮುಖ್ಯಮಂತ್ರಿ ಆದೇಶದಿಂದ ಗೋವಾ ಸವಾರರು ನಿಟ್ಟುಸಿರು ಬಿಟ್ಟಿದ್ದಾರೆ. ಕನಿಷ್ಠ 3 ತಿಂಗಳ ಕಾಲ ಗೋವಾದಲ್ಲಿ ಹೊಸ ಟ್ರಾಫಿಕ್ ನಿಯಮ ಅನ್ವಯವಾಗೋದಿಲ್ಲ.
ಇದನ್ನೂ ಓದಿ: ಸವೆದಿರುವ ಟೈರ್‌ಗೂ ದಂಡ ಬೀಳುತ್ತೆ!
ಗೋವಾ ಮುಖ್ಯಮಂತ್ರಿ ಆದೇಶದ ಬೆನ್ನಲ್ಲೇ ಕರ್ನಾಟಕದಲ್ಲೂ ಇದೇ ರೀತಿ ಅನುಸರಿಸಲು ಒತ್ತಾಯ ಕೇಳಿಬರುತ್ತಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ರಸ್ತೆಗಳು ಸರಿಪಡಿಸಿದ ಬಳಿಕವಷ್ಟೇ ಹೊಸ ನಿಯಮ ಜಾರಿ ಮಾಡಿ. ಸದ್ಯ ಜಾರಿಯಾಗಿರುವ ನೂತನ ನಿಯಮ ಹಿಂಪಡೆಯಿರಿ ಅನ್ನೋ ಕೂಗು ಕೇಳಿಬರುತ್ತಿದೆ.ಸಾಮಾಜಿಕ ಜಾಲತಾಣದಲ್ಲಿ ಅಭಿಯಾನಗಳು ಆರಂಭವಾಗುತ್ತಿದೆ.