ಬರುತ್ತಿದೆ ಹೊಚ್ಚ ಹೊಸ ಮಸರಾತಿ ಗ್ರೇಕೇಲ್ SUV ಕಾರು!
ಬಾಲಿವುಡ್ ನಟಿ ಸನ್ನಿ ಲಿಯೋನ್ ಮಸೆರಾತಿ ಘಿಬ್ಲಿ ಕಾರು ಖರೀದಿಸಿದ ಬಳಿಕ ಕಳೆದ ಕೆಲದಿನಗಳಿಂದ ಭಾರತದಲ್ಲಿ ಮಸೆರಾತಿ ಕಾರು ಭರ್ಜರಿ ಸದ್ದು ಮಾಡುತ್ತಿದೆ. ಇದೀಗ ಮಸೆರಾತಿ ಗ್ರೇಕೇಲ್ SUV ಕಾರು ಬಿಡುಗಡೆಗೆ ಸಜ್ಜಾಗುತ್ತಿದೆ. ನೂತನ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಇಟಲಿ(ಸೆ.13): ಮಸೆರಾತಿ ಬ್ರ್ಯಾಂಡ್ ಕಾರುಗಳು ಭಾರತದಲ್ಲಿ ಹೆಚ್ಚು ಜನಪ್ರಿಯವಾಗಿದೆ. ಐಷಾರಾಮಿ ಹಾಗೂ ದುಬಾರಿ ಕಾರುಗಳ ಪೈಕಿ ಮೆಸರಾತಿ ಮುಂಚೂಣಿಯಲ್ಲಿದೆ. ಬಾಲಿವುಡ್ ಸೆಲೆಬ್ರೆಟಿಗಳು ಮೆಸರಾತಿ ಕಾರಿನ ಹಿಂದೆ ಬಿದ್ದಿರುವುದು ಹೊಸದೇನಲ್ಲ. ಇತ್ತೀಚೆಗೆ ನಟಿ ಸನ್ನಿ ಲಿಯೋನ್ 3ನೇ ಮೆಸರಾತಿ ಬ್ರ್ಯಾಂಡ್ ಕಾರು ಖರೀದಿಸಿದ್ದರು. ಇದೀಗ ಇಟಲಿ ಮೂಲದ ಮೆಸರಾತಿ ಹೊಚ್ಚ ಹೊಸ ಗ್ರೇಕೇಲ್ ಅನ್ನೋ SUV ಕಾರು ಬಿಡುಗಡೆ ಮಾಡಲು ಸಜ್ಜಾಗಿದೆ.
ಸನ್ನಿ ಲಿಯೋನ್ ಖರೀದಿಸಿದ ಮಸರಾಟಿ ಘಿಬ್ಲಿ ಕಾರಿನ ವಿಶೇಷತೆ ಏನು?
ಇಟಲಿಯ ಕ್ಯಾಸಿನೋ ಮೆಸರಾತಿ ಪ್ಲಾಂಟ್‌ನಲ್ಲಿ ನೂತನ ಗ್ರೇಕೇಲ್ ಕಾರು ನಿರ್ಮಾಣವಾಗಲಿದೆ. ಇದೀಗ ನೂತನ ಗ್ರೇಕೇಲ್ ಕಾರು ಉತ್ಪಾದನೆಗೆ ಮೆಸರಾತಿ ಕಂಪನಿ 800 ಮಿಲಿಯನ್ ಯೂರೋ ಹಣವನ್ನು ವಿನಿಯೋಗಿಸುತ್ತಿದೆ. ನೂತನ ಕಾರಿನ ಗ್ರೇಕೇಲ್ ಹೆಸರಿನ ಹಿಂದೆ ಕುತೂಹಲದ ಕಾರಣವಿದೆ. ಮೆಡಿಟೇರಿಯನ್ ಸಮುದ್ರದ ಈಶಾನ್ಯ ಭಾಗದಲ್ಲಿ ಬೀಸುವ ಗಾಳಿಗೆ ಗ್ರೇಕೇಲ್ ಎಂಬ ಹೆಸರಿದೆ. ಈ ಗಾಳಿಯಂತೆ ವೇಗವಾಗಿ ಚಲಿಸಬಲ್ಲ ಕಾರು ಅನ್ನೋ ಅರ್ಥದಲ್ಲಿ ಗ್ರೇಕೆಲ್ ಎಂಬ ಹೆಸರಿಡಲಾಗಿದೆ.
ಮೆಸರಾತಿ ಘಿಬ್ಲಿ, ಬೊರಾ, ಮೆರಾಕ್, ಖಮಾಸಿನ್ ಕಾರಿನ ಹೆಸರಿನಲ್ಲಿ ಇದೇ ರೀತಿ ಕುತೂಹಲ ಅಂಶವಿದೆ. ಈ ರೀತಿಯ ಸಂಪ್ರದಾಯವನ್ನು ಮೆಸರಾತಿ 1963ರಲ್ಲಿ ಆರಂಭಿಸಿತು. ಬಳಿಕ ತನ್ನ ಎಲ್ಲಾ ಕಾರಿಗೆ ಇದೇ ರೀತಿಯ ಹೆಸರುಗಳನ್ನಿಟ್ಟಿದೆ. 2016ರಲ್ಲಿ ಬಿಡುಗಡೆಯಾದ ಲೆವಾಂಟೆ ಕಾರು ಇದಕ್ಕೆ ಹೊರತಾಗಿಲ್ಲ.
ಹೊಚ್ಚ ಹೊಸ ಮಸೆರಾತಿ ಗ್ರೇಕೇಲ್ SUV ಕಾರಿನ ಟೀಸರ್ ಬಿಡುಗಡೆ ಮಾಡಲಾಗಿದೆ. ಸದ್ಯ ನೂತನ ಕಾರಿನ ಎಂಜಿನ್ ಪವರ್, ಬೆಲೆ ಕುರಿತು ಮಾಹಿತಿ ಬಹಿರಂಗವಾಗಿಲ್ಲ. ಆದರೆ ಮೈಲ್ಡೈ ಹೈಬ್ರಿಡ್ ಕಾರು ಅನ್ನೋ ಮಾತುಗಳು ಕೇಳಿಬರುತ್ತಿದೆ. ಇನ್ನು 2021ರಲ್ಲಿ ಕಾರು ಉತ್ಪಾದನೆ ಆರಂಭಗೊಳ್ಳಲಿದೆ ಎಂದು ಮೆಸರಾತಿ ಹೇಳಿದೆ.