ಕಾಸರಗೋಡು(ಏ.01): ಕೊರೋನಾ ವೈರಸ್ ಹರಡುತ್ತಿದೆ, ದೇಶ ಲಾಕ್‌ಡೌನ್ ಮಾಡಲಾಗಿದೆ, ಎಲ್ಲರೂ ಸುರಕ್ಷಿತವಾಗಿ ಮನೆಯಲ್ಲೇ ಇರಿ ಎಂದರೆ ಕೆಲವರಿಗೆ ಇದ್ಯಾವುದು ಇನ್ನೂ ಕಿವಿಗೆ ಬಿದ್ದಿಲ್ಲ. ಟ್ರಾಫಿಕ್ ಇಲ್ಲ, ದಾರಿ ಖಾಲಿಯಾಗಿದೆ, ಇದು ಜಾಲಿ ಡ್ರೈವ್, ಲಾಂಗ್ ಡ್ರೈವ್‌ಗ ಸರಿಯಾದ ಸಮಯ ಎಂದುಕೊಳ್ಳುವವರೂ ಇದ್ದಾರೆ. ಆರೋಗ್ಯ ತುರ್ತು ಪರಿಸ್ಥಿತಿ ಕುರಿತು ಯೋಚನೆ ಮಾಡದೇ ಜಾಲಿ ಡ್ರೈವ್‌ಗೆ ಹೊರಟವನ ಅಸಲಿ ಕತೆ ಇದು.

ಅನಗತ್ಯವಾಗಿ ರಸ್ತೆಗಿಳಿದ ವಾಹನ ಜಪ್ತಿ; ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಕಮಿಷನರ್ ವಾರ್ನಿಂಗ್!.

ಪ್ರಧಾನಿ ಮೋದಿ ಲಾಕ್‌ಡೌನ್ ಘೋಷಣೆ ಮಾಡುವ ಒಂದು ದಿನ ಮೊದಲು ತಾನು ಬುಕ್ ಮಾಡಿದ ಹೊಸ ಕಾರು ಕೈಸೇರಿದೆ.  ಹೊಸ ಕಾರು ಬಂದಾಗ ಜಾಲಿ ಡ್ರೈವ್ ಅಥವಾ ಲಾಂಗ್ ಡ್ರೈವ್ ಹೋಗುವುದು ಸಾಮಾನ್ಯ. ಆದರೆ ಸದ್ಯದ ಪರಿಸ್ಥಿತಿ ಹಾಗಿಲ್ಲ. ಕೊರೋನಾ ವೈರಸ್ ಹರಡುತ್ತಿರುವ ಭೀತಿಯಲ್ಲಿ ಎಲ್ಲರೂ ಮನೆಯಲ್ಲಿರುವುದು ಸುರಕ್ಷಿತ. ಇದೆ ಕಾರಣಕ್ಕೆ ಲಾಕ್‌ಡೌನ್ ಮಾಡಲಾಗಿದೆ. ಆದರೆ ಇದನ್ನು ಗಾಳಿಗೆ ತೂರಿದ ಕಾಸರಗೋಡಿನ ರಿಯಾಝ್ ತನ್ನ ನೂತನ ಮಾರುತಿ ಸ್ವಿಫ್ಟ್ ಕಾರಿನಲ್ಲಿ ತನ್ನೂರಿನ ಪಟ್ಟಣ ಸುತ್ತಾಡಲು ಹೊರಟಿದ್ದಾನೆ.

ಆಲಂಬಾಡಿ ತಲುಪುತ್ತಿದ್ದಂತೆ ಲಾಕ್‌ಡೌನ್ ಆದೇಶ ಜಾರಿಯಲ್ಲಿರುವ ಕಾರಣ ಹಾಗೂ ಕಾಸರಗೋಡಿನಲ್ಲಿ ಕೊರೋನಾ  ವೈರಸ್ ಪರಿಸ್ಥಿತಿ ಗಂಭೀರವಾಗಿರುವ ಪೊಲೀಸರು ಕಾರು ನಿಲ್ಲಿಸಲು ಸೂಚಿಸಿದ್ದಾರೆ. ಆದರೆ ರಿಯಾಜ್ ಕಾರಿನ ವೇಗ ಹೆಚ್ಚಿಸಿದ್ದಾನೆ, ಇಷ್ಟೇ ಅಲ್ಲ ಪೊಲೀಸರ ಸೂಚನೆ ಧಿಕ್ಕರಿ ಮುಂದೆ ಸಾಗಿದ್ದಾನೆ. ಇತ್ತ ಪೊಲೀಸರು ಇತರ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೀಗೆ ಪೊಲೀಸರಿಗೆ ತಪ್ಪಿಸಿಕೊಂಡು ರಿಯಾಜ್ ಪಕ್ಕದ ಜಿಲ್ಲೆ ಕಣ್ಣೂರಿಗೆ ತಲುಪಿದ್ದಾನೆ. ಕಾಸರಗೋಡಿನ ವ್ಯಕ್ತಿ ಪೊಲೀಸರ ಸೂಚನೆ ದಿಕ್ಕರಿಸಿ ಕಣ್ಣೂರಿನತ್ತ ಪ್ರಯಾಣ ಮಾಡುತ್ತಿದ್ದಾನೆ ಅನ್ನೋ ಸುದ್ದಿ ಕೇರಳ ಮಾಧ್ಯಮದಲ್ಲಿ ದೊಡ್ಡ ಸುದ್ದಿಯಾಯಿತು. ಕಾರಣ ಕೇರಳದ 234 ಕೊರೋನಾ ಕೇಸ್‌ಗಳಲ್ಲಿ 107 ಕೇಸ್ ಕಾರಸರಗೋಡಿನಲ್ಲಿ ದೃಢಪಟ್ಟಿದೆ. ಕೆಂಪು ಬಣ್ಣದ ಸ್ವಿಫ್ಟ್ ಕಾರು ಎಂದೆಲ್ಲಾ ಮಾಧ್ಯಮದಲ್ಲಿ ಸುದ್ದಿ ಬಿತ್ತರವಾಯಿತು.

ಮೊದಲೆೇ ಕೊರೋನಾದಿಂದ ಕಂಗಾಲಾಗಿದ್ದ ಕಣ್ಣೂರಿನ ಜನತೆಗೆ ಕಾಸರಗೋಡಿನಿಂದ ಕೊರೋನಾ ಹೊತ್ತು ವ್ಯಕ್ತಿಯೋರ್ವ ಕಣ್ಣೂರಿನತ್ತ ಬರುತ್ತಿದ್ದಾನೆ ಅನ್ನೋ ಸುದ್ದಿ ಸಿಕ್ಕಿದೆ. ಗ್ರಾಮಸ್ಥರು ಈ ಕಾರಿಗಾಗಿ ರಸ್ತೆ ಅಡ್ಡಗಟ್ಟಿ ಕಾದುಕುಳಿತಿದ್ದಾರೆ. ಕೆಲ ಹೊತ್ತಲ್ಲೇ ಕೆಂಪು ಬಣ್ಣದ ಕಾರು ಆಗಮಿಸಿದೆ. ಕಲ್ಲುಗಳನಿಟ್ಟು ರಸ್ತೆ ತಡೆ ಮಾಡಿದ್ದ ಕಾರಣ ಮುಂದೆ ಚಲಿಸಲು ಸಾಧ್ಯವಾಗದ ರಿಯಾಝ್ ತಕ್ಷಣ ಕಾರನ್ನು ಹಿಂದಕ್ಕೆ ತಿರುಗಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಹಿಂಭಾಗದ ರಸ್ತೆಯಲ್ಲಿ ಕಲ್ಲು ಎತ್ತಿಹಾಕಿದ ಗ್ರಾಮಸ್ಥರು ರಿಯಾಝ್‌ಗೆ ಕಾರಿನಿಂದ ಇಳಿಯಲು ಸೂಚಿಸಿದ್ದಾರೆ.

ಗ್ರಾಮಸ್ಥರ ಪ್ರಶ್ನೆಗೆ ತಡಬಡಾಯಿಸಿದ ರಿಯಾಝ್ ಸ್ಪಷ್ಟ ಉತ್ತರ ನೀಡಲು ಸಾಧ್ಯವಾಗಿಲ್ಲ. ಇಷ್ಟೇ ಅಲ್ಲ ಹೊಸ ಕಾರಿಗೆ ರಸ್ತೆ ತೆರಿಗೆ ಪಾವತಿಸಿದ್ದೇನೆ ತಡೆಯಲು ನೀವ್ಯಾರು ಎಂದಿದ್ದಾನೆ. ರೊಚ್ಚಿಗೆದ್ದ ಗ್ರಾಮಸ್ಥರು, ಶಾಂತವಾಗಿರುವ ಕಣ್ಣೂರಿನಲ್ಲಿ ಕೊರೋನಾ ಹರಡುತ್ತಿಯಾ ಎಂದು ರಿಯಾಝ್‌ನನ್ನು ಕಟ್ಟಿ ಹಾಕಿ ಥಳಿಸಿದ್ದಾರೆ. ಇಷ್ಟೇ ಅಲ್ಲ ಆತನ ಹೊಸ ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಗಾಜು ಪುಡಿ ಮಾಡಿದ್ದಾರೆ. ಕಾರಿನ್ನು ಕಲ್ಲಿನಿಂದ ಜಜ್ಜಿದ್ದಾರೆ. 

ಈ ವೇಳೆ ಗ್ರಾಮಸ್ಥರು ಕಾಸರಗೋಡಿನ ವ್ಯಕ್ತಿಯನ್ನು ಹಿಡಿದ ಸುದ್ದಿ ತಿಳಿದ ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿ ರಿಯಾಝ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಮೂಲಕ ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಪ್ಪಿಸಿದ್ದಾರೆ. ಬಳಿಕ ರಿಯಾಝ್ ಮೇಲೆ ಅತೀ ವೇಗದ ಚಲಾವಣೆ, ಲಾಕ್‌ಡೌನ್ ಆದೇಶ ಉಲ್ಲಂಘನೆ, ಪೊಲೀಸರ ಸೂಚನೆ ಉಲ್ಲಂಘನೆ ಕೇಸ್ ದಾಖಲಿಸಿದ್ದಾರೆ.