ನವದೆಹಲಿ(ಆ.14): ಪರಿಸರಸ್ನೇಹಿ ವಾಹನ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಬ್ಯಾಟರಿ ರಹಿತವಾಗಿ ಇ-ವಾಹನಗಳ ಮಾರಾಟ ಹಾಗೂ ನೋಂದಣಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 

ಬ್ಯಾಟರಿಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಬ್ಯಾಟರಿ ಇಲ್ಲದೆಯೇ ಮಾರಾಟ ಹಾಗೂ ನೋಂದಣಿ ಮಾಡಬಹುದು ಎಂದು ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ರಾಜ್ಯಗಳಿಗೆ ಅಧಿಸೂಚನೆ ಹೊರಡಿಸಿದೆ. ಇ-ವಾಹನದ ಒಟ್ಟು ವೆಚ್ಚದ ಶೇ.30-40ರಷ್ಟು ಬ್ಯಾಟರಿಗೇ ತಗಲುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ. 

ಈ ನಿರ್ಧಾರದಿಂದಾಗಿ ವಾಹನದ ವೆಚ್ಚ ತಗ್ಗಲಿದ್ದು, ಮಾರಾಟ ಏರಿಕೆಯಾಗಬಹುದು ಎನ್ನುವುದು ಸರ್ಕಾರದ ಅಂದಾಜು. ಇದೇ ವೇಳೆ ಬ್ಯಾಟರಿ ವೆಚ್ಚ ಆಧರಿಸಿ ಇ-ವಾಹನಗಳಿಗೆ ಸಬ್ಸಿಡಿ ನೀಡಲಾಗುತ್ತಿದ್ದು, ಇನ್ನು ಮುಂದೆ ಹೇಗೆ ನೀಡಲಾಗುತ್ತದೆ ಎನ್ನುವುದರ ಬಗ್ಗೆ ಎನ್ನುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರದ ಈ ನಿರ್ಧಾರವನ್ನು ವಾಹನ ಕಂಪನಿಗಳು ಸ್ವಾಗತಿಸಿವೆ.

ಮಾರ್ಚ್‌ನಲ್ಲಿ  ಮಾರಾಟ ಆಗಿದ್ದ ಬಿಎಸ್‌ 4 ವಾಹನ ನೋಂದಣಿಗೆ ಅಸ್ತು

ನವದೆಹಲಿ: ಮಾರ್ಚ್‌ನಲ್ಲಿ ಮಾರಾಟವಾಗಿದ್ದ ಆದರೆ, ಲಾಕ್‌ಡೌನ್‌ನಿಂದಾಗಿ ನೋಂದಣಿ ಮಾಡಿಸಲು ಸಾಧ್ಯವಾಗದೆ ಇದ್ದ ಬಿಎಸ್‌-4 ವಾಹನಗಳ ನೋಂದಣಿಗೆ ಅವಕಾಶ ಕಲ್ಪಿಸಿ ಸುಪ್ರೀಂಕೋರ್ಟ್‌ ಗುರುವಾರ ಆದೇಶ ಹೊರಡಿಸಿದೆ. ಆದರೆ, ಈ ಆದೇಶ ಲಾಕ್‌ಡೌನ್‌ ಬಳಿಕ ಮಾರಾಟವಾಗಿರುವ ಬಿಎಸ್‌-4 ವಾಹನಗಳಿಗೆ ಅನ್ವಯ ಆಗುವುದಿಲ್ಲ. 

ಭಾರತದ ಪ್ರಧಾನಿ ಮೋದಿ ಬಳಸುವ ಹಲವು ಕಾರುಗಳ ಗುಟ್ಟು ಇಲ್ಲಿವೆ

ಲಾಕ್‌ಡೌನ್‌ ತೆರವಾಗುತ್ತಿದ್ದಂತೆ 10 ದಿನಗಳ ಕಾಲ ಬಿಎಸ್‌4 ವಾಹನಗಳನ್ನು ಮಾರಾಟ ಮಾಡಬಹುದು ಎಂದು ಮಾ.27ರಂದು ಸುಪ್ರೀಂಕೋರ್ಟ್‌ ಆದೇಶ ಹೊರಡಿಸಿತ್ತು. ಆದರೆ ಅದನ್ನು ಜು.8ರಂದು ಹಿಂಪಡೆದುಕೊಂಡಿತ್ತು. 

ದಾಖಲೆಗಳ ಪ್ರಕಾರ, ಮಾ.12ರಿಂದ ಮಾ.31ರವರೆಗೆ 9.56 ಲಕ್ಷ ವಾಹನಗಳು ಮಾರಾಟವಾಗಿವೆ. ಆ ಪೈಕಿ 9.01 ಲಕ್ಷ ವಾಹನಗಳಷ್ಟೇ ನೋಂದಣಿಯಾಗಿವೆ. 2020ರ ಏ.1ರಿಂದ ಬಿಎಸ್‌4 ವಾಹನಗಳನ್ನು ಮಾರುವಂತಿಲ್ಲ, ನೋಂದಣಿ ಮಾಡುವಂತಿಲ್ಲ ಎಂದು 2018ರ ಅಕ್ಟೋಬರ್‌ನಲ್ಲಿ ಸುಪ್ರೀಂಕೋರ್ಟ್‌ ಆದೇಶಿಸಿತ್ತು.