ಬಜೆಟ್ ಬೆನ್ನಲ್ಲೇ ಮತ್ತೊಂದು ಶಾಕ್; ಆಟೋಮೊಬೈಲ್ ಮಾರಾಟ ಕುಸಿತ!
ಕೇಂದ್ರ ಸರ್ಕಾರ 2020ರ ಸಾಲಿನ ಬಜೆಟ್ ಮಂಡಿಸಿದೆ. ಈ ಬಾರಿಯ ಬಜೆಟ್ ಮೇಲೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಭಾರತೀಯ ಆಟೋಮೊಬೈಲ್ ಕ್ಷೇತ್ರಕ್ಕೆ ತೀವ್ರ ನಿರಾಸೆಯಾಗಿತ್ತು. ಕಾರಣ GST(ತೆರಿಗೆ) ಕಡಿತ ಸೇರಿದಂತೆ ಹಲವು ಘೋಷಣೆ ಹುಸಿಯಾಯಿತು. ಇದರ ಬೆನ್ನಲ್ಲೇ ಹೊಸ ವರ್ಷದ ಸೇಲ್ಸ್ ರಿಪೋರ್ಟ್ ಬಹಿರಂಗವಾಗಿದ್ದು, ಮತ್ತೊಂದು ಆಘಾತವಾಗಿದೆ.
ನವದೆಹಲಿ(ಫೆ.02): ವಿತ್ತ ಸಚಿವೆ ನಿರ್ಮಲಾ ಸೀತಾರಾಮಮ್ ಮಂಡಿಸಿದ ಬಜೆಟ್ ಭಾರತೀಯ ಆಟೋಮೊಬೈಲ್ ಕಂಪನಿಗಳಿಗೆ ಖುಷಿ ತಂದಿಲ್ಲ. ಬದಲಾಗಿ ತೀವ್ರ ನಿರಾಸೆ ಮೂಡಿಸಿತ್ತು. 2019ರ ಮಧ್ಯಭಾಗದಿಂದ ಭಾರತದಲ್ಲಿ ವಾಹನ ಮಾರಾಟ ಕುಸಿತ ತೀವ್ರವಾಗಿತ್ತು. ಇದನ್ನು ಮೇಲಕ್ಕೆತ್ತೋ ನಿಟ್ಟಿನಲ್ಲಿ ಕೇಂದ್ರ ಬಜೆಟ್ ಮೂಲಕ ಹಲವು ಘೋಷಣೆ ನಿರೀಕ್ಷಿಸಲಾಗಿತ್ತು. ಅದು ಹುಸಿಯಾಯಿತು. ಇದರ ಬೆನ್ನಲ್ಲೇ ಜನವರಿ ತಿಂಗಳ ವಾಹನ ಮಾರಾಟ ವರದಿ ಕೂಡ ಆಟೋ ಕಂಪನಿಗಳಿಗೆ ಪೂರಕವಾಗಿಲ್ಲ.
ಇದನ್ನೂ ಓದಿ: ಕೇಂದ್ರ ಬಜೆಟ್ 2020; ಆಟೋಮೊಬೈಲ್ ಕ್ಷೇತ್ರ ಕೇಳಿದ್ದೇನು? ಸಿಕ್ಕಿದ್ದೇನು?
ಭಾರತದಲ್ಲಿ ವ್ಯವಹರಿಸುತ್ತಿರುವ ಎಲ್ಲಾ ಆಟೋಮೊಬೈಲ್ ಕಂಪನಿಗಳು ಮಾರಾಟದಲ್ಲಿ ಕುಸಿತ ಕಂಡಿದೆ. ಕಳೆದ ವರ್ಷದ ಅಂತ್ಯದಲ್ಲಿ ದೀಪಾವಳಿ ಹಬ್ಬ ಸೇರಿದಂತೆ ಹಲವು ಹಬ್ಬಗಳಲ್ಲಿ ವಾಹನ ಮಾರಾಟ ಚೇತರಿಕೆ ಕಂಡಿತ್ತು. ಆದರೆ 2020ರ ಆರಂಭದಲ್ಲೇ ಕುಸಿತ ಕಂಡಿದೆ.
ಇದನ್ನೂ ಓದಿ: ಭಾರತದ ಕಾರುಗಳಿಗೆ ನಡುಕ, ಚೀನಾ ಗ್ರೇಟ್ ವಾಲ್ ಮೋಟಾರ್ಸ್ ಆಗಮನ!
ಹ್ಯುಂಡೈ ಮೋಟಾರ್ಸ್2020ರ ಜನವರಿ ತಿಂಗಳಲ್ಲಿ ಒಟ್ಟು 52,002 ವಾಹನ ಮಾರಾಟವಾಗೋ ಮೂಲಕ 3.37% ಕುಸಿತ ಕಂಡಿದೆ. 2019ರ ಜನವರಿಯಲ್ಲಿ ಹ್ಯುಂಡೈ 53,813 ವಾಹನ ಮಾರಾಟ ಮಾಡಿತ್ತು. ಟಾಟಾ ಮೋಟಾರ್ಸ್ ಡೊಮೆಸ್ಟಿಕ್ ಸೇಲ್ಸ್ ಬರೋಬ್ಬರಿ 18 % ಕುಸಿತ ಕಂಡಿದೆ. 2020ರ ಜನವರಿಯಲ್ಲಿ 45,242 ಟಾಟಾ ವಾಹನ ಮಾರಾಟವಾಗಿದ್ದರೆ, 2019ರ ಜನವರಿಯಲ್ಲಿ 54,915 ವಾಹನ ಮಾರಾಟವಾಗಿತ್ತು.
ವಾಹನ ಖರೀದಿಗೆ ಬ್ಯಾಂಕ್ ಲೋನ್ ಸಿಗುತ್ತಿಲ್ಲ; ಮತ್ತೆ ಸಂಕಷ್ಟಕ್ಕೆ ಸಿಲುಕಿದ ಆಟೋ ಇಂಡಸ್ಟ್ರಿ!
ಮಹೀಂದ್ರ & ಮಹೀಂದ್ರ ಕಂಪನಿ ಜನವರಿ ತಿಂಗಳ ಮಾರಾಟದಲ್ಲಿ 6% ಕುಸಿತ ಕಂಡಿದೆ. 2020ರ ಜನವರಿಯಲ್ಲಿ ಮಹೀಂದ್ರ 52,546 ವಾಹನ ಮಾರಾಟವಾಗಿದೆ. 2019ರ ಜನವರಿಯಲ್ಲಿ 55,722 ಕಾರು ಮಾರಾಟವಾಗಿತ್ತು. ಹೊಂಡಾ ಕಾರು ಬರೋಬ್ಬರಿ 71% ಮಾರಾಟ ಕುಸಿತ ಕಂಡಿದೆ.
ಕೇವಲ ಕಾರು ಮಾರಾಟ ಮಾತ್ರವಲ್ಲ, ಬೈಕ್ ಸ್ಕೂಟರ್ ಸೇರಿದಂತೆ ಭಾರತದಲ್ಲಿನ ಎಲ್ಲಾ ವಾಹನಗಳ ಮಾರಾಟ ಕುಸಿತ ಗೊಂಡಿದೆ. ರಾಯಲ್ ಎನ್‌ಫೀಲ್ಡ್ 13% ಕುಸಿತ, ಹೀರೋ ಮೋಟಾರ್ಸ್ 13.90 % ಕುಸಿತ ಕಂಡಿದೆ.
ಎಲ್ಲಾ ಆಟೋಮೊಬೈಲ್ ಕಂಪನಿಗಳು ಜನವರಿ 2020ರಲ್ಲಿ ನಷ್ಟ ಅನುಭವಿಸಿದರೆ, ಮಾರುತಿ ಸುಜುಕಿ 1.7% ಏರಿಕೆ ಕಂಡಿದೆ. ಈ ಮೂಲಕ ಭಾರತದಲ್ಲಿ ಕುಸಿತ ಕಾಣದ ಏಕೈಕ ಸಂಸ್ಥೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.