ಖಾಸಗಿ ಕಾರುಗಳಿಗೆ ನಿರ್ಬಂಧ-ಮಾಲಿನ್ಯ ತಡೆಗೆ ಬೇರೆ ದಾರಿಯಿಲ್ಲ!
ವಾಹನಗಳಿಂದ ಮಾಲಿನ್ಯ ಹೆಚ್ಚಾಗುತ್ತಿರುವುದ ಗೊತ್ತಿರದ ವಿಷಯವೇನಲ್ಲ. ಇದೀಗ ಮಾಲಿನ್ಯ ನಿಯಂತ್ರಣಕ್ಕೆ ಖಾಸಗಿ ಕಾರುಗಳ ಬಳಕೆಗೆ ನಿರ್ಬಂಧ ವಿಧಿಸಲು ಎಲ್ಲಾ ತಯಾರಿ ನಡೆಯುತ್ತಿದೆ. ಈ ನೂತನ ನಿಯಮ ಜಾರಿಯಾದರೆ ರಾಜಧಾನಿಯಲ್ಲಿ ಖಾಸಗಿ ಕಾರು ಬಳಕೆ ಮಾಡುವಂತಿಲ್ಲ.
ನವದೆಹಲಿ(ಅ.30): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನಗಳ ದಟ್ಟಣೆಯಿಂದ ಮಾಲಿನ್ಯ ಹತೋಟಿಗೆ ಬರುತ್ತಿಲ್ಲ. ವಾಹನಗಳಿಂದ ಹೊರಬರುತ್ತಿರುವ ಹೊಗೆಯಿಂದ(Toxic smog) ದೆಹಲಿಯ ಜನತೆ ಉಸಿರಾಡಲು ಪರದಾಡುತ್ತಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ದೆಹಲಿಯಲ್ಲಿ ಖಾಸಗಿ(ಪ್ರೈವೇಟ್ ಬೋರ್ಡ್) ಕಾರುಗಳಿಗೆ ನಿರ್ಬಂಧ ವಿಧಿಸುವ ಸಾಧ್ಯತೆ ಹೆಚ್ಚಿದೆ.
ದೆಹಲಿ ಮಾಲಿನ್ಯ ತಡೆಗೆ ಸುಪ್ರೀಂ ಕೋರ್ಟ್ ನೇಮಿಸಿರುವ ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ(EPCA)ಇದೀಗ ದೆಹಲಿಯಲ್ಲಿ ಓಡಾಡೋ ಖಾಸಗಿ ಕಾರುಗಳಿಗೆ ನಿಷೇಧ ಹೇರಲು ಚಿಂತನೆ ನಡೆಸಿದೆ.
15 ವರ್ಷ ಹಳೆಯದಾದ ಪೆಟ್ರೋಲ್ ಹಾಗೂ 10 ವರ್ಷ ಹಳೆಯದಾದ ಡೀಸೆಲ್ ಕಾರುಗಳಿಗೆ ಈಗಾಗಲೇ ನಿರ್ಬಂಧ ಹೇರಲಾಗಿದೆ. ನವೆಂಬರ್ ತಿಂಗಳಿಂದ ಇದು ಜಾರಿಗೆ ಬರಲಿದೆ. ನವೆಂಬರ್ ತಿಂಗಳಲ್ಲಿ ದೆಹಲಿ ಮಾಲಿನ್ಯ ಫಲಿತಾಂಶದ ಆಧಾರದ ಮೇಲೆ ಖಾಸಗಿ ಕಾರುಗಳ ಬಳಕೆ ನಿಷೇಧ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು EPCA ಹೇಳಿದೆ.
ಮಾಲಿನ್ಯ ತಡೆಗೆ ನೂತನ ನಿಯಮ ಜಾರಿಯಾದರೆ ದೆಹಲಿ ನಗರದೊಳಗೆ ಖಾಸಗಿ ಕಾರು ಬಳಸುವಂತಿಲ್ಲ. ಎಲ್ಲರೂ ಸಾರ್ವಜನಿಕ ಸಾರಿಗೆ ಸೌಲಭ್ಯವನ್ನ ಉಪಯೋಗಿಸಬೇಕು. ಈ ಮೂಲಕ ದೆಹಲಿ ಮಾಲಿನ್ಯ ತಡೆ ನಿಯಂತ್ರಿಸಲು ಸಾಧ್ಯ ಎಂದು EPCA ಸರ್ಕಾರಕ್ಕೆ ವರದಿ ನೀಡಿದೆ.