ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಉದ್ಯೋಗ ಕಡಿತ; ಸೂಚನೆ ನೀಡಿದ ACMA
ಕೊರೋನಾ ವೈರಸ್, ಲಾಕ್‌ಡೌನ್ ಕಾರಣ ದಿಂದ ಭಾರತದ ಆಟೋಮೊಬೈಲ್ ಇಂಡಸ್ಟ್ರಿ ಸರಿಸುಮಾರು 2 ತಿಂಗಳು ಹೆಚ್ಚು ಕಾಲ ಸ್ಥಗಿತಗೊಂಡಿದ್ದು. ಇದೀಗ ಉತ್ಪಾದನೆ ಆರಂಭವಾಗಿದೆ. ಆದರೆ ಬೇಡಿಕೆ ಹೆಚ್ಚಾಗಿಲ್ಲ. ಚೇತರಿಕೆ ಕಾಣುವ ಭರವಸೆಯೊಂದಿಗೆ ಆಟೋಮೊಬೈಲ್ ಇಂಡಸ್ಟ್ರಿ ವಾಹನ ನಿರ್ಮಾಣ ಮಾಡುತ್ತಿದೆ. ಆದರೆ ಬೇಡಿಕೆ ಇದೇ ರೀತಿ ಇದ್ದರೆ ಉದ್ಯೋಗ ಕಡಿತಕ್ಕೆ ಮುಂದಾಗಲಿದೆ ಎಂದು ACMA ಎಚ್ಚರಿಕೆ ನೀಡಿದೆ.
ನವದೆಹಲಿ(ಜೂ.09): ಭಾರತದ ಆಟೋಮೊಬೈಲ್ ಕ್ಷೇತ್ರ ಸತತ 2ನೇ ವರ್ಷ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. 2019ರಲ್ಲಿ ಮಾರಾಟ ಕುಸಿತ ಕಂಡ ಆಟೋಮೊಬೈಲ್ ಇಂಡಸ್ಟ್ರಿ, ಇದೀಗ ಕೊರೋನಾ ವೈರಸ್ ಹೊಡೆತಕ್ಕೆ ಸಿಲುಕಿದೆ. ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ವಾಹನಗಳಿಗೆ ನಿರೀಕ್ಷಿತ ಬೇಡಿಕೆ ಬಂದಿಲ್ಲ. ಇದೇ ರೀತಿ ಮುಂದುವರಿದರೆ ಉದ್ಯೋಗ ಕಡಿತ ಮಾಡದೇ ಬೇರೆ ಮಾರ್ಗವಿಲ್ಲ ಎಂದು ಆಟೋಮೊಬೈಲ್ ಬಿಡಿಭಾಗ ತಯಾರಿಕ ಸಂಘ(ACMA) ಹೇಳಿದೆ.
ಕೊರೋನಾ ವೈರಸ್: ಜೂನ್ 30ರ ವರೆಗೆ ಫ್ರೀ ಸರ್ವೀಸ್ ವಿಸ್ತರಿಸಿದ ಮಾರುತಿ ಸುಜುಕಿ!
ಆಟೋಮೊಬೈಲ್ ಕಂಪನಿಗಳು ಪುನರ್ ಆರಂಭಗೊಂಡಿದೆ. ಇದರ ಜೊತೆಗೆ ಬಿಡಿ ಭಾಗ ತಯಾರಿಕಾ ಕಂಪನಿಗಳು ಆರಂಭಗೊಂಡಿದೆ. ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇಷ್ಟೇ ಅಲ್ಲ ಕಡಿಮೆ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ರೊಟೇಶನ್ ಬೇಸ್ ಮೇಲೆ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಲಾಡ್‌ಡೌನ್ ಸಡಿಲಿಕೆ, ಆನ್ ಲೈನ್ ಮಾರಾಟ ವ್ಯವಸ್ಥೆ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳ ಮೂಲಕ ಮಾರಾಟ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಬೇಡಿಕೆ ಹೆಚ್ಚಾಗಿಲ್ಲ. ಇದು ನೇರವಾಗಿ ಬಿಡಿ ಭಾಗ ತಯಾರಿಕಾ ಕಂಪನಿಗಳಿಗೆ ಹೊಡೆತ ನೀಡಲಿದೆ.ಮೊದಲೇ ಸೊರಗಿರುವ ಬಿಡಿ ಭಾಗ ತಯಾರಿಕಾ ಕಂಪನಿಗಳು ಮತ್ತಷ್ಟು ಆರ್ಥಿಕ ನಷ್ಟ ಅನುಭವಿಸಲಿದೆ. ಹೀಗಾಗಿ ಉದ್ಯೋಗ ಕಡಿತ ಸಮಸ್ಯೆ ಎದುರಾಗಲಿದೆ. ಇದರಿಂದ ಮತ್ತಷ್ಟು ಜನರು ಬೀದಿಗೆ ಬೀಳಲಿದ್ದಾರೆ ಎಂದು ACMA ಹೇಳಿದೆ.