ಡಿ ಎಸ್‌ ಶ್ರೀನಿಧಿ

ಕುಂಭನಗರಿ

39 x 39 ಕಿಲೋಮೀಟರುಗಳ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಕುಂಭ ನಗರಿ, ಬರುವ ಎಲ್ಲ ಶ್ರದ್ಧಾಳುಗಳನ್ನು ಒಳಗೆ ಬಿಟ್ಟುಕೊಳ್ಳುತ್ತದೆ. ಗಂಗಾ ನದಿಯ ದಡದಲ್ಲಿರುವ ಈ ನಗರದಲ್ಲಿ ಎಲ್ಲವೂ ಇದೆ. ಒಂದು ಲಕ್ಷ ಶೌಚಾಲಯಗಳು, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಸತಿ ವ್ಯವಸ್ಥೆ, ತಾತ್ಕಾಲಿಕ ರಸ್ತೆಗಳು, ಸೇತುವೆಗಳು, ಮಠಮಂದಿರಗಳು, ಸಾಧುಗಳ ಅಖಾಡಾಗಳು, ಅನ್ನದಾನಕ್ಕೆ ದೊಡ್ಡ ಛತ್ರಗಳು, ಎಲ್ಲವೂ ಇವೆ. ಸುಮಾರು ಎರಡು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ನಗರಿಯೇ ಒಂದು ಅದ್ಭುತ. ಇಷ್ಟೆಲ್ಲ ಆದರೂ- ಇದೊಂದು ತಾತ್ಕಾಲಿಕ ವ್ಯವಸ್ಥೆಯಷ್ಟೇ. ಮಳೆಗಾಲದಲ್ಲಿ ಈ ಪಟ್ಟಣವೆದ್ದ ಜಾಗದಲ್ಲಿ ಗಂಗೆ ತಣ್ಣಗೆ ಹರಿಯುತ್ತಿರುತ್ತಾಳೆ!

ಸಾಧುಗಳ ಲೋಕ

ಕುಂಭಮೇಳವೆಂದರೆ ಸಾಧುಗಳು. ಸಾಧುಗಳೆಂದರೆ ಕುಂಭಮೇಳ. ಭಾರತದ ಮೂಲೆಮೂಲೆಗಳಿಂದ ಬಂದಿರುವ ಸಾಧುಸಂತರಿಗೆಂದೇ ಇಲ್ಲಿ ಅಖಾಡಾಗಳ ನಿರ್ಮಾಣವಾಗಿದೆ. ದೊಡ್ಡ ದೊಡ್ಡ ಪಂಥದ ಸನ್ಯಾಸಿಗಳಿಂದ ತೊಡಗಿ ಪುಟ್ಟಬಿಡಾರದ ಸಾಧುವಿಗೂ ವ್ಯವಸ್ಥೆ ಇದೆ ಇಲ್ಲಿ. ಇಪ್ಪತ್ತೆರಡು ವರ್ಷಗಳಿಂದ ಕೈ ಮೇಲಿತ್ತಿಕೊಂಡೇ ಇರುವ ಬಾಬಾ, ಹನ್ನೆರಡು ವರುಷಗಳಿಂದ ನಿಂತೇ ಇರುವ ಸಾಧು, , ಭುಜದ ಮೇಲೆ ಪಾರಿವಾಳ ಇಟ್ಟುಕೊಂಡೇ ನಡೆಯುವ ಕಬೂತರ್‌ ಬಾಬಾ! ಒಬ್ಬರೇ ಇಬ್ಬರೇ.. ಭಕ್ತರಿಗೆ ತಾನೇ ಅಡುಗೆ ಮಾಡಿ ಬಡಿಸುವ ಮಹಂತರಿಂದ ಮೊದಲುಗೊಂಡು, ಏಯ್‌, ದಸ್‌ ಲೀಟರ್‌ ದೂದ್‌ ಲೇಕೇ ಆವೋ.. ಎಂದು ನಮ್ಮನ್ನೇ ಗದರಿಸುವ ಸಾಧುಗಳೂ ಇದ್ದಾರೆ. ಒಂದು ಕ್ವಿಂಟಾಲು ಸೌದೆ ತರಿಸಿಕೊಡು, ಹತ್ತು ಕೇಜಿ ಅಕ್ಕಿ ಕೊಡಿಸೆಂದು ದುಂಬಾಲು ಬೀಳುವ ಸನ್ಯಾಸಿಗಳೂ ಕಡಿಮೆಯಿಲ್ಲ! ಬಗೆಬಗೆ ವೇಷಗಳ, ವಿಚಿತ್ರ ಹಾವಭಾವಗಳ ಬಾಬಾಗಳ ಹಿಂದು ಮುಂದು ಓಡಾಡುವ ಭಕ್ತರಿಗೂ ಕೊರತೆಯಿಲ್ಲ.

ಎಪ್ಪತ್ತು ಕೇಜಿ ತೂಕ ಹೊರುವ ಬಾಬಾ!

ಈ ಚಿತ್ರದಲ್ಲಿರುವ ಬಾಬಾ, ಜೂನಾ ಅಖಾಡದ ಮಹಾಂತ ಶಕ್ತಿ ಗಿರಿ. ನೂರಾರು ರುದ್ರಾಕ್ಷಿಗಳ ಮಾಲೆಯನ್ನು ಧರಿಸಿರುವ ಈ ಸಾಧು ತಲೆಯ ಮೇಲಿನ ಕಿರೀಟದ ತೂಕವೇ 20 ಕೇಜಿ ಮೇಲಿದೆ. ಮೈತುಂಬ ಧರಿಸಿಕೊಂಡಿರುವ ರುದ್ರಾಕ್ಷಿ ಸರಗಳ ತೂಕ ನಲವತ್ತೆಂಟು ಕೇಜಿಯಂತೆ! ರುದ್ರಾಕ್ಷಿ ಬಾಬಾ ಎಂದೇ ಭಕ್ತಾದಿಗಳಿಂದ ಕರೆಸಿಕೊಳ್ಳುವ ಈ ಸಾಧೂ ಮಹಾರಾಜ್‌, ಇಡೀ ದಿನ ಹೀಗೆಯೇ ಇರುತ್ತಾರೆ.

ಅವನಿದ್ದಾನಲ್ಲ!

ದೆಹಲಿ ವಿಮಾನ ನಿಲ್ದಾಣದಲ್ಲಿ ಒಬ್ಬಾಕೆ ಪರಿಚಯವಾದರು. ನಮ್ಮಂತೆಯೇ ಕುಂಭ ಮೇಳಕ್ಕೆ ಹೊರಟ ಮಧ್ಯವಯಸ್ಕ ಹೆಣ್ಣುಮಗಳು. ಯಾರಾದರೂ ಕನ್ನಡೋರು ಕಾಣಸ್ತಾರಾಂತ ನೋಡ್ತಾ ಇದ್ದೆ ಎಂದು ಪರಿಚಯಿಸಿಕೊಂಡರು. ನಾವೂ ಕುಂಭಮೇಳಕ್ಕೆ ಹೋಗುತ್ತಿದ್ದೇವೆಂದು ತಿಳಿದು ಖುಷಿಪಟ್ಟರು. ಕೋಟ್ಯಂತರ ಮಂದಿ ಸೇರುವ ಜಾಗ..ನೀವೇನು ಒಬ್ಬರೇ ಹೊರಟಿದ್ದೀರಾ? ಹೇಗೆ ಸಂಭಾಳಿಸುತ್ತೀರಿ, ಸಾಧ್ಯವೇ ಇದು ಎಂದು ಕೇಳಿದ್ದಕ್ಕೆ, ಇಲ್ಲ ಇಲ್ಲ ಅವನಿದ್ದಾನೆ ಜೊತೆಗೆ ಎಂದರು. ಓಹ್‌, ಮಗನೋ ಸಂಬಂಧಿಕರೋ ಇದ್ದಾರೆ ಎಂದುಕೊಂಡರೆ, ಮೇಲುಗಡೆ ಕೈ ತೋರಿಸಿದ ಆಕೆ.. ಅದೇ..ಅವನು ಜೊತೆಗಿರೋದು.. ಹೋಗ್ತಾ ಇರೋದೇ ದೇವರ ಕೆಲಸಕ್ಕೆ. ಆತ ಜೊತೆಗೆ ಇದ್ದ ಮೇಲೆ ಯಾಕೆ ಭಯ ಎಂದು ನಕ್ಕರು!

ಖೋಯಾ-ಪಾಯಾ!

ಕುಂಭಮೇಳ ಜೊತೆಗೇ ಸೇರಿಕೊಂಡಿರುವ ಉಪಮೆ- ಕಳೆದು ಹೋಗುವುದು. ಕುಂಭಮೇಳದಲ್ಲಿ ಕಳೆದು ಹೋದ ಅದೆಷ್ಟುಅಕ್ಕತಂಗಿಯರ ಅಣ್ಣತಮ್ಮಂದಿರ ಕಥೆಯುಳ್ಳ ಕಾಲ್ಪನಿಕ ಸಿನಿಮಾಗಳು ಬಂದು ಹೋಗಿವೆಯೋ ಏನೋ. ಆದರೆ ಈ ಕಳೆದು ಹೋಗುವುದರ ಹಿಂದಿನ ಗಂಭೀರತೆ ಅಲ್ಲಿಗೆ ಹೋದ ಮೇಲೆ ಅರ್ಥವಾಯಿತು. ಖೋಯಾ ಪಾಯಾದ ಹದಿನೈದು ಬೇರೆ ಬೇರೆ ಕೌಂಟರುಗಳಲ್ಲಿ ಒಂದು ನಿಮಿಷಕ್ಕೂ ಬಿಡುವಿಲ್ಲದಂತೆ ಮೈಕುಗಳು ಕಳೆದು ಹೋದವರ ಬಗ್ಗೆ ಹೇಳುತ್ತಲೇ ಇದ್ದವು. ಆ ಕೌಂಟರುಗಳ ಸುತ್ತ ನೆರೆದ ಮಂದಿಯ ತಲ್ಲಣ, ಹೇಳತೀರದು. ಈ ಕುಂಭದಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕಳೆದು ಹೋಗಿದ್ದಾರೆ, ಮರಳಿ ಸಿಕ್ಕಿದ್ದಾರೆ. ಇನ್ನೂ ಸುಮಾರು ನೂರು ಮಂದಿಯ ಹೆತ್ತವರ-ಮಕ್ಕಳ ಸೇರಿಸುವಿಕೆಯ ಪ್ರಯತ್ನ ನಡೆದಿದೆ. ಆಧುನಿಕ ತಂತ್ರಜ್ಞಾನ, ಕೆಲಸವನ್ನು ಹಗುರ ಮಾಡಿದೆ. ಆದರೂ ಮತ್ತೆಮತ್ತೆ ಜನಜಂಗುಳಿಯಲ್ಲಿ ತಮ್ಮವರನ್ನ ಕಳೆದುಕೊಳ್ಳುವ ಮಂದಿ ಇಲ್ಲಿಗೆ ಓಡಿ ಬರುತ್ತಾರೆ. ಕಾನ್‌ ಪುರ್‌ ವಾಲೇ ದೀದೀ..ಕಾಹಾಂ ಹೋ.. ಇಧರ್‌ ಆಜಾವೋ..ಎಂಬ ದೈನ್ಯ ಆರ್ತನಾದ, ಇನ್ನೂ ನನ್ನ ಕಿವಿಗೊಳಗೆ ಹಾಗೆಯೇ ಇದೆ.

ಭಕ್ತಿಯಿದ್ದಲ್ಲಿ ಭಯವಿಲ್ಲ!

ಒಂದು ಕೋಟಿ ಮಂದಿ ಸೇರಿದ್ದ ವಸಂತ ಪಂಚಮಿಯ ಶಾಹೀ ಸ್ನಾನಕ್ಕೆ ನಾನು ಸಾಕ್ಷಿಯಾಗಿದ್ದೆ. ಅಪಾರ ಸಂಖ್ಯೆಯಲ್ಲಿ ಹೆಮ್ಮಕ್ಕಳು, ಮಹಿಳೆಯರು ಸೇರಿದ್ದರು. ಬೆಳಗಿನ ಜಾವದ ನೂಕುನುಗ್ಗಲಿನಲ್ಲಿ ಒಬ್ಬ ಮಹಿಳೆಯ ಚೀತ್ಕಾರವೂ ಕೇಳಲಿಲ್ಲ. ಎಲ್ಲರೂ ನಿರ್ಭೀತಿಯಿಂದ ಸ್ನಾನ ಮಾಡಿದರು. ಚುಡಾಯಿಸುವಿಕೆಯಾಗಲೀ, ಕಳ್ಳತನವಾಗಲೀ ಕಾಣಲಿಲ್ಲ. ಒಬ್ಬರಿಗೆ ಮತ್ತೊಬ್ಬರು ಆಸರೆಯಾಗಿದ್ದರೇ ವಿನಹಃ ಹಿಂಸಾ ವಿನೋದ ಕಾಣಲಿಲ್ಲ. ಇದು ನಿಜವಾದ ಭಾರತ!

ಉಚಿತ ಉಚಿತ!

ಭಗವದ್ಗೀತೆಯಿಂದ ಹಿಡಿದು ಬಗೆ ಬಗೆಯ ಪುಸ್ತಕಗಳನ್ನು ಬೇರೆ ಬೇರೆ ಪ್ರಕಾಶನ ಸಂಸ್ಥೆಗಳು ಉಚಿತವಾಗಿ ಹಂಚುತ್ತಿರುವುದು ಕುಂಭದಲ್ಲಿ ಕಣ್ಣಿಗೆ ಬಿತ್ತು. ನೂರಿನ್ನೂರು ರುಪಾಯಿ ಮುಖಬೆಲೆಯ ಪುಸ್ತಕಗಳು ಹತ್ತಿಪ್ಪತ್ತು ರೂಪಾಯಿಗೂ ದೊರಕುತ್ತಿದ್ದವು. ಪುಸ್ತಕ ಮಾತ್ರವಲ್ಲ- ಟೂತ್‌ ಪೇಸ್ಟುನಿಂದ ಮೊದಲುಗೊಂಡು ಚಹಾದ ಪುಡಿಯ ವರೆಗೆ ಏನೇನೇನೋ ಉಚಿತ ಸ್ಯಾಂಪಲುಗಳನ್ನು ಕುಂಭಮೇಳದಲ್ಲಿ ವಿತರಿಸಲಾಗುತ್ತಿದೆ. ತಮ್ಮ ಪ್ರಾಡಕ್ಟ್ ಗಳ ಪ್ರಚಾರಕ್ಕೆ ಇದಕ್ಕಿಂತ ಒಳ್ಳೆಯ ಜನಸಂದಣಿ ಬೇರೆಲ್ಲಿ ಸಿಗಲು ಸಾಧ್ಯ!

ಹೊಟ್ಟೆತುಂಬ ಊಟ

ಮಧ್ಯ ರಾತ್ರಿ ಮೂರು ಗಂಟೆಯ ಹೊತ್ತಿಗೆ ರಸ್ತೆ ಗುಡಿಸುತ್ತಿದ್ದ ಝಾಡಮಾಲಿಯನ್ನು ಮಾತನಾಡಿಸಿದಾಗ ಆತ ಹೇಳಿದ್ದು ‘‘ ಬೇರೆನೋ ಗೊತ್ತಿಲ್ಲ. ಈ ಕುಂಭದಿಂದ ನಾನೂ ನನ್ನ ಕುಟುಂಬವೂ ಕಳೆದ ಆರು ತಿಂಗಳಿಂದ ಹೊಟ್ಟೆತುಂಬ ಊಟ ಮಾಡುತ್ತಿದ್ದೇವೆ’’! ಹಾಗೆಲ್ಲ ಹೊಟ್ಟೆತುಂಬದೇ ವರುಷಗಳೇ ಕಳೆದಿದ್ದವಂತೆ. ಆತ ಬಿಹಾರದಿಂದ ಬಂದವನು. ಅವನಂತೆಯೇ ಸುಮಾರು ಹತ್ತು ಸಾವಿರ ಮಂದಿ ಅಕ್ಕಪಕ್ಕದ ಊರುಗಳಿಂದ ಇಲ್ಲಿಗೆ ಬಂದಿದ್ದಾರಂತೆ. ಆರ್ಥಿಕ ಸ್ಥಿತಿ ಹದಗೆಟ್ಟಿರುವ ಬಹುತೇಕರಿಗೆ ಕುಂಭಮೇಳದಿಂದ ಚೈತನ್ಯ ಬಂದಿದೆ. ಕುಂಭ ಮುಗಿದು ಮೂರು ತಿಂಗಳವರೆಗೂ ತನಗಿಲ್ಲಿ ಕೆಲಸವಿದೆ ಎಂದು ಖುಷಿಯಿಂದ ನಕ್ಕ ಆತ. ಕೊನೇ ಟೆಂಟು ಎತ್ತಿದ ಮೇಲೇ ಊರಿಗೆ ಹೋಗ್ತೀನಿ ನಾನು ಅಂತಂದ. ಮುಂದೇನು ಮಾಡ್ತೀಯೋ ಅಂದರೆ ಭೋಲೇನಾಥ್‌ ದೇಖೇಗಾ ಅಂತ ಉತ್ತರ ಬಂತು!

ಇಷ್ಟೆಲ್ಲ ಜನ ಬಂದರೂ:

ಕುಂಭಮೇಳದಲ್ಲಿ ಸ್ವಚ್ಛತೆಗೆ ಮೊದಲ ಆದ್ಯತೆ. ಇಲ್ಲಿನ ರಸ್ತೆಯಲ್ಲಿ ಮಧ್ಯರಾತ್ರಿ ಎರಡು ಗಂಟೆಯಲ್ಲೂ ಕಸ ಗುಡಿಸುವ ಮಂದಿ ಕಾಣಿಸುತ್ತಾರೆ. ಬೀದಿಗಳಲ್ಲಿ ಒಂದು ತುಂಡು ಕಸ ಇರದಂತೆ ಎಚ್ಚರ ವಹಿಸುತ್ತಾರೆ. ಸಂಗಮ ಸ್ನಾನದ ಹೊತ್ತಿಗೆ ಹೂವು ತೆಂಗಿನಕಾಯಿ ನೀರಿಗೆ ಎಸೆಯದಂತೆ ನೋಡಿಕೊಳ್ಳಲಾಗುತ್ತದೆ. ಎಸೆದೆರೂ ಅದನ್ನ ಎತ್ತಿ ಮೇಲೆ ಹಾಕುವುದಕ್ಕೆ ಬೆಸ್ತರ ಹುಡುಗರ ಪಡೆಯೇ ಇದೆ. ಕೋಟಿ ಕೋಟಿ ಭಕ್ತರ ಸ್ನಾನವಾದ ಕೂಡಲೇ ಘಾಟ್‌ ಗಳನ್ನ ಎಷ್ಟುಬೇಗ್‌ ಸ್ವಚ್ಛಗೊಳಿಸಲಾಗುತ್ತದೆ ಎಂದರೆ, ಅಷ್ಟೆಲ್ಲ ಮಂದಿ ಸ್ನಾನ ಮಾಡಿ ಹೋಗಿದ್ದಾರೆಂದರೆ ನಂಬುವುದಕ್ಕೇ ಆಗುವುದಿಲ್ಲ.

ಸುಮ್ಮನೊಂದು ಲೆಕ್ಕ:

ಈ ಬಾರಿಯ ಕುಂಭಮೇಳಕ್ಕೆ ಇಲ್ಲಿವರೆಗೆ ಸುಮಾರು ಹದಿನೇಳು ಕೋಟಿ ಮಂದಿ ಬಂದು ಹೋಗಿದ್ದಾರೆ. ಅಂದರೆ- ಅಮೆರಿಕದ ಅರ್ಧದಷ್ಟುಮಂದಿ. ಪ್ರತಿ ಏಳು ಭಾರತೀಯರಲ್ಲಿ ಒಬ್ಬ! ಇಡಿಯ ಜಪಾನ್‌ ಗಿಂತ ಹೆಚ್ಚಿನ ಜನಸ್ತೋಮ. ಕುಂಭಮೇಳಕ್ಕೆ ಬಂದವರನ್ನೇ ಪ್ರತ್ಯೇಕವಾಗಿ ಲೆಕ್ಕ ಹಾಕಿದರೆ- ಅದು ಜಗತ್ತಿನ ಎಂಟನೇ ದೊಡ್ಡ ರಾಷ್ಟ್ರದ ಜನಸಂಖ್ಯೆಗೆ ಸಮ! ಈ ಬಾರಿಯ ಕುಂಭಮೇಳಕ್ಕೆ ಒಟ್ಟು ತಗುಲಿರುವ ವೆಚ್ಚ, ನಾಲ್ಕು ಸಾವಿರ ಕೋಟಿ ರೂಪಾಯಿಗಳು. ಇದರಿಂದ ಉತ್ಪತ್ತಿಯಾಗುವ ಒಟ್ಟು ಆದಾಯ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ಕೋಟಿ!