ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಗರ್ಭಗುಡಿ ಮುಂದೆ ಅಡ್ಡಡ್ಡ ಹಾಗೂ ಅದಕ್ಕೆ ಲಂಬ ಕೋನದಲ್ಲಿ ಎರಡು ಸಾಲಿನಲ್ಲಿ ಕಟಕಟೆ ಹಾಕಿರುತ್ತಾರೆ. ದೇವರೆದುರು ಅಡ್ಡ ಇರುವ ಬ್ಯಾರಿಕೇಡ್ ಹಿಂದೆ ಪುರೋಹಿತರು ನಿಂತಿರುತ್ತಾರೆ. ನಂತರ ಅದಕ್ಕೆ 90 ಡಿಗ್ರಿಯಲ್ಲಿರುವ ಎರಡು ಸ್ಟೀಲ್‌ನ ಅಡ್ಡಗಂಬಗಳ ಅಕ್ಕಪಕ್ಕ ಭಕ್ತರಿಗೆ ನಿಲ್ಲಲು ವ್ಯವಸ್ಥೆ ಮಾಡಿರುತ್ತಾರೆ. ಅವೆರಡರ ಮಧ್ಯ ಜಾಗದಲ್ಲಿ ಯಾರಿಗೂ ಹೋಗಲು ಬಿಡುವುದಿಲ್ಲ. ಏಕೆ ಈ ವ್ಯವಸ್ಥೆ?

ಇದಕ್ಕೆ ಕಾರಣ- ದೇವರ ವಿಗ್ರಹಕ್ಕೆ ನೇರವಾಗಿ ಎದುರು ನಿಂತು ಪ್ರಾರ್ಥಿಸಬಾರದು ಎಂಬ ಶಿಷ್ಟಾಚಾರ. ದೇವರ ವಿಗ್ರಹಕ್ಕೆ 30-40 ಡಿಗ್ರಿ ಓರೆಯಾಗಿ ನಿಂತು ಪ್ರಾರ್ಥಿಸಬೇಕು ಎಂಬ ಕಾರಣಕ್ಕೆ ಗರ್ಭಗುಡಿಯ ಮುಂದೆ ದೇವರಿಗೆ ನೇರವಾಗಿ ಇರುವ ಜಾಗಕ್ಕೆ ಬ್ಯಾರಿಕೇಡ್ ರೀತಿ ಸ್ಟೀಲ್‌ನ ಕಟಕಟೆ ಹಾಕಿರುತ್ತಾರೆ. 

ಹಳೇ ಆಚಾರ ಹೊಸ ವಿಚಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಏಕೆ ದೇವರಿಗೆ ನೇರವಾಗಿ ಎದುರು ನಿಂತು ಪ್ರಾರ್ಥಿಸಬಾರದು ಎಂಬುದಕ್ಕೆ ಇರುವ ಕಾರಣ ಅಪ್ಪಟ ನಂಬಿಕೆಯ ವಿಚಾರ. ಮೊದಲನೆಯದಾಗಿ, ಒಬ್ಬರಿಗೆ ಸರಿಯಾಗಿ ಎದುರು ನಿಲ್ಲುವುದು ಅಂದರೆ ಎದೆಗೆ ಎದೆ ಕೊಟ್ಟು ಧಾರ್ಷ್ಟ್ಯ ಪ್ರದರ್ಶಿಸಿದಂತೆ. ದೇವರೆದುರು ಭಕ್ತರು ವಿನೀತವಾಗಿರಬೇಕು. ದೇವರ ದಾರಿಯಲ್ಲಿ ಅಡ್ಡ ನಿಲ್ಲಬಾರದು ಎಂಬುದು ಒಂದು ಕಾರಣ. ಇನ್ನೊಂದು ಕಾರಣವೆಂದರೆ, ದೇವರಿಂದ ನೇರವಾಗಿ ಬರುವ ಪ್ರಭೆಯನ್ನು ಭರಿಸುವ ಶಕ್ತಿ ಭಕ್ತರಿಗೆ ಇರುವುದಿಲ್ಲವಂತೆ. ಆ ಪ್ರಭೆ ಅತ್ತಿತ್ತ ಹರಡಿದಾಗ ಅದರ ತೀವ್ರತೆ ಕೊಂಚ ಕಡಿಮೆಯಾಗುವುದರಿಂದ ಸ್ವಲ್ಪ ಪಕ್ಕದಲ್ಲಿ ನಿಂತಿದ್ದರೆ, ಕೊಂಚ ತೀಕ್ಷ್ಣತೆ ಕಳೆದುಕೊಂಡ ದಿವ್ಯ ಕಿರಣಗಳು ನಮ್ಮನ್ನು ತಾಕುತ್ತವೆಯಂತೆ. ಹಾಗಾಗಿ ಪಕ್ಕಕ್ಕೆ ನಿಲ್ಲಬೇಕು ಎಂಬುದು ವಾಡಿಕೆ. ಪುರೋಹಿತರು ಗರ್ಭ ಗುಡಿಯಲ್ಲೇ ಇರುತ್ತಾರಲ್ಲ, ಅವರಿಗೆ ಸಮಸ್ಯೆ ಇಲ್ಲವೇ? ಅವರೂ ಹಿಗ್ರಹದ ಎದುರು ನಿಲ್ಲುವುದಿಲ್ಲ, ಪಕ್ಕಕ್ಕೆ ನಿಲ್ಲುತ್ತಾರೆ.

- ಮಹಾಬಲ ಸೀತಾಳಬಾವಿ