Goddess Chowdi: ಏನಾದರೂ ವಸ್ತು ಆಗ ಇತ್ತು, ಈಗ ಕಾಣಿಸಿಲ್ಲ ಅಂದ್ರೆ ಕೆಲವರು ಚೌಡಿ ಕಾಟ ಎನ್ನೋದುಂಟು. ಹಳ್ಳಿಗಳಲ್ಲಿ, ಜನಪದ ಸಂಸ್ಕೃತಿಯಲ್ಲಿ 'ಚೌಡಿ ಕಾಟ' ಅಥವಾ 'ಚೌಡಿ ಮುಚ್ಚಿದ್ದಾಳೆ' ಎಂಬ ಮಾತು ತುಂಬಾ ಕೇಳಿ ಬರುತ್ತಲಿರುತ್ತದೆ. ಯಾವುದಾದರೂ ವಸ್ತು ಕಣ್ಣೆದುರಲ್ಲೇ ಇದ್ದರೂ ತಕ್ಷಣಕ್ಕೆ ಕಾಣಿಸದೇ ಹೋದಾಗ ಈ ರೀತಿ ಹೇಳಲು ಕಾರಣ ಇದೆ.

ಮಲೆನಾಡಿನಲ್ಲಿ ಶಿರಸಿ, ಸಿದ್ದಾಪುರ ಅಥವಾ ಉತ್ತರ ಕನ್ನಡದ ಭಾಗಗಳಲ್ಲಿ ಚೌಡಿಯ ( Goddess Chowdi ) ಆರಾಧನೆ ಜೋರಾಗಿ ನಡೆಯುತ್ತದೆ. ಎಷ್ಟೋ ಮನೆಗಳಲ್ಲಿ ಮನೆಯಿಂದ ಆಚೆ ಚೌಡಿಯನ್ನು ಪ್ರತಿಷ್ಠಾಪಿಸಿ ಪೂಜೆ ಮಾಡೋದುಂಟು. ಮನೆಯಲ್ಲಿ ಕೆಲವೊಮ್ಮೆ ಇಟ್ಟ ವಸ್ತುಗಳು ಕಣ್ಮರೆ ಆದಾಗ ಚೌಡಿ ಕೆಲಸ ಇರಬೇಕು, ಚೌಡಿ ಚೇಷ್ಟೆ ಮಾಡ್ತಾಳೆ ಎನ್ನೋದುಂಟು.

ಚೌಡಿಯ ಚೇಷ್ಟೆ

ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಚೌಡಿ ಅಥವಾ ಚೌಡೇಶ್ವರಿ/ಚೌಡಮ್ಮಯನ್ನು ಶಕ್ತಿ ದೇವತೆ ಅಥವಾ ಗ್ರಾಮದೇವತೆ ಎಂದು ಪೂಜಿಸಲಾಗುತ್ತದೆ. ಅನೇಕ ಕಡೆ ಪ್ರತಿ ಮನೆಗೆ ಒಂದೊಂದು ಚೌಡಿ ದೇವರು ಇರುತ್ತದೆ. ಪ್ರತಿ ಶುಕ್ರವಾರ ಈ ದೇವಿಗೆ ಪೂಜೆ ಮಾಡಲಾಗುತ್ತದೆ. ಕೆಲವೊಂದು ಮನೆಗಳಲ್ಲಿ ಅಕ್ಕಿ ಪಾಯಸ ಮಾಡಿ ನೈವೇದ್ಯ ಮಾಡೋದುಂಟು. ಒಂದೊಂದು ಕಡೆ ಒಂದೊಂದು ಬಗೆಯ ಪದ್ಧತಿ ಇರುತ್ತದೆ.

ನಂಬಿಕೆ ಏನಿದೆ?

ಹಳೆಯ ನಂಬಿಕೆಯ ಪ್ರಕಾರ, ಚೌಡಿಗೆ ಕೊಂಚ ತುಂಟತನ ಹಾಗೂ ಚೇಷ್ಟೆ ಮಾಡುವ ಸ್ವಭಾವವಿದೆಯಂತೆ. ಇದನ್ನು ಹಿರಿಕರು ಹೇಳುತ್ತಾರೆ. ಮನೆಯಲ್ಲಿ ಕಷ್ಟಪಟ್ಟು ಹುಡುಕುತ್ತಿರುವ ವಸ್ತು ತಕ್ಷಣಕ್ಕೆ ಸಿಗದೇ ಇದ್ದಾಗ, "ಚೌಡಿ ಆ ವಸ್ತುವಿನ ಮೇಲೆ ತನ್ನ ಸೆರಗು ಹಾಕಿದ್ದಾಳೆ" ಅಥವಾ "ಕಣ್ಣಿಗೆ ಕಾಣಿಸದಂತೆ ಮರೆಮಾಡಿದ್ದಾಳೆ" ಎಂದು ಅಂದುಕೊಳ್ಳುತ್ತಿದ್ದರು.

ಮನಸ್ಸಿಗೆ ಸಮಾಧಾನ ನೀಡುವ ತಂತ್ರ

ಯಾವುದಾದರೂ ಮುಖ್ಯವಾದ ವಸ್ತು ಸಿಗದಿದ್ದಾಗ ನಮಗೆ ಕೋಪ, ಗಾಬರಿ ಅಥವಾ ಕಿರಿಕಿರಿ ಉಂಟಾಗುವುದು ಸಹಜ. ಆ ಸಮಯದಲ್ಲಿ "ಅಯ್ಯೋ, ಚೌಡಿ ಕಾಟ ಇರಬೇಕು!" ಎಂದು ಹೇಳುವುದರಿಂದ, ಆ ಸಿಟ್ಟನ್ನು ದೇವತೆ ಅಥವಾ ಚೇಷ್ಟೆಯ ಮೇಲೊಡ್ಡಿ ಮನಸ್ಸನ್ನು ಹಗುರ ಮಾಡಿಕೊಳ್ಳುವ ಒಂದು ಮಾನಸಿಕ ತಂತ್ರವೂ ಇದಾಗಿತ್ತು. ಚೌಡಿಯನ್ನು ಪ್ರಾರ್ಥಿಸಿದಾಗ ಆ ವಸ್ತು ಸಿಕ್ಕ ಉದಾಹರಣೆ ಇದೆ. ಚೌಡಿಗೆ ಸರಿಯಾಗಿ ಪೂಜೆ ಮಾಡದಿದ್ದಾಗ ಅಥವಾ ಆರಾಧನೆ ಮಾಡದಿದ್ದಾಗ ಹೀಗೆ ಮಾಡ್ತಾಳೆ ಎನ್ನುತ್ತಾರೆ. ಮನೆಯಲ್ಲಿ ಯಾವುದೇ ಶುಭ ಕಾರ್ಯ ಇದ್ದಾಗ ಚೌಡಿಗೆ ತೆಂಗಿನ ಕಾಯಿ ತೆಗೆದಿಟ್ಟು ಪ್ರಾರ್ಥನೆ ಮಾಡಿಕೊಂಡು ಕೆಲಸ ಆರಂಭಿಸೋ ಪದ್ಧತಿ ಇದೆ.

ವೈಜ್ಞಾನಿಕ ದೃಷ್ಟಿಕೋನ

ವಿಜ್ಞಾನದ ದೃಷ್ಟಿಕೋನದಲ್ಲಿ ಇದನ್ನು 'ಇನ್‌ಅಟೆನ್ಷನಲ್ ಬ್ಲೈಂಡ್‌ನೆಸ್' (Inattentional Blindness) ಅಥವಾ ತಾತ್ಕಾಲಿಕ ಮರೆವು ಎನ್ನಲಾಗುತ್ತದೆ. ನಮ್ಮ ಮೆದುಳು ಯಾವುದೋ ಒತ್ತಡದಲ್ಲಿದ್ದಾಗ ಅಥವಾ ಬೇರೆ ಆಲೋಚನೆಯಲ್ಲಿದ್ದಾಗ, ವಸ್ತು ಕಣ್ಣೆದುರೇ ಇದ್ದರೂ ಕಣ್ಣಿನಿಂದ ಬರುವ ಸಂಕೇತವನ್ನು ಮೆದುಳು ಗ್ರಹಿಸುವುದಿಲ್ಲ. ಸ್ವಲ್ಪ ಟೈಮ್‌ ಆದ್ಮೇಲೆ ಆತಂಕ ಕಡಿಮೆಯಾದಾಗ ಅದೇ ವಸ್ತು ನಮಗೆ ಸ್ಪಷ್ಟವಾಗಿ ಕಾಣಿಸುತ್ತದೆ. ಈ ತಾತ್ಕಾಲಿಕ ಮರೆವಿಗೆ ನಮ್ಮ ಹಿರಿಯರು ನೀಡಿದ ಜಾನಪದೀಯ ಹೆಸರೇ "ಚೌಡಿ ಕಾಟ"!

( Disclaimer: ಚೌಡಿ ಕಾಟ ಎನ್ನೋದು ಹಿರಿಯರು ಹೇಳಿಕೊಂಡು ಬಂದಿರೋ ಕಥೆ. ಇದು ಸತ್ಯ ಅಥವಾ ಸುಳ್ಳು ಎಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹೇಳೋದಿಲ್ಲ )