Asianet Suvarna News Asianet Suvarna News

ವಾರ ಭವಿಷ್ಯ: ಈ ರಾಶಿಯವರು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ

ಮಾರ್ಚ್ 01, 2020 ರ ವಾರ ಭವಿಷ್ಯ| ಈ ರಾಶಿಯವರು ಈ ವಾರದಲ್ಲಿ ಅಸಾಧ್ಯವೊಂದು ಸಾಧಿಸಲಿದ್ದೀರಿ| ಉಳಿದ ರಾಶಿಗೇನು ಫಲ? ಯಾರಿಗೆ ಶುಭ ಫಲ? ಇಲ್ಲಿದೆ ರಾಶಿ ಫಲ 

Weekly Horoscope of March 1st to March 18th 2020 in Kannada
Author
Bengaluru, First Published Mar 1, 2020, 7:22 AM IST

ಮೇಷ: ನೀವು ಕಂಡ ಕನಸು ನನಸಾಗುವ ಸಮಯ ಇದು. ಪ್ರೀತಿ ಪಾತ್ರರಿಂದ ನಿಮ್ಮ ಪ್ರತಿಭೆಗೆ ಬೆಂಬಲ, ಪ್ರೋತ್ಸಾಹ ಸಿಗಲಿದೆ. ಮಹಿಳೆಯರಿಗೆ ಇದು ಒಳ್ಳೆಯ ವಾರ. ಮನಸ್ಸಿನ ಕಿರಿಕಿರಿಗಳು ದೂರವಾಗಲಿವೆ. ನೀವು ಮೆಚ್ಚಿದ ವ್ಯಕ್ತಿಗಳು ಮತ್ತಷ್ಟು ಹತ್ತಿರವಾಗಲಿದ್ದಾರೆ. ತಾಳ್ಮೆಯಿಂದ ಮುಂದೆ ಸಾಗಿರಿ.

ವೃಷಭ: ವಾರದುದ್ದಕ್ಕೂ ಒಂದಿಲ್ಲೊಂದು ತೊಂದರೆಗೆ ಒಳಗಾಗುವ ನೀವು ವಾರಂತ್ಯದಲ್ಲಿ ಯಶಸ್ಸುಮ ಕಾಣಲಿದ್ದೀರಿ. ನಿಮ್ಮ ಒಳ್ಳೆಯ ಮಾತುಗಳು ಇನ್ನಷ್ಟು ಜನರನ್ನು ಆಕರ್ಷಿಸುತ್ತವೆ. ಮತ್ತೊಬ್ಬರ ತಪ್ಪುಗಳನ್ನು ಹುಡುಕುವುದರಲ್ಲೇ ಸಮಯ ವ್ಯರ್ಥ ಮಾಡುವುದು ಬೇಡ. ಶುಭ ಕಾರ್ಯಕ್ಕೆ ಅಡ್ಡಿ ಇಲ್ಲ.

ಮಿಥುನ: ಹಳೆಯ ನೆನಪುಗಳನ್ನು ಕೆದಕಿಕೊಂಡು ಇಂದಿನ ಹಾಗೂ ಮುಂದಿನ ಸುಂದರ ದಿನಗಳನ್ನು ಹಾಳು ಮಾಡಿಕೊಳ್ಳದಿರಿ. ಹಳೆಯದ್ದನ್ನು ಮರೆತು ಮುನ್ನಡೆದರೆ ಮನೆಯಲ್ಲಿ ಸಂತೋಷ ನೆಮ್ಮದಿ ನೆಲಸಲಿದೆ. ವೃತ್ತಿಪರ ಮಹಿಳೆಯರಿಗೆ ಹೆಚ್ಚಿನ ಲಾಭ, ಕೆಲಸದಲ್ಲಿ ಪ್ರಗತಿ, ಮೇಲಾಧಿಕಾರಿಯಿಂದ ಪ್ರಶಂಸೆ ಸಿಗಲಿದೆ.

ಕಟಕ: ಆರೋಗ್ಯದ ಬಗ್ಗೆ ಗಮನವಿರಲಿ. ಮನೆಗೆ ಬಂಧುಗಳ ಆಗಮನ ಸಾಧ್ಯತೆ. ವಾರಾಂತ್ಯದಲ್ಲಿ ಸಿಹಿ ಸುದ್ದಿ ಕೇಳುವಿರಿ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಒಳ್ಳೆಯದ್ದು. ಸ್ನೇಹಿತರಿಗೆ ನೆರವಾಗಲಿದ್ದೀರಿ. ಬರುವ ಹೊಸ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಒಪ್ಪಿಕೊಂಡು ಮುಂದೆ ಸಾಗುವುದು ಒಳಿತು.

ಈ ದೇಗುಲದಲ್ಲಿ ಮಣ್ಣಿನ ಹರಕೆ ಹೊಟ್ಟರೆ ಮಕ್ಕಳಾಗುತ್ತವೆಯಂತೆ!

ಸಿಂಹ: ಕೆಲಸಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವುದರ ಜೊತೆಗೆ ಕುಟುಂಬಕ್ಕೂ ಅಷ್ಟೇ ಪ್ರಾಶಸ್ತ್ಯ ನೀಡಿದರೆ ಉತ್ತಮ. ಮನೆಯಲ್ಲಿನ ಕಿರಿಕಿರಿ ವಾತಾವರಣದಿಂದ ನೊಂದಿದ್ದರೆ ಸ್ವಲ್ಪ ಸಮಯ ದೇವಾಲಯಕ್ಕೆ ಹೋಗಿ ಬನ್ನಿ. ಧ್ಯಾನ ಮಾಡಿದಷ್ಟು ಮನಸ್ಸಲ್ಲಿನ ಆತಂಕ ದೂರಾಗಲಿದೆ. ಮಕ್ಕಳ ಓದಿನಲ್ಲಿ ಆತಂಕ ಬೇಡ.

ಕನ್ಯಾ: ಒಳ್ಳೆ ಕೆಲಸ ಮಾಡುವಾಗ ಹಲವು ಅಡೆತಡೆಗಳು ಬರುತ್ತವೆ. ಹಾಗೆ ಬಂದ ಕಷ್ಟಗಳನ್ನು ಸೂಕ್ತ ರೀತಿಯಲ್ಲಿ ಎದುರಿಸುವಿರಿ. ನಿಮ್ಮ ದೃಢ ಹಾಗೂ ಪ್ರಾಮಾಣಿಕ ಪ್ರಯತ್ನವೇ ನಿಮ್ಮನ್ನು ಮುನ್ನಡೆಸಲಿದೆ. ವಾರಾಂತ್ಯದಲ್ಲಿ ನೆಮ್ಮದಿ ನೆಲಸಲಿದ್ದು, ಕುಟುಂಬದೊಂದಿಗೆ ಸಮಯ ಕಳೆಯಲು ದೂರ ಪ್ರಯಾಣ ಸಾಧ್ಯತೆ.

ತುಲಾ: ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರುವುದು ಬೇಡ. ಆಹಾರದ ವಿಚಾರದಲ್ಲಿ ಮಿತಿ ಇರಲಿ. ನಿಮ್ಮ ಪಾಲಿಗೆ ಬಂದ ಜವಾಬ್ದಾರಿಯನ್ನು ಸರಿಯಾಗಿ ಮಾಡಿ ಮುಗಿಸಿ. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಇರಲಿ. ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಹೆಚ್ಚು ಆಲೋಚನೆ ಮಾಡಿರಿ.

ವೃಶ್ಚಿಕ: ಯಾವುದೇ ಕೆಲಸವನ್ನು ಎರಡು ಮನಸ್ಸಿನಿಂದ ಆರಂಭಿಸಬೇಡಿ. ಹಿರಿಯರಿಂದ ಸೂಕ್ತ ಸಲಹೆ ಪಡೆಯಿರಿ. ಮಾಡುವ ಕಾರ್ಯದಲ್ಲಿ ಶ್ರದ್ಧೆ, ಆಸಕ್ತಿ ಇದ್ದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಇತರರ ಮಾತಿಗೆ ಕಿವಿಗೊಡುವ ಹವ್ಯಾಸ ಬಿಟ್ಟು ಮುನ್ನಡೆಯಿರಿ. ಉಳಿತಾಯದ ಕಡೆಗೆ ಹೆಚ್ಚು ಒಲವು ತೋರಲಿದ್ದೀರಿ.

ಧನಸ್ಸು: ಇಚ್ಛಾಶಕ್ತಿ ಎಲ್ಲವೂ ಸಾಧ್ಯ ಎಂಬುದಕ್ಕೆ ಉತ್ತಮ ಉದಾಹರಣೆ ನೀವಾಗಲಿದ್ದೀರಿ. ಸೇವಾ ಕಾರ್ಯಗಳು ನಿಮ್ಮಿಂದ ಈ ವಾರ ನೆರವೇರಲಿವೆ. ಖರ್ಚು ವ್ಯಚ್ಚದಲ್ಲಿ ಎಚ್ಚರ ಇರಲಿ. ಆರೋಗ್ಯ ಸ್ಥಿರವಾಗಲಿದೆ. ದುಡುಕಿನ ನಿರ್ಧಾರಗಳು ಬೇಡ.

ಮಕರ: ಯಾರನ್ನೂ ಅತಿಯಾಗಿ ನಂಬುವುದು ಬೇಡ. ನಿಮ್ಮ ಕಾಲಿನ ಮೇಲೆ ನೀವು ನಿಲ್ಲುವ ಪ್ರಯತ್ನ ಮಾಡಿ. ಆತ್ಮೀಯರು ನಿಮಗೆ ನೆರವಾಗಲಿದ್ದಾರೆ. ವಾಹನ ಚಾಲನೆ ವೇಳೆ ಎಚ್ಚರಿಕೆ ಇರಲಿ. ಮನೆಯಲ್ಲಿ ಸಂತೋಷದ ವಾತಾವರಣ ನೆಲೆಯಾಗಲಿ.

ಕುಂಭ: ಮತ್ತೊಬ್ಬರ ಮೇಲೆ ಹೆಚ್ಚಾಗಿ ಅವಲಂಭಿತರಾಗುವುದು ಬೇಡ. ಅನ್ಯ ಕಾರ್ಯ ನಿಮಿತ್ತ ದೂರದ ಊರುಗಳಿಗೆ ಹೋಗಬೇಕಾಗುತ್ತದೆ. ಮಹಿಳೆಯರು ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಬೇಕಾಗುತ್ತದೆ. ಹಿಂದೆ ಕಟ್ಟಿಕೊಂಡಿದ್ದ ಹರಕೆಗಳು ಈ ವಾರ ಪೂರ್ಣವಾಗಲಿವೆ. ಖರ್ಚಿನಲ್ಲಿ ಮಿತಿ ಇರಲಿ.

ಮೀನ: ಬೆಳ್ಳಗೆ ಇರುವುದೆಲ್ಲಾ ಹಾಲಲ್ಲ, ಹಾಗೆ ಕಣ್ಣಿಗೆ ಕಾಣಿಸಿದ್ದೆಲ್ಲಾ ನಿಜವಲ್ಲ. ಹಿರಿಯರೊಂದಿಗೆ ಸಮಾಲೋಚನೆ ನಡೆಸಿ ನಿರ್ಧರ ಕೈಗೊಂಡು ಮುನ್ನಡೆಯಿರಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ. ಮಕ್ಕಳ ಪ್ರೀತಿಗೆ ಪಾತ್ರರಾಗಲಿದ್ದೀರಿ. ಅಂದುಕೊಂಡ ಕಾರ್ಯಗಳು ನೆರವೇರಲಿವೆ.

Follow Us:
Download App:
  • android
  • ios