ಮನೆ ಕಟ್ಟುವಾಗ ವಾಸ್ತು ನೋಡೋದು ಕಾಮನ್. ಬೆಡ್‍ರೂಮ್, ಕಿಚನ್, ದೇವರಕೋಣೆ, ಹಾಲ್..ಹೀಗೆ ಎಲ್ಲದಕ್ಕೂ ವಾಸ್ತು ನೋಡುತ್ತೇವೆ. ಆದ್ರೆ ಟಾಯ್ಲೆಟ್ ಹಾಗೂ ಬಾತ್‍ರೂಮ್‍ಗೆ ಕೂಡ ವಾಸ್ತು ನೋಡೋದು ಅಗತ್ಯ ಎಂಬುದು ಗೊತ್ತಾ ನಿಮ್ಗೆ? ಹೌದು, ಬಾತ್‍ರೂಮ್ ಹಾಗೂ ಟಾಯ್ಲೆಟ್‍ಗೂ ವಾಸ್ತುವಿದೆ. ವಾಸ್ತುಶಾಸ್ತ್ರದ ನಿಯಮಗಳಿಗೆ ಅನ್ವಯವಾಗುವಂತೆ ಇವುಗಳನ್ನು ನಿರ್ಮಿಸೋದು ಅಗತ್ಯ.ಇಲ್ಲವಾದ್ರೆ ಬಾತ್‍ರೂಮ್ ಹಾಗೂ ಟಾಯ್ಲೆಟ್‍ಗಳು ನಕಾರಾತ್ಮಕ ಶಕ್ತಿಯ ಕೇಂದ್ರವಾಗುವ ಸಾಧ್ಯತೆ ಹೆಚ್ಚು ಎನ್ನುತ್ತಾರೆ ವಾಸ್ತುಶಾಸ್ತ್ರಜ್ಞರು. ಹಾಗಾದ್ರೆ ಟಾಯ್ಲೆಟ್ ಹಾಗೂ ಬಾತ್‍ರೂಮ್ ಬಗ್ಗೆ ವಾಸ್ತುಶಾಸ್ತ್ರ ಏನ್ ಹೇಳುತ್ತೆ?

ಆಹ್ಲಾದಕರ ಟೆರೇಸ್: ಕಡಿಮೆ ಖರ್ಚಿನ ತಂಪು ತಾರಸಿ

- ಮನೆಯಲ್ಲಿ ಬಾತ್‍ರೂಮ್ ಅನ್ನು ವಾಯುವ್ಯ ದಿಕ್ಕಿನಲ್ಲಿ ನಿರ್ಮಿಸೋದು ಉತ್ತಮ. ವಾಸ್ತು ಪ್ರಕಾರ ಇದು ತ್ಯಾಜ್ಯವನ್ನು ಹೊರಹಾಕಲು ಸೂಕ್ತವಾದ ದಿಕ್ಕು.
-ಬಾತ್‍ರೂಮ್‍ಗೆ ಈಗೆಲ್ಲ ಮೆಟಲ್ ಸೇರಿದಂತೆ ಮಾಡರ್ನ್ ಲುಕ್ ನೀಡುವ ಬಾಗಿಲುಗಳನ್ನು ಬಳಸುತ್ತಾರೆ. ಆದ್ರೆ ಬಾತ್‍ರೂಮ್‍ಗೆ ಮರದ ಬಾಗಿಲು ಅಳವಡಿಸೋದು ವಾಸ್ತು ಪ್ರಕಾರ ಹೆಚ್ಚು ಸೂಕ್ತ. ಮೆಟಲ್ ಬಾಗಿಲು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಸಾಧ್ಯತೆ ಇರುತ್ತದೆ. ಅಲ್ಲದೆ, ಇದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಬಹುದು. 
-ಎಲ್ಲ ಸಮಯದಲ್ಲೂ ಬಾತ್‍ರೂಮ್ ಬಾಗಿಲು ಮುಚ್ಚಿರುವಂತೆ ನೋಡಿಕೊಳ್ಳಿ. ಇದ್ರಿಂದ ನಕಾರಾತ್ಮಕ ಶಕ್ತಿ ನಿಮ್ಮ ಮನೆಯೊಳಗೆ ಪ್ರವೇಶಿಸೋದನ್ನು ತಡೆಯಬಹುದು. ಅಲ್ಲದೆ, ನಿಮ್ಮ ವೃತ್ತಿ ಹಾಗೂ ವೈಯಕ್ತಿಕ ಸಂಬಂಧಗಳಲ್ಲಿ ಯಾವುದೇ ಅಡ್ಡಿ-ಆತಂಕಗಳು ಸೃಷ್ಟಿಯಾಗೋದಿಲ್ಲ.
-ಬಾತ್‍ರೂಮ್ ಅಥವಾ ಟಾಯ್ಲೆಟ್ ಬಾಗಿಲಿನ ಮೇಲೆ ಯಾವುದೇ ಕಾರಣಕ್ಕೂ ಮೂರ್ತಿಗಳ ಅಲಂಕಾರಿಕ ಕೆತ್ತನೆ ಅಥವಾ ದೇವರ ಚಿತ್ರಗಳಿರದಂತೆ ಎಚ್ಚರ ವಹಿಸಿ. ಬಾತ್‍ರೂಮ್ ಅಂದ್ರೆ ಅಪವಿತ್ರವಾದ ಸ್ಥಳ. ಆದಕಾರಣ ಬಾತ್‍ರೂಮ್ ಬಾಗಿಲಿನ ಮೇಲೆ ದೇವರ ಚಿತ್ರಗಳಿರೋದು ಸರಿಯಲ್ಲ.

ಸೋಂಕು ಯಾವ ದಿಕ್ಕಿನಿಂದ ಪ್ರವೇಶಿಸುತ್ತೆ? ನಿಮ್ಮ ಮನೆ ಸೇಫಾ?

-ಬೆಡ್‍ರೂಮ್, ದೇವರಕೋಣೆ ಅಥವಾ ಅಡುಗೆಮನೆಯೊಂದಿಗೆ ಟಾಯ್ಲೆಟ್ ಒಂದೇ ಗೋಡೆ ಹಂಚಿಕೊಂಡಿರಬಾರದು. ಇದ್ರಿಂದ ಮನೆಯಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚುತ್ತವೆ. ಬೆಡ್‍ರೂಮ್ ಮತ್ತು ಟಾಯ್ಲೆಟ್ ಒಂದೇ ಗೋಡೆಯನ್ನು ಹಂಚಿಕೊಂಡಿದ್ರೆ ಮನೆ ಸದಸ್ಯರಿಗೆ ಕೆಟ್ಟ ಕನಸುಗಳು ಕಾಡುವ ಸಾಧ್ಯತೆ ಹೆಚ್ಚಿದೆ.
-ವಾಷ್ ಬೇಸಿನ್ ಹಾಗೂ ಶಾವರ್ ಬಾತ್‍ರೂಮ್‍ನ ಪೂರ್ವ, ಉತ್ತರ ಹಾಗೂ ಈಶಾನ್ಯ ಭಾಗದಲ್ಲಿರಬೇಕು.
-ತ್ಯಾಜ್ಯ ನೀರು ಹೋಗುವ ಪೈಪ್ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಆದಕಾರಣ ಬಾತ್‍ರೂಮ್‍ನ ನೆಲವು ಇದೇ ದಿಕ್ಕುಗಳತ್ತ ಇಳಿಜಾರರಾಗಿರುವಂತೆ ನೋಡಿಕೊಳ್ಳಬೇಕು. ಇದ್ರಿಂದ ತ್ಯಾಜ್ಯ ನೀರು ಇದೇ ದಿಕ್ಕಿನಲ್ಲಿ ಹರಿದು ಹೊರ ಹೋಗುತ್ತದೆ.
-ಬಾತ್‍ರೂಮ್ ಒಳಗೆ ಟಾಯ್ಲೆಟ್ ಕೂರಿಸುವಾಗ ವಿಶೇಷ ಆಸಕ್ತಿ ವಹಿಸೋದು ಅಗತ್ಯ. ಟಾಯ್ಲೆಟ್ ಪಶ್ಚಿಮ ಅಥವಾ ನೈರುತ್ಯ ದಿಕ್ಕಿನಲ್ಲಿರಬೇಕು. 
-ಎಗ್ಸಾಸ್ಟ್ ಫ್ಯಾನ್ ಅಥವಾ ಬಾತ್‍ರೂಮ್ ಕಿಟಕಿ ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಇದರಿಂದ ತಾಜಾ ಗಾಳಿ ಹಾಗೂ ಸೂರ್ಯನ ಕಿರಣಗಳು ಬಾತ್‍ರೂಮ್‍ನ ಒಳಪ್ರವೇಶಿಸಲು ಅನುಕೂಲವಾಗುತ್ತದೆ. ಬಾತ್‍ರೂಮ್ ಒಳಗಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ಗಾಳಿ ಮತ್ತು ಬೆಳಕು ಒಳಪ್ರವೇಶಿಸೋದು ಅಗತ್ಯ. 

ಮನೆಯಲ್ಲಿ ಆಫೀಸ್ ಕೆಲ್ಸ ಮಾಡುವ ಸ್ಥಳ ವಾಸ್ತು ಪ್ರಕಾರ ಇದೆಯಾ?

-ಟಾಯ್ಲೆಟ್‍ನ ಒಳಭಾಗಕ್ಕೆ ತಿಳಿ ಬಣ್ಣಗಳಾದ ಬಿಳಿ, ಕಂದು, ಕ್ರೀಮ್ ಶೇಡ್‍ಗಳನ್ನು ಬಳಸಬೇಕು. ಕಪ್ಪು ಹಾಗೂ ಗಾಢ ನೀಲಿ ಬಣ್ಣಗಳನ್ನು ಬಳಸಬಾರದು. ತಿಳಿ ಬಣ್ಣಗಳು ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಇವು ಮನಸ್ಸಿಗೆ ಮುದ ನೀಡುವ ಜೊತೆಗೆ ಕಣ್ಣುಗಳಿಗೆ ಹಿತವಾದ ಅನುಭವ ನೀಡುತ್ತವೆ. 
-ಬಾತ್‍ರೂಮ್‍ನಲ್ಲಿ ಸಿಂಕ್ ಮೇಲ್ಭಾಗದಲ್ಲಿ ಕನ್ನಡಿ ಅಳವಡಿಸೋದು ಕಾಮನ್. ಆದ್ರೆ ಈ ಕನ್ನಡಿಯನ್ನು ಕೂಡ ಸೂಕ್ತವಾದ ಸ್ಥಳದಲ್ಲಿ ಅಳವಡಿಸೋದು ಅಗತ್ಯ. ಬಾತ್‍ರೂಮ್‍ನ ದಕ್ಷಿಣ ಅಥವಾ ಪಶ್ಚಿಮ ಗೋಡೆ ಮೇಲೆ ಕನ್ನಡಿ ಅಳವಡಿಸಬಾರದು. ಉತ್ತರ ಹಾಗೂ ಪೂರ್ವ ಗೋಡೆಗಳು ಕನ್ನಡಿ ಅಳವಡಿಸಲು ಪ್ರಸಕ್ತವಾದ ಸ್ಥಳಗಳು.
-ಟಾಯ್ಲೆಟ್ ಅಥವಾ ಬಾತ್‍ರೂಮ್‍ನಲ್ಲಿ ವಾಷಿಂಗ್ ಮಷಿನ್ ಇಡಲು ವಾಯುವ್ಯ ಅಥವಾ ಆಗ್ನೇಯ ದಿಕ್ಕನ್ನು ಆರಿಸಿಕೊಳ್ಳೋದು ಸೂಕ್ತ.