Asianet Suvarna News Asianet Suvarna News

ಅಧ್ಯಾತ್ಮ ಅರಸುವವರಿಗೆ ಆಸರೆಯಾಗುವ ಆಶ್ರಮಗಳಿವು!

ದೇಶದಲ್ಲಿ ಆಶ್ರಮಗಳಿಗೆ ಕೊರತೆಯೇ ಇಲ್ಲ. ಆದರೆ, ನಂಬಿಕೆಗೆ ಅರ್ಹವಾದ, ಜನರಿಗೆ ಶಾಂತಿಯ ಹಾದಿ ತೋರಿಸುವ ಆಶ್ರಮಗಳು ಬೆರಳೆಣಿಕೆಯಷ್ಟು. ವಿದೇಶಿಯರು ಕೂಡಾ ಈ ಆಶ್ರಮಗಳ ಬೋಧನೆಗೆ ಮಾರು ಹೋಗಿ ವಾಲಂಟೀರ್ ಆಗಿ ಇಲ್ಲೇ ಉಳಿದುಕೊಳ್ಳುವವರಿದ್ದಾರೆ. ಅಂಥ ವಿಶ್ವಪ್ರಸಿದ್ಧ ಆಶ್ರಮಗಳ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

top 6 popular ashrams in India
Author
Bangalore, First Published Aug 6, 2019, 2:50 PM IST
  • Facebook
  • Twitter
  • Whatsapp

ಶಾಂತಿ, ನೆಮ್ಮದಿಗಾಗಿ ಆಧ್ಯಾತ್ಮದ ಹಾದಿ ಹಿಡಿಯುವವರು ಹಲವರು. ಜಗತ್ತಿನಾದ್ಯಂತ ಆಧ್ಯಾತ್ಮವನ್ನು ಅರಸುವವರಿಗೆ ಭಾರತಕ್ಕಿಂತ ಉತ್ತಮ ಸ್ಥಳ ಇನ್ನೊಂದು ಸಿಗಲಾರದು. ಭಾರತದಲ್ಲಿರುವ ಕೆಲ ಆಶ್ರಮಗಳು ಬಹಳಷ್ಟು ಜನರಿಗೆ ನೆಮ್ಮದಿ ಕೇಂದ್ರಗಳಾಗಿವೆ. ಈ ಆಶ್ರಮಗಳು ಯೋಗ, ಧ್ಯಾನ, ಪ್ರಾಣಾಯಾಮ, ಪ್ರವಚನ ಮುಂತಾದ ರೂಪದಲ್ಲಿ ನೆಮ್ಮದಿ ಅರಸಿ ಬರುವವವರ ಪಾಲಿಗೆ ಪಂಚಾಮೃತಕ್ಕಿಂತ ಸಿಹಿ ಎನಿಸುತ್ತವೆ. ಜನರನ್ನು ತಮ್ಮ ಆಂತರಿಕ ಲೋಕದೊಂದಿಗೆ ವ್ಯವಹರಿಸಲು ಪ್ರೇರೇಪಿಸುತ್ತವೆ.

ತಮ್ಮನ್ನು ತಾವು ಕಂಡುಕೊಳ್ಳಲು ಸಹಾಯ ಮಾಡುತ್ತವೆ. ದೇಹ, ಮನಸ್ಸು ಹಾಗೂ ಆತ್ಮವನ್ನು ಒಗ್ಗೂಡಿಸುವ ತಂತ್ರ ಕಲಿಸುತ್ತವೆ. ಇಲ್ಲಿರುವ ಕೆಲ ಆಶ್ರಮಗಳು ಜನರಿಗೆ ಲೈಫ್‌ಟೈಮ್ ಅನುಭವ ನೀಡುವುದಲ್ಲದೆ, ಮತ್ತೆ ಮತ್ತೆ ಭೇಟಿ ನೀಡುವ ಬಯಕೆ ಹುಟ್ಟಿಸುತ್ತವೆ. ಅಂಥ ಕೆಲ ಆಶ್ರಮಗಳ ಕುರಿತ ವಿವರ ಇಲ್ಲಿದೆ.

ಪ್ರಲೋಭನೆಗಳೊಡ್ಡಿ ಪರೀಕ್ಷಿಸುವ ದೇಗುಲಗಳಿವು!

1. ಆರ್ಟ್ ಆಫ್ ಲಿವಿಂಗ್, ಬೆಂಗಳೂರು

ರವಿಶಂಕರ್ ಗುರೂಜಿ 1982ರಲ್ಲಿ ಹುಟ್ಟು ಹಾಕಿದ ಆರ್ಟ್ ಆಫ್ ಲಿವಿಂಗ್ ಆಶ್ರಮ ದೇಶವಿದೇಶಗಳಲ್ಲಿ ಹೆಸರು ಮಾಡಿದೆ. ಪ್ರಪಂಚದಾದ್ಯಂತ ಸುಮಾರು 156 ಶಾಖೆಗಳನ್ನು ಹೊಂದಿದ್ದು, ವಾಲಂಟೀರ್ ಬೇಸ್ಡ್ ಸಂಸ್ಥೆಯಾಗಿದೆ. ಇಲ್ಲಿ ಹಲವಾರು ಸೆಲ್ಫ್ ಡೆವಲಪ್ಮೆಂಟ್ ಕೋರ್ಸ್‌ಗಳು ಲಭ್ಯವಿದ್ದು, ಉಸಿರಾಟ ತಂತ್ರಗಳು, ಯೋಗ, ಧ್ಯಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಸಂಸ್ಥೆಯು ಆಗಾಗ ದೇಶವಿದೇಶಗಳಲ್ಲಿ ಕಾರ್ಯಕ್ರಮ ಆಯೋಜಿಸಿ, ಜನರಿಗೆ ಬದುಕನ್ನು ಉತ್ತಮಗೊಳಿಸಿಕೊಳ್ಳುವುದು ಹೇಗೆ ಎಂಬ ಕುರಿತು ಆಧ್ಯಾತ್ಮದ ಮುಖೇನ ಉತ್ತರ ನೀಡುತ್ತದೆ.

2. ಶಿವಾನಂದ ಯೋಗ ವೇದಾಂತ ಧನ್ವಂತರಿ ಆಶ್ರಮ, ಕೇರಳ

ಕೇರಳದ ಪಶ್ಚಿಮ ಘಟ್ಟಗಳ ನಡುವೆ ನಿಂತ ಈ ಆಶ್ರಮಕ್ಕೆ ಭೇಟಿ ಇತ್ತರೆ ಸುತ್ತಲಿನ ಪರಿಸರವೇ ಮನಸ್ಸಿನ ಮಂಕನ್ನು ಕ್ಷಣಾರ್ಧದಲ್ಲಿ ಮಾಯ ಮಾಡಬಲ್ಲದು. ಯೋಗ ಹಾಗೂ ಧ್ಯಾನಾಸಕ್ತರು ದೊಡ್ಡ ಸಂಖ್ಯೆಯಲ್ಲಿ ಈ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಭಾರತದಲ್ಲಿ ಯೋಗ ಕಲಿಯಬಯಸುವವರಿಗೆ ಇದು ಅತ್ಯುತ್ತಮ ತಾಣ ಎಂದು ಹೆಸರು ಮಾಡಿದೆ. ಆಶ್ರಮವು ಯೋಗ ಕೋರ್ಸ್ ಹೇಳಿಕೊಡುವುದರ ಜೊತೆಗೆ ಮದ್ಯಪಾನ ರಹಿತ, ಸಸ್ಯಾಹಾರಿ ಜೀವನದ ಪ್ರಾಮುಖ್ಯತೆಯನ್ನು ಸಾರುತ್ತಿದೆ. ಇಲ್ಲಿ ಕರ್ಮ ಯೋಗ ಕೂಡಾ ಇದ್ದು, ಇಲ್ಲೇ ವಾಸಿಸುವವರು ಪ್ರತಿ ದಿನ ಒಂದು ಗಂಟೆಗಳ ಕಾಲ ಆಶ್ರಮದ ಕೆಲಸಗಳಲ್ಲಿ ಸಹಾಯ ಮಾಡಬೇಕಾಗುತ್ತದೆ. ಯೋಗ ಕುರಿತ ಪ್ರವಚನಗಳೂ ಇಲ್ಲಿ ನಿರಂತರವಾಗಿ ನಡೆಯುತ್ತಲೇ ಇರುತ್ತವೆ.

3. ಈಶ ಯೋಗ ಕೇಂದ್ರ, ಕೊಯಮತ್ತೂರು

ತಮಿಳುನಾಡಿನ ಕೊಯಮತ್ತೂರಿನ ವೆಲ್ಲಯನಗಿರಿ ಬೆಟ್ಟದ ಮೇಲೆ ಇರುವ ಈಶಾ ಯೋಗ ಕೇಂದ್ರವು ಜನಪ್ರಿಯ ಆಧ್ಯಾತ್ಮ ಕೇಂದ್ರ. ಈಶಾ ಫೌಂಡೇಶನ್‌ನ ಏಕೈಕ ಉದ್ದೇಶವೆಂದರೆ ಜನರನ್ನು ಆಧ್ಯಾತ್ಮಿಕ ಹಾಗೂ ದೈಹಿಕವಾಗಿ ಆರೋಗ್ಯವಾಗಿಡಲು ಶಿಕ್ಷಣ ನೀಡುವುದು. ಸದ್ಗುರು ಜಗ್ಗಿ ವಾಸುದೇವ್ 1992ರಲ್ಲಿ ನಿರ್ಮಿಸಿದ ಈ ಆಶ್ರಮವು ಹಲವಾರು ಯೋಗ ಹಾಗೂ ಪರಿಸರ ಸಂಬಂಧಿ ಕಾರ್ಯಕ್ರಮಗಳಿಂದ ದೇಶಾದ್ಯಂತ ಹೆಸರು ಮಾಡಿದೆ. ಇದರ ಇನ್ನರ್ ಇಂಜಿನಿಯರಿಂಗ್ ಪ್ರೋಗ್ರಾಂ ಜನರನ್ನು ತಮ್ಮ ಇನ್ನರ್ ಸೆಲ್ಫ್ ಕುರಿತು ಅಧ್ಯಯನ ಮಾಡವಂತೆ ಪ್ರೇರೇಪಿಸುತ್ತದೆ. ಧ್ಯಾನ ಹಾಗೂ ಯೋಗ ಇಲ್ಲಿ ಪ್ರತಿದಿನ ನಡೆಯುತ್ತದೆ. 

ವಂಶ ವೃದ್ಧಿಗೆ ಮನೆ ಮುಂದಿರಲಿ ಅಶೋಕ ಮರ!

4. ಮಾತಾ ಅಮೃತಾನಂದಮಯಿ ಆಶ್ರಮ, ಕೊಲ್ಲಂ

ತಮ್ಮ ಬೆಂಬಲಿಗರಲ್ಲಿ ಅಮ್ಮ ಎಂದೇ ಹೆಸರಾಗಿರುವ ಮಾತಾ ಅಮೃತಾನಂದಮಯಿ ಅವರು ದೇಶದ ಖ್ಯಾತ ಆಧ್ಯಾತ್ಮ ನಾಯಕರಲ್ಲಿ ಒಬ್ಬರಾಗಿದ್ದಾರೆ. ತಬ್ಬಿಕೊಳ್ಳುವ ತಾಯಿ ಎಂದೇ ಇವರು ಜನಪ್ರಿಯರಾಗಿದ್ದಾರೆ. ಕೊಲ್ಲಂನಲ್ಲಿರುವ ಇವರ ಆಶ್ರಮದಲ್ಲಿ ಅಮ್ಮ ತಮ್ಮನ್ನು ನಂಬಿ ಬಂದವರ ಸಮಸ್ಯೆಗಳನ್ನು ಆಲಿಸಿ, ಅವೆಲ್ಲಕ್ಕೂ ಉತ್ತರ ನೀಡುತ್ತಾರೆ. ಸಮಸ್ಯೆಯಿಂದ ಹೊರಬರಲು ದಾರಿ ತೋರಿಸುತ್ತಾರೆ. ಅಪ್ಪಿಕೊಂಡು ಸಮಾಧಾನ ಹೇಳುತ್ತಾರೆ. ಅಮ್ಮನನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಶಿಶ್ಯವರ್ಗ ಇಲ್ಲಿಗೆ ಆಗಮಿಸುತ್ತದೆ.

5. ಶ್ರೀ ಅರಬಿಂದೋ ಆಶ್ರಮ, ಪುದುಚೆರಿ

ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿರುವ ಅರಬಿಂದೋ ಆಶ್ರಮಕ್ಕೆ ಬೇರೆ ವಿವರಣೆಗಳೇ ಬೇಕಿಲ್ಲ. ಫ್ರೆಂಚ್ ಮಹಿಳೆ ಮೀರಾ ಅಲ್ಫಾಸಾ ಹಾಗೂ ಅರಬಿಂದೋ ಅವರು ಸೇರಿ ನಿರ್ಮಿಸಿದ ಈ ಆಶ್ರಮದ ಶಾಖೆಗಳು ಇಂದು ದೇಶಾದ್ಯಂತ ಹಬ್ಬಿವೆ. ಆಶ್ರಮದಲ್ಲಿ 80 ವಿಭಾಗಗಳಿದ್ದು, ಇಲ್ಲಿರಲು ಬರುವವರು ದಿನಕ್ಕೊಂದು ವಿಭಾಗದಲ್ಲಿರಬೇಕಾಗುತ್ತದೆ. ಇಲ್ಲಿ ಲೈಬ್ರರಿ, ಆಟದ ಮೈದಾನ, ಡೈರಿ, ನರ್ಸಿಂಗ್ ಹೋಂ, ಗಾರ್ಡನ್, ತೋಟ, ಗೆಸ್ಟ್ ಹೌಸ್ ಮುಂತಾದ ವ್ಯವಸ್ಥೆಗಳಿವೆ. 

6. ಓಶೋ ಮೆಡಿಟೇಶನ್ ರೆಸಾರ್ಟ್, ಪೂನಾ

ದೇಶದ ಅತ್ಯುತ್ತಮ ಸ್ಪಿರಿಚುಯಲ್ ಕೇಂದ್ರಗಳಲ್ಲಿ ಒಂದೆನಿಸಿಕೊಂಡಿರುವ ಓಶೋ ಮೆಡಿಟೇಶನ್, ಹೊಸ ತಲೆಮಾರಿನ ಸ್ಪಾ ಹಾಗೂ ಸಾಂಪ್ರದಾಯಿಕ ಆಶ್ರಮದ ಸಮ್ಮಿಲನ. ಜಗತ್ತಿನಾದ್ಯಂತದ ಓಶೋ ಫಾಲೋವರ್ಸ್ ಇಲ್ಲಿ ಬಂದು ಶಾಂತಿ ಕಂಡುಕೊಳ್ಳುತ್ತಾರೆ.

Follow Us:
Download App:
  • android
  • ios