ರಾಮಾಯಣ, ಮಹಾಭಾರತ ಹಾಗೂ ಹಿಂದೂಗಳು ಆಚರಿಸುವ ಹಬ್ಬಗಳಿಗೂ ಅವಿನಾಭಾವ ಸಂಬಂಧವಿದೆ. ಅದರಲ್ಲಿಯೂ ಬೆಳಕಿನ ಹಬ್ಬ ದೀಪಾವಳಿಗೆ ಈ ಮಹಾಕಾವ್ಯಗಳೊಂದಿಗೆ ಎಲ್ಲಿಲ್ಲದ ನಂಟು. ದೀಪ ವಿಜಯದ ಸಂಕೇತ. ಏನೀ ನಂಟು?

ದುಷ್ಟ ಶಕ್ತಿಯ ರಕ್ಷಣೆಯ ಸಂಕೇತವಾಗಿಯೇ ದೀಪಾವಳಿಯನ್ನು ಆಚರಿಸಲಾಗುತ್ತದೆ. ದುಷ್ಟ ರಾವಣನ ಕಪಿ ಮುಷ್ಟಿಯಿಂದ ಸೀತೆಯನ್ನು ಪಾರು ಮಾಡಿ, ಅಯೋಧ್ಯೆಗೆ ಹಿಂದಿರುಗಿದ ದಿನದಂದೇ ದೀಪಾವಳಿಯನ್ನು ಆಚರಿಸಲಾಗುತ್ತದೆ. ಅಯೋಧ್ಯೆಗೆ ರಾಮ-ಸೀತಾ ಆಗಮಿಸಿದ ದಿನದ ಸಂಭ್ರಮವನ್ನು ದೀಪಗಳಿನ್ನಿಟ್ಟು ಆಚರಿಸಲಾಗುತ್ತದೆ.

ಅಲ್ಲದೇ ಮಹಾಭಾರತಕ್ಕೂ ಇದೆ ದೀಪಾವಳಿ ನಂಟು. ದೀರ್ಘಾಯುಷ್ಯದ ವರ ಪಡೆದ ನರಕಾಸುರ ಕಂಡ ಕಂಡವರನ್ನು ಸಂಹರಿಸುತ್ತಿದ್ದ. ಈತನ ಸೊಕ್ಕನ್ನು ಅಡಗಿಸಿದ್ದು ಕೃಷ್ಣ. ನರಕಾಸುರ ಶ್ರೀ ಕೃಷ್ಣ ಪರಮಾತ್ಮನಿಂದ ಸಂಹಾರವಾದ ದಿನವೇ ನರಕ ಚತುರ್ದಶಿ. 

ಅಷ್ಟೇ ಅಲ್ಲ, ಹನ್ನೆರಡು ವರ್ಷಗಳ ಅಜ್ಞಾತವಾಸದಲ್ಲಿದ್ದ ಪಾಂಡವರು ಹಸ್ತಿನಾವುರಕ್ಕೆ ಮರಳಿದ್ದು, ದೀಪಾವಳಿಯಂದೇ. ಮತ್ತದೇ ಧರ್ಮದ ಗೆಲವು. ಅಂದು ಮಣ್ಣಿನ ಹಣತೆ ಮಾಡಿ, ದೀಪ ಹಚ್ಚಿ ಜನರು ಸಂಭ್ರಮಿಸಿದ್ದರು. ವಿಕ್ರಮಾದಿತ್ಯನಿಗೆ ಪಟ್ಟಾಭಿಷೇಕವಾದ ದಿನವೂ ದೀಪಾವಳಿಯಂದೇ.

ಒಟ್ಟಿನಲ್ಲಿ ಅಧರ್ಮದ ವಿರುದ್ಧ ಧರ್ಮ ಗೆಲವು ಸಾಧಿಸಿ, ದುಷ್ಟರನ್ನು ಸಂಹರಿಸಿದ ದಿನವೇ ದೀಪಾವಳಿ.