ಜನವರಿ 25 ರಂದು ಸೌರಮಂಡಲದ ಆರು ಗ್ರಹಗಳು ಒಂದೇ ಸರಳ ರೇಖೆಯಲ್ಲಿ ಗೋಚರಿಸಲಿವೆ. ಈ ಅಪರೂಪದ ವಿದ್ಯಮಾನವನ್ನು ಬರಿಗಣ್ಣಿನಿಂದಲೇ ವೀಕ್ಷಿಸಬಹುದು.
ಈ ಬಾರಿ ಮಹಾಕುಂಭಮೇಳ, ಇನ್ನೊಂದು ಕಡೆ ಗಣರಾಜ್ಯೋತ್ಸವಕ್ಕೆ ತಯಾರಿ ನಡೆಯುತ್ತಿರುವ ಹೊತ್ತಲ್ಲೇ ಬಾಹ್ಯಾಕಾಶದಲ್ಲಿ ಅತ್ಯಪರೂಪದ ಖಗೋಳ ಕೌತುಕವೊಂದು ನಡೆಯಲಿದ್ದು ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಜಗತ್ತಿನಾದ್ಯಂತ ಜನರು ಆಕಾಶದತ್ತ ಮುಖ ಮಾಡಿ ನಿಂತಿದ್ದಾರೆ.
ಹೌದು. ಜನೆವರಿ 25ರಂದು ಬಾಹ್ಯಾಕಾಶದಲ್ಲಿ ಅಪರೂಪದ ವಿದ್ಯಮಾನವೊಂದು ನಡೆಯಲಿದೆ. ಒಂದಲ್ಲ ಎರಡಲ್ಲ ಸೌರಮಂಡಲದ ಆರು ಗ್ರಹಗಳು ಗಣರಾಜ್ಯೋತ್ಸವದ ಶಿಸ್ತಿನ ಸಿಪಾಯಿಗಳಂತೆ ಒಂದೇ ಸರಳ ರೇಖೆಯಲ್ಲಿ ಪರೇಡ್ ನಡೆಸಲಿವೆ. ಬುಧ, ಶುಕ್ರ, ಮಂಗಳ, ಗುರು ಮತ್ತು ಶನಿಗ್ರಹಗಳು ಸಾಲಾಗಿ ಸಂಚಾರ ಮಾಡಲಿವೆ. ವಿಶೇಷವೆಂದರೆ ಈ ವಿದ್ಯಮಾನವನ್ನು ಬರಿಗಣ್ಣಿನಿಂದಲೇ ನೋಡಬಹುದು ಎಂದು ಬಾಹ್ಯಾಕಾಶ ತಜ್ಞರು ತಿಳಿಸಿದ್ದಾರೆ.
ಖಗೋಳ ಆಸಕ್ತರಿಗೆ ವಿಶೇಷ ದಿನ:
ಆಕಾಶದಲ್ಲಿ ಸಂಭವಿಸಲಿರುವ ಈ ಖಗೋಳ ವಿಸ್ಮಯ. ಬಾಹ್ಯಾಕಾಶ ಘಟನೆಗಳಲ್ಲಿ ಆಸಕ್ತಿ ಹೊಂದಿರುವವರಿಗೆ ವಿಶೇಷ ದಿನವಾಗಲಿದೆ. ಈ ದಿನ ಆಕಾಶದಲ್ಲಿ ಏಕಕಾಲದಲ್ಲೇ ಆರು ಗ್ರಹಗಳ ಅಪರೂಪದ ದೃಶ್ಯವನ್ನು ಬರಿಗಣ್ಣಿನಲ್ಲೇ ನೋಡಬಹುದು. ಗ್ರಹಗಳ ಈ ಪರೇಡ್ ನೀವು ಯಾವಾಗ ಮತ್ತು ಹೇಗೆ ನೋಡಬಹುದು ಎಂಬ ಸಂಪೂರ್ಣ ವಿವರಗಳನ್ನು ತಿಳಿಸುತ್ತೇವೆ.
ಯಾವಾಗ ವೀಕ್ಷಿಸಬಹುದು?
ಲಕ್ನೋ ವಿಶ್ವವಿದ್ಯಾನಿಲಯದ ಗಣಿತ ಮತ್ತು ಖಗೋಳಶಾಸ್ತ್ರ ವಿಭಾಗದ ಶಿಕ್ಷಕಿ ಡಾ.ಅಲ್ಕಾ ಮಿಶ್ರಾ ಅವರ ಪ್ರಕಾರ, ಇದು ಅತ್ಯಂತ ಅಪರೂಪದ ಘಟನೆಯಾಗಿದೆ. ಜನವರಿ 25 ರಂದು ಸೂರ್ಯಾಸ್ತದ ನಂತರ, ಗ್ರಹಗಳ ಜೋಡಣೆಯು ರೂಪುಗೊಳ್ಳುತ್ತದೆ, ಇದರಲ್ಲಿ 6 ಗ್ರಹಗಳು ಒಂದು ದಿಕ್ಕಿನಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತವೆ. ಸೂರ್ಯಾಸ್ತದ ನಂತರ, ಮಂಗಳ, ಗುರು, ಶುಕ್ರ, ಶನಿ, ಯುರೇನಸ್ ಮತ್ತು ನೆಪ್ಚೂನ್ ಅನ್ನು ಆಕಾಶದಲ್ಲಿ ಒಟ್ಟಿಗೆ ಕಾಣಬಹುದು. ಜನವರಿ 25 ರಂದು ಸಂಜೆ 5:37 ರಿಂದ 7:00 ರವರೆಗೆ ಈ ಅದ್ಭುತ ದೃಶ್ಯವನ್ನು ನೀವು ನೋಡಬಹುದು.
ವೀಕ್ಷಣೆ ಹೀಗಿರಲಿ:
ಗ್ರಹಗಳ ಪರೇಡ್ ನೋಡುವ ಆನಂದವು ಬರಿಗಣ್ಣಿನಿಂದ ಮಾತ್ರ ಸಾಧ್ಯ. ಆದರೆ ನೀವು ಮೊಬೈಲ್ ಫೋನ್ ಅಥವಾ ಗೂಗಲ್ ಸ್ಕೈ ಅಪ್ಲಿಕೇಶನ್ ಮತ್ತು ಸ್ಟೆಲೇರಿಯಮ್ ಅಪ್ಲಿಕೇಶನ್ ಮೂಲಕ ಈ ಅದ್ಭುತ ಖಗೋಳ ವಿದ್ಯಮಾನವನ್ನು ನೋಡಬಹುದು. ಕೆಲವು ನಗರಗಳಲ್ಲಿ, ಮಾಲಿನ್ಯ, ಹೊಗೆ ಅಥವಾ ಕೆಟ್ಟ ಹವಾಮಾನದಿಂದಾಗಿ ಗ್ರಹಗಳು ಆಕಾಶದಲ್ಲಿ ಗೋಚರಿಸುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಈ ಮಾಧ್ಯಮಗಳ ಮೂಲಕವೂ ನೀವು ಗ್ರಹಗಳ ಮೆರವಣಿಗೆಯನ್ನು ನೋಡಲು ಸಾಧ್ಯವಾಗುತ್ತದೆ.
ಗ್ರಹಗಳ ಪೆರೇಡ್ ಜೊತೆಗೆ ಮತ್ತೊಂದು ವಿಸ್ಮಯ!
ಜನವರಿ 25 ರಂದು ಆಕಾಶದಲ್ಲಿ 6 ಗ್ರಹಗಳ ಮೆರವಣಿಗೆ ನಡೆಯಲಿದೆ ಜೊತೆಗೆ ಜ. 29 ರಂದು ಮೌನಿ ಅಮವಾಸ್ಯೆಯ (ಮೌನಿ ಅಮಾವಾಸ್ಯೆ 2025) ರಾತ್ರಿ, ಬಾಹ್ಯಾಕಾಶದಲ್ಲಿ ನಕ್ಷತ್ರಗಳ ಸಮೂಹವು ಗೋಚರಿಸುತ್ತದೆ. ಚಂದ್ರನಿಲ್ಲದ ರಾತ್ರಿಯಲ್ಲಿ, ನಕ್ಷತ್ರಗಳ ಗುಂಪು ಆಕಾಶದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ ಮತ್ತು ವಿಶ್ವದ ಆಗಾಧತೆ, ಅದ್ಭುತವನ್ನು ಕಣ್ತುಂಬಿಕೊಳ್ಳಬಹುದು. ಆ ದಿನದಂದು ಬಯಲು ಪ್ರದೇಶಕ್ಕೆ ತೆರಳಿ ನಗರ ಅಥವಾ ಪಟ್ಟಣಗಳಿಂದ ಬಯಲು ಪ್ರದೇಶದಿಂದ ಸ್ಪಷ್ಟವಾಗಿ ನೋಡಬಹುದಾಗಿದೆ.
