ಬೇಸಿಗೆಯ ಸಮಯ ರೈತರೆಲ್ಲ ತನ್ನ ಹೊಲಗದ್ದೆಗಳ ಕಾರ್ಯಗಳನ್ನು ಮುಗಿಸಿ ಮನೆಯಲ್ಲಿ ನಿರಾಳವಾಗಿ ಕಾಲ ಕಳೆಯುವ ಸಮಯ. ಗಿಡ-ಮರಗಳಲ್ಲಿ ಹಸಿರು ಸಿರಿ ಚಿಮ್ಮುವ ಸಂಭ್ರಮ.ಇಂಥ ಸಂಭ್ರಮದಲ್ಲಿ ಗಂಡಸರಿಗೆ ಬರುವ ಹಬ್ಬ ಹೋಳಿ.ಕಾಮವು ಕ್ಷಣಿಕ ಪ್ರೇಮವು ಶಾಶ್ವತ,ಕಾಮವು ದೈಹಿಕ,ಪ್ರೇಮವು ಮಾನಸಿಕ.ನಮ್ಮ ಅಂತರಂಗ ಬಹಿರಂಗ ಶುದ್ಧಿಯಿಂದ ಕಾಮವನ್ನು ನಿಗ್ರಹಿಸಿ ಪ್ರೇಮವನ್ನು ಸಾಕ್ಷಾತ್ಕರಿಸಿಕೊಳ್ಳುವ ಮೂಲಕ ಬದುಕನ್ನು ಕಂಡುಕೊಳ್ಳುವ ಪರಿಯೇ ಕಾಮ ದಹನದ ಹೋಳಿಹಬ್ಬ.ಇದನ್ನು ವಸಂತೋತ್ಸವ,ರಂಗಪಂಚಮಿ,ಫಗ್ವಾ,ಡೋಲ್ ಯಾತ್ರಾ ಎಂಬ ಹೆಸರುಗಳಿಂದ ದೇಶದೆಲ್ಲೆಡೆ ಆಚರಿಸುತ್ತಾರೆ.ಇತಿಹಾಸ ಕಾಲದಲ್ಲಿಯೂ ಹೋಳಿ ಹಬ್ಬ ಆಚರಣೆಯ ಬಗ್ಗೆ ಐತಿಹ್ಯಗಳು ದೊರೆತಿವೆ. ವಿಜಯನಗರದ ಅರಸರ ಕಾಲದಲ್ಲಿ ಹಾಗೂ ಅಹಮದ್‌ನಗರ,ಮೇವಾರ ಮತ್ತು ಬುಂಡಿಯಲ್ಲಿರುವ ಚಿತ್ರಕಲೆಯಲ್ಲಿ ಈ ಹಬ್ಬ ಆಚರಣೆ ಕುರಿತ ಕುರುಹುಗಳು ದೊರೆತಿವೆ. ಭಾಗವತ ಪುರಾಣ ಮತ್ತು ವಿಷ್ಣು ಪುರಾಣದಲ್ಲಿಯೂ ಈ ಕುರಿತ ಮಾಹಿತಿ ಉಲ್ಲೇಖವಿದೆ.