ಅನಸೂಯ ಪತಿವ್ರತಾ ಭಂಗಕ್ಕೆ ತ್ರಿ ಮೂರ್ತಿಗಳು ಯತ್ನ

ಹಿಂದನ ವಾರದಿಂದ...

ತ್ರಿಶಕ್ತಿಗಳ ಮಾತು ಕೇಳಿ ತ್ರಿಮೂರ್ತಿಗಳು ಬಂದು ಅನಸೂಯಾ ಮನೆಯಲ್ಲಿ ಕೂತಿದ್ದರು. ನಗ್ನವಾಗಿ ಬರುತ್ತಾಳೇನೋ ಅನಸೂಯಾ ಅಂತ ಕಾದು ಕೂತಿದ್ದವರಿಗೆ ಅನಸೂಯಾ ಹೊರ ಬಂದದ್ದು ನೋಡಿ ದಿಗ್ಭ್ರಮೆಯಾಗಿತ್ತು. 

ಅನಸೂಯಾ ದೇವರ ಕೋಣೆಯಿಂದ ತನ್ನ ಪತಿ ದೇವರ ಕಮಂಡಲವನ್ನು ತಂದಿದ್ದಳು. ತಂದು ಆ ನೀರನ್ನ ಆ ತ್ರಿಮೂರ್ತಿಗಳ ಮೇಲೆ ಪ್ರೋಕ್ಷಿಸಿಬಿಟ್ಟಳು. ಮಂತ್ರಜಲ ಬಿದ್ದ ಮರುಕ್ಷಣವೇ ಸಾಕ್ಷಾತ್ ತ್ರಿಮೂರ್ತಿಗಳಂಥ ತ್ರಿಮೂರ್ತಿಗಳೇ ಪುಟ್ಟ ಕಂದಮ್ಮಗಳಂತಾಗಿಬಿಟ್ಟರು. ನಂತರ ಆ ಕಂದಮ್ಮಗಳನ್ನ ಎತ್ತಾಡಿಸುತ್ತಾ ಮೂವರಿಗೂ ಸ್ತನ್ಯಪಾನ ಮಾಡಿಸಿದಳು ಆ ಮಹಾ ಸಾಧ್ವಿ ಅನಸೂಯ. ಈ ವಿಷ್ಯ ಮತ್ತೆ ನಾರದರ ಮೂಲಕವೇ ತ್ರಿಮೂರ್ತಿಯರ ಪತ್ನಿಯರಿಗೆ ತಿಳಿಯಿತು ಸತ್ಯ ವಿಚಾರ. ಆನಂತರ ತ್ರಿಶಕ್ತಿಗಳೂ ಓಡೋಡಿ ಬಂದು ಅನಸೂಯಾಳಲ್ಲಿ ಅಂಗಲಾಚಿದರು. ಅಮ್ಮಾ ಮಹಾ ಸಾಧ್ವಿ ನಮ್ಮದು ತಪ್ಪಾಯಿತು ನಮ್ಮ ಪತಿಗಳನ್ನು ನಮಗೆ ಮರಳಿಸೆಂದು ಗೋಳಿಟ್ಟರು. ಆಗಲೇ ಅನಸೂಯಾಗೆ ಗೊತ್ತಾಗಿದ್ದು ಇವರು ಸೃಷ್ಟಿ ಸ್ಥಿತಿ ಲಯ ಕರ್ತ ಮಹಾ ಮೂರ್ತಿಗಳು ಅಂತ. 

ತಕ್ಷಣವೇ ಈ ವಿಚಾರ ಅತ್ರಿ ಮಹರ್ಷಿಗಳ ಇಂದ್ರಿಯಾತೀತ ಪ್ರಜ್ಞೆ ಜಾಗೃತವಾಗಿ ಆಶ್ರಮಕ್ಕೆ ಬಂದರು. ದೇವತೆಗಳನ್ನು ಪ್ರಾರ್ಥಿಸಿದರು. ಹೇಗೂ ನಮಗೆ ಸಂತಾನವಿಲ್ಲ. ಇಷ್ಟು ದೂರ ನಮಗಾಗಿ ಬಂದಿದ್ದೀರಿ, ಪುತ್ರರನ್ನ ಅನುಗ್ರಹಿಸಿ ಎಂದು ಪ್ರಾರ್ಥಿಸಿದರು ಅತ್ರಿ ಅನಸೂಯೆಯರು. ಆಗ ದೇವತೆಗಳು ನಿಮ್ಮ ಕೋರಿಕೆ ನೆರವೇರಿಸುತ್ತೇವೆ ಎಂದು ತ್ರಿಮೂರ್ತಿಗಳೂ ಆಶಿರ್ವದಿಸಿದರು. ಆಗ ಶಿವನ ಅಂಶದಿಂದ ದೂರ್ವಾಸ ಮುನಿಯೂ, ವಿಷ್ಣುವಿನಿಂದ ದತ್ತನೂ ಜನಿಸಿದರು. ಮುಖ್ಯವಾಗಿ ಬ್ರಹ್ಮನಿಂದ ಬಂದವನೇ ನಾವು ಇಂದು ಅಧ್ಯಯನ ಮಾಡುತ್ತಿರುವ ಚಂದ್ರ. 

ದತ್ತಾತ್ರೇಯನ ಅವತಾರ:
ಹೀಗೆ ತ್ರಿಮೂರ್ತಿ ಸ್ವರೂಪವಾದ ದತ್ತಾತ್ರೇಯನ ಅವತಾರವಾಯ್ತು. ಅತ್ರಿ ಅನಸೂಯೆಯರ ಮಗನಾಗಿ ಬಂದ ದತ್ತಾತ್ರೇಯ ಇಂದು ಅವಧೂತ ಶಿರೋಮಣಿಯಾಗಿ ಬ್ರಹ್ಮಾಂಡವನ್ನೇ ಆಳುತ್ತಿದ್ದಾನೆ. ದತ್ತಾತ್ರೇಯನನ್ನ ಅವಧೂತ ಅಂತ ಕರೆಯಲಿಕ್ಕೂ ಒಂದು ಮಹತ್ವದ ಹಿನ್ನೆಲೆ ಇದೆ. ಇರಲಿ ಮತ್ತೆಂದಾದರೂ ಆ ವಿಷಯವಾಗಿ ಬರೆಯುವೆ. ಸದ್ಯಕ್ಕೆ ನಮ್ಮ ವಸ್ತು ಚಂದ್ರ. ಬ್ರಹ್ಮನಿಂದ ಬಂದವನೇ ಚಂದ್ರ. ಆ ಚಂದ್ರ ತನ್ನ ಒಂದು ಕಳೆಯನ್ನು ದತ್ತನಿಗೆ ಕೊಟ್ಟು ತನ್ನ ಲೋಕಕ್ಕೆ ಹೊರಟು ಹೋದ. ಹೀಗೆ ಚಂದ್ರನ ಅವತಾರವಾಯ್ತು. 

ಚಂದ್ರನ ಇನ್ನೊಂದು ಹುಟ್ಟು
ಇಂಥ ಚಂದ್ರನ ಹುಟ್ಟಿಗೆ ಇನ್ನೂ ಒಂದು ಕಥೆಯನ್ನ ಹೇಳತ್ತೆ ಪುರಾಣ. ಅದೇನು ಅಂತ ನೋಡಿದರೆ ಅದು ನಮ್ಮನ್ನು ಕರೆದೊಯ್ಯುವುದು ದೇವಾಸುರ ಸಂಗ್ರಾಮದತ್ತ. ದೇವತೆಗಳಿಗೂ - ರಾಕ್ಷಸರಿಗೂ ಮಹಾ ಯುದ್ಧ. ಯುದ್ಧದಲ್ಲಿ ಸತ್ತ ರಾಕ್ಷಸರನ್ನೆಲ್ಲಾ ರಾಕ್ಷಸರ ಗುರು ಶುಕ್ರಾಚಾರ್ಯರು ತಮ್ಮ ಮೃತ ಸಂಜೀವಿನಿ ವಿದ್ಯೆಯಿಂದ ಬದುಕಿಸಿಬಿಡ್ತಿದ್ರು. ಆದ್ರೆ ದೇವತೆಗಳು ಹಾಗಲ್ಲ. ಮೃತರಾದರೆ ಮೃತರೇ. ಮತ್ತೆ ಎದ್ದು ಬರುವ ಯಾವ ಸಂಜೀವಿನಿಯೂ ಇರಲಿಲ್ಲ. ಇಂಥ ಸಂದರ್ಭದಲ್ಲಿ ದೇವತೆಗಳಿಗೆ ಹೊಳೆದಿದ್ದು ಅಮೃತ ಮಂಥನ ಯೋಜನೆ. ಹಾಗಾಗಿ ದೇವತೆಗಳೂ-ದೈತ್ಯರೂ ಸೇರಿ ಅಮೃತ ಮಂಥನಕ್ಕೆ ಸಿದ್ಧರಾಗ್ತಾರೆ. ಕ್ಷೀರ ಸಾಗರ ಕಡೆಯಲು ಸಿದ್ಧರಾಗುತ್ತಾರೆ. ವಾಸುಕಿ ಹಗ್ಗವಾಗಿ, ಮಂದಾರ ಪರ್ವತವೇ ಕಡಗೋಲಾಗಿ ನಿಂತು ಸಾಗರ ಮಥಿಸಿದ ಕಥೆ ನಿಮಗೂ ಗೊತ್ತೇ ಇದೆ. ಆ ಮಥನ ಕಾಲದಲ್ಲಿ ಹಾಲಿನಿಂದ ಉಚ್ಚ್ರೈಶ್ರವಸ್, ಕೌಸ್ತುಭ, ಕಲ್ಪವೃಕ್ಷ, ಐರಾವತ, ಕಾಮಧೇನು, ಪಾರಿಜಾತ, ಶಾರ್ಞ್ಗ ಧನ್ವ, ಇಂಥ ಅನೇಕ ಅನರ್ಘ್ಯ ರತ್ನಗಳು ಹೊರ ಬಂದವು. ಅವುಗಳಲ್ಲಿ ಹಾಲಾಹಲವೂ ಬಂತು ಅದನ್ನ ಶಿವ ಸ್ವೀಕರಿಸಿದ, ನಂತರ ಲಕ್ಷ್ಮೀಯೂ ಬಂದಳು. ಆನಂತರ ಚಂದ್ರನೂ ಉದಯಿಸಿದ. ಹೀಗೆ ಹಾಲ್ಗಡಲಲ್ಲಿ ಚಂದ್ರ ಉದಯಿಸದ ಎಂಬುದು ಪುರಾಣ ಕಥೆ. 

ಸ್ಫುರದ್ರೂಪಿ ಚಂದ್ರನ ಸ್ತ್ರೀ ಸಹವಾಸ 

ಹೀಗೆ ಚಂದ್ರನ ಉದಯವಾಯ್ತು. ಈ ಚಂದ್ರ ಅತ್ಯಂತ ಸುಂದರ. ಸ್ಫುರದ್ರೂಪಿ ಅವನ ಸೌಂದರ್ಯಕ್ಕೆ ಎಲ್ಲರೂ ಮರುಳಾಗುತ್ತಿದ್ದರು.  ಇಂಥ ಚಂದ್ರ ನಮ್ಮ ಗ್ರಹಗಳಲ್ಲಿ ಸೇರ್ಪಡೆಯಾದ. ಇಂಥ ಚಂದ್ರನಿಗೆ ಸ್ತ್ರೀಯರ ಕಾಟ ಇದ್ದೇ ಇತ್ತು ಬಿಡಿ. ಯಾವ ಹೆಣ್ಣು ಇವನನ್ನು ಕಂಡರೂ ಇಷ್ಟ ಪಡುತ್ತಿದ್ದರು. ಅಷ್ಟರಲ್ಲಿ ದಕ್ಷ ಬ್ರಹ್ಮನ ಮಕ್ಕಳು ಇವನನ್ನು ಮದುವೆಯಾಗಲು ನಿರ್ಧರಿಸಿದ್ದರು.ಚಂದ್ರನ ಮದುವೆ 
ದಕ್ಷ ಬ್ರಹ್ಮನಿಗೆ ಸಾಕಷ್ಟು ಮಕ್ಕಳಿದ್ದರು. ಅವರಲ್ಲಿ ಮುಖ್ಯವಾದವರು 27 ಜನ.  ಅವರೇ ನಮ್ಮ ಅಶ್ವಿನಿ ಭರಣಿ ಕೃತ್ತಿಕಾ ರೋಹಿಣಿ ಇತ್ಯಾದಿ ಹುಡುಗಿಯರು (ನಕ್ಷತ್ರಗಳು ).  
ಈ ಇಷ್ಟೂ ಜನರು ಒಬ್ಬರನ್ನ ಬಿಟ್ಟು ಒಬ್ಬರಿರ್ತಾ ಇರ್ಲಿಲ್ಲ. ಅಷ್ಟು ಅನ್ಯೋನ್ಯತೆ ಇತ್ತು ಇವರಲ್ಲಿ. ಹೀಗಿರುವಾಗ ಇವರಿಗೆ ಒಂದು ಯೋಚನೆ ಬಂತು ಏನು ಅಂದ್ರೆ ನಾವೆಲ್ಲ ಮದುವೆಯಾಗಿ ಬಿಟ್ರೆ ದೂರವಾಗುತ್ತೇವೆ. ನಮ್ಮ ಸಾಂಗತ್ಯ ದೂರವಾಗತ್ತೆ, ಹಾಗಾಗಿ ನಾವೆಲ್ಲರೂ ಒಬ್ಬನನ್ನೇ ಮದುವೆಯಾಗಬಾರದೇಕೆ ಎಂದು ತೀರ್ಮಾನಿಸಿದರು.  ದೇವತೆಗಳಲ್ಲಿ ಯಾರು ನಮ್ಮನ್ನು ಚೆನ್ನಾಗಿ ನೋಡಿ ಕೊಳ್ತಾನೆ ಅಂತ ಯೋಚಿಸುತ್ತಿದ್ದರು. ಆಗ ಇವರ ಅಂತರಂಗದೊಳಗೆ ಧುಮುಕಿದವನು ನಮ್ಮ ಕಥಾ ನಾಯಕ ಚಂದ್ರ. ಚಂದ್ರ ಹೇಗೂ ಸ್ಫುರದ್ರೂಪಿ ಅವನನ್ನೇ ಮದುವೆಯಾಗೋಣ ಅಂತ ತೀರ್ಮಾನಿಸಿಬಿಟ್ಟರು. 

ಈ ವಿಚಾರವನ್ನ ತಂದೆ ದಕ್ಷಬ್ರಹ್ಮನಲ್ಲೂ ಪ್ರಸ್ತಾಪಿಸಿದರು. ತಂದೆ ಮೊದಲು ಗಾಬರಿ ಪಟ್ಟನಾದರೂ ಮಕ್ಕಳ ಹಟಕ್ಕೆ ಮರುಗಬೇಕಾಯ್ತು. ಕೊನೆಗೆ ಚಂದ್ರನನ್ನ ಕರೆದು ಕೇಳಿದ. ನನ್ನ ಮಕ್ಕಳು ನಿನ್ನನ್ನ ಮದುವೆಯಾಗಬೇಕು ಅಂತ ನಿರ್ಧರಿಸಿದ್ದಾರೆ ನಿನ್ನ ಅಭಿಪ್ರಾಯ ಏನು ಅಂದ. ಅದಕ್ಕೆ ಚಂದ್ರ ನಿಬ್ಬೆರಗಾಗಿ ನೋಡಿದ. ಇತ್ತ ಸಂತೋಷ, ಉತ್ಸಾಹ, ಧೈರ್ಯ, ಹೆಮ್ಮೆ, ಅನುಮಾನ ಎಲ್ಲ ಭಾವಗಳೂ ಒಟ್ಟಿಗೆ ಸಂಗಮಿಸಿ ಒಂದು ಕಡೆ ಸುಮ್ಮನೆ ಕೂತ. ಸಿಕ್ಕ ಅವಕಾಶ ಬಿಡಬಾರದೆಂದು ಆಯ್ತು ಅಂತ ಒಪ್ಪಿಗೆ ಕೊಟ್ಟೇ ಬಿಟ್ಟ. ಅಲ್ಲಿಂದ ಶುರುವಾಯ್ತು ಇಪ್ಪತ್ತೇಳು ತರದ ಕಥೆ. ಚಂದ್ರನ ಕಥೆ - ವ್ಯಥೆ ಕೇಳಿದರೆ ನೀವೂ ತಲ್ಲಣಗೊಳ್ಳುತ್ತೀರಿ. 
(ಮುಂದುವರೆಯುವುದು... )

ಜಾತಕ ನೋಡುವುದು ಹೇಗೆ: ಕಲಿಯಿರಿ

ಗೀತಾಸುತ.
ಸಂಪರ್ಕ ಸಂಖ್ಯೆ :  9741743565 / 9164408090