ಪ್ರಧಾನಿ ಮೋದಿ ಉಲ್ಲೇಖಿಸಿದ ಅಯೋಧ್ಯೆಯ ಧರ್ಮಧ್ವಜದಲ್ಲಿರುವ ಕೋವಿದಾರ ವೃಕ್ಷವು ತ್ರೇತಾಯುಗದಲ್ಲಿ ಶ್ರೀರಾಮನ ರಾಜ್ಯವೃಕ್ಷವಾಗಿತ್ತು. ಋಷಿ ಕಶ್ಯಪರಿಂದ ಸೃಷ್ಟಿಸಲ್ಪಟ್ಟ ಈ ಮಿಶ್ರತಳಿ ವೃಕ್ಷದ ಮೂಲವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದು, ಇದೀಗ ರಾಮಮಂದಿರದ ಧ್ವಜದಲ್ಲಿ ಸ್ಥಾನ ಪಡೆದಿದೆ.

ಅಯೋಧ್ಯೆಯ ರಾಮಮಂದಿರದ ದೇಗುಲ ನಿರ್ಮಾಣದ ಔಪಚಾರಿಕ ಪೂರ್ಣತೆಗಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸಿ ಮುಕ್ಕಾಲು ಗಂಟೆಗಳ ಭಾಷಣ ಮಾಡಿದರು. ಈ ಭಾಷಣದಲ್ಲಿ ಅವರು ಶ್ರೀರಾಮನ ಮಹಿಮೆಯನ್ನು ಹಾಗೂ ಅಯೋಧ್ಯೆಯ ಇತಿಹಾಸಗಳ ಮೇಲೂ ಬೆಳಕು ಚೆಲ್ಲಿದರು. ಇದೇ ಸಂದರ್ಭದಲ್ಲಿ ಅವರು, ಧರ್ಮಧ್ವಜದ ಬಗ್ಗೆ ಮಾಹಿತಿ ನೀಡಿದರು. ಈ ಧರ್ಮಧ್ವಜದಲ್ಲಿ ಇರುವ ಕೋವಿದಾರ ವೃಕ್ಷದ ಕೆತ್ತನೆಯ ಬಗ್ಗೆಯೂ ತಿಳಿಸಿದರು. ಈ ವೃಕ್ಷದ ಹೆಸರು ಅಪರೂಪ ಆಗಿರುವ ಕಾರಣದಿಂದಾಗಿ ಏನಿದು ವೃಕ್ಷ, ಶ್ರೀರಾಮಚಂದ್ರನಿಗೂ, ಇದಕ್ಕೂ ಅದೆಂಥ ನಂಟು? ಅಯೋಧ್ಯೆಯ ಇಕ್ಕೆಲಗಳಲ್ಲಿ ಕಾಣಿಸಿಕೊಳ್ಳುವ ಈ ವೃಕ್ಷದ ಮಹತ್ವ ಏನು ಎಂಬ ಬಗ್ಗೆ ಹಲವರಲ್ಲಿ ಪ್ರಶ್ನೆ ಮೂಡಿದೆ.

ಈ ವೃಕ್ಷದ ಬಗ್ಗೆ, ಅದರ ಇತಿಹಾಸದ ಬಗ್ಗೆ ಸುಧೀರ್​ ಸಾಗರ್​ ಅವರು, ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅವರು ಹೇಳಿದ್ದನ್ನು ಇಲ್ಲಿ ವಿವರಿಸಲಾಗಿದೆ.

ಈ ವೃಕ್ಷದ ಬಗ್ಗೆ ಹೇಳೋಕ್ ಕೂತ್ರೆ ಒಂದು ಪುಸ್ತಕವೇ ಬರೀಬಹುದು ಅಷ್ಟೊಂದಿದೆ ಇದರ ಹಿನ್ನಲೆ ಹಾಗೂ ಕಥೆಗಳು.

ಮೊದಲಿಗೆ… ಈ ವೃಕ್ಷವಿದ್ಯಲಾ, ಇದು ತ್ರೇತಾಯುಗದಲ್ಲಿ ಸಾಕ್ಷಾತ್ ಶ್ರೀರಾಮನ ಅಯೋಧ್ಯೆಯಲ್ಲಿ ಪೂಜನೀಯ ಸ್ಥಾನ ಹೊಂದಿದ್ದಷ್ಟೇ ಅಲ್ಲದೆ, ಶ್ರೀರಾಮನ ಧ್ವಜದಲ್ಲೂ ಸ್ಥಾನ ಹೊಂದಿದ್ದ ವೃಕ್ಷವಿದು. ಆ ಕಾಲದಲ್ಲಿ ಇದೆಷ್ಟು ವಿಶೇಷಸ್ಥಾನ ಹೊಂದಿತ್ತೆಂದರೆ ವಾಲ್ಮೀಕಿಯು ರಾಮಾಯಣದ ಅಯೋಧ್ಯಾಕಾಂಡದಲ್ಲಿ ಇದರ ಬಗ್ಗೆಯೇ ಪ್ರತ್ಯೇಕವಾಗಿ ವರ್ಣಿಸಿ ಬರೆದಿದ್ದಾರೆ.

ಇದರ ಮತ್ತೊಂದು ವಿಶೇಷ ಏನ್ ಗೊತ್ತಾ?

ಈ ವೃಕ್ಷ ಜಗತ್ತಿನ ಮೊದಲ Hybridisation ಅಥವಾ ಸಂಕರಗೊಳಿಸುವಿಕೆಯಿಂದ ಸೃಷ್ಟಿಸಲ್ಪಟ್ಟ ಮಿಶ್ರತಳಿ. ಅಂದರೆ ಎರಡು ಬಗೆಯ ಸಸ್ಯಗಳನ್ನು ಒಂದಾಗಿಸಿ ಹೊಸದಾಗಿ ಸೃಷ್ಟಿಯಾದ ಪ್ರಜಾತಿ. 17ನೇ ಶತಮಾನದಲ್ಲಿ ಮೊದಲ Hybridisation ಆಗಿದ್ದು ಎಂಬುದು ಪಠ್ಯಪುಸ್ತಕಗಳ ಉಲ್ಲೇಖ. ಆದರೆ ಅದಕ್ಕೂ ಯುಗಗಳಿಗೂ ಮೊದಲೇ ಋಷಿ ಕಶ್ಯಪರು ಹೀಗೊಂದು ಪ್ರಯೋಗವನ್ನು ಮಾಡಿದ್ದೂ ಅಲ್ಲದೆ ಅದರಲ್ಲಿ ಯಶಸ್ವಿಯೂ ಆಗಿದ್ದರು. ಅಂದು ಕಶ್ಯಪರು ಮಂದಾರಾ ಹಾಗೂ ಪಾರಿಜಾತಾ ವೃಕ್ಷವನ್ನು ಸಂಕರಗೊಳಿಸಿ ಸೃಷ್ಟಿಸಿದ ಹೊಸಾ ಪ್ರಜಾತಿಯೇ ಕೋವಿದಾರಾ ವೃಕ್ಷ. ನಂತರದಲ್ಲಿ ಇದು ಇಕ್ಷ್ವಾಕು ಸಾಮ್ರಾಜ್ಯದ ರಾಜ್ಯವೃಕ್ಷವಾಗಿಯೂ ಸ್ಥಾನ ಪಡೆದು ಧ್ವಜವನ್ನೂ ಅಲಂಕರಿಸಲ್ಪಟ್ಟಿತು.

ಆದರೆ ಸಂಶೋಧಕರಿಗೆ ಇಲ್ಲೊಂದು ಸಮಸ್ಯೆಯಿತ್ತು. ಅದೇನೆಂದರೆ, Bauhinia variegata ಅನ್ನೋದು ಕೋವಿಧಾರಾ ವೃಕ್ಷದ ಸಸ್ಯಶಾಸ್ತ್ರೀಯ ಹೆಸರು. ಆದರೆ...ಈ ಹೆಸರೇ ಮತ್ತಷ್ಟು ಕನ್ಫ್ಯೂಶನ್ ಮಾಡಾಕಿ, ಇನ್ನಷ್ಟು ಆಳ ಅಧ್ಯಯನಕ್ಕೂ ಕಾರಣವಾಗಿಬಿಟ್ಟಿತ್ತು. ಯಾಕಂದ್ರೆ ನಮ್ಮಲ್ಲಿ ಕಂಚನಾಳ, ಕಾಂಚನ, ಒಂಟೆಕಾಲು, ಬಸವನಪಾದ ಅಂತೆಲ್ಲಾ ಕರೆಯೋ ಕಚ್ನಾರ್ ವೃಕ್ಷದ botanical ಹೆಸರೂ ಕೂಡಾ Bauhinia variegata. ನೋಡೋಕೂ ಬಹುತೇಕ ಎರಡೂ ಹೂಬಹೂ... ಹಾಗಾಗಿ ಇವೆರಡರಲ್ಲಿ ನಿಜವಾದ ತ್ರೇತಾಯುಗದ ಅಸಲೀ ಕೋವಿಧಾರಾ ವೃಕ್ಷ ಯಾವುದು ಅನ್ನೋದು ದೊಡ್ಡ ಕನ್ಫ್ಯೂಶನ್ ಆಗೋಗಿತ್ತು.

ಅಸಲೀ ಕೋವಿದಾರಾ ವೃಕ್ಷವನ್ನೇ ತಂದ ವಿಜ್ಞಾನಿಗಳು

ಇದು ಇವ್ರಿಗಷ್ಟೇ ಅಲ್ಲ, ಸಾಕ್ಷಾತ್ ಕಾಳಿದಾಸನೂ ಈ ವೃಕ್ಷ ಪುಷ್ಪದ ಬಗ್ಗೆ ಪುಟಗಟ್ಟಲೆ ವರ್ಣನೆ ಮಾಡಿದ್ರೂ ಕೂಡಾ, ಅದರ ನಿಜವಾದ ಹೆಸರು ಗೊತ್ತಾಗದೆ ಅವ್ನೂ ಕನ್ಫ್ಯೂಸಾಗಿದ್ದನಂತೆ. ಹಾಗಾಗಿ... BHU ಅಂದರೆ ಬನಾರಸ್ ಹಿಂದೂ ಯೂನಿವರ್ಸಿಟಿಯ ಸಸ್ಯಶಾಸ್ತ್ರ ವಿಭಾಗದ ಪ್ರೊ ಗ್ಯಾನೇಶ್ವರ್ ಚೌಬೆ, ಪ್ರೊ ಅಭಿಷೇಕ್ ದ್ವಿವೇದಿ ನೇತೃತ್ವದ ವಿಜ್ಞಾನಿಗಳ ತಂಡವು ಇದರ ಮೂಲ ತಿಳಿಯೋದಕ್ಕಾಗಿ, ಇದರ ಹಲವಾರು ಪ್ರಜಾತಿಗಳ ಜೆನಿಟಿಕ್ ಅಧ್ಯಯನ ನಡೆಸಿ ಒಂದರ್ಥದಲ್ಲಿ ಅಕ್ಷರಶಃ ಇದರ DNA ಜಾಡು ಹಿಡಿದು ತ್ರೇತಾಯುಗಕ್ಕೇ ಹೋಗಿ ಅಸಲೀ ಕೋವಿದಾರಾ ವೃಕ್ಷವನ್ನೇ ಹುಡುಕಿ ತಂದಿದಾರೆ...

ಶ್ರೀರಾಮನ ಪ್ರೇರಣೆ

ಹೀಗೊಂದು.... ತ್ರೇತಾಯುಗ ದ್ವಾಪರಯುಗಗಳ ಇತಿಹಾಸವಿದ್ದೂ, ಕಲಿಯುಗದಲ್ಲಿ ಮರೆತೇ ಹೋಗಿದ್ದ, ರಾಮಾಯಣ ಮಹಾಭಾರತ ಗ್ರಂಥಗಳಲ್ಲಿಯೂ ಸ್ಥಾನಪಡೆದೂ ಸಂಪೂರ್ಣ ಅಳಿದೇ ಹೋಗಿದ್ದ ಹೀಗೊಂದು ವೃಕ್ಷ ಹಾಗೂ ಧ್ವಜವು, ಸಾಕ್ಷಾತ್ ಶ್ರೀರಾಮನ ಪ್ರೇರಣೆಯಿಂದಾಗಿ, ಇನ್ಯಾವುದೋ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದ ಸಂಶೋಧಕರ ಕಣ್ಣಿಗೆ ಆಕಸ್ಮಿಕವಾಗಿ ಕಾಣಿಸಿಕೊಳ್ಳೋ ಮುಖಾಂತರ, ಒಂದು ಸುದೀರ್ಘ ಅಧ್ಯಯನಕ್ಕೆ ಮುನ್ನುಡಿ ಬರೆದು, ಶ್ರೀರಾಮಂಮದಿರದಲ್ಲಿ ಅನಾವರಣವಾಗುವ ಮುಖಾಂತರ ಹಿಂದೂ ಧರ್ಮದ ಹಿನ್ನಲೆ ಆಳ ಅಗಲಗಳನ್ನು ಜಗತ್ತಿನೆದುರು ಅನಾವರಣಗೊಳಿಸುತ್ತಿದೆ. ಹಾಗಾಗಿ ಇಂದು ಅನಾವರಣವಾಗ್ತಿರೋ ಧರ್ಮಧ್ವಜದಲ್ಲಿ ಸಾಕ್ಷಾತ್ ಶ್ರೀರಾಮನ ರಾಜ್ಯವೃಕ್ಷ ಕೋವಿಧಾರಾ, ವಂಶದ ಪ್ರತೀಕ ಸೂರ್ಯನ ಜೊತೆಗೇ ಹಿಂದೂಧರ್ಮದ ಪ್ರತೀಕವಾಗಿ ಓಂ ಕೂಡಾ ಸ್ಥಾನ ಪಡೆದುಕೊಂಡಿದೆ.