ಅಂಶಿ ಪ್ರಸನ್ನಕುಮಾರ್‌

ಭಾರತವು ನಾನಾ ಧರ್ಮ ಮತ್ತು ಸಂಸ್ಕೃತಿಗಳ ತವರೂರು. ‘ವಿವಿಧತೆಗಳಲ್ಲಿ ಏಕತೆ’ಯನ್ನು ಸಾರುವ ರಾಷ್ಟ್ರ. ಇಲ್ಲಿನ ನೆಲ-ಜಲ, ಶಿಲೆ-ಕಲೆ, ತರು-ಲತೆ- ಹೀಗೆ ಎಲ್ಲವೂ ಪೂಜನೀಯವೇ. ಪ್ರತಿಯೊಬ್ಬರೂ ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವುದರಿಂದ ದೇಶದಲ್ಲಿ ಐಕ್ಯತೆ ಮತ್ತು ಸಮಗ್ರತೆ ಸಾಧ್ಯವಾಗಿದೆ.

ದೇಶದ ಪವಿತ್ರ ನದಿಗಳ ತ್ರಿವೇಣಿ ಸಂಗಮ ಕ್ಷೇತ್ರಗಳಲ್ಲಿ ಕುಂಭಮೇಳದಂತಹ ಉತ್ಸವಗಳನ್ನು ಆಚರಿಸುವುದು ಹಾಗೂ ಪರ್ವಕಾಲದಲ್ಲಿ ಪುಣ್ಯಸ್ನಾನ ಮಾಡುವ ಪದ್ಧತಿ ಪ್ರಾಚೀನ ಕಾಲದಿಂದಲೂ ನಡೆದುಕೊಂಡು ಬಂದಿದೆ. ಉತ್ತರ ಭಾರತದ ಪ್ರಯಾಗ್‌ ರಾಜ್‌, ಹರಿದ್ವಾರ, ನಾಸಿಕ್‌, ಉಜ್ಜಯಿನಿಗಳಂತಹ ಸಂಗಮ ಕ್ಷೇತ್ರಗಳಲ್ಲಿ ಆಚರಣೆಯಲ್ಲಿರುವ ಮಹಾ ಕುಂಭಮೇಳಗಳಲ್ಲಿ ಕೋಟ್ಯಂತರ ಮಂದಿ ಶ್ರದ್ಧಾಭಕ್ತಿಗಳಿಂದ ಭಾಗವಹಿಸಿ, ಪುಣ್ಯಸ್ನಾನ ಮಾಡಿ ಧನ್ಯರಾಗುತ್ತಿದ್ದರು.

1989ರಲ್ಲಿ ಆರಂಭ

ಆದರೆ ಈ ಸೌಭಾಗ್ಯದಿಂದ ದಕ್ಷಿಣ ಭಾರತದ ಭಕ್ತರು ವಂಚಿತರಾಗುತ್ತಿದ್ದುದನ್ನು ಮನಗಂಡ ಕೈಲಾಸಾಶ್ರಮದ ಶ್ರೀ ತಿರುಚ್ಚಿ ಸ್ವಾಮೀಜಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ವೀರಸಿಂಹಾಸನ ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಮೈಸೂರಿನ ಅವಧೂತದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಓಂಕಾರಾಶ್ರಮ ಮಹಾಸಂಸ್ಥಾನದ ಶ್ರೀ ಶಿವಪುರಿ ಸ್ವಾಮೀಜಿಗಳು 1989 ರಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣದ ಪವಿತ್ರ ನದಿಗಳಾದ ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ಸ್ಫಟಿಕ ಸರೋವರ ಸಂಗಮ ಕ್ಷೇತ್ರವೆನಿಸಿದ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲೂಕು ತಿರುಮಕೂಡಲು ಶ್ರೀಕ್ಷೇತ್ರದಲ್ಲಿ ಕುಂಭಮೇಳ ಆಯೋಜಿಸಿದರು. ಅಲ್ಲಿಂದ ಈಚೆಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಅಂದರೆ 1992, 1995, 1998, 2001, 2004, 2007, 2010, 2013, ಮತ್ತು 2016- ಹೀಗೆ ಈವರೆಗೆ ಹತ್ತು ಕುಂಭಮೇಳಗಳು ಜರುಗಿವೆ.

ಪ್ರತಿ ಮೂರು ವರ್ಷಗಳಿಗೊಮ್ಮೆ ಮೂರು ದಿನಗಳು ನಡೆಯುವ ಈ ಪವಿತ್ರಉತ್ಸವವು ಯಾವುದೇ ಜಾತಿ-ಮತ-ಪಂಥಗಳ, ವರ್ಣ-ವರ್ಗಗಳ, ಭೇದ-ಭಾವರಹಿತವಾಗಿ ಸಡಗರ-ಸಂಭ್ರಮಗಳಿಂದ ಸರ್ವಜನಾಂಗದ ಶಾಂತಿ-ಸೌಹಾರ್ದಗಳ ಸಂತೋಷ-ಸಾಮರಸ್ಯಗಳ ಸಂಗಮ. ಆರಂಭಿಕ ವರ್ಷಗಳಲ್ಲಿ ವಿವಿಧ ಮಠಗಳೇ ಸೇರಿ ಕುಂಭಮೇಳ ನಡೆಸುತ್ತಿದ್ದ ಈ ಧಾರ್ಮಿಕ ಉತ್ಸವಕ್ಕೆ ರಾಜ್ಯ ಸರ್ಕಾರದ ಸಹಯೋಗ ದೊರೆಯುತ್ತದೆ. ಮೂರು ದಿನಗಳ ಕಾಲ ನಡೆಯುವ ಇಲ್ಲಿನ ಕುಂಭಮೇಳದಲ್ಲಿ ಮಠಾಧೀಶರು ಮತ್ತು ವಿದ್ವಾಂಸರಿಂದ ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತವೆ. ಕುಂಭಮೇಳದಲ್ಲಿ ಪಾಲ್ಗೊಳ್ಳುವ ಭಕ್ತಾದಿಗಳಿಗೆ ಅನೇಕ ಮಠಗಳು, ಸಂಘ,ಸಂಸ್ಥೆಗಳು ಅನ್ನ ದಾಸೋಹ ಏರ್ಪಡಿಸುತ್ತವೆ.

ಇಲ್ಲಿ ಹರಿಯುವ ತೀರ್ಥವು ಗಂಗಾ ನದಿ ತೀರ್ಥಕ್ಕಿಂತಲೂ ಒಂದು ಗುಲಗಂಜಿ ಪ್ರಮಾಣದಷ್ಟುಹೆಚ್ಚಾದ ಪುಣ್ಯನೆಲೆಯೆಂದು ಶ್ರೀ ಗುಂಜಾ ನರಸಿಂಹಸ್ವಾಮಿ ಹಸ್ತದಲ್ಲಿರುವ ತಕ್ಕಡಿಯು ಸಂಕೇತಿಸುತ್ತದೆ ಎಂಬ ನಂಬಿಕೆ ಇದೆ. ಅತ್ಯಂತ ಪ್ರಾಚೀನವಾದ ಶ್ರೀ ಭಾರದ್ವಾಜ ಋುಷ್ಯಾಶ್ರಮ, ಶ್ರೀ ಚೌಡೇಶ್ವರಿ ದೇವಸ್ಥಾನ ರುದ್ರಪಾದ, ಅಕ್ಷಯ ವಟವೃಕ್ಷ, ಅಶ್ವತ್ಥವೃಕ್ಷ, ಗುಡಿ-ಮಂಟಪಗಳು, ಶ್ರೀ ವ್ಯಾಸರಾಜಮಠ ಮುಂತಾದವುಗಳು ಈ ಕ್ಷೇತ್ರದ ಪ್ರಾಚೀನ ಪಾವಿತ್ರ್ಯತೆಯನ್ನು ನೂರ್ಮಡಿಗೊಳಿಸಿವೆ. ಅನೇಕ ಮತ- ಪಂಥ- ಧರ್ಮಗಳು ಇಲ್ಲಿ ಸಮ್ಮಿಲನಗೊಂಡು ಸರ್ವಧರ್ಮಗಳ ಸಂಗಮ ಕ್ಷೇತ್ರವೂ ಆಗಿ ಕಂಗೊಳಿಸುತ್ತಿದೆ.

ಮೂರು ದಿನಗಳ ಕಾಲ ಸಂಭ್ರಮ

ಶ್ರೀ ವಿಳಂಬಿ ನಾಮ ಸಂವತ್ಸರದಲ್ಲಿ 11ನೇ ಕುಂಭಮೇಳವು ಫೆಬ್ರವರಿ 17ರಿಂದ 19ರವರೆಗೆ ನಡೆಯಲಿದೆ. ಫೆ.17ರಂದು ಬೆಳಗ್ಗೆ 6ಕ್ಕೆ ಮಾಘ ಶುದ್ಧ ತ್ರಯೋದಶಿ ಪುಷ್ಯ ನಕ್ಷತ್ರ ಶ್ರೀ ಅಗಸ್ತೆ್ಯೕಶ್ವರ ಸನ್ನಿಧಿಯಲ್ಲಿ ಅನುಜ್ಞೆ, ಪುಣ್ಯಾಹ, ಕಲಶ ಸ್ಥಾಪನೆ, ಗಣಹೋಮ, ಅಭಿಷೇಕ, ದೇವತಾರಾಧನೆ, ರಾಷ್ಟಾ್ರಶ್ರೀರ್ದಾದ, ಸಂಜೆ 4ಕ್ಕೆ ಅಗ್ರತೀರ್ಥ ಸಂಗ್ರಹ ಸಮೇತ ಯಾಗಶಾಲಾ ಪ್ರವೇಶ, ಪುಣ್ಯಾಹ, ವಾಸ್ತು ಹೋಮ ಇತ್ಯಾದಿ ನಡೆಯಲಿವೆ. ಫೆ.18ರಂದು ಬೆಳಗ್ಗೆ 6ಕ್ಕೆ ಮಾಘ ಶುದ್ಧ ಚತುರ್ದಶಿ ಆಶ್ಲೇಷ ನಕ್ಷತ್ರ, ಪುಣ್ಯಾಹ, ನವಗ್ರಹ ಪೂಜೆ, ಜಪ, ನವಗ್ರಹ ಹೋಮ, ಪೂರ್ಣಾಹುತಿ, ಮಧ್ಯಾಹ್ನ 3.45ಕ್ಕೆ ಸುದರ್ಶನ ಪೂಜೆ, ಹೋಮ, ಪೂರ್ಣಾಹುತಿ, ಸಂಜೆ 4ಕ್ಕೆ ಕುಂಭಮೇಳದಲ್ಲಿ ಭಾಗವಹಿಸುವ ಶ್ರೀಗಳ ಮೆರವಣಿಗೆ ನಡೆಯಲಿದೆ. ಫೆ.19ರಂದು ಬೆಳಗಿನ ಜಾವ 5.30ಕ್ಕೆ ಮಾಘ ಶುದ್ಧ ವ್ಯಾಸ ಪೂರ್ಣಿಮಾ, ಪುಷ್ಯ ನಕ್ಷತ್ರ, ಪುಣ್ಯಾಹ, ಸಪ್ತನದಿ ತೀರ್ಥ ಕಲಶ, ಹೋಮ, ಕುಂಭ ಲಗ್ನದಲ್ಲಿ ಪೂರ್ಣಾಹುತಿ, ತ್ರಿವೇಣಿ ಸಂಗಮದಲ್ಲಿ ಕಲಶ ತೀರ್ಥ ಸಂಯೋಜನೆ ನಡೆಯಲಿದೆ. ಮಹೋದಯ ಪುಣ್ಯಸ್ನಾನಕ್ಕೆ ಮೀನ ಲಗ್ನದಲ್ಲಿ ಬೆಳಗ್ಗೆ 9.35 ರಿಂದ 9.50, ವೃಷಭ ಲಗ್ನದಲ್ಲಿ ಬೆಳಗ್ಗೆ 11.30 ರಿಂದ 12 ಶುಭ ಮುಹೂರ್ತ ಎಂದು ನಿಗದಿಪಡಿಸಲಾಗಿದೆ.