ಪುನರ್ಜನ್ಮಕ್ಕಾಗಿ ಸೂಕ್ತ ತಾಯಿಯ ಗರ್ಭವನ್ನು ಹುಡುಕಾಡುತ್ತಿರುವ ಆತ್ಮಗಳು ಅದೇ ಸಮಯ ಕಾದು ನಿಮ್ಮ ಒಡಲನ್ನು ಸೇರಬಹುದು. ಆದರೆ ನಿಮ್ಮ ಮಿಲನದ ಸಮಯ, ಸ್ಥಳ, ಗುಣಮಟ್ಟ, ಪಾವಿತ್ರ್ಯ ಎಲ್ಲವೂ ಗರ್ಭ ಸೇರುವ ಆತ್ಮ ಹೇಗಿರಲಿದೆ ಎಂಬುದನ್ನು ನಿರ್ದೇಶಿಸುತ್ತದೆ ಎನ್ನುತ್ತದೆ ಗರುಡ ಪುರಾಣ.
ಕೆಲವೊಮ್ಮೆ ಪುಣ್ಯವಂತ, ಸದ್ಗುಣಿ ತಂದೆ ತಾಯಿಗೆ ಕೆಟ್ಟ ಮಕ್ಕಳು ಹುಟ್ಟುವುದನ್ನು ನಾವು ಕಾಣುತ್ತೇವೆ. ಇದು ಹೀಗಾಗಲು ಹೇಗೆ ಸಾಧ್ಯ? ಇದಕ್ಕೆ ಗರುಡ ಪುರಾಣದಲ್ಲಿ ಉತ್ತರವಿದೆ. ಗರುಡ ಪುರಾಣದಲ್ಲಿ ಮುಖ್ಯವಾಗಿ ಆತ್ಮ, ಮರಣಾನಂತರದ ಸ್ಥಿತಿ, ಪಾಪ– ಪುಣ್ಯ, ಧರ್ಮಾಚರಣೆ ಮತ್ತು ಜೀವನ ಮೌಲ್ಯಗಳ ಬಗ್ಗೆ ವಿವರಣೆಗಳಿವೆ. ಹಾಗೆಯೇ ಆತ್ಮದ ಸಂಚಾರದ ವಿವರ ಕೂಡ. ಜೀವಿ ಸತ್ತ ನಂತರ ಆತ್ಮ ಎಲ್ಲಿ ಹೋಗುತ್ತೆ, ಭೂಲೋಕದಲ್ಲಿ ಎಷ್ಟು ದಿನ ಇರುತ್ತೆ, ಮರಳಿ ಹುಟ್ಟಲು ಎಂಥ ಗರ್ಭವನ್ನು ಆಯ್ದುಕೊಳ್ಳುತ್ತದೆ- ಇದೆಲ್ಲ ಅಲ್ಲಿದೆ.
ಸಾಮಾನ್ಯವಾಗಿ ಯಾರಾದ್ರೂ ಸತ್ತು ಅವರ ದಹನ ಸಂಸ್ಕಾರದ ನಂತರ 13 ದಿನಗಳ ಕಾಲ ಗರುಡ ಪುರಾಣ ಪಠಿಸುತ್ತಾರೆ. ಗರುಡ ಪುರಾಣದ ಪ್ರಕಾರ, ಯಾರಾದರೂ ಸತ್ತ ನಂತರ, ಅವರ ಆತ್ಮ ಬಹಳ ದೂರ ಪ್ರಯಾಣಿಸುತ್ತದೆ. ಮೊದಲು ಆತ್ಮವನ್ನು ಯಮಲೋಕಕ್ಕೆ ಕರೆದೊಯ್ಯಲಾಗುತ್ತದೆ. ನಂತರ, ಸತ್ತವರ ಕರ್ಮಗಳನ್ನು ಯಮರಾಜನ ಮುಂದೆ ಪರಿಶೀಲಿಸಲಾಗುತ್ತದೆ. ಜಾಸ್ತಿ ಪಾಪ ಮಾಡಿದ್ದರೆ ಯಮದೂತರು ಆತ್ಮಕ್ಕೆ ಶಿಕ್ಷೆ ಕೊಡುತ್ತಾರೆ. ಜೀವಿ ಒಳ್ಳೆಯ ಕೆಲಸಗಳನ್ನು ಮಾಡಿದ್ದರೆ, ಆತ್ಮದ ಪ್ರಯಾಣವು ತುಂಬಾ ಆರಾಮದಾಯಕವಾಗಿರುತ್ತದೆ. ಮರಣದ ನಂತರ ಯಮರಾಜನನ್ನು ತಲುಪಲು ಆತ್ಮವು ಸುಮಾರು 86 ಸಾವಿರ ಯೋಜನಗಳಷ್ಟು ದೂರ ಪ್ರಯಾಣಿಸಬೇಕಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ.
ಮರಣದ ನಂತರ 3 ರಿಂದ 40 ದಿನಗಳಲ್ಲಿ ಪುನರ್ಜನ್ಮ ಬರುತ್ತದೆ ಎಂದು ನಂಬಲಾಗಿದೆ. ಗರುಡ ಪುರಾಣದ ಪ್ರಕಾರ, ಒಬ್ಬ ವ್ಯಕ್ತಿಯ ಪುನರ್ಜನ್ಮವು ಅವರ ಕರ್ಮಗಳ ಆಧಾರದ ಮೇಲೆ ನಿರ್ಧಾರವಾಗುತ್ತದೆ. ಪಾಪಿ ಆತ್ಮವನ್ನು ನರಕಕ್ಕೆ ಕಳುಹಿಸಲಾಗುತ್ತದೆ. ಪುಣ್ಯ-ಶುದ್ಧ ಆತ್ಮವನ್ನು ಸ್ವರ್ಗಕ್ಕೆ ಕಳುಹಿಸಲಾಗುತ್ತದೆ. ವ್ಯಕ್ತಿಯ ಆತ್ಮವನ್ನು ಅವರ ಕರ್ಮಗಳಿಗೆ ಅನುಗುಣವಾಗಿ ಶಿಕ್ಷಿಸಿದಾಗ, ಅವರು ಮತ್ತೆ ಮತ್ತೊಂದು ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಮುಂದಿನ ಜನ್ಮ ಯಾವ ಸ್ಥಿತಿಯಲ್ಲಿರಬೇಕು? ಕೆಟ್ಟದಾಗಿ ಹುಟ್ಟಬೇಕಾ? ಒಳ್ಳೆಯದಾಗಿ ಹುಟ್ಟಬೇಕಾ? ಶ್ರೀಮಂತರಾಗಿ ಹುಟ್ಟಬೇಕಾ? ಬಡವರಾಗಿ ಹುಟ್ಟಬೇಕಾ? ಇದೆಲ್ಲವೂ ಅವರ ಕರ್ಮಗಳನ್ನು ಅವಲಂಬಿಸಿರುತ್ತದೆ.
ದಂಪತಿ ಶುದ್ಧಾಚಾರದಲ್ಲಿದ್ದು, ಸೂಕ್ತ ಪವಿತ್ರ ಸಮಯದಲ್ಲಿ ಮಿಲನ ಕ್ರಿಯೆ ನಡೆಸಿದರೆ, ಆ ಗರ್ಭಕ್ಕೆ ಸೂಕ್ತ ಸಂಸ್ಕಾರಗಳನ್ನು ನೀಡಿದರೆ, ಮುಂದೆ ಜನಿಸುವ ಮಗು ಪುಣ್ಯವಂತಳೂ ಸದ್ಗುಣಿಯೂ ಆಗುತ್ತದೆ. ಇಲ್ಲವಾದರೆ ಕೆಟ್ಟ ಗುಣಗಳ ಮಗು ಜನಿಸಬಹುದು. ಪುನರ್ಜನ್ಮಕ್ಕಾಗಿ ಸೂಕ್ತ ತಾಯಿಯ ಗರ್ಭವನ್ನು ಹುಡುಕಾಡುತ್ತಿರುವ ಆತ್ಮಗಳು ಇದೇ ಸಮಯ ಕಾದು ನಿಮ್ಮ ಒಡಲನ್ನು ಸೇರಬಹುದು.
ಹಾಗಾದರೆ ಮಿಲನಕ್ರಿಯೆ ಹೇಗಿರಬೇಕು?
- ಮದುವೆಯಾಗದೆ, ಅನೈತಿಕಕ ಸಂಬಂಧದಿಂದ, ಹಲವರ ಸಂಬಂಧದಿಂದ ಮಿಲನಕ್ರಿಯೆ ನಡೆಸಿ ಅದರಿಂದ ಕಟ್ಟುವ ಗರ್ಭಗಳಲ್ಲಿ ದುರಾತ್ಮಗಳು ಸೇರಿಕೊಳ್ಳಬಹುದು.
- ಮಿಲನಕ್ರಿಯೆಯ ವೇಳೆ ದಂಪತಿಗಳು ಮನಸ್ಸಿನಲ್ಲಿ ಶಾಂತಿ ಮತ್ತು ಸದಾಚಾರ ಹೊಂದಿರಬೇಕು. ಮಂಚ ಸೇರುವ ಮುನ್ನ ದೇವರ ಸ್ಮರಣೆ, ಜಪ, ಧ್ಯಾನ ಇತ್ಯಾದಿಗಳು ಆತ್ಮಶುದ್ಧಿಗೆ, ಗರ್ಭಶುದ್ದಿಗೆ ಸಹಾಯಕ ಎಂದು ಹೇಳಲಾಗಿದೆ.
- ಅಮಾವಾಸ್ಯೆಯಂದು, ರಾಹುಕಾಲದಲ್ಲಿ, ಈ ಹಿಂದೆ ಅಪರಾಧ ಕೃತ್ಯಗಳು ನಡೆದ ಜಾಗದಲ್ಲಿ, ಸ್ಮಶಾನದಲ್ಲಿ, ಅವಸರದಲ್ಲಿ, ಶುಚಿತ್ವ ಇಲ್ಲದೆ, ಕಸಕಡ್ಡಿಗಳಿಂದ ಕೂಡಿದ ಜಾಗದಲ್ಲಿ, ಕಟುಕರು ಇರುವ ಜಾಗದಲ್ಲಿ ಮಿಲನಕ್ರಿಯೆ ಒಳಿತಲ್ಲ. ದುರಾತ್ಮಗಳು ಇಂಥ ಸ್ಥಳ ಸಮಯಗಳಲ್ಲಿ ಸೇರಿಕೊಂಡಿರುತ್ತವೆ.
- ಗರ್ಭಧಾರಣೆಯ ಸಮಯದಲ್ಲಿ ಶುಭ ಸಂಕಲ್ಪ, ಸಾತ್ವಿಕ ಆಹಾರ, ಶುಚಿತ್ವ ಮತ್ತು ಸಂಯಮ ಮುಖ್ಯ.
- ಹಿಂದೂ ಸಂಪ್ರದಾಯದಲ್ಲಿ “ಗರ್ಭಾಧಾನ ಸಂಸ್ಕಾರ” ಎಂಬ ಒಂದು ವಿಧಿಯಿದೆ. ಇದನ್ನು 16 ಸಂಸ್ಕಾರಗಳಲ್ಲಿ ಮೊದಲನೆಯದಾಗಿ ಪರಿಗಣಿಸಲಾಗಿದೆ. ಇದರ ಉದ್ದೇಶ ಉತ್ತಮ ಸಂತಾನಕ್ಕಾಗಿ ದೈಹಿಕ–ಮಾನಸಿಕ ಶುದ್ಧತೆಯನ್ನು ಕಾಪಾಡುವುದು. ಶಾರೀರಿಕ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ ಸಂತಾನಕ್ಕಾಗಿ ಇದು ಮುಖ್ಯವೆಂದು ಆಧುನಿಕ ವಿಜ್ಞಾನ ಹೇಳುತ್ತದೆ:
- ದಂಪತಿಗಳ ಆರೋಗ್ಯ ಚೆನ್ನಾಗಿರಬೇಕು. ಪೋಷಕಾಂಶಯುಕ್ತ ಆಹಾರ ಸೇವನೆ ಇರಲಿ. ಮದ್ಯಪಾನ, ಧೂಮಪಾನ ಮುಂತಾದ ಕೆಟ್ಟ ಅಭ್ಯಾಸಗಳನ್ನು ಬಿಡುವುದು ಒಳಿತು. ಮಾನಸಿಕ ಒತ್ತಡ ಕಡಿಮೆ ಇರಬೇಕು.
- ಸಾತ್ವಿಕ ಜೀವನ, ಶುದ್ಧ ಮನಸ್ಸು ಮತ್ತು ಧಾರ್ಮಿಕ ಆಚರಣೆಗಳ ಮೂಲಕ ಉತ್ತಮ ಸಂತಾನ ಪ್ರಾಪ್ತಿಯಾಗಬಹುದು ಎಂಬ ತತ್ವವನ್ನು ಗರುಡ ಪುರಾಣದಲ್ಲಿ ಒತ್ತಿ ಹೇಳಲಾಗಿದೆ.
ಮೇಲಿನ ವಿಚಾರಗಳು ಗರುಡ ಪುರಾಣದಲ್ಲಿ ಕಂಡು ಬರುವ ಶ್ಲೋಕಗಳನ್ನು ಆಧರಿಸಿ ಮಾಡಲಾಗಿರುವ ವ್ಯಾಖ್ಯಾನ. ಏಷ್ಯಾನೆಟ್ ಸುವರ್ಣ ನ್ಯೂಸ್ ಈ ಲೇಖನದಲ್ಲಿರುವ ಮಾಹಿತಿಗಳನ್ನು ಸಮರ್ಥಿಸುವುದಿಲ್ಲ.


