ಹಳೆ ಆಚಾರ, ಹೊಸ ವಿಚಾರ-1

ತುಳಸಿ ಹಾಕದೆ ದೇವರ ತೀರ್ಥವಿಲ್ಲ. ತೀರ್ಥಕ್ಕೆ ತುಳಸಿ ಹಾಕುವುದಕ್ಕೆ ಧಾರ್ಮಿಕ ಕಾರಣವೂ ಇದೆ, ಆರೋಗ್ಯ ಸಂಬಂಧಿ ಹಿನ್ನೆಲೆಯೂ ಇದೆ.

ಧಾರ್ಮಿಕ ಕಾರಣ- ತುಳಸಿ ದೇವಪತ್ರೆ. ಸ್ಕಂದಪುರಾಣದ ಪ್ರಕಾರ, ದೇವತೆಗಳು ಸಮುದ್ರಮಥನ ಮಾಡುವಾಗ ಅಮೃತದ ಕೆಲ ಹನಿಗಳು ಭೂಮಿ ಮೇಲೆ ಬಿದ್ದವಂತೆ. ಅಲ್ಲಿ ತುಳಸಿ ಹುಟ್ಟಿತಂತೆ. ಅಂದರೆ, ತುಳಸಿಯಲ್ಲಿ ಅಮೃತದ ಗುಣವಿದೆ ಎಂದರ್ಥ. ನಂತರ ಬ್ರಹ್ಮನು ಈ ತುಳಸಿಯನ್ನು ವಿಷ್ಣುವಿಗೆ ಒಪ್ಪಿಸಿದನಂತೆ. ವಿಷ್ಣುವಿಗೆ ಇದು ಬಹಳ ಇಷ್ಟವಾಯಿತಂತೆ. ತುಳಸಿ ಗಿಡದಲ್ಲಿ ಎಲ್ಲಾ ದೇವತೆಗಳೂ ನೆಲೆಸಿದ್ದಾರಂತೆ. ಆ ಕಾರಣಕ್ಕೇ ಪ್ರತಿ ಮನೆಯಲ್ಲೂ ತುಳಸಿ ಗಿಡ ಇಟ್ಟು ಪೂಜಿಸುತ್ತಾರೆ.

ಔಷಧಿಯ ಆಗರ ತುಳಸಿ
ಆರೋಗ್ಯ ಸಂಬಂಧಿ ಕಾರಣ- ತುಳಸಿಯಲ್ಲಿ ಸಾಕಷ್ಟು ಔಷಧೀಯ ಗುಣಗಳಿವೆ.
-ತುಳಸಿ ಎಲೆ ಅಥವಾ ಅದನ್ನು ನೆನೆಸಿದ ನೀರನ್ನು ಸೇವಿಸಿದರೆ ಉಸಿರಾಟ ಸುಗಮವಾಗುತ್ತದೆ.
- ತುಳಸಿಯ ನೀರು ಕುಡಿದರೆ ಕಫ ನಿವಾರಣೆಯಾಗುತ್ತದೆ.
- ಸಣ್ಣಪುಟ್ಟ ಜ್ವರ, ಫಂಗಸ್ ಹಾಗೂ ಬ್ಯಾಕ್ಟೀರಿಯಾಕ್ಕೆ ಸಂಬಂಧಿಸಿದ ಸೋಂಕುಗಳನ್ನು, ಕೆಮ್ಮನ್ನು ನಿವಾರಿಸುವ ಶಕ್ತಿ ಹಾಗೂ ಚರ್ಮ ಸಂಬಂಧಿ ತೊಂದರೆಗಳನ್ನು ದೂರ ಮಾಡುವ ಗುಣ ತುಳಸಿಗಿದೆ.
- ಒತ್ತಡ ನಿವಾರಣೆಗೆ, ಕಿಡ್ನಿ ಸ್ಟೋನ್, ಹೃದ್ರೋಗ ಹಾಗೂ ಮಧುಮೇಹ ತಡೆಯಲು ಕೂಡ ತುಳಸಿ ಪ್ರಶಸ್ತ.
- ತುಳಸಿಯಲ್ಲಿರುವ ಓಲಿಯೋನಿಕ್ ಆಸಿಡ್ ಯಕೃತ್ ರಕ್ಷಕ. ಗಂತಿರೋಧಕ ಹಾಗೂ ವೈರಸ್ ರೋಧಕ ಗುಣಗಳೂ ತುಳಸಿಯಲ್ಲಿವೆ.
- ಆರ್ಸೋಲಿಕ್ ಆಸಿಡ್ ಕ್ಯಾನ್ಸರ್ ನಿಗ್ರಾಹಕ. ಕ್ಯಾನ್ಸರ್ ಕೋಶಗಳ ಸ್ವಯಂಭಕ್ಷಣೆಗೆ ಇದು ಪ್ರೇರೇಪಿಸುತ್ತದೆ.
- ರೋಸ್ಮೆರಿನಿಕ್ ಆಮ್ಲವು ಆತಂಕಲಯ (ಆಂಕ್ಸಿಯೋಲೈಟಿಕ್) ಕಾರಕ ಗುಣವುಳ್ಳದ್ದು. ಕಾರ್ವಕ್ರಾಲ್ ಬ್ಯಾಕ್ಟೀರಿಯ ನಾಶಕ.
- ಚರಕಸಂಹಿತೆಯು ತುಳಸಿಯ ಬಗ್ಗೆ ಪ್ರಸ್ತಾಪಿಸಿ ಮನೋ ಒತ್ತಡವನ್ನು ನಿಗ್ರಹಿಸುವುದರ ಜೊತೆಗೆ ಶರೀರ ಕ್ರಿಯೆಯಲ್ಲಿ ಸಮತೋಲನೆ ತರುತ್ತದೆ ಎನ್ನುತ್ತದೆ.
- ಇದು ಒಂದು ಅರ್ಥದಲ್ಲಿ ಆಯಸ್ಸನ್ನು ಹೆಚ್ಚಿಸುವ ಸಂಜೀವಿನಿಯಂತೆ. ಹೀಗಾಗಿ ಪ್ರತಿದಿನ ತೀರ್ಥದ ರೂಪದಲ್ಲಾದರೂ ತುಳಸಿಯ ಅಂಶ ದೇಹಕ್ಕೆ ಹೋಗಲಿ ಎಂದು ತೀರ್ಥದಲ್ಲಿ ತುಳಸಿ ಕಡ್ಡಾಯ ಮಾಡಲಾಗಿದೆ.

- ಮಹಾಬಲ ಸೀತಾಳಬಾವಿ