ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜಾತಕವನ್ನು ಪರಿಶೀಲಿಸಿದ ಖ್ಯಾತ ಜ್ಯೋತಿಷಿ ಡಾ. ಬಿ.ಸಿ. ವೆಂಕಟೇಶ್ ಗುರೂಜಿ ನವೆಂಬರ್ 26ರ ನಂತರ ಮುಖ್ಯಮಂತ್ರಿಯಾಗುವ ಯೋಗವಿದೆ ಎಂದು ಭವಿಷ್ಯ ನುಡಿದಿದ್ದಾರೆ. ಡಿಕೆಶಿ ಅವರ ಜಾತಕದಲ್ಲಿ ಸಿಎಂ ಆಗುವ ಸ್ಪಷ್ಟ ಯೋಗವಿದ್ದು, 2031ರವರೆಗೆ ರಾಜಯೋಗವಿದೆ ಎಂದರು.
ಚಿಕ್ಕಮಗಳೂರು (ಜು.1): ನವೆಂಬರ್ 26ರ ಬಳಿಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೇ ಮುಖ್ಯಮಂತ್ರಿ ಸ್ಥಾನ ಲಭಿಸಲಿದೆ. ಅವರ ಜಾತಕದಲ್ಲಿ ಸಿಎಂ ಆಗುವ ಯೋಗವಿದೆ. ಆದ್ದರಿಂದ ಡಿಕೆಶಿ ಅವರು ಸಿಎಂ ಆಗೋದನ್ನು ಯಾರೂ ತಡೆಯಲಾಗದು ಎಂದು ಖ್ಯಾತ ಜ್ಯೋತಿಷಿ ಡಾ. ಬಿ.ಸಿ. ವೆಂಕಟೇಶ್ ಗುರೂಜಿ ಭವಿಷ್ಯವಾಣಿ ನುಡಿದಿದ್ದಾರೆ.
ಜಾತಕದಲ್ಲಿ ಮುಖ್ಯಮಂತ್ರಿ ಯೋಗ ಸ್ಪಷ್ಟ:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಪಂಚಲಿಂಗೇಶ್ವರ ಮಲಾಯಾಚಲ ಗೋವಂಶ ಆಶ್ರಮದ ವೇದಜ್ಞಾನಿ ಡಾ. ವೆಂಕಟೇಶ್ ಗುರೂಜಿಯವರು ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಜಾತಕ ಅಧ್ಯಯನದ ನಂತರ ಈ ಭವಿಷ್ಯವಾಣಿಯನ್ನು ನುಡಿದಿದ್ದಾರೆ. 'ಡಿ.ಕೆ. ಶಿವಕುಮಾರ್ ಅವರ ಜಾತಕದಲ್ಲಿ ಮುಖ್ಯಮಂತ್ರಿ ಆಗುವ ಸ್ಪಷ್ಟ ಯೋಗವಿದೆ. ಸಿಎಂ ಆಗೇ ಆಗುತ್ತಾರೆ. ಯಾವ ದೇಶದ ರಾಜನಿಗೆ ಇರೋ ರಾಜಯೋಗವೋ, ಅದೇ ರೀತಿ 2031ರವರೆಗೆ ಅವರು ರಾಜನಂತೆ ಆಡಳಿತ ಮಾಡುವ ಸಾಧ್ಯತೆ ಇದೆ' ಎಂದು ಗುರೂಜಿ ತಿಳಿಸಿದ್ದಾರೆ.
ಆಗಲೇ ಮಂತ್ರಾಕ್ಷತೆ ನೀಡಿದ್ದೇನೆ:
ಒಂದೂವರೆ ವರ್ಷಗಳ ಹಿಂದೆ ಅವರಿಗೀಗಾಗಲೇ ಜಾತಕ ಪರಿಶೀಲನೆ ಮಾಡಿ ಮಂತ್ರಾಕ್ಷತೆ ನೀಡಿ ಬಂದಿದ್ದೇನೆ. ಡಿಕೆಶಿಗಾಗಿಯೇ ನಿತ್ಯ ದುರ್ಗಾ ಪಾರಾಯಣ ಮಾಡುತ್ತೇನೆ' ಎಂದು ಹೇಳಿದರು. ಅವರು ಮುಖ್ಯಮಂತ್ರಿಯಾಗೋದು ನಿಶ್ಚಿತ. ಆದರೆ ಅವರ ಜೊತೆಯಲ್ಲಿರುವವರಲ್ಲಿಯೇ ಯಾರಾದರೂ ಮೋಸ ಮಾಡಿದರೆ ಮಾತ್ರ ತಾತ್ಕಾಲಿಕ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಮಾಹಿತಿ ನೀಡಿದರು.
ಸಾಗರದ ಖ್ಯಾತ ಜ್ಯೋತಿಷಿ ಕೊಟ್ರೇಶಯ್ಯ ಈರೇಮಠ್ ಜೊತೆಗೂಡಿ ಮೂರು ವರ್ಷಗಳಿಂದ ಜಾತಕ ಅಧ್ಯಯನ ನಡೆಸಿದ ವೆಂಕಟೇಶ್ ಗುರೂಜಿ ಅವರು ತಮ್ಮ ಭವಿಷ್ಯವಾಣಿಯ ಬಗ್ಗೆ ಆತ್ಮವಿಶ್ವಾಸದಿಂದ ಮಾತನಾಡಿದ್ದಾರೆ.


