ಮೇಕೆದಾಟುಗೆ ಕೇಂದ್ರ ಸರ್ಕಾರ ಅನುಮತಿ‌ ಕೊಡಬೇಕು, ಈಗಾಗಲೇ ಮೇಕೆದಾಟು ಕಚೇರಿ ಆರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ಮೈಸೂರು/ ಮಂಡ್ಯ (ಜು.01): ಮೇಕೆದಾಟುಗೆ ಕೇಂದ್ರ ಸರ್ಕಾರ ಅನುಮತಿ‌ ಕೊಡಬೇಕು, ಈಗಾಗಲೇ ಮೇಕೆದಾಟು ಕಚೇರಿ ಆರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು. ಕೆಆರ್‌ಎಸ್‌ನಲ್ಲಿ ಕಾವೇರಿ ಮಾತೆಗೆ ಬಾಗಿನ ಅರ್ಪಿಸಲು ಸೋಮವಾರ ಮೈಸೂರಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ವೇಳೆ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗ ಭೂಮಿಯನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಮಂಡ್ಯದಲ್ಲಿ ಶೇ. 6 ಕಾವೇರಿ ಜಲಾನಯದ ಕೃಷಿ ಭೂಮಿಯನ್ನು ಹೆಚ್ಚಳ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಈಗಾಗಲೇ 22 ಟಿಎಂಸಿ ನೀರು ಬಿಡಲಾಗಿದೆ. ಜೂನ್‌ನಲ್ಲಿ 9 ಟಿಎಂಸಿ ಬಿಡಬೇಕಿತ್ತು. ಈಗಾಗಲೇ 22 ಟಿಎಂಸಿ ನೀರು ಬಿಡಲಾಗಿದೆ. 177.5 ಟಿಎಂಸಿ ನೀರು ತಮಿಳುನಾಡಿಗೆ ಬಿಡಲು ನಮ್ಮದೇನೂ ತಕರಾರು‌ ಇಲ್ಲ. ಆದರೆ, ಸಂಕಷ್ಟದ ವರ್ಷ ಬಂದಾಗ ಹಂಚಿಕೆಯಾಗಬೇಕು. ಮೇಕೆದಾಟುಗೆ ಕೇಂದ್ರ ಸರ್ಕಾರ ಅನುಮತಿ‌ ಕೊಡಬೇಕು ಎಂದು ಆಗ್ರಹಿಸಿದರು. ಇನ್ನು ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಕೃಷ್ಣರಾಜಸಾಗರ ಜಲಾಶಯದಲ್ಲಿ ಕಾವೇರಿ ಮಾತೆಗೆ ಬಾಗಿನ ಸಮರ್ಪಣೆ ಸಮಾರಂಭದಲ್ಲಿ ಮಾತನಾಡಿದ ಡಿಕೆಶಿ, ಕಾವೇರಿ ಆರತಿ ಮಾಡುವುದಕ್ಕೆ ವಿರೋಧ ಮಾಡುವುದು ಬೇಡ. ವಿರೋಧ ಮಾಡಲೇಬೇಕೆಂಬ ಕಾರಣಕ್ಕೆ ವಿರೋಧಿಸಬೇಡಿ.

ಆರತಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು. ಮುಂದುವರಿದ ಅವರು, ಬೃಂದಾವನ ಉದ್ಯಾನವನ್ನು ಅತ್ಯಂತ ಹೆಚ್ಚು ಆಕರ್ಷಣೀಯಗೊಳಿಸುವುದು ನಮ್ಮ ಉದ್ದೇಶ. ಮೈಸೂರು ದಸರಾ ರೀತಿ ಅತ್ಯುತ್ತಮ ದೀಪಾಲಂಕಾರ ಮಾಡಲಾಗಿದೆ. ಅತ್ಯುತ್ತಮ ಕಾರಂಜಿಗಳನ್ನು ರೂಪಿಸಲಾಗಿದೆ. ವಿದೇಶಗಳಿಂದ ಅಲಂಕಾರಿಕ ಸಸ್ಯಗಳನ್ನು ತರಿಸಲಾಗಿದೆ. ನಮ್ಮ ಮುಖ್ಯಮಂತ್ರಿಗಳು ಇದನ್ನು ಅತ್ಯುತ್ತಮ ಪ್ರವಾಸಿ ಕೇಂದ್ರ ಮಾಡಬೇಕು ಎಂದು ಸಂಕಲ್ಪ ಮಾಡಿದ್ದಾರೆ. ಇದಕ್ಕೆ ಖಾಸಗಿಯವರು ಬಂಡವಾಳ ಹೂಡಬಹುದು ಎಂದು ಟೆಂಡರ್ ಆಹ್ವಾನಿಸಿದ್ದೇವೆ ಎಂದರು.

ಕಾವೇರಿ ಜಲಾನಯನ ಪ್ರದೇಶಕ್ಕೆ 2 ಸಾವಿರ ಕೋಟಿಗೂ ಹೆಚ್ಚು ಅನುದಾನ ನೀಡಲಾಗಿದೆ. ಪ್ರತಿ ಕ್ಷೇತ್ರವನ್ನೂ ಗಮದಲ್ಲಿಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಮಂಡ್ಯ ಜಿಲ್ಲೆ ಒಂದಕ್ಕೆ 1 ಸಾವಿರ ಕೋಟಿಗೂ ಹೆಚ್ಚು ಅನುದಾನಕ್ಕೆ ಅನುಮೋದನೆ ನೀಡಲಾಗಿದೆ. ನಮ್ಮ ಸರ್ಕಾರ ಎರಡು ವರ್ಷಗಳ ಅಧಿಕಾರವಧಿಯಲ್ಲಿ ಕಾವೇರಿ ಅಚ್ಚುಕಟ್ಟು ಪ್ರದೇಶವನ್ನು ಹೆಚ್ಚು ಮಾಡಿದೆ. ೮೦ ವರ್ಷಗಳ ಹಳೆಯ ಕಾಲುವೆಗಳನ್ನು ದುರಸ್ತಿಗೊಳಿಸಲಾಗಿದೆ ಎಂದರು.