ಡಿಕೆ ಶಿವಕುಮಾರ್ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ, ಡಿಕೆಶಿ ಸೋಮವಾರದೊಳಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದು, 8 ವರ್ಷಗಳ ಕಾಲ ಅವರ ಅಧಿಕಾರ ಅಬಾಧಿತವಾಗಿರುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ಬೆಂಗಳೂರು (ಮೇ.28): ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆಗೆ ಡಿಕೆಶಿ ಅವರ ಪರಮಾಪ್ತ ಗುರುಗಳಾದ ರಾಜಗುರು ದ್ವಾರಕನಾಥ್ ಗುರೂಜಿ ಭರ್ಜರಿ ತೆರೆ ಎಳೆದಿದ್ದಾರೆ. 'ಡಿಕೆ ಶಿವಕುಮಾರ್ ಸೋಮವಾರದ ಒಳಗೆ ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ. ಮುಂದಿನ 8 ವರ್ಷಗಳ ಕಾಲ ಅವರ ಅಧಿಕಾರವನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಿಲ್ಲ" ಎಂದು ಭವಿಷ್ಯ ನುಡಿದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ಏಷ್ಯಾನೆಟ್ ಸುವರ್ಣ ನ್ಯೂಸ್’ಗೆ ಮಾತನಾಡಿರುವ ದ್ವಾರಕನಾಥ್ ಗುರೂಜಿ, ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ 35 ವರ್ಷಗಳ ಸುದೀರ್ಘ ಒಡನಾಟವನ್ನು ನೆನಪಿಸಿಕೊಂಡಿದ್ದಾರೆ. 'ಅವನು (ಡಿಕೆಶಿ) ನನಗೆ ಕಳೆದ 35 ವರ್ಷಗಳಿಂದ ಪರಿಚಯ. ಹಿಂದೆ ಮಾಜಿ ಸಿಎಂ ಬಂಗಾರಪ್ಪ ಅವರ ಸಂಪುಟದಲ್ಲಿ ಅತ್ಯಂತ ಸಣ್ಣ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, 'ನೀನು ಮುಂದೊಂದು ದಿನ ಈ ರಾಜ್ಯಕ್ಕೆ ಮುಖ್ಯಮಂತ್ರಿ ಆಗ್ತೀಯಾ' ಎಂದು ಭವಿಷ್ಯ ಹೇಳಿದ್ದೆ. ಅವನು ಸದಾ ನನ್ನ ಸಂಪರ್ಕದಲ್ಲೇ ಇದ್ದಾನೆ. ಅವನು ನಮ್ಮ ಮನೆಯ ಮಗನಿದ್ದಂತೆ' ಎಂದರು.

ಶೃಂಗೇರಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಬಂತು ಡಿಕೆಶಿ ಫೋನ್ ಕಾಲ್!

ಡಿಕೆಶಿಗೆ ಸಿಎಂ ಪಟ್ಟ ಸಿಗುವುದು ತಡವಾಗುತ್ತಿದ್ದ ಹಿನ್ನೆಲೆಯಲ್ಲಿ ಶೃಂಗೇರಿಗೆ ತೆರಳಿದ್ದ ರಹಸ್ಯವನ್ನು ಗುರೂಜಿ ಬಿಚ್ಚಿಟ್ಟಿದ್ದಾರೆ.'ಅವನಿಗೆ ಸಿಎಂ ಆಗೋದು ನ್ಯಾಯವಾಗಿ ಇನ್ನೂ ಬೇಗ, ಅಂದರೆ ಹೊಸ ವರ್ಷದ ಒಳಗೇ ಆಗಬೇಕಿತ್ತು. ಆದರೆ ನಿಧಾನವಾಗುತ್ತಿತ್ತು. ಅದಕ್ಕಾಗಿಯೇ ನಾನು ಅವನ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿ ಶಾರದಾಂಬೆ ಸನ್ನಿಧಿಗೆ ಹೋಗಿದ್ದೆ. ನಿಧಾನವಾದ ಕಾರಣ ಆ ದೇವರಿಗೇ ಗೊತ್ತು. ಆದರೆ, ನಾನು ಶೃಂಗೇರಿಯಲ್ಲಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಿದ್ದಾಗಲೇ ಖುದ್ದು ಡಿ.ಕೆ. ಶಿವಕುಮಾರ್ ನನಗೆ ಫೋನ್ ಕಾಲ್ ಮಾಡಿ 'ಗುರೂಜಿ, ಕೆಲಸ ಆಗಿದೆ' ಎಂದು ಸಿಹಿ ಸುದ್ದಿ ನೀಡಿದ. ನಾನು ಈಗ ಬೆಂಗಳೂರಿಗೆ ಹೋಗಿ ಆತನ ಜೊತೆ ಕುಳಿತು ಮಾತನಾಡುತ್ತೇನೆ. ಸೋಮವಾರದ ಒಳಗೆ ಆತ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾನೆ' ಎಂದರು.

ಸಿದ್ದರಾಮಯ್ಯ ರಾಜಯೋಗ ಅಂತ್ಯ; ಡಿಕೆಶಿಗೆ ಆರಂಭವಾಯ್ತು ಗುರು ಬಲ!

ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರ ಜಾತಕದ ಗ್ರಹಗತಿಗಳ ಬಗ್ಗೆ ಜ್ಯೋತಿಷ್ಯ ವಿಶ್ಲೇಷಣೆ ನಡೆಸಿದ ಗುರೂಜಿ, 'ಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಸದ್ಯ ಅವರಿಗೆ ಗುರು ಬಲ ಮತ್ತು ಶನಿ ಬಲ ಎರಡೂ ಇಲ್ಲ. ಈ ಕಾಲ ಯಾರನ್ನೂ ಕೇಳಿ ಬರಲ್ಲ, ಆರಂಭವಾಗಿದ್ದು ಎಂದಿಗೂ ಅಂತ್ಯವಾಗಲೇಬೇಕು. ಸಿದ್ದರಾಮಯ್ಯ ಅವರ ಸಿಎಂ ಆಗುವ 'ರಾಜಯೋಗ' ಈಗ ಮುಗಿದಿದೆ. ಆದರೆ, ಈ ರಾಜ್ಯಕ್ಕೆ ಅವರ ಮಾರ್ಗದರ್ಶನ ಮತ್ತು ಸೇವೆಯ ಅಗತ್ಯ ಖಂಡಿತಾ ಇದೆ' ಎಂದಿದ್ದಾರೆ.

ಈಗ ಡಿಕೆಶಿಗೆ ಅತ್ಯಂತ ಸುವರ್ಣ ಸಮಯ ಆರಂಭವಾಗಿದೆ. ಗೋಚಾರ ಫಲದ ಪ್ರಕಾರ ಗುರು ಈಗ ಮಿಥುನ ರಾಶಿಯಲ್ಲಿದ್ದಾನೆ. ಇದು ಡಿಕೆಶಿಗೆ ಭಾರಿ ರಾಜಯೋಗ ತರಲಿದೆ. ನನ್ನ ಲೆಕ್ಕಾಚಾರದ ಪ್ರಕಾರ ಮುಂದಿನ ಎಂಟು ವರ್ಷ ಈ ರಾಜ್ಯದಲ್ಲಿ ಅವನನ್ನು ಅಲ್ಲಾಡಿಸಲು ಯಾರಿಂದಲೂ ಆಗಲ್ಲ ಎಂದು ಹೇಳಿದ್ದಾರೆ.

ಶಿವಕುಮಾರ್ ಅನ್ನೋದೇ ಒಂದು ಬ್ರ್ಯಾಂಡ್‌

ಮುಂದಿನ ಆಡಳಿತದ ಬಗ್ಗೆ ಮಾತನಾಡಿದ ಗುರೂಜಿ, "ಡಿಕೆಶಿ ಕೇವಲ ಮುಖ್ಯಮಂತ್ರಿ ಮಾತ್ರವಲ್ಲ, ಪಕ್ಷವನ್ನು ಕೂಡ ಮುನ್ನಡೆಸಬೇಕಿದೆ. ಅದನ್ನು ನಿಭಾಯಿಸುವ ಶಕ್ತಿಯನ್ನು ದೇವರು ಕೊಡಲಿ. ಆತ ತುಂಬಾ ಬುದ್ಧಿವಂತ ಮತ್ತು ಜಾಣ. ಕೆಲವೊಮ್ಮೆ ಉದ್ವೇಗ (Aggressive) ಇರುತ್ತದೆಯಾದರೂ ಆತನಿಗೆ ಸಹನೆ ಇದೆ, ಎಲ್ಲವನ್ನೂ ಸಂಭಾಳಿಸುತ್ತಾನೆ. ಹೆಗಲ ಮೇಲೆ ಕೈ ಹಾಕಿ ಯಾರನ್ನು ಬೇಕಾದರೂ ಮಾತನಾಡಿಸುವ ಗುಣ ಆತನಲ್ಲಿದೆ. ಆತ ಇವರ ಕಡೆಯವರು ಅವರ ಕಡೆಯವರು ಅಂತ ಯಾರನ್ನೂ ಬ್ರಾಂಡ್ ಮಾಡಲ್ಲ. ಯಾಕಂದ್ರೆ ಶಿವಕುಮಾರ್ ಅನ್ನೋದೇ ಒಂದು ಬ್ರಾಂಡ್!" ಎಂದು ಬಣ್ಣಿಸಿದರು.

ಡಿಕೆಶಿ ಮುಖ್ಯಮಂತ್ರಿಯಾದ ಮೇಲೆ ಬೆಂಗಳೂರಿನ ಮೂಲಸೌಕರ್ಯ, ಕುಡಿಯುವ ನೀರು ಮತ್ತು ಟ್ರಾಫಿಕ್ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಸರಿಪಡಿಸಬೇಕು. ಇಡೀ ರಾಜ್ಯದ ದೊಡ್ಡ ಚಿತ್ರಣ ಆತನ ಕಣ್ಣಮುಂದಿದೆ. ಸಿದ್ದರಾಮಯ್ಯ ಅವರ ಸಹಪಾಠಿಗಳನ್ನು (ಆಪ್ತರನ್ನು) ಕೂಡ ಜೊತೆಯಲ್ಲೇ ಕರೆದುಕೊಂಡು ಹೋಗಿ ಒಂದು ಅತ್ಯುತ್ತಮ ಸರ್ಕಾರವನ್ನು ಆತ ನೀಡಲಿದ್ದಾನೆ. ಆತನ ಕಾಲದಲ್ಲಿ ಕನ್ನಡ ನಾಡು ಮತ್ತಷ್ಟು ಅಭಿವೃದ್ಧಿಯಾಗಲಿದ್ದು, ನನ್ನ ಪ್ರಾರ್ಥನೆ ಸದಾ ಆತನ ಪರವಾಗಿರುತ್ತದೆ" ಎಂದು ಆಶೀರ್ವದಿಸಿದರು.