ಬೆಂಗಳೂರಿನಲ್ಲಿ ಶಿರಡಿ ಸಾಯಿ ಛಾಯೆ

First Published 26, Jul 2018, 5:03 PM IST
Bangalore shirdi Sai Ram mandir
Highlights

ಸಾಕ್ಷಾತ್ ಶಿರಡಿ ಸಾಯಿ ಬಾಬರ ಛಾಯೆಯನ್ನು ಕಂಡು ಪುಣಿತರಾಗಬಹುದಾದ ಕೇಂದ್ರವನ್ನು ಬೆಂಗಳೂರಿನಲ್ಲಿ ಕಾಣಬಹುದಾಗಿದೆ. ಹೌದು, ಕೆಂಗೇರಿಯಿಂದ ಸ್ವಲ್ಪ ದೂರದ ಹುಣಸೆ ಮರದಪಾಳ್ಯದಲ್ಲಿ ಶಿರಡಿಯ ಸಾಯಿ ಬಾಬ ಮಂದಿರವನ್ನೇ ಹೋಲುವಂತಹ ದೇವಸ್ಥಾನವೊಂದನ್ನು ನಿರ್ಮಿಸಲಾಗಿದೆ. ಅದರ ಹೆಸರು ಶ್ರೀ ಶಿರಡಿಸಾಯಿ ಆನಂದಮಯಿ ದೇವಸ್ಥಾನ. ಸಾಯಿಬಾಬಾ ಸ್ವಪ್ನದಲ್ಲಿ ಕಂಡು ಮಾಡಿದ ಆಜ್ಞೆಯಂತೆ ಕ್ಯಾ. ವಿ. ವಿ. ಮಹೇಶ್ ಮತ್ತು ಶ್ರೀಮತಿ ಸಂಯುಕ್ತಾ ಮಹೇಶ್ ದಂಪತಿ ಈ ದೇವಸ್ಥಾವನ್ನು ಇಲ್ಲಿ ನಿರ್ಮಿಸಿದ್ದು, ದೈವೀ ಸ್ಥಳವಾಗಿದೆ.

ಇಲ್ಲಿನ ಮುಖ್ಯ ದೇವಸ್ಥಾನವನ್ನು 2002ರಲ್ಲಿ ನಿರ್ಮಿಸಲಾಯಿತು. ನಂತರದಲ್ಲಿ ಗುರುಸ್ಥಾನ, ದ್ವಾರಕಾಮಯಿ, ನಂದಾದೀಪ, ಕಂಡೋಬಾ ದೇವಸ್ಥಾನಗಳನ್ನು ಭಗವಾನ್ ಕೃಷ್ಣ, ಸುಬ್ರಮಣ್ಯ ಮತ್ತು ಭಗವಾನ್ ಹನುಮಾನ್ ಅವರ ಪೂಜಾ ಕೈಂಕರ್ಯಗಳಿಗಾಗಿ ನಿರ್ಮಿಸಲಾಗಿದೆ.

ಶಿರಡಿಯಲ್ಲಿ ಕೈಗೊಳ್ಳುವ ಪೂಜಾ ಕೈಂಕರ್ಯಗಳ ವಿಧಿ-ವಿಧಾನಗಳಂತೆ ನಾಲ್ಕು ಆರತಿಗಳಾದ ಕಾಕಡ ಆರತಿ, ಮಧ್ಯಾಹ್ನ ಆರತಿ, ಧೂಪಾರತಿ, ಮತ್ತು ಶೇಜಾರತಿ ಗಳನ್ನು ನೆರವೇರಿಸಲಾಗುತ್ತದೆ. ಸಂಜೆ ಭಕ್ತ ಕಲಾವಿದರು ಮರಾಠಿಯಲ್ಲೇ ಸಂಗೀತದ ಭಕ್ತಿ ಸಮರ್ಪಣೆ ಮಾಡುತ್ತಾರೆ. ಹೆಚ್ಚುವರಿಯಾಗಿ ದೇವಸ್ಥಾನ ಆಡಳಿತ ಮಂಡಳಿಯಿಂದ ಸತ್ಯನಾರಾಯಣ ವಾರ್ತೆ ಮತ್ತು ಸಾಯಿ ಸಹಸ್ರನಾಮ ಮತ್ತು ವಿಷ್ಣು ಸಹಸ್ರನಾಮ ಪಠನದಂಥ ಪೂಜಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಸಂಯುಕ್ತಾ ಮಹೇಶ್ ಮತ್ತು ಅಸಂಖ್ಯಾತ ಭಕ್ತರು ಶ್ರೀ ಶಿರಡಿ ಸಾಯಿ ಆನಂದಮಯಿ ದೇವಸ್ಥಾನವನ್ನು ನಿರ್ಮಿಸಿದ್ದಾರೆ. ಸಂಯುಕ್ತಾ ಅವರು ಶ್ರೀ ಶಿವನೇಸನ್ ಸ್ವಾಮೀಜಿ ಮತ್ತು ದಿ. ಝರೀನ್(ಸಾಯಿ ಬಾಬಾರ ಕಟ್ಟಾ ಭಕ್ತರು)ಅವರ ಶಿಷ್ಯರಾಗಿದ್ದಾರೆ. ದೇವಸ್ಥಾನದ ಟ್ರಸ್ಟ್ ಯಾವುದೇ ಆರ್ಥಿಕ ಲಾಭ ಮಾಡುವ ಉದ್ದೇಶ ಹೊಂದಿಲ್ಲ, ಶ್ರೀ ಸಾಯಿಬಾಬಾ ಅವರ ಸೇವೆ ಹಾಗೂ ವಿಚಾರಗಳನ್ನು ಬೋಧಿಸುವುದು ಟ್ರಸ್ಟ್‌ನ ಉದ್ದೇಶವಾಗಿದೆ. ಅನ್ನದಾನ ಮಹಿಳಾ ಸ್ವಸಹಾಯ ಮತ್ತು ಮಕ್ಕಳಿಗಾಗಿ ಕಂಪ್ಯೂಟರ್ ತರಬೇತಿಯಂಥ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಹುಣಸೆಮರದಪಾಳ್ಯದಲ್ಲಿರುವ ಬಾಬಾ ಅವರ ದೇವಸ್ಥಾನವನ್ನು ಶಿರಡಿಯಲ್ಲಿರುವ ಸಮಾಧಿ ಮಂದಿರವನ್ನೇ ಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ. ಸಮಾಧಿ ಮಂದಿರ, ದ್ವಾರಕಾಮಯಿ, ಮಾರುತಿಮಂದಿರಗಳೂ ಒಂದೇ ಹೋಲಿಕೆಯಲ್ಲಿವೆ. ಆನಂದಮಯಿ ದೇವಸ್ಥಾನದಲ್ಲಿ ಇತ್ತೀಚೆಗೆ ನಂದಾದೀಪವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಪ್ರತಿ ಗುರುವಾರ ಮತ್ತು ಭಾನುವಾರ ೧೦೮ ದೀಪಗಳನ್ನು ಬೆಳಗಿಸಲಾಗುತ್ತಿದೆ. ಇತರೆ ದಿನಗಳಲ್ಲೂ ದೀಪಗಳನ್ನ ಬೆಳಗಿಸಲಾಗುತ್ತಿದೆ. ಸಮಾಧಿ ಮಂದಿರದ ಸುತ್ತ ೧೦೮ ಶಿಲೆಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಇವುಗಳ ಮೇಲೆ ಶ್ರೀ ಸಾಯಿನಾಥಾಯ ನಮಃ ಎಂದು ಕೆತ್ತನೆ ಮಾಡಲಾಗಿದೆ. ಭಕ್ತರು ಪ್ರದಕ್ಷಿಣೆ ಹಾಕುವಾಗ ಇವುಗಳನ್ನು ಪಠಿಸುತ್ತಾರೆ. ಈ ದೇವಸ್ಥಾನದ ಭೂಮಿ ಪೂಜೆ ನೆರವೇರಿದ್ದು 1995ರಲ್ಲಿ. 2002ರ ಜುಲೈ ೨೦ರಂದು ದೇವಸ್ಥಾನದ ಟ್ರಸ್ಟಿಗಳು ದೇವಸ್ಥಾನ ಲೋಕಾರ್ಪಣೆಮಾಡಿದರು.

ಅನನ್ಯತೆಯ ಸಾಕಾರ

ಈ ದೇವಸ್ಥಾನವು ಅನೇಕ ಅನನ್ಯತೆಗೆ ಹೆಸರಾಗಿದೆ. ದೇವಸ್ಥಾನದ ರಾಜಗೋಪುರವನ್ನು ಶಿರಡಿಯ ದೇವಸ್ಥಾನದಂತೆ ನಿರ್ಮಿಸಲಾಗಿದೆ. ದೇಶದಲ್ಲಿರುವ ಸಾಯಿಬಾಬಾ ಅವರ ದೇವಸ್ಥಾನಗಳಿಗಿಂತ ಭಿನ್ನವಾಗಿ, ಈ ದೇವಸ್ಥಾನದ ಪ್ರಾರಂಭದಲ್ಲೇ ಅಮೃತ ಶಿಲೆ ಕಂಡೋಬಾ ಅವರ ಮೂರ್ತಿಯನ್ನು ಅವರ ಪತ್ನಿ ಮೂರ್ತಿ ಸಮೇತ ಪ್ರತಿಷ್ಠಾಪಿಸಲಾಗಿದೆ. ದೇವಸ್ಥಾನ ಪ್ರವೇಶಕ್ಕೂ ಮೊದಲೇ ಎಡಭಾಗದಲ್ಲಿ 108 ಕಲ್ಲುಗಳನ್ನು ಪ್ರತಿಷ್ಠಾಪಿಸಿ ಅದರ ಮೇಲೆ ಸಾಯಿ ಬಾಬಾ ಹೆಸರನ್ನು ಕೆತ್ತಲಾಗಿದೆ. ಇವುಗಳು ಸರಿಯಾಗಿ ದೇವಸ್ಥಾನದ ಪ್ರವೇಶದ ಬಲಭಾಗಕ್ಕೆ ಮುಕ್ತಾಯವಾಗುತ್ತವೆ. ಸಾಯಿ ಭಕ್ತರಿಗೆ ಇದು ಹಜ್ಜೆ ನಮಸ್ಕಾರ ಹಾಕಲು ಅನುಕೂಲವಾಗಿದೆ. ಮೇಲಾಗಿ ದೇವಸ್ಥಾನ ಪ್ರವೇಶಕ್ಕೂ ಮುನ್ನ ಭಕ್ತರ ಸಾಯಿ ಬಾಬಾರ ನಾಮವನ್ನು 108 ಬಾರಿ ಜಪಿಸಿದಂತಾಗುತ್ತದೆ. ಶಿರಡಿಯಲ್ಲಿರುವ ದ್ವಾರಕಾಮಯಿ ದೇವಸ್ಥಾವನ್ನೇ ಹೋಲುವಂತಿದೆ ಇಲ್ಲಿನ ದ್ವಾರಕಾಮಯಿ ಇದೆ. ಇಲ್ಲಿನ ಪ್ರತಿಯೊಂದು ವಸ್ತುಗಳು ದ್ವಾರಕಾಮಯಿಯ ಚಿನ್ಹೆಗಳಿಂತಿವೆ.

ಅಮೃತ ಶಿಲೆಯಿಂದ ಕೆತ್ತಲ್ಪಟ್ಟ ಕಂಡೋಬಾ ಮತ್ತು ಅವರ ಪತ್ನಿ, ಸಾಯಿ ಬಾಬಾ, ದತ್ತಾತ್ರೇಯ ಮತ್ತು ಗಣೇಶ ಮೂರ್ತಿಗಳನ್ನು ದೇವಸ್ಥಾನದ ಒಳಗೆ ಪ್ರತಿಷ್ಠಾಪಿಸಲಾಗಿದೆ. ಶಿವಲಿಂಗ, ಆಂಜನೇಯ, ಸುಬ್ರಮಣ್ಯ, ಕೃಷ್ಣ, ರಾಮ, ಸೀತೆ, ಲಕ್ಷ್ಮಣ ಮತ್ತು ರಾಜರಾಜೇಶ್ವರಿ ಮೂರ್ತಿಗಳನ್ನು ದೇವಸ್ಥಾನದ ಪ್ರಾಂಗಣದಲ್ಲಿ ಪ್ರತಿಷ್ಠಾಪಿಸಲಾಗಿದೆ. ಪಂಚಲೋಹದಿಂದ ತಯಾರಿಸಿದ ಸಾಯಿಬಾಬಾ ಮತ್ತು ಲಕ್ಷ್ಮೀ ನರಸಿಂಹ ಮೂರ್ತಿಗಳು ದೇವಸ್ಥಾನದಲ್ಲಿ ದರ್ಶನಕ್ಕೆ ಲಭ್ಯ. ಶಿರಡಿಯ ಸಮಾಧಿ ಮಂದಿರದಲ್ಲಿರುವಂತೆ ಸಾಯಿ ಬಾಬಾರ ಮೂರ್ತಿ ಎದುರು ನಂದಿವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಶಿರಡಿಯಲ್ಲಿರುವಂತೆ ದ್ವಾರಕಾಮಯಿಯಲ್ಲಿ ಪವಿತ್ರ ಧುಹಿಯನ್ನು ಹೊತ್ತಿಸಲಾಗಿದೆ. ಅಮೃತ ಶಿಲೆಯ ಸಾಯಿ ಬಾಬಾರ ಮೂರ್ತಿ ಇರುವ ದೇವಸ್ಥಾನದ ಹಿಂಬಾಗದಲ್ಲಿ ಗುರುಸ್ಥಾನವೂ ಇದೆ. ದೇವಸ್ಥಾನ ಟ್ರಸ್ಟ್ ಛಾವಡಿಯನ್ನೂ ನಿರ್ಮಿಸಿದೆ.

 

loader