ದೇಶಭಕ್ತಿಯನ್ನು ಹೆಚ್ಚಿಸಲು 'ಸ್ವಾತಂತ್ರ್ಯ ದಿನ'ದಂದು ಭೇಟಿ ನೀಡಲೇಬೇಕಾದ ಸ್ಥಳಗಳಿವು

First Published Aug 15, 2022, 5:27 PM IST

ಆಗಸ್ಟ್ 15, 1947 ರಂದು, ಭಾರತವು ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರವಾಯಿತು. ಹಲವಾರು ವರ್ಷಗಳ ಸ್ವಾತಂತ್ರ್ಯ ಹೋರಾಟ ಮತ್ತು ಹಲವಾರು ಚಳವಳಿಗಳ ನಂತರ, ನವದೆಹಲಿಯ ಕೆಂಪು ಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲಾಯಿತು. ಈ ದಿನವು ಭಾರತವು ತನ್ನ ಸ್ವಾತಂತ್ರ್ಯವನ್ನು ಪಡೆಯಲು ಎದುರಿಸಿದ ಎಲ್ಲಾ ಹೋರಾಟಗಳನ್ನು ನೆನಪಿಸುತ್ತದೆ.  ಭಾರತದ ಸ್ವಾತಂತ್ರ್ಯ ಸಂಗ್ರಾಮದ ನೆನಪುಗಳು ನಮ್ಮ ದೇಶದ ಅನೇಕ ಸ್ಥಳಗಳಲ್ಲಿ ಇನ್ನೂ ಜೀವಂತ. ಈ ಸ್ಥಳಗಳು ಸ್ವತಂತ್ರ ದೇಶದಲ್ಲಿ ಯುವ ಪೀಳಿಗೆಗಾಗಿ ನಮ್ಮ ಜನರು ಮಾಡಿದ ತ್ಯಾಗವನ್ನು ಬಿಂಬಿಸುತ್ತವೆ.  
 

ದೇಶವು ಸ್ವಾತಂತ್ರ್ಯದ 75ನೇ ವರ್ಷ ಸಂಭ್ರಮದಿಂದ ಆಚರಿಸಲು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ, ಆಗಸ್ಟ್ 15 ರವರೆಗೆ ದೇಶದ ಎಲ್ಲಾ ಸ್ಮಾರಕಗಳಿಗೆ ಉಚಿತ ಪ್ರವೇಶಕ್ಕೆ ವ್ಯವಸ್ಥೆ ಮಾಡಲಾಗಿದೆ. ಸರಳವಾಗಿ ಹೇಳುವುದಾದರೆ, ಪ್ರವಾಸಿಗರು ಕೆಂಪು ಕೋಟೆ, ಕುತುಬ್ ಮಿನಾರ್, ಜಲಿಯನ್ ವಾಲಾ ಬಾಗ್, ತಾಜ್ ಮಹಲ್, ಫತೇಪುರ್ ಸಿಕ್ರಿ, ಆಗ್ರಾ ಕೋಟೆಗೆ ಉಚಿತವಾಗಿ ಭೇಟಿ ನೀಡಬಹುದು. ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ನೀವು ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಸುತ್ತಾಡಲು ಯೋಜಿಸುತ್ತಿದ್ದರೆ, ಭಾರತೀಯ ಇತಿಹಾಸದ ಪರಿಚಯ ಮಾಡಿಕೊಳ್ಳಲು ನೀವು ಈ ಸ್ಥಳಗಳಿಗೆ ಭೇಟಿ ನೀಡಬಹುದು. ಅವುಗಳ ಬಗ್ಗೆ ತಿಳಿದುಕೊಳ್ಳೋಣ.

ಜಲಿಯನ್ ವಾಲಾ ಬಾಗ್

ಜಲಿಯನ್ ವಾಲಾ ಬಾಗ್ ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್ ಬಳಿ ಇದೆ. ನೀವು  ಅಮೃತಸರಕ್ಕೆ ಹೋದರೆ, ಗೋಲ್ಡನ್ ಟೆಂಪಲ್‌ಗೆ ಧಾರ್ಮಿಕ ಭೇಟಿ ನೀಡಿ. ಹೆಚ್ಚಿನ ಸಂಖ್ಯೆಯ ಭಕ್ತರು ಶ್ರೀ ಹರಿಮಂದಿರ್ ಸಾಹಿಬ್ ಗೆ ನಮಸ್ಕರಿಸಲು ಬರುತ್ತಾರೆ.  ಇದರ ನಂತರ, ನೀವು ಜಲಿಯನ್ ವಾಲಾ ಬಾಗ್‌ಗೆ ಐತಿಹಾಸಿಕ ಭೇಟಿ (historical visit) ನೀಡಬಹುದು. ಜಲಿಯನ್ ವಾಲಾಬಾಗ್ ಹತ್ಯಾಕಾಂಡವನ್ನು ಇತಿಹಾಸದ ಪುಟಗಳಲ್ಲಿ ವಿವರವಾಗಿ ವಿವರಿಸಲಾಗಿದೆ.

ಇತಿಹಾಸಕಾರರ ಪ್ರಕಾರ, ಏಪ್ರಿಲ್ 13, 1919 ರಂದು, ಜನರಲ್ ಡಯರ್ ರೌಲಟ್ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿದ್ದ ನಿರಾಯುಧ ಜನರ ಮೇಲೆ ಗುಂಡು ಹಾರಿಸಿದ್ದ. ಈ ದಾಳಿಯಲ್ಲಿ ಅಂದಾಜು 400 ಜನರು ಕೊನೆಯುಸಿರೆಳೆದಿದ್ದರು. ಅದೇ ಸಮಯದಲ್ಲಿ, 2 ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು. ಆದಾಗ್ಯೂ, ಇವು ಸರ್ಕಾರದ ಅಂಕಿಅಂಶಗಳು. ಹುತಾತ್ಮರ ಸಂಖ್ಯೆ ಇನ್ನೂ ಹೆಚ್ಚಾಗಿತ್ತು ಎನ್ನಲಾಗಿದೆ. ಇದು ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಘೋರ ಹತ್ಯಾಕಾಂಡ.

ಇಂದು ಜಲಿಯನ್ ವಾಲಾಬಾಗ್‌ನಲ್ಲಿ ಒಂದು ಸ್ಮಾರಕವಿದೆ. ಮಾಜಿ ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಅವರು ಜಲಿಯನ್ ವಾಲಾಬಾಗ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದು ಬ್ರಿಟಿಷ್ ಇತಿಹಾಸದಲ್ಲೇ ಅತ್ಯಂತ ನಾಚಿಕೆಗೇಡಿನ ಘಟನೆ ಎಂದು ಹೇಳಿದ್ದರು.
 

ಪ್ಲಾಸಿ

ಬ್ರಿಟಿಷರ ಏಳಿಗೆಯು ಪ್ಲಾಸಿ ಯುದ್ಧದಿಂದ ಪ್ರಾರಂಭವಾಯಿತು. 1757ರ ಜೂನ್ 23ರಂದು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸೇನೆ ಮತ್ತು ಬಂಗಾಳದ ನವಾಬ ಸಿರಾಜ್-ಉದ್-ದೌಲಾ ಅವರ ನಡುವೆ ಮೊದಲ ಬಾರಿಗೆ ಈ ಸ್ಥಳದಲ್ಲಿ ಯುದ್ಧ ನಡೆಯಿತು. ಪ್ಲಾಸಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಭಾಗೀರಥಿ ನದಿಯ ದಡದಲ್ಲಿದೆ. ಈ ಯುದ್ಧ ತುಂಬಾ ಭಯಾನಕವಾಗಿತ್ತು. ಈ ಯುದ್ಧದಲ್ಲಿ ಎರಡೂ ಕಡೆಯ 8 ಸಾವಿರ ಸೈನಿಕರು ಭಾಗವಹಿಸಿದ್ದರು. ಇದರಲ್ಲಿ ಸುಮಾರು ಸಾವಿರ ಸೈನಿಕರು ಕೊಲ್ಲಲ್ಪಟ್ಟರು. ಬಂಗಾಳದ ನವಾಬ ಸಿರಾಜ್-ಉದ್-ದೌಲಾಗೆ ದೊಡ್ಡ ನಷ್ಟವಾಯಿತು. ಇದು ಪ್ಲಾಸಿ ಕದನದಲ್ಲಿ ಸಿರಾಜ್-ಉದ್-ದೌಲಾ ಅವರ ಸೋಲಿಗೆ ಕಾರಣವಾಯಿತು. ಇತಿಹಾಸದ ಪರಿಚಯ ಮಾಡಿಕೊಳ್ಳಲು ನೀವು ಪ್ಲಾಸಿಗೆ ಭೇಟಿ ನೀಡಬಹುದು. ಇದಲ್ಲದೆ, ನೀವು ಪಾಣಿಪತ್, ಕಳಿಂಗ, ಮೊದಲ ಭಾರತೀಯ ಸ್ವಾತಂತ್ರ್ಯ ಸಂಗ್ರಾಮ ತಾಣ ಮೀರತ್ ಸೇರಿದಂತೆ ದೇಶದ ಅನೇಕ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಬಹುದು.

ಸೆಲ್ಯುಲಾರ್ ಜೈಲ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು:

ಕಾಲಾ ಪಾನಿ ಎಂದೂ ಕರೆಯಲ್ಪಡುವ ಸೆಲ್ಯುಲಾರ್ ಜೈಲ್ ಅನ್ನು ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ನಿರ್ಮಿಸಲಾಗಿದೆ. ಈ ಕಾರಾಗೃಹವನ್ನು ಈಗ ವಸ್ತುಸಂಗ್ರಹಾಲಯ ಮತ್ತು ಸ್ಮಾರಕವಾಗಿ ಪರಿವರ್ತಿಸಲಾಗಿದೆ. ಸೆಲ್ಯುಲಾರ್ ಜೈಲ್ ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ಪಡೆಯುವ ಮೊದಲು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ವಿಧಿಸಲಾದ ಅಪಾರ ಚಿತ್ರಹಿಂಸೆಯನ್ನು ತೋರಿಸುತ್ತದೆ.

ವಾಘಾ–ಅತ್ತಾರಿ ಗಡಿ:

ಇದು ಭಾರತ ಮತ್ತು ಪಾಕಿಸ್ತಾನವನ್ನು ಬೇರ್ಪಡಿಸುವ ಗಡಿ. ಇಲ್ಲಿ ಪ್ರತಿದಿನ ಪರೇಡ್ ನಡೆಸಲಾಗುತ್ತದೆ, ಇದನ್ನು ಸಾರ್ವಜನಿಕರು ನೋಡಬಹುದು. ವಾಘಾ–ಅತ್ತಾರಿ ಗಡಿಯು ನಿಮ್ಮಲ್ಲಿ ಖಂಡಿತವಾಗಿಯೂ ದೇಶಭಕ್ತಿಯನ್ನು (patriotism) ಪ್ರಚೋದಿಸುವ ಸ್ಥಳಗಳಲ್ಲಿ ಒಂದು. ವಿಶೇಷವಾಗಿ ಭಾರತೀಯ ಗಡಿ ಭದ್ರತಾ ಪಡೆ (BSF) ಸಿಬ್ಬಂದಿ ಸಂಪೂರ್ಣ ಉತ್ಸಾಹ ಮತ್ತು ಉತ್ಸಾಹದಿಂದ ಪರೇಡ್ ಮಾಡೋದನ್ನು ಜೋಡಿದಾಗ ದೇಶಭಕ್ತಿ ಉಕ್ಕಿ ಹರಿಯುತ್ತೆ. 'ಜೈ ಹಿಂದ್' ಮತ್ತು 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಗಳನ್ನು ನೀವು ಇಲ್ಲಿ ಕೇಳಬಹುದು.  

ರಾಷ್ಟ್ರೀಯ ಯುದ್ಧ ಸ್ಮಾರಕ (National War Memorial) :

ನೀವು ಆಗಸ್ಟ್ 15ರಂದು ನವದೆಹಲಿಯಲ್ಲಿದ್ದರೆ, ನೀವು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮತ್ತು ಮೆರವಣಿಗೆಯಲ್ಲಿ ಭಾಗವಹಿಸಬೇಕು. ಇದರೊಂದಿಗೆ, ಇಂಡಿಯಾ ಗೇಟ್ (India Gate) ಬಳಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೂ ಭೇಟಿ ನೀಡಬೇಕು. 1962, 1971 ಮತ್ತು 1999ರ ಯುದ್ಧಗಳಲ್ಲಿ ಹುತಾತ್ಮರಾದ ದೇಶದ ವೀರ ಪುತ್ರರಿಗೆ ಇಲ್ಲಿ ಗೌರವ ಸಲ್ಲಿಸಬಹುದು.

ಇಂಡಿಯಾ ಗೇಟ್, ನವದೆಹಲಿ

ಮೊದಲ ಮಹಾಯುದ್ಧ ಮತ್ತು ಆಫ್ಘನ್ ಯುದ್ಧದಲ್ಲಿ ಮಡಿದ ಭಾರತೀಯ ಸೈನಿಕರ ನೆನಪಿಗಾಗಿ ಇಂಡಿಯಾ ಗೇಟ್ (India Gate) ನಿರ್ಮಿಸಲಾಗಿದೆ. ರಾಜಪಥದ ಬಳಿ ಇರುವ ಈ ಕಟ್ಟಡ 42 ಮೀಟರ್ ಎತ್ತರವಿದೆ ಮತ್ತು ಇದನ್ನು ಆರಂಭದಲ್ಲಿ ಅಖಿಲ ಭಾರತ ಯುದ್ಧ ಸ್ಮಾರಕ ಎಂದು ಕರೆಯಲಾಗುತ್ತಿತ್ತು. 1971 ರಿಂದ, ಅಮರ್ ಜವಾನ್ ಜ್ಯೋತಿ, ಬಾಂಗ್ಲಾದೇಶದ ವಿಮೋಚನಾ ಯುದ್ಧದ ನಂತರ ತಮ್ಮ ಪ್ರಾಣ ಕಳೆದುಕೊಂಡ ಭಾರತೀಯ ಸೈನಿಕರ ನೆನಪಿಗಾಗಿ ಇಂಡಿಯಾ ಗೇಟಿನಲ್ಲಿ ದೀಪ ನಿರಂತರವಾಗಿ ಉರಿಯುತ್ತಿರುತ್ತದೆ.

ಸಬರಮತಿ ಆಶ್ರಮ, ಗುಜರಾತ್

ಅಹ್ಮದಾಬಾದ್ ಬಳಿ ಇರುವ ಸಬರಮತಿ ಆಶ್ರಮ ದೇಶಭಕ್ತಿಯ ತೀವ್ರ ಭಾವನೆಯನ್ನು ಉಂಟುಮಾಡುವ ಸ್ಥಳ. ಮಹಾತ್ಮ ಗಾಂಧಿಯವರು ಸುಮಾರು 12 ವರ್ಷಗಳ ಕಾಲ ಇಲ್ಲಿ ವಾಸಿಸುತ್ತಿದ್ದರು. 1930ರ ಉಪ್ಪಿನ ಸತ್ಯಾಗ್ರಹ ಎಂದೂ ಕರೆಯಲ್ಪಡುವ ದಂಡಿ ಯಾತ್ರೆಯನ್ನು ಅವರು ಮುನ್ನಡೆಸಿದ ಸ್ಥಳ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಈ ಆಂದೋಲನದ ಮಹತ್ವವನ್ನು ಗಮನಿಸಿದರೆ, ಈ ಆಶ್ರಮ ಖಂಡಿತವಾಗಿಯೂ ದೇಶಭಕ್ತಿಯನ್ನು ಉಂಟುಮಾಡುವ ಭಾರತದ ಸ್ಥಳಗಳಲ್ಲಿ ಒಂದು.

ಕೆಂಪು ಕೋಟೆ, ದೆಹಲಿ

ಬನ್ನಿ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯನ್ನು ನೋಡಲು ನೀವು ಕೆಂಪು ಕೋಟೆಗೆ ಭೇಟಿ ನೀಡಬೇಕು. ಇಲ್ಲಿ 21 ಗನ್ ಸೆಲ್ಯೂಟ್ ನಂತರ ರಾಷ್ಟ್ರಧ್ವಜವನ್ನು ಹಾರಿಸುವುದು ನಿಜವಾಗಿಯೂ ಗೂಸ್ ಬಂಪ್ ನೀಡುವ ಕ್ಷಣ. ಪ್ರಧಾನಮಂತ್ರಿಯವರು ಈ ದಿನದಂದು ಕೆಂಪು ಕೋಟೆಯ ಗೋಡೆಗಳಿಂದ ರಾಷ್ಟ್ರವನ್ನುದ್ದೇಶಿಸಿ ಭಾಷಣ ಮಾಡುತ್ತಾರೆ.

click me!