GST ಕುರಿತ ನಿರ್ಮಾಲಾ ಸೀತಾರಾಮನ್ ಹೇಳಿಕೆ: ಚೆನ್ನೈನಲ್ಲಿರುವ ಮೋದಿ ಕೇಳ್ಬೇಕೆ?
GST ಕುರಿತು ವಿಚಿತ್ರ ಹೇಳಿಕೆ ನೀಡಿದ ಕೇಂದ್ರ ವಿತ್ತ ಸಚಿವೆ| GSTಯಲ್ಲಿ ನ್ಯೂನ್ಯತೆ ಇರುವುದು ನಿಜ ಎಂದ ನಿರ್ಮಲಾ ಸೀತಾರಾಮನ್| ‘GST ಸಂಸತ್ತು ಪಸು ಮಾಡಿದ ಕಾನೂನು ಎಂಬುದನ್ನು ಮರೆಯಬೇಡಿ’|ಕಾನೂನನ್ನು ಪಾಲಿಸಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ನಿರ್ಮಲಾ|
ಪುಣೆ(ಅ.12): ಸರಕು ಮತ್ತು ಸೇವಾ ತೆರಿಗೆ(GST)ಯಲ್ಲಿ ನ್ಯೂನ್ಯತೆಗಳಿರುವುದು ನಿಜ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಪುಣೆಯಲ್ಲಿ ಉದ್ದಿಮೆದಾರರ ಸಮಾವೇಶದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, GSTಯಲ್ಲಿ ನ್ಯೂನ್ಯತೆಗಳಿರುವುದು ನಿಜವಾದರೂ, ಅದೊಂದು ಕಾನೂನು ಎಂಬುದನ್ನು ಮರೆಯಬಾರದು ಎಂದು ಹೇಳಿದ್ದಾರೆ.
GST ರಚನಾ ಕ್ರಮದಲ್ಲಿ ಕೆಲವು ತಪ್ಪುಗಳು ನಡೆದಿದ್ದು ನಿಜ ಹೌದಾದರೂ, ಸಂಸತ್ತು ಪಾಸು ಮಾಡಿದ ಕಾನೂನನ್ನು ಪಾಲಿಸದಿರಲು ಸಾಧ್ಯವಿಲ್ಲ ಎಂದು ನಿರ್ಮಲಾ ಅಭಿಪ್ರಾಯಪಟ್ಟಿದ್ದಾರೆ.
GST ಕುರಿತು ಉದ್ದಿಮೆದಾರರೊಬ್ಬರು ಪಸ್ವರ ಎತ್ತಿದ್ದಕ್ಕೆ ಪ್ರತಿಯಾಗಿ ಮಾತನಾಡಿದ ನಿರ್ಮಲಾ, ನ್ಯೂನ್ಯತೆಗಳಿರುವ ಮಾತ್ರಕ್ಕೆ ಕಾನೂನನ್ನು ಪಾಲಿಸಲು ಸಾಧ್ಯವಿಲ್ಲ ಎಂದರೆ ಹೇಗೆ ಎಂದು ಮರುಪ್ರಶ್ನಿಸಿದ್ದಾರೆ.
GST ಜಾರಿ ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಯಶಸ್ವಿ ಯೋಜನೆಗಳಲ್ಲಿ ಒಂದು ಎಂದು ಪರಿಗಣಿತವಾಗಿದ್ದು, ಏಕರೂಪ ತೆರಿಗೆ ನೀತಿಯಿಂದ ತೆರಿಗೆ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿ ಹಾಡಲಾಗಿದೆ ಎಂದು ಕೇಂದ್ರ ಸರ್ಕಾರ ಬಿಂಬಿಸಿತ್ತು.
ಇದೀಗ GSTಯಲ್ಲಿ ನ್ಯೂನ್ಯತೆಗಳಿವೆ ಎಂದು ಹೇಳುವ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿಪಕ್ಷಗಳ ಆರೋಪಕ್ಕೆ ಬಲ ತುಂಬಿದ್ದಾರೆ.