ಡೆಮಾಕ್ರಟಿಕ್ ಸೋಷ್ಯಾಲಿಸ್ಟ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್ ಮೇಯರ್ ಚುನಾವಣೆ ಗೆದ್ದು ಇತಿಹಾಸ ಸೃಷ್ಟಿ.. 34 ವರ್ಷದ ಮಮ್ದಾನಿ, ನಗರದ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ, ಕಿರಿಯ ಮೇಯರ್ ಆಗಿದ್ದಾರೆ. ಈ ಗೆಲುವು ಅಮೆರಿಕದ ರಾಜಕೀಯದಲ್ಲಿ ಪ್ರಗತಿಪರ ಶಕ್ತಿಯನ್ನು ಸೂಚಿಸುತ್ತದೆ.
ನ್ಯೂಯಾರ್ಕ್(ನ.5): ಅಮೆರಿಕದ ಅತಿದೊಡ್ಡ ನಗರ ನ್ಯೂಯಾರ್ಕ್‌ನ ಮೇಯರ್ ಚುನಾವಣೆಯಲ್ಲಿ ಡೆಮಾಕ್ರಟಿಕ್ ಸೋಷ್ಯಾಲಿಸ್ಟ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ಅದ್ಭುತ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿದ್ದಾರೆ. 34 ವರ್ಷ ವಯಸ್ಸಿನ ಈ ನಾಯಕ ನ್ಯೂಯಾರ್ಕ್‌ನ ಮೊದಲ ಭಾರತೀಯ-ಅಮೆರಿಕನ್ ಮುಸ್ಲಿಂ ಮೇಯರ್ ಆಗಿ ಗೆಲುವು ಸಾಧಸಿದ್ದಾರೆ. ಅಷ್ಟೇ ಅಲ್ಲ ಕಳೆದ 100 ವರ್ಷಗಳಲ್ಲಿ ನ್ಯೂಯಾರ್ಕ್ ನಗರದ ಅತ್ಯಂತ ಕಿರಿಯ ಮೇಯರ್ ಎಂಬ ಹೆಗ್ಗಳಿಕೆಗೂ ಮಮ್ದಾನಿ ಪಾತ್ರರಾಗಿದ್ದಾರೆ.
ಚುನಾವಣಾ ಸಮೀಕ್ಷೆಗಳಲ್ಲೇ ಅವರು ಈ ಹುದ್ದೆಗೆ ಅತ್ಯಂತ ಜನಪ್ರಿಯ ಅಭ್ಯರ್ಥಿಯಾಗಿ ಹೊರಹೊಮ್ಮಿದರು. ಮಮ್ದಾನಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕಿ ಮೀರಾ ನಾಯರ್ ಅವರ ಪುತ್ರ ಮತ್ತು ಮಾಜಿ ರ‍್ಯಾಪರ್ ಕೂಡ ಆಗಿದ್ದಾರೆ. ಅವರು ಉಗಾಂಡಾದ ಕಂಪಾಲಾದಲ್ಲಿ ಜನಿಸಿದರು. ಆದಾಗ್ಯೂ, ಅವರು ಏಳನೇ ವಯಸ್ಸಿನಲ್ಲಿ ನ್ಯೂಯಾರ್ಕ್‌ಗೆ ತೆರಳಿ ನಾಗರಿಕರಾದರು.
ಮಮ್ದಾನಿ ಯಾರ ವಿರುದ್ಧ ಸ್ಪರ್ಧಿಸಿದ್ದರು?
ಮಮ್ದಾನಿ ಜೊತೆಗೆ, ಇತರ ಇಬ್ಬರು ಅಭ್ಯರ್ಥಿಗಳು ನ್ಯೂಯಾರ್ಕ್ ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ನ್ಯೂಯಾರ್ಕ್‌ನ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು, ಆದರೂ ಅವರು ಈ ಹಿಂದೆ ಡೆಮಾಕ್ರಟಿಕ್ ಪಕ್ಷದ ಸದಸ್ಯರಾಗಿದ್ದರು. ರಿಪಬ್ಲಿಕನ್ ಪಕ್ಷವು ಕರ್ಟಿಸ್ ಸ್ಲಿವಾ ಅವರನ್ನು ಸಹ ಕಣಕ್ಕಿಳಿಸಿತು, ಆದರೆ ಕ್ಯುಮೊ ಮತ್ತು ಕರ್ಟಿಸ್ ನಿರಾಶೆಯಾಗಿದೆ. ಪೋಲ್ ರಿಸಲ್ಟ್‌ಗಳ ಪ್ರಕಾರ, ಮಮ್ದಾನಿ 52% ಓಟುಗಳೊಂದಿಗೆ ಮುಂದಿದ್ದಾರೆ ಇದರಲ್ಲಿ ಕ್ಯುಮೊಗೆ 28% ಮತ್ತು ಸ್ಲಿವಾಗೆ 18% ಓಟುಗಳು ಸಿಕ್ಕಿವೆ. ಈ ಗೆಲುವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ದೊಡ್ಡ ಹಿನ್ನಡೆಯಾಗಿದೆ.
ಮಮ್ದಾನಿ ಗೆಲುವಿಗೆ ಒಬಾಮಾ ಅಭಿನಂದನೆ:
ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ಮಮ್ದಾನಿ ಅವರ ಗೆಲುವಿಗೆ ಅಭಿನಂದನೆ ಸಲ್ಲಿಸಿದರು. ಈ ಬಗ್ಗೆ ಟ್ವಿಟರ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಗೆಲುವು ಸಾಧಿಸಿದ ಎಲ್ಲಾ ಡೆಮಾಕ್ರಟಿಕ್ ಅಭ್ಯರ್ಥಿಗಳಿಗೆ ಅಭಿನಂದನೆಗಳು. ನಾವು ಕಾಳಜಿ ವಹಿಸುವ ವಿಷಯಗಳ ಬಗ್ಗೆ ಕಾಳಜಿ ವಹಿಸುವ ಬಲವಾದ ಮತ್ತು ದೂರದೃಷ್ಟಿಯ ನಾಯಕರು ನಮ್ಮಲ್ಲಿದ್ದಾಗ , ನಾವು ಗೆಲ್ಲಬಹುದು ಎಂಬುದನ್ನು ಇದು ಸಾಬೀತುಪಡಿಸುತ್ತದೆ. ನಮಗೆ ಇನ್ನೂ ಬಹಳಷ್ಟು ಕೆಲಸಗಳಿವೆ, ಆದರೆ ಭವಿಷ್ಯವು ಉಜ್ವಲವಾಗಿ ಕಾಣುತ್ತದೆ' ಎಂದು ಬರೆದುಕೊಂಡಿದ್ದಾರೆ.
ಜೋಹ್ರಾನ್ ಮಮ್ದಾನಿ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಲ್ಲಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ. ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆಯೂ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ.
ಒಟ್ಟಾರೆ ಈ ಗೆಲುವು ಅಮೆರಿಕದ ರಾಜಕೀಯದಲ್ಲಿ ಪ್ರಗತಿಪರ ಶಕ್ತಿಯ ಬಲವನ್ನು ಸೂಚಿಸುತ್ತದೆ, ವಿಶೇಷವಾಗಿ ಟ್ರಂಪ್‌ನ ಎರಡನೇ ಅವಧಿಯಲ್ಲಿ ಡೆಮಾಕ್ರಟ್‌ಗಳಿಗೆ ಮೊದಲ ದೊಡ್ಡ ಗೆಲುವು. ನ್ಯೂಯಾರ್ಕ್ ನಗರದ ಭವಿಷ್ಯದಲ್ಲಿ ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ ಮತ್ತು ಪರಿಸರ ಸಂರಕ್ಷಣೆಗೆ ಹೊಸ ಆಯಾಮ ನೀಡಲಿದೆ ಎಂಬ ಮಾತು ಕೇಳಿಬಂದಿದೆ.
